ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಸಮಾಜವಾದಿ’

Last Updated 2 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

* ಸಂವಿಧಾನದ ಬಗ್ಗೆ ನಿಮಗೆ ಸಮಾಧಾನ ಇಲ್ಲವೇ?
ಯಾರು ಹಾಗೆ ಹೇಳಿದ್ದು? ಸಂವಿಧಾನ ಬದಲಾಯಿಸಬೇಕು ಎಂದು ನಾನು ಹೇಳಿಯೇ ಇಲ್ಲ. ಜಾತ್ಯತೀತತೆಗೆ ಅನುಕೂಲವಾಗುವ ರೀತಿ ಎಲ್ಲ ಧರ್ಮದವರಿಗೂ ಸಮಾನ ಸೌಲಭ್ಯ ಸಿಗುವಂತೆ ತಿದ್ದುಪಡಿ ಮಾಡಬೇಕು. ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸಬಾರದು.

ಪ್ರಸ್ತುತ ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಸವಲತ್ತು ಬಹುಸಂಖ್ಯಾತರಿಗೆ ಸಿಗುತ್ತಿಲ್ಲ. ಅಲ್ಪಸಂಖ್ಯಾತರು ದಲಿತರಲ್ಲವಲ್ಲ. ನೂರಕ್ಕೂ ಅಧಿಕ ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿ ಮಾಡಿದವರಿಗೆ ಸಂವಿಧಾನದಲ್ಲಿ ವಿಶ್ವಾಸ ಇರಲಿಲ್ಲ ಎಂದು ಅರ್ಥವೇ?

* ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ರಚಿಸಿಲ್ಲ ಎನ್ನುವ ಮೂಲಕ ಏನನ್ನು ಹೇಳಲು ಬಯಸಿದ್ದೀರಿ?
ಸಂವಿಧಾನ ರಚನಾ ಸಮಿತಿಯಲ್ಲಿ ದೇಶದ ವಿವಿಧ ಪ್ರಾಂತಗಳ ಸುಮಾರು 500 ಮಂದಿ ಸದಸ್ಯರು ಇದ್ದರು. ಅಂಬೇಡ್ಕರ್ ಕರಡು ರಚನಾ ಸಮಿತಿ ಮುಖ್ಯಸ್ಥರಾಗಿದ್ದರು. ಅಂದ ಮೇಲೆ ಇಡೀ ದೇಶವೇ ಸಂವಿಧಾನ ಒಪ್ಪಿದೆ ಎಂದಾಯಿತಲ್ಲ. ಅಂಬೇಡ್ಕರ್ ಕಾರಣದಿಂದಾಗಿ ಸಂವಿಧಾನದ ಮಹತ್ವ ಇನ್ನಷ್ಟು ಹೆಚ್ಚಾಯಿತು ಎನ್ನಬಹುದು.

* ಸಂವಿಧಾನ ಸಮಾನತೆ ಸಾರಿದೆಯಲ್ಲ?
ಅಷ್ಟೇ ಇದ್ದರೆ ಸಾಕೇ? ಧರ್ಮದ ಆಧಾರದಲ್ಲಿ ವಿಭಜನೆ ಕೂಡದು. ಅಲ್ಪಸಂಖ್ಯಾತರಿಗೆ ಒಂದು ನ್ಯಾಯ ಬಹುಸಂಖ್ಯಾತರಿಗೆ ಒಂದು ನ್ಯಾಯ ಬೇಡ. ಮುಸ್ಲಿಮರಿಗೆ ಶಾದಿಭಾಗ್ಯ ಇದೆ, ದಲಿತರಿಗೆ ಇಲ್ಲವಲ್ಲ?

* ಇದು ಅಲ್ಪಸಂಖ್ಯಾತರ ಸೌಲಭ್ಯ ಕಸಿಯುವ ಯತ್ನವೇ?
ಕಸಿಯುವ ಯತ್ನ ಅಲ್ಲ. ಅವರ ಶಿಕ್ಷಣ ಸಂಸ್ಥೆಗಳಿಗೆ ಎಲ್ಲ ಸೌಕರ್ಯ ಇದೆ. ಮಸೀದಿ, ಚರ್ಚ್‌ಗಳಿಗೆ ಸಹ ಸ್ವಾಯತ್ತತೆ ಇದೆ. ಅದೇ ರೀತಿ ದೇವಸ್ಥಾನಗಳಿಗೂ ಸ್ವಾಯತ್ತತೆ ಬೇಕು. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಇರುವ ಸ್ವಾತಂತ್ರ್ಯ, ದಲಿತರು, ಲಿಂಗಾಯತರು ಹಾಗೂ ಹಿಂದುಳಿದ ವರ್ಗದವರ ಶಿಕ್ಷಣ ಸಂಸ್ಥೆಗಳಿಗೂ ಸಿಗಬೇಕು. ‘ಬುದ್ಧಿವಂತರು’ ಎನ್ನುವ ಕೆಲವರಿಗೆ ನಾನು ಹೇಳಿದ್ದು ಅರ್ಥ ಆಗಿಲ್ಲ. ಕೆಟ್ಟ ಉದ್ದೇಶ ನನಗಿಲ್ಲ.

* ನಿಮ್ಮ ವಾದ ಸಂವಿಧಾನದ ಆಶಯಕ್ಕೆ ವಿರುದ್ಧ ಇದೆಯಲ್ಲ?
ಅಲ್ಪಸಂಖ್ಯಾತರು ಮಾತ್ರ ಪ್ರಗತಿಯಾದರೆ ಸಾಕೇ, ಬಹುಸಂಖ್ಯಾತರು ಆಗೋದು ಬೇಡವೇ? ಧರ್ಮದ ಆಧಾರದಲ್ಲಿ ಸೌಕರ್ಯ ಯಾಕೆ? ನಾಗರಿಕರಲ್ಲಿ ಎರಡು ವರ್ಗ ಮಾಡೋದು ಸರಿಯಲ್ಲ.

* ರಾಮ ಮಂದಿರ ವಿಷಯ ಬಂದಾಗ ಬಹುಸಂಖ್ಯಾತರ ಭಾವನೆ ಗೌರವಿಸಿ ಎನ್ನುವ ನೀವು, ಯಾವ ನೆಲೆಯಲ್ಲಿ ಸಮಾನತೆ ಪ್ರಶ್ನೆ ಎತ್ತಿದ್ದೀರ?
ಆ ಸ್ಥಳದಲ್ಲಿ ರಾಮ ಮಂದಿರ ಇತ್ತೆಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಮಂದಿರ ನಿರ್ಮಾಣ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದ್ದೆವು. ಮುಸ್ಲಿಂರ ಧಾರ್ಮಿಕ ಕೇಂದ್ರಗಳಿಗೂ ಗೌರವ ಕೊಡಬೇಕು. ಮಸೀದಿ ಕಿತ್ತು ಹಾಕಿ ಎಂದು ನಾನು ಹೇಳಲ್ಲ.

* ನಿಮ್ಮಂತಹ ಹಿರಿಯರ ಹೇಳಿಕೆಯಿಂದ ವಾತಾವರಣ ಇನ್ನಷ್ಟು ಹದಗೆಟ್ಟರೆ ಯಾರು ಜವಾಬ್ದಾರಿ?
ಅಂತಹ ಮಾತನ್ನು ಆಡಿಲ್ಲ. ಅಲ್ಪಸಂಖ್ಯಾತರಿಗೆ ಸೌಲಭ್ಯ ನೀಡಬೇಡಿ ಎಂದು ಹೇಳಿದರೆ ಅದು ಅನ್ಯಾಯ. ನಾನು ಹಾಗೆ ಹೇಳಿಯೇ ಇಲ್ಲವಲ್ಲ.

* ಕೃಷ್ಣ ಮಠದಲ್ಲಿ ಸಂಪ್ರದಾಯವಾದಿಗಳಿಗೆ ಪ್ರತ್ಯೇಕ ಸ್ಥಳದಲ್ಲಿ ಊಟದ ವ್ಯವಸ್ಥೆ ಇದೆ, ಹೀಗಿರುವಾಗ ಸಮಾನತೆ ಬಗ್ಗೆ ಮಾತನಾಡುವುದು ಇಬ್ಬಂದಿತನ ಅಲ್ಲವೇ?
ತಮ್ಮದೇ ಧಾರ್ಮಿಕ ನಿಯಮ ಇರುವವರ ಮೇಲೆ ಬಲಾತ್ಕಾರ ಮಾಡದೆ ಅವರ ಇಷ್ಟದಂತೆ ಊಟ ಮಾಡಲಿ ಎಂದು ಅವಕಾಶ ನೀಡಲಾಗುತ್ತಿದೆ. ಸಹ ಪಂಕ್ತಿ ಇದೆ, ಬ್ರಾಹ್ಮಣರಿಗೆಂದೇ ಪ್ರತ್ಯೇಕ ಪಂಕ್ತಿ ಮಾಡಿಲ್ಲ. ಹರಿಭಕ್ತ ಬ್ರಾಹ್ಮಣನಿಗೆ ಸಮಾನ ಎಂದು ಮಧ್ವಾಚಾರ್ಯರು ಹೇಳಿದ್ದಾರೆ. ವಿಷ್ಣು ದೀಕ್ಷೆ ಪಡೆದ ಶೂದ್ರ ಸಹ ಬ್ರಾಹ್ಮಣನಂತೆ ಎಂದಿದ್ದಾರೆ. ನಡತೆ– ಕರ್ತವ್ಯದಿಂದ ವ್ಯಕ್ತಿಯನ್ನು ಅಳೆಯಬೇಕು, ಜಾತಿಯಿಂದಲ್ಲ.

* ಇಫ್ತಾರ್ ಕೂಟ ಏರ್ಪಡಿಸಿ ಸಂಪ್ರದಾಯವಾದಿಗಳ ಸಿಟ್ಟಿಗೆ ಕಾರಣವಾಗಿದ್ದೀರಿ, ಅದರಿಂದಹೊರಬರಲು ಈ ಹೇಳಿಕೆಯೇ?
ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಇಫ್ತಾರ್ ಆಯೋಜಿಸುವುದಕ್ಕೂ ಆರು ತಿಂಗಳ ಮೊದಲೇ ಧರ್ಮ ಸಂಸತ್ ನಡೆಸುವ ತೀರ್ಮಾನ ಆಗಿತ್ತು. ಧರ್ಮ ಸಂಸತ್ ಕಾರ್ಯಕ್ರಮಕ್ಕಾಗಿ ಕೆಲವು ಅಲ್ಪಸಂಖ್ಯಾತರು ಕೆಲಸ ಮಾಡಿದ್ದಾರೆ. ನಾನು ಅಲ್ಪಸಂಖ್ಯಾತರ ವಿರೋಧಿಯಲ್ಲ.

* ಮೀಸಲಾತಿ ರದ್ದು ಮಾಡಿ ಎನ್ನಲು ಅಲ್ಪಸಂಖ್ಯಾತ– ‌ಬಹುಸಂಖ್ಯಾತ ಹೇಳಿಕೆ ಪೀಠಿಕೆಯೇ?
ಅಂತಹ ಕೆಟ್ಟ ಭಾವನೆ ಇಲ್ಲ. ನಾನು ಮೀಸಲಾತಿಗೆ ಮೊದಲಿನಿಂದಲೂ ವಿರೋಧಿ ಅಲ್ಲ. ಎಲ್ಲರೂ ಮಂಡಲ್ ಆಯೋಗವನ್ನು ವಿರೋಧಿಸುವಾಗ ನಾನು ಅದಕ್ಕೆ ಬೆಂಬಲ ನೀಡಿದೆ. ಅದನ್ನು ಅಂದಿನ ಪ್ರಧಾನಿ ವಿ.ಪಿ. ಸಿಂಗ್ ಅವರಿಗೆ ಮುಖತಃ ಹೇಳಿದ್ದೆ.

ದಲಿತರ ಬಗ್ಗೆ ಕಾಳಜಿ ತೋರಿಸಿದ ಮೊದಲ ಮಠಾಧಿಪತಿ ನಾನು. ಶೇ 50ರಷ್ಟು ಮೀಸಲಾತಿ ಹಾಗೂ ಶೇ 50ರಷ್ಟು ಮೆರಿಟ್ ಕೋಟಾ ಎಂಬ ನ್ಯಾಯಾಲಯದ ಆಶಯಕ್ಕೆ ನನ್ನ ಬೆಂಬಲ ಇದೆ.‌

ಸಮಾಜವಾದಿ ಧೋರಣೆ ನನ್ನದು. ಆರ್ಥಿಕ ಸಮಾನತೆ ಇರಬೇಕು ಎಂಬುವುದನ್ನು ನಾನು ಒಪ್ಪುತ್ತೇನೆ. ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್‌ ಅವರ ಹೋರಾಟಕ್ಕೆ ಸಹ ಬೆಂಬಲ ನೀಡಿದ್ದೆ.

* ಅಂತರ್ ಧರ್ಮ, ಅಂತರ್ಜಾತಿ ವಿವಾಹ ಬೆಂಬಲಿಸದೆ ಸಮಾನತೆ ಬಯಸುವುದು ಎಷ್ಟು ಸರಿ?
ಜಾತಿ ವ್ಯವಸ್ಥೆ ಒಪ್ಪಿಕೊಳ್ಳುತ್ತೇನೆ. ಆದರೆ, ಉಚ್ಚ ನೀಚ ಭಾವನೆ ಇರಬಾರದು. ಉತ್ತಮರು ಯಾವ ಜಾತಿಯಲ್ಲಿದ್ದರೂ ಒಪ್ಪಿಕೊಳ್ಳಬೇಕು. ಬ್ರಾಹ್ಮಣರೆಂದ ಮಾತ್ರಕ್ಕೆ ಶ್ರೇಷ್ಠರಲ್ಲ. ಜ್ಞಾನ, ಕರ್ತವ್ಯದಿಂದ ಮಾತ್ರ ಶ್ರೇಷ್ಠರಾಗಬಹುದು.

ಬಸವಣ್ಣ ಸಹ ಶಿವ ದೀಕ್ಷೆ ಪಡೆದವರು ಮಾತ್ರ ಸಮಾನರು ಎಂದಿದ್ದಾರೆ. ಶಿವ ದೀಕ್ಷೆ ಪಡೆಯದವರ ಮನೆಯಲ್ಲಿ ಊಟ ಮಾಡಿದರೆ ನಾಯಿ ಜನ್ಮ ಎಂದು ಹೇಳಿದ್ದಾರೆ. ಹಾಗಿದ್ದರೆ ಅವರು ವ್ಯತ್ಯಾಸ ಮಾಡಿದ್ದರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT