ಕೋಳಿ ಮಾಂಸ, ಮೊಟ್ಟೆ ದರ ನಿಯಂತ್ರಣಕ್ಕೆ ನಿಯಮಾವಳಿ

ಬೆಂಗಳೂರು: ‘ಕೋಳಿ ಮಾಂಸ ಮತ್ತು ಮೊಟ್ಟೆ ದರ ನಿಯಂತ್ರಿಸುವ ಉದ್ದೇಶದಿಂದ ರೂಪಿಸಿರುವ ನಿಯಾಮವಳಿ ಸದ್ಯದಲ್ಲೆ ಜಾರಿಗೆ ಬರಲಿದೆ’ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳದ ಅಧ್ಯಕ್ಷ ಡಿ.ಕೆ. ಕಾಂತರಾಜು ತಿಳಿಸಿದರು.
‘ಮಹಾ ಮಂಡಳದಿಂದ ನಿಯಮಾವಳಿ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅದು ಪರಿಶೀಲನೆ ಹಂತದಲ್ಲಿದೆ’ ಎಂದು ಅವರು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
‘ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆ ಮೇಲೆ ಹಿಡಿತ ಹೊಂದಿವೆ. ಈ ಕಂಪನಿಗಳೇ ಕೋಳಿ ಮೊಟ್ಟೆ ಮತ್ತು ಮಾಂಸದ ದರ ನಿಗದಿ ಮಾಡುತ್ತಿವೆ. ಒಂದು ಮೊಟ್ಟೆಗೆ ₹ 3.50 ಮಾತ್ರ ಕೋಳಿ ಫಾರಂ ಮಾಲೀಕರಿಗೆ ಸಿಗುತ್ತಿದೆ. ಬೇಡಿಗೆ ಹೆಚ್ಚಾದಾಗ ಮೊಟ್ಟೆ ದರ ಏರಿಕೆಯಾದರೆ, ಅದರ ಲಾಭ ನಮಗೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಹೀಗಾಗಿ ನಿಯಮಾವಳಿ ಅಗತ್ಯವಿದೆ’ ಎಂದರು.
‘ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಮಾದರಿಯಲ್ಲೇ ಕುಕ್ಕುಟ ಮಹಾಮಂಡಳ ಬೆಳೆಸುವ ಆಲೋಚನೆ ಇದೆ. ಎಲ್ಲಾ ಜಿಲ್ಲೆಗಳಲ್ಲೂ ಸಂಘಗಳನ್ನು ತೆರೆದು ಅವುಗಳ ಮೂಲಕವೇ ಕೋಳಿ ಮರಿ, ಅವುಗಳಿಗೆ ಬೇಕಿರುವ ಆಹಾರ ವಿತರಿಸುವ ವ್ಯವಸ್ಥೆ ತರಲಾಗುವುದು. ಬಳಿಕ ಫಾರಂ ಮಾಲೀಕರಿಂದ ಕೋಳಿಗಳನ್ನು ಖರೀದಿಸಿ ಮಂಡಳದ ಮೂಲಕವೇ ಮಾರಾಟ ಮಾಡುವ ಉದ್ದೇಶ ಇದೆ’ ಎಂದು ಅವರು ವಿವರಿಸಿದರು.
ಮಂಡಳದ ಉಪಾಧ್ಯಕ್ಷ ರುದ್ರಮುನಿ ಮಾತನಾಡಿ, ‘ಬಹುರಾಷ್ಟ್ರೀಯ ಕಂಪನಿಗಳು ಸಣ್ಣದಾಗಿ ಕೋಳಿ ಫಾರಂ ನಡೆಸುತ್ತಿರುವ ರೈತರ ಮೇಲೆ ಸವಾರಿ ಮಾಡುತ್ತಿವೆ. ಅದನ್ನು ತಡೆಯಲು ನಿಯಮಾವಳಿ ರೂಪಿಸಲಾಗಿದೆ’ ಎಂದು ಹೇಳಿದರು.
‘ಕೋಳಿ ಫಾರಂ ತೆರೆಯಲು ಪರವಾನಗಿ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯ್ತಿಯಿಂದ ಹಿಂಪಡೆಯಬೇಕು ಎಂಬುದನ್ನು ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ. ನಿಯಮಾವಳಿ ಜಾರಿಗೆ ಬಂದರೆ ಕೋಳಿ ಫಾರಂ ಮಾಲೀಕರಿಗೆ ಅನುಕೂಲವಾಗಲಿದೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.