ಶುಕ್ರವಾರ, ಮಾರ್ಚ್ 5, 2021
26 °C

ಜನಕಪುರಿಯ ಝಲಕ್

ವಿಜಯ್ ಹೆಮ್ಮಿಗೆ Updated:

ಅಕ್ಷರ ಗಾತ್ರ : | |

ಜನಕಪುರಿಯ ಝಲಕ್

ರಾಮಾಯಣದ ಸೀತೆ ಜನಕ ಮಹಾರಾಜನ ಮಗಳು ಎಂಬುದು ಗೊತ್ತಿರುವ ವಿಷಯ. ಜನಕನ ಊರು ಜನಕಪುರಿ. ಅಯೋಧ್ಯೆಯ ದಶರಥನ ಮಗ ರಾಮನಿಗೂ ನೇಪಾಳದ ಜನಕಪುರಿಯ ಜನಕನ ಮಗಳು ಸೀತೆಗೂ ಹೇಗೆ ನಂಟು ಎಂಬುದು ರಾಮಾಯಣದಲ್ಲಿ ಚಿತ್ರಿತವಾಗಿದೆ. ಜನಕಪುರಿಯನ್ನು ಜನಕಪುರಧಾಮ ಎಂದೂ, ಐತಿಹಾಸಿಕವಾಗಿ ಮಿಥಿಲಾಂಚಲವೆಂದೂ ಕರೆಯುವುದುಂಟು.

ನೇಪಾಳ ತಲುಪಲು ಗ್ಯಾಂಗ್‌ಟಕ್‌ನಿಂದ ರಸ್ತೆ ಮೂಲಕ ಸಿಲಿಗುರಿಗೆ ಹೋಗಬೇಕು. ಇದು ಅಂದಾಜು ನಾಲ್ಕು ಗಂಟೆಗಳ ಪ್ರಯಾಣ. ಸಿಲಿಗುರಿಯಿಂದ ಮುಂದಕ್ಕೆ ಭಾರತದ ಸರಹದ್ದಿಗೆ ಹೊಂದಿಕೊಂಡಂತೆ ಕಾಕರವೆಟ ಎಂಬ ಗ್ರಾಮವಿದೆ. ಇಲ್ಲಿಂದಲೇ ನೇಪಾಳ ಪ್ರವೇಶಿಸಬೇಕು. ಇಲ್ಲಿ ಸೇತುವೆ ದಾಟಿದ ಕೂಡಲೇ ಪನಿಂಟಾಕಿ ಎಂಬ ಗ್ರಾಮ ಸಿಗುತ್ತದೆ. ಇಲ್ಲಿಂದ ನೇಪಾಳ ಪ್ರಾರಂಭ. ಇಲ್ಲೊಂದು ವಲಸೆ ಕಚೇರಿ ಇದೆ. ಇಲ್ಲಿ ಭಾರತದಿಂದ ನೇಪಾಳದ ಗಡಿ ದಾಟಿ ಹೋಗುವ ಸರಕು ಸಾಗಣೆ ವಾಹನಗಳನ್ನು ಕಾಣಬಹುದು.

ವಲಸೆ ಕಚೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿದರೆ ರಸೀದಿ ಚೀಟಿ ಜೊತೆ, ನೇಪಾಳದ ನಂಬರ್ ಪ್ಲೇಟ್ಅನ್ನು ವಾಹನಗಳಿಗೆ ಅಳವಡಿಸಿಕೊಳ್ಳಲು ಕೊಡುತ್ತಾರೆ. ಅಲ್ಲಿಂದ ಹಿಂದಿರುಗಿ ಬರುವವರೆಗೂ ಇದೇ ನಂಬರನ್ನು ವಾಹನ ಹೊಂದಿರತಕ್ಕದ್ದು. ಇಲ್ಲಿಂದ ಮುಂದೆ ವಾಹನದಲ್ಲಿ ಸಂಚರಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ಹಸಿರಿನಿಂದ ಕಂಗೊಳಿಸುವ ಭತ್ತದ ಗದ್ದೆಗಳನ್ನು ನೋಡುತ್ತಾ ಸಾಗುವುದೇ ಒಂದು ಆನಂದ. ಮತ್ತೊಂದು ವಿಶೇಷವೆಂದರೆ ಪ್ರತಿ ಹತ್ತು ಕಿಲೋ ಮೀಟರ್‌ಗೆ ಒಂದು ನದಿ ಹರಿಯುವುದನ್ನು ಕಾಣಬಹುದು. ಈ ಪಯಣದಲ್ಲಿ ಸುಮಾರು 50 ನದಿಗಳನ್ನು ಕಾಣಬಹುದು.

ಬಿರ್ತಮೋಡೆ ಎಂಬ ಗ್ರಾಮ ದಾಟಿದ ಕೂಡಲೇ ಇಟಾರಿ ಎಂಬ ಪಟ್ಟಣ ಸಿಗುತ್ತದೆ. ಇಲ್ಲಿಂದ ಮುಂದೆ ಕೋಸಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು ಕಾಣುತ್ತದೆ. ಇದನ್ನು ಏಳು ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಸ್ವಲ್ಪ ದೂರದಲ್ಲಿ ಚಿತ್ತೂರ ಎಂಬ ಊರಿದೆ. ಅಲ್ಲಿ ನೇಪಾಳಿ ಪೇಡಾಗಳ ಅಂಗಡಿ ನೋಡಬಹುದು. ಬಹುಶಃ ಇದು ನಮ್ಮ ಧಾರವಾಡದ ಪೇಡಾ ರೀತಿ. ಈ ಊರಿನ ಹೊರವಲಯದಲ್ಲಿಯೇ ಜನಕ ಮಹಾರಾಜನ ಪ್ರತಿಮೆ ಕಾಣಬಹುದು. ಇಲ್ಲಿ ಕೊನೆಯ ಊರಾದ ಜಲೇಶ್ವರವನ್ನು ತಲುಪಲು 12 ಕಿ.ಮೀ ಪ್ರಯಾಣಿಸಬೇಕು. ಜನಕಪುರಿ ಮತ್ತು ಜಲೇಶ್ವರ ನಡುವಿನ ರಸ್ತೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದು, ಅಲ್ಲಿರುವವರ ಹೇಳಿಕೆ ಪ್ರಕಾರ ರಾಜಕೀಯ ಅನಿಶ್ಚಿತತೆ ಮತ್ತು ದುರಸ್ತಿ ಕಾಮಗಾರಿಯನ್ನು ಚೀನಾದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ್ದು, ಕಳೆದ ಹತ್ತು ವರ್ಷಗಳಿಂದಲೂ ರಸ್ತೆ ರಿಪೇರಿ ಕಾಮಗಾರಿ ನಡೆದಿಲ್ಲದಿರುವುದಕ್ಕೆ ಕಾರಣ.

(ಜನಕ ಮಹಲ್‌ನ ಒಂದು ಝಲಕ್)

ಜಲೇಶ್ವರ ಗ್ರಾಮ ಭಾರತದ ಗಡಿಯಿಂದ ಒಂದು ಕಿ.ಮೀ ದೂರದ ಬಿಹಾರಕ್ಕೆ ಹೊಂದಿಕೊಂಡಂತಿರುವ ಬಿಟ್ಟಮೋಡಕ್ಕೆ ಸೇರಿದಂತಿದೆ. ಇಲ್ಲಿಯೇ ರಾಮಾಯಣದ ಸೀತೆ ತನ್ನ ಬಾಲ್ಯದ ದಿನಗಳನ್ನು ಕಳೆದಿದ್ದಳಂತೆ. ಸೀತೆ ಉಡುತ್ತಿದ್ದಳು ಎನ್ನಲಾದ ಉಡುಪುಗಳು, ಸೀರೆಗಳನ್ನು ಇಲ್ಲಿರುವ ಅರಮನೆಯಲ್ಲಿ ನೋಡಬಹುದು. ಇಲ್ಲಿಗೆ ಬರುವ ಪ್ರವಾಸಿಗರಿಗಾಗಿ ಸೀತೆಯ ಬಾಲ್ಯದ ದಿನಗಳನ್ನು ಆ್ಯನಿಮೇಷನ್ ಮೂಲಕ ತೋರಿಸುತ್ತಾರೆ. ಇಲ್ಲಿ ಮಣಿಮಂಟಪ ಎಂಬಲ್ಲಿ ಸೀತಾ ರಾಮರ ವಿವಾಹ ಮಹೋತ್ಸವ ನೆರವೇರಿತ್ತಂತೆ. ಈ ಸ್ಥಳದಿಂದ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿ ಧನುಷಧಮ್ ಎಂಬ ಸ್ಥಳವಿದೆ. ರಾಮ ಶಿವಧನುಸ್ಸನ್ನು ಮುರಿದದ್ದು ಎಂದು ಹೇಳಲಾಗುತ್ತದೆ.

ಮುರಿದ ಧನುಸ್ಸು ಮೂರು ತುಂಡುಗಳಾಗಿ, ಮೊದಲನೆಯ ತುಂಡು ತಮಿಳುನಾಡಿನ ರಾಮೇಶ್ವರ ಬಳಿಯಿರುವ ಧನುಷ್ಕೋಟಿಗೂ, ಮೂರನೆಯ ತುಂಡು ಧನುಶ್‍ಸಾಗರ್ ಎಂಬಲ್ಲಿಗೆ, ಅಂದರೆ ಪಾತಾಳಕ್ಕೆ ಹೋಯಿತಂತೆ. ಎರಡನೆಯ ತುಂಡು ನೇಪಾಳದಲ್ಲಿರುವ ಧನುಷಧಮ್ ಎಂಬಲ್ಲಿ ಈಗಲೂ ಕಾಣಸಿಗುವುದು. ಅಲ್ಲದೆ ಇಲ್ಲಿರುವವರ ಪ್ರಕಾರ ಈ ಧನುಸ್ಸು ಈಗಲೂ ಬೆಳೆಯುತ್ತಿದೆಯಂತೆ.

ಜನಕಪುರಿಯ ಜನ ಮಾತನಾಡುವ ಭಾಷೆ ಮೈಥಿಲಿ. ಈ ಭಾಷೆಗೆ ಅದರದ್ದೇ ಆದ ಲಿಪಿ ಮತ್ತು ಸಂಸ್ಕೃತಿ ಇದೆ. ನೇಪಾಳದ ಮೂರನೇ ದೊಡ್ಡ ಪಟ್ಟಣವಾದ ಜನಕಪುರಿಯಲ್ಲಿನ ಜನಸಂಖ್ಯೆ ಅಂದಾಜು 80 ಸಾವಿರ. ಜಲೇಶ್ವರದ ಜನಸಂಖ್ಯೆ 30 ಸಾವಿರ. ಸಿಕ್ಕಿಂನ ಗ್ಯಾಂಗ್‌ಟಕ್‌ನಿಂದ ಜಲೇಶ್ವರಕ್ಕೆ ಸುಮಾರು 400 ಕಿ.ಮೀ ದೂರ. ಜನಕಪುರಿಯನ್ನು ನದಿಗಳ ನಾಡು ಎಂದೂ ಕರೆಯಬಹುದು. ದೂಧ್‍ಮತಿ, ಜಲದ್, ರತೊ, ಬಲನ್ ಮತ್ತು ಕಮಲ ನದಿಗಳು ಜನಕಪುರಿಯನ್ನು ಸುತ್ತುವರಿದಿವೆ.

ನದಿಗಳಲ್ಲದೆ ಇಲ್ಲಿ ಇನ್ನೂರಕ್ಕೂ ಹೆಚ್ಚು ಕೊಳಗಳಿವೆ. ನೇಪಾಳದ ಜನ ಸ್ನೇಹಪರರು. ಅಲ್ಲಿ ದೀಪಾವಳಿ ಆಚರಣೆ ಬಹಳ ವಿಶೇಷ. ಜಲೇಶ್ವರದಲ್ಲಿರುವ ಎಲ್ಲರ ಮನೆಯಲ್ಲಿಯೂ ಹಣತೆಗಳನ್ನು ಹಚ್ಚುತ್ತಾರೆ. ರಾತ್ರಿ ವೇಳೆ ಮಿಣಮಿಣ ಎಂದು ಮಿಣುಗುವ ಗ್ರಾಮವನ್ನು ನೋಡುವುದೇ ಒಂದು ಸೊಗಸು. ಇಲ್ಲಿನ ಎಲ್ಲ ರಸ್ತೆಗಳನ್ನು ಸ್ವಚ್ಛಗೊಳಿಸಿ, ಊರಿನ ಪ್ರಮುಖ ಸ್ಥಳಗಳಲ್ಲಿ ಬಾಳೆಕಂಬಗಳನ್ನು ನೆಡುವುದುಂಟು. ಜಲೇಶ್ವರದಲ್ಲಿನ ಮಹಾದೇವ ದೇವಾಲಯದಲ್ಲಿ ನೀರಿನೊಳಗೆ ಶಿವಲಿಂಗವಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಈ ಲಿಂಗದ ಸುತ್ತಲಿರುವ ನೀರು ಒಣಗಿದಾಗ ಶಿವಲಿಂಗಕ್ಕೆ ಪೂಜೆಯಂತೆ. ದೀಪಾವಳಿಯ ದಿನ ಊರ ಎಲ್ಲ ಜನ ಈ ದೇವಾಲಯಕ್ಕೆ ಭೇಟಿ ನೀಡಿ, ದೇವಾಲಯದ ಹಿಂದೆ ಹರಿಯುವ ನೀರಿನಲ್ಲಿ ಹಣತೆಗಳನ್ನು ತೇಲಿಬಿಡುವುದನ್ನು ನೋಡಿದಾಗ ಹರಿದ್ವಾರ, ಕಾಶಿಯ ನೆನಪಾಗುತ್ತದೆ.

ಇಲ್ಲಿ 1898ರಲ್ಲಿ ನಿರ್ಮಿಸಿದ ‘ನೌ ಲಕಾ’ ಮಂದಿರ ಮತ್ತಿತರ ಐತಿಹಾಸಿಕ ದೇವಾಲಯಗಳು, ಪ್ರೇಕ್ಷಣೀಯ ಸ್ಥಳಗಳು ಸಿಗುತ್ತವೆ. ಕೇವಲ ಒಂಭತ್ತು ಲಕ್ಷ ರೂಪಾಯಿಗಳಲ್ಲಿ ಅಂದು ನಿರ್ಮಿಸಿದ ಮಂದಿರಕ್ಕೆ ‘ನೌ ಲಕಾ’ ಮಂದಿರವೆಂದು ಹೇಳುವುದುಂಟು. ಒಟ್ಟಾರೆ, ನೇಪಾಳದ ಜನಕಪುರಿಯ ಪ್ರವಾಸ ನಿಜಕ್ಕೂ ಸುಂದರ, ರೋಚಕ ಹಾಗೂ ರಂಜನೀಯ.

ಪ್ರವಾಸ: ಎಂ.ಎಸ್. ಶ್ರೀಧರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.