ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಪು ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ: ಆಂಧ್ರ ಪ್ರದೇಶ ಸರ್ಕಾರ ಮಸೂದೆ ಅಂಗೀಕಾರ

Last Updated 2 ಡಿಸೆಂಬರ್ 2017, 11:49 IST
ಅಕ್ಷರ ಗಾತ್ರ

ಅಮರಾವತಿ: ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಾಪು ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಶನಿವಾರ ಅವಿರೋಧವಾಗಿ ಅಂಗೀಕರಿಸಲಾಯಿತು. 

ಕಾಪು ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕೆಂಬ ಒತ್ತಾಯ ಬಹಳ ವರ್ಷಗಳಿಂದ ಇತ್ತು. ಹಿಂದುಳಿದ ವರ್ಗಗಳಲ್ಲಿ ಎಫ್‌ ಎಂಬ ಕೆಟಗೆರಿ ರಚಿಸಿ, ಅದರಲ್ಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಆಂಧ್ರಪ್ರದೇಶದ ಸರ್ಕಾರ ಮುಂದಾಗಿದೆ.

ಮಸೂದೆಯನ್ನು ಮಂಡಿಸುವಾಗ ವಿರೋಧ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ನ ಶಾಸಕರು ಕಲಾಪ ಬಹಿಷ್ಕರಿಸಿದ್ದರು. ಆಡಳಿತರೂಢ ತೆಲುಗು ದೇಶಂ ಪಕ್ಷ(ಟಿಡಿಪಿ) ಮತ್ತು ಮಿತ್ರಪಕ್ಷವಾಗಿರುವ ಬಿಜೆಪಿ ಶಾಸಕರು ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೆ.ಅಚ್ಚ ನಾಯ್ಡು ಮಸೂದೆ ಮಂಡಿಸಿದರು. ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಮತ್ತು ಇತರೆ ಸದಸ್ಯರು ಮಸೂದೆ ಕುರಿತು ಮಾತನಾಡಿದರು. ಬಳಿಕ, ಧ್ವನಿಮತದ ಮೂಲಕ ಅವಿರೋಧವಾಗಿ ಮಸೂದೆ ಅಂಗೀಕರಿಸಲಾಯಿತು.

ಕಾಪು ಸಮುದಾಯದ ಸ್ಥಿತಿಗತಿ ಅಧ್ಯಯನಕ್ಕೆ ಸರಕಾರ ಮಂಜುನಾಥ ಸಮಿತಿ ರಚಿಸಿತ್ತು. ಅದರ ಶಿಫಾರಸಿನ ಮೇರೆಗೆ ಶೇ. 5ರಷ್ಟು ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ನಿರ್ಧರಿಸಿತ್ತು.

ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ಮೀಸಲಾತಿ ಪ್ರಮಾಣ ಶೇ.50ರ ಮಿತಿಯನ್ನು ಮೀರುವಂತಿಲ್ಲ. ಕಾಪು ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಈ ಮಸೂದೆ ಕಾಯ್ದೆಯಾಗಲು ಸಂವಿಧಾನ ತಿದ್ದುಪಡಿ ಮಾಡಲು ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ರಾಜ್ಯದಲ್ಲಿನ ಹಿಂದುಳಿದ ವರ್ಗಗಳಿಗೆ ಶೇ. 25, ಪರಿಶಿಷ್ಟ ಜಾತಿಗಳಿಗೆ ಶೇ.15, ಪರಿಶಿಷ್ಟ ಪಂಗಡಗಳಿಗೆ ಶೇ.6 ಮತ್ತು ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿಯನ್ನು ಸದ್ಯ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT