ಶುಕ್ರವಾರ, ಫೆಬ್ರವರಿ 26, 2021
19 °C
ರಜಿನಿಗೆ ಜಿಲ್ಲಾಡಳಿತ ಬೆಂಬಲ l ರಾಜ್ಯ-, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆದ್ದು ಸಾಧನೆ ಮಾಡಿದ ಪ್ರತಿಭೆಗಳು

ಲಕ್ಕ ಎಂದರೆ ಮಕ್ಕಳಿಗೆ ಈಜು ಪಕ್ಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಕ ಎಂದರೆ ಮಕ್ಕಳಿಗೆ ಈಜು ಪಕ್ಕ!

ಬಳ್ಳಾರಿ: ಜಿಲ್ಲೆಯಲ್ಲಿ ರಜಿನಿ ಲಕ್ಕ ಎಂದರೆ ವಿಶೇಷ ಮಕ್ಕಳ ಕಣ್ಣುಗಳು ಹೊಳೆಯುತ್ತವೆ. ಕಣ್ಣು ಕಾಣದ, ಕೈಕಾಲುಗಳಿಲ್ಲದ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಅವರು ಈಜು ಕಲಿಸುವ ಅಪರೂಪದ ಗುರು.

ರಜಿನಿ ಅವರು ವಿಶೇಷ ಮಕ್ಕಳಿಗೆ ಮೂರು ವರ್ಷದಿಂದ ಈಜು ಕಲಿಸುತ್ತಿದ್ದಾರೆ. ಕಲಿಸುವುದಷ್ಟೇ ಅಲ್ಲ, ರಾಜ್ಯ- ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಉತ್ತೇಜಿಸಿ ಪದಕ ಗಳಿಸಲು ಅವಿರತ ಶ್ರಮಿಸುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಜಿಲ್ಲಾಡಳಿತ ನಿಂತಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬಳ್ಳಾರಿ ಕ್ರೀಡಾ ಸಂಕೀರ್ಣದ ಈಜು ಕೊಳದಲ್ಲಿ ಕಲಿಯಲು ವಿಶೇಷ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಿದೆ.

‘ಅವರ ವೃತ್ತಿ ನೈಪುಣ್ಯತೆ ಮತ್ತು ಬದ್ಧತೆಗೆ ತರಬೇತುದಾರರು ಎಂಬ ಪದ ಸಾಲುವುದಿಲ್ಲ’ ಎಂಬುದು ವಿಶೇಷ ಮಕ್ಕಳ ಪೋಷಕರ ಹೆಮ್ಮೆಯ ನುಡಿ. ಇದುವರೆಗೆ ಅವರು ಐವತ್ತಕ್ಕೂ ಹೆಚ್ಚು ವಿಶೇಷ ಮಕ್ಕಳಿಗೆ ಈಜು ಕಲಿಸಿದ್ದಾರೆ. ಜೀವನದಲ್ಲಿ ಏನೂ ಸಾಧ್ಯವಿಲ್ಲ ಎಂಬ ವಿಷಾದದಲ್ಲಿದ್ದ ಮಕ್ಕಳು ಕೊರತೆಗಳನ್ನೇ ಸಾಮರ್ಥ್ಯವಾಗಿಸಿಕೊಳ್ಳುವ ಪಾಠ ಕಲಿತಿದ್ದಾರೆ.

‘ಇದು ಸಾಧ್ಯವಾಗಿದ್ದು ಹೇಗೆ?’ ಎಂದು ಕೇಳಿದರೆ, ರಜಿನಿ ನಾಲ್ಕು ವರ್ಷದ ಹಿಂದೆ ಬಂದ ದೂರವಾಣಿ ಕರೆಯೊಂದನ್ನು ಸ್ಮರಿಸುತ್ತಾರೆ.

‘ಒಂದು ರಾತ್ರಿ ಪೊಲಾ ಹೋಟೆಲ್‌ ಮಾಲೀಕರಾದ ವಿಕ್ರಂ ಕರೆ ಮಾಡಿ ರೌಂಡ್‌ ಟೇಬಲ್‌ ಸಂಸ್ಥೆಯಿಂದ ವಿಶೇಷ ಮಕ್ಕಳಿಗೆ ಈಜು ಕಲಿಸುವ ನಿರ್ಧಾರ ಕೈಗೊಂಡಿದ್ದೇವೆ. ನೀವು ತರಬೇತಿ ನೀಡುತ್ತೀರಾ ಎಂದರು. ಕೂಡಲೇ ನಾನು ಹೌದು ಸಂಪೂರ್ಣ ಉಚಿತವಾಗಿ ಎಂದು ಹೇಳಿದೆ. ನಂತರ ನಗರದ ಅನುಗ್ರಹ ಬುದ್ಧಿಮಾಂದ್ಯ ಶಾಲೆಯ 15 ಮಕ್ಕಳು ಬಂದರು. ಅವರಲ್ಲಿ ಐವರನ್ನು ಆಯ್ಕೆ ಮಾಡಿ ತರಬೇತಿ ಕೊಟ್ಟೆ’ ಎಂದರು.

‘ನಂತರ ನವಜೀವನ ಅಂಗವಿಕಲರ ಶಾಲೆಯ ಸಿಬ್ಬಂದಿ 20 ಮಕ್ಕಳಿಗೆ ತರಬೇತಿ ನೀಡಲು ನನ್ನ ಬಳಿಗೆ ಕರೆತಂದರು. 16 ಬಾಲಕಿಯರ ಪೈಕಿ ಇಬ್ಬರು ಅಂಧರಿದ್ದರು. ಅವರಿಗೂ ತರಬೇತಿ ನೀಡಿದೆ. ನಂತರ 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಸಮೀರ್‌ಶುಕ್ಲ ಅವರಿಗೆ ಮನವಿ ಮಾಡಿದ ಬಳಿಕ, ಇಲಾಖೆಯ ಈಜುಕೊಳಕ್ಕೆ ಉಚಿತ ಪ್ರವೇಶ ಕಲ್ಪಿಸಿದರು’ ಎಂದರು.

‘2015ರಲ್ಲಿ ರಾಜ್ಯ ಮಟ್ಟದ ಅಂಗವಿಕಲರ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು ಎರಡು ಪದಕ ಗಳಿಸಿದರು. ನಂತರದ ವರ್ಷ 17 ಪದಕ ಗಳಿಸಿದರು. ಪ್ರಸಕ್ತ ವರ್ಷ ಇಬ್ಬರು ಆರು ಪದಕಗಳನ್ನು ಗಳಿಸಿದರು’ ಎಂದರು.

ಉದಯಪುರದಲ್ಲಿ ಇತ್ತೀಚೆಗೆ ನಡೆದ 17ನೇ ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿ ರಜಿನಿ ಲಕ್ಕ ಅವರೊಂದಿಗೆ ನಗರಕ್ಕೆ ಬಂದ ವಿಶೇಷ ಮಕ್ಕಳಾದ ಗೋಪಿಚಂದ್ ಮತ್ತು ಯೋಜಿತ್‌ ಅವರನ್ನು ಮಹಿಳೆಯರು ರೈಲು ನಿಲ್ದಾಣದಲ್ಲಿ ದೀಪದಾರತಿ ಎತ್ತಿ ಸ್ವಾಗತಿಸಿದ್ದರು.

ತಮ್ಮ 46ನೇ ವಯಸ್ಸಿನಲ್ಲಿ ಈಜು ಕಲಿತ ರಜಿನಿ ‘ಹತ್ತು ವರ್ಷದಲ್ಲಿ ಸಾವಿರಾರು ಸಾಮಾನ್ಯ ಮಕ್ಕಳಿಗೆ ಈಜು ಕಲಿಸಿದ್ದರೂ, ವಿಶೇಷ ಮಕ್ಕಳಿಗೆ ಕಲಿಸಲು ಪಡಬೇಕಾದ ಶ್ರಮ ಮತ್ತು ಅದರಿಂದ ದೊರಕುವ ತೃಪ್ತಿಯೇ ದೊಡ್ಡದು’ ಎನ್ನುತ್ತಾರೆ.

***

ನನ್ನ ಮಗನ ಭವಿಷ್ಯ ಇನ್ನು ಮುಗಿಯಿತು ಎಂದುಕೊಂಡಿದ್ದೆ. ಆದರೆ ರಜಿನಿ ಅವರು ದೇವರಂತೆ ಬಂದು ಅವನಿಗೆ ಈಜು ಕಲಿಸಿದರು.

–ಎಲ್‌.ರಾಜಶೇಖರ್‌, ಎರಡೂ ಕಾಲಿಲ್ಲದ ಬಾಲಕ ಗೋಪಿಚಂದ್‌ ತಂದೆ, ಬಳ್ಳಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.