ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಟಿನೇಟಿಗೆ ಬೆಚ್ಚದ ಕಿಲಾಡಿ ಕಕ್ಷಿದಾರ...!

Last Updated 2 ಡಿಸೆಂಬರ್ 2017, 21:51 IST
ಅಕ್ಷರ ಗಾತ್ರ

ಅವು 2010ರ ಅಂತ್ಯ ಮತ್ತು 2011ರ ಆರಂಭದ ದಿನಗಳು. ದೇಶದಾದ್ಯಂತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರ ಹೋರಾಟದ ದನಿಗೆ ಇಂಬು ಕೊಡುವಂತೆ ಭ್ರಷ್ಟಾಚಾರದ ವಿರುದ್ಧದ ಚರ್ಚೆ, ಗುಟುರು, ಗೋಷ್ಠಿಗಳು ರಂಗೇರಿದ್ದ ಸಂದರ್ಭ. ಈ ಚಳವಳಿಯ ಹಿಂದಿದ್ದ ಮಾಹಿತಿ ಹಕ್ಕು ಕಾರ್ಯಕರ್ತರ ಬಹುದೊಡ್ಡ ಪಡೆ ಅಂದು ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಕುಳಿತವರನ್ನು ಹಣ್ಣುಗಾಯಿ, ನೀರುಗಾಯಿ ಆಗುವಂತೆ ಮಾಡಿತ್ತು.

ಇಂತಹ ಸನ್ನಿವೇಶದಲ್ಲಿ ನನ್ನ ದೀರ್ಘಕಾಲದ ಸ್ನೇಹಿತ ಟಿ.ಟಿ.ರಾಯ್‌, ದೇವನಹಳ್ಳಿಯ ಧನಿಕ್‌ ಎಂಬ ವ್ಯಕ್ತಿಯನ್ನು ನನಗೆ ಪರಿಚಯಿಸಿ, ‘ಇವರು ನನಗೆ ಬೇಕಾದವರು. ಖಾಸಗಿ ಕೈಗಾರಿಕೆಯೊಂದರಲ್ಲಿ ಪರಿಣತ ಮೆಷಿನ್ ಟೂಲ್‌ ಆಪರೇಟರ್‌. ಬಿಡುವಿನ ವೇಳೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ನಿಮ್ಮ ಸಹಾಯ ಬೇಕು’ ಎಂದರು.

ಧನಿಕ್ ತನ್ನ ಇತ್ಯೋಪರಿಗಳನ್ನೆಲ್ಲಾ ಪರಿಚಯಿಸಿಕೊಂಡ. ‘ಲೋಕಾಯುಕ್ತ ಸಂಸ್ಥೆಗೆ ಗುಪ್ತ ಮಾಹಿತಿದಾರನಾಗಿದ್ದೀನಿ (secret agent). ದೇವನಹಳ್ಳಿ, ದೊಡ್ಡಬಳ್ಳಾಪುರ, ಯಲಹಂಕ ಭಾಗದಲ್ಲಿನ ಸರ್ಕಾರಿ ನೌಕರರ ಅಕ್ರಮ ಆಸ್ತಿ ಸಂಗ್ರಹ, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿನ ಅಪರಾ ತಪರಾಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿ ಲೋಕಾಯುಕ್ತದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮುಟ್ಟಿಸುತ್ತೇನೆ’ ಎಂದ.

ಗುಪ್ತ ಮಾಹಿತಿ ಸಂಗ್ರಹಿಸುವವರು ಯಾವತ್ತೂ ತಮ್ಮ ಗುಟ್ಟು ಬಿಟ್ಟುಕೊಡುವುದಿಲ್ಲ. ಆದರೆ, ಈತ ಹೀಗೆ ಹೇಳುತ್ತಿದ್ದಾನಲ್ಲಾ ಎಂದು ಆವಾಕ್ಕಾದೆ. ನನ್ನ ಮುಖದಲ್ಲಾದ ಬದಲಾವಣೆ ಗಮನಿಸಿದ ಆತ, ತನ್ನ ಮೊಬೈಲ್‌ನಲ್ಲಿದ್ದ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಫೋಟೊಗಳನ್ನು ತೋರಿಸಿ, ತನ್ನ ಸಂಪರ್ಕ ಜಾಲ ಖಾತ್ರಿಪಡಿಸಿದ. ಎಲ್ಲವನ್ನೂ ಸಾವಕಾಶವಾಗಿ ನೋಡಿದ ನಾನು ಒಂದು ವಾರದ ನಂತರ ಭೇಟಿಯಾಗುವಂತೆ ತಿಳಿಸಿದೆ.

ಧನಿಕ್‌ ಸರಿಯಾಗಿ ಒಂದು ವಾರದ ನಂತರ ನನ್ನ ಕಚೇರಿಗೆ ಬಂದ. ಅಗತ್ಯಕ್ಕಿಂತ ಹೆಚ್ಚು ಎನಿಸುವ ರೀತಿಯಲ್ಲಿ ಗೌರವ ನೀಡುತ್ತಾ, ‘ನಾನೀಗ ತುಂಬಾ ದುಃಸ್ಥಿತಿಯಲ್ಲಿದ್ದೇನೆ. ನೀವೇ ರಕ್ಷಿಸಿ ನ್ಯಾಯ ಒದಗಿಸಬೇಕು’ ಎಂದು ತನ್ನ ಕಷ್ಟದ ಕಂತೆಯನ್ನು ಎದುರಿಗಿಟ್ಟ.

ಮಧ್ಯಮ ವರ್ಗದ ಧನಿಕ್‌, ಮಾಹಿತಿ ಹಕ್ಕು ಕಾರ್ಯಕರ್ತನಾಗಿ ಹೆಸರನ್ನೂ ಗಳಿಸಿಕೊಂಡಿದ್ದವನು. ತಕ್ಕಮಟ್ಟಿಗೆ ನಗರದ ರಂಗೀಲಿ ರುಚಿಯನ್ನೂ ಹತ್ತಿಸಿಕೊಂಡಿದ್ದವನು. ಜನರೊಡನೆ ಬೆರೆತು ಕಲಾತ್ಮಕ ಮತ್ತು ರಂಜನೀಯ ಮಾತುಗಳಿಂದ ಅನ್ಯರ ಚಿತ್ತವನ್ನು ಸೆಳೆಯುವ ಚಾಣಾಕ್ಷ ಎಂಬುದನ್ನು ಅರಿಯಲು ನನಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ.

ಧನಿಕ್‌ಗೆ ಕೇರಳ ಮೂಲದ ಮಾರ್ಟಿನ್‌ ಮತ್ತು ಮೈಕೆಲ್‌ ಸ್ನೇಹಿತರು. ದೇವನಹಳ್ಳಿ ಬಳಿಯ ಶಾಲೆಯೊಂದರಲ್ಲಿ ಅರೆಕಾಲಿಕ ಶಿಕ್ಷಕರಾಗಿದ್ದ ಇವರಿಬ್ಬರೂ ತಾವು ವಾಸಿಸುತ್ತಿದ್ದ ಮನೆಯಿಂದ ಶಾಲೆಗೆ ನಿತ್ಯವೂ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಹೀಗೆಯೇ ಒಮ್ಮೆ ಶಾಲೆಗೆ ತೆರಳುತ್ತಿದ್ದಾಗ ದಾರಿಮಧ್ಯೆ ಇವರನ್ನು ತಡೆದ ಪೊಲೀಸರು ವಾಹನದ ದಾಖಲೆ ತೋರಿಸುವಂತೆ ಕೇಳಿದರು. ದುರದೃಷ್ಟವಶಾತ್‌ ಅವರ ಬಳಿ ಅಂದು ದಾಖಲೆಗಳು ಇರಲಿಲ್ಲ. ಪೊಲೀಸರಿಗೆ ಇಷ್ಟೇ ಸಾಕಾಯಿತು.  ‘ಎರಡು ಸಾವಿರ ರೂಪಾಯಿ ನೀಡಿದರೆ ವಾಹನ ಬಿಡುತ್ತೇವೆ. ಇಲ್ಲವಾದಲ್ಲಿ ಠಾಣೆಗೆ ಬಂದು ಹಣ ನೀಡಿ ಬಿಡಿಸಿಕೊಂಡು ಹೋಗಿ’ ಎಂದರು. ಇವರು ಹೊರ ರಾಜ್ಯದವರು ಎಂಬುದು ಗೊತ್ತಾಗುತ್ತಿದ್ದಂತೆಯೇ ದಂಡದ ಹಣಕ್ಕಿಂತ ಹೆಚ್ಚಿನ ಬೇಡಿಕೆ ಇಟ್ಟರು. ಆ ಕ್ಷಣಕ್ಕೆ ಅವರ ಬಳಿ ಅಷ್ಟೊಂದು ಹಣವಿರದ ಕಾರಣ ಬರಿಗೈಲಿ ಮನೆಗೆ ಬಂದರು.

ಮರುದಿನ ಧನಿಕ್‌ನನ್ನು ಕಂಡು ವಾಹನ ಬಿಡಿಸಿಕೊಂಡು ಬರಲು ಸಹಾಯ ಮಾಡುವಂತೆ ಕೋರಿದರು. ಮೊದಲೇ ಹೋರಾಟದ ಗುಣ ಮೈಗೂಡಿಸಿಕೊಂಡಿದ್ದ ಧನಿಕ್, ಅವರನ್ನು ನೇರವಾಗಿ ಲೋಕಾಯುಕ್ತ ಸಂಸ್ಥೆಯಲ್ಲಿನ ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರ ಬಳಿ ಕರೆದುಕೊಂಡು ಹೋದ. ಏನಾಗಿದೆ ಎಂಬುದನ್ನು ಅರಿತ ಆ ಅಧಿಕಾರಿ ಸಮಸ್ಯೆ ಬಗೆಹರಿಸಲು ಹೆಚ್ಚು ಹೊತ್ತು ತೆಗೆದುಕೊಳ್ಳದೆ ಇನ್‌ಸ್ಪೆಕ್ಟರ್‌ ಒಬ್ಬರಿಗೆ ಸೂಚನೆ ನೀಡಿಯೇ ಬಿಟ್ಟರು.

ಮೂವರನ್ನೂ ತಮ್ಮ ಚೇಂಬರ್‌ಗೆ ಕರೆಸಿಕೊಂಡ ಇನ್‌ಸ್ಪೆಕ್ಟರ್‌, ‘ನಿಮ್ಮ ಬಾಯಿ ಮಾತಿನ ವಿವರಣೆ ಸಾಲದು. ಲಂಚದ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಸಾಕ್ಷ್ಯ ಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗದು’ ಎಂದು ಒಂದು ಪೆನ್ ಕ್ಯಾಮೆರಾ ಮತ್ತು ವಾಯ್ಸ್‌ ರೆಕಾರ್ಡರ್‌ ಅನ್ನು ಮಾರ್ಟಿನ್‌ ಮತ್ತು ಮೈಕೆಲ್‌ ಕೈಗಿತ್ತರು. ‘ಲಂಚದ ಹಣಕ್ಕೆ ಬೇಡಿಕೆ ಇಡುವುದನ್ನು ಮತ್ತು ಕೊಡುವುದನ್ನು ಇದರಲ್ಲಿ ದಾಖಲಿಸಿಕೊಳ್ಳಿ’ ಎಂದು ತಿಳಿಸಿ ಕಳುಹಿಸಿಕೊಟ್ಟರು.

ವಾಯ್ಸ್‌ ರೆಕಾರ್ಡರ್ ಮತ್ತು ಪೆನ್‌ ಕ್ಯಾಮೆರಾಗಳನ್ನು ಜೇಬಿನಲ್ಲಿ ಗುಪ್ತವಾಗಿ ಇಟ್ಟುಕೊಂಡ ಮಾರ್ಟಿನ್‌ ಮತ್ತು ಮೈಕೆಲ್‌ ಸೀದಾ ಠಾಣೆಗೆ ಬಂದರು.

ಧನಿಕ್‌ನನ್ನು ಹೊರಗೇ ನಿಲ್ಲಿಸಿ ಒಳಗೆ ಹೋದರು. ‘ವಾಹನವನ್ನು ನಮ್ಮ ಸುಪರ್ದಿಗೆ ನೀಡಿ. ನಮ್ಮ ಹತ್ರ ಇಷ್ಟೇ ಹಣ ಇದೆ’ ಎಂದು ಅಲವತ್ತುಕೊಳ್ಳು
ತ್ತಿದ್ದರೆ ಪೊಲೀಸ್‌ ಅಧಿಕಾರಿ ಲಂಚದ ಪ್ರಮಾಣವನ್ನು ಎರಡರಿಂದ ಐದು ಸಾವಿರಕ್ಕೆ ಏರಿಸಿಬಿಟ್ಟ! ಇದೆಲ್ಲಾ ಗುಪ್ತ ಸಾಧನಗಳಲ್ಲಿ ದಾಖಲಾಗುತ್ತಿದೆ ಎಂಬುದರ ಅರಿವಿಲ್ಲದೆ ಹಣಕ್ಕಾಗಿ ಬಡಬಡಿಸುತ್ತಲೇ ಹೋದ. ಸ್ವಲ್ಪ ಸಮಯದ ಬಳಿಕ ಮಾರ್ಟಿನ್‌ ಮತ್ತು ಮೈಕೆಲ್‌ ‘ಆಗಲೀ ಸರ್‌. ಹಣ ಹೊಂದಿಸಿಕೊಂಡು ಬರುತ್ತೇವೆ’ ಎಂದು ಠಾಣೆಯಿಂದ ಹೊರಗೆ ಬಂದರು.

ಹೊರ ಬಂದ ಕೂಡಲೇ ಮಾರ್ಟಿನ್‌, ಜೇಬಿನಲ್ಲಿಟ್ಟಿದ್ದ ಪೆನ್‌ ಕ್ಯಾಮೆರಾವನ್ನು ಎತ್ತಿ ಉತ್ಸಾಹದಿಂದ ಧನಿಕ್‌ಗೆ ತೋರಿಸಿ ಮತ್ತೆ ಒಳಗೆ ಇಟ್ಟುಕೊಂಡ. ಇದನ್ನು ಠಾಣೆಯ ಮುಂಭಾಗದಲ್ಲಿದ್ದ ಕಾವಲು ಪೊಲೀಸ್ (ಸೆಂಟ್ರಿ) ಗಮನಿಸಿಬಿಟ್ಟ. ಕೂಡಲೇ ಒಳಗಿದ್ದ ಪೊಲೀಸರಿಗೆ ಕಣ್ಸನ್ನೆ ಮಾಡಿದ.

ಇವರ ಚಟುವಟಿಕೆ ಗೊತ್ತಾಗುತ್ತಿದ್ದಂತೆಯೇ ಪೊಲೀಸರು ಮೂವರನ್ನೂ ದರದರನೆ ಒಳಗೆ ಎಳೆದುಕೊಂಡು ಹೋಗಿ ಅವರ ಬಳಿಯಿದ್ದ ಪೆನ್‌ ಕ್ಯಾಮೆರಾ ಹಾಗೂ ವಾಯ್ಸ್ ರೆಕಾರ್ಡರ್‌ ಅನ್ನು ಬೂಟುಗಾಲಲ್ಲಿ ಹೊಸಕಿ ಹಾಕಿದರು. ಮೂವರಿಗೂ ಲಾಠಿ ಏಟು, ಬೂಟಿನೇಟುಗಳ ರುಚಿ ತೋರಿಸಿದರು. ಅವರ ಬಳಿಯಿದ್ದ ಮೊಬೈಲ್ ಫೋನು, ನಗದು, ಧರಿಸಿದ್ದ ಚಿನ್ನದ ಸರ, ಉಂಗುರ ಕಿತ್ತುಕೊಂಡರು. ಸ್ಲೇಟು ಹಿಡಿಸಿ ಕ್ರೈಂ ನಂಬರ್‌ ಬರೆದು ಫೋಟೊ ತೆಗೆದುಕೊಂಡರು. ನಂತರ ಒಳ ಉಡುಪಿನಲ್ಲಿ ಲಾಕಪ್‌ಗೆ ತಳ್ಳಿದರು. ಅಷ್ಟಕ್ಕೇ ಸುಮ್ಮನಾಗದೆ ಪತ್ತೆಯಾಗದೇ ಉಳಿದಿದ್ದ ಜಬರಿ ಕಳವು (ಬಲವಂತದಿಂದ ಕಿತ್ತುಕೊಳ್ಳುವುದು) ಪ್ರಕರಣವನ್ನು ಮೂವರ ತಲೆಗೂ ಕಟ್ಟಿದರು. ‘ನ್ಯಾಯಾಧೀಶರ ಮುಂದೆ ಏನಾದರೂ ಬಾಯಿಬಿಟ್ಟರೆ ಸುಮ್ಮನೇ ಬಿಡುವುದಿಲ್ಲ’ ಎಂಬ ಧಮಕಿ ಹಾಕಿ ಜೈಲಿಗೆ ಹೋಗುವಂತೆ ನೋಡಿಕೊಂಡರು.

ಇದಾದ ಹತ್ತಿಪ್ಪತ್ತು ದಿನಗಳಲ್ಲಿ ಜಾಮೀನು ಪಡೆದ ಮೂವರೂ ಜೈಲಿನಿಂದ ಹೊರಬಂದರು. ಇಷ್ಟೊತ್ತಿಗಾಗಲೇ ಪೊಲೀಸರ ಒದೆ ಮತ್ತು ಸುಳ್ಳು ಕೇಸಿಗೆ ತತ್ತರಿಸಿ ಹೋಗಿದ್ದ ಮಾರ್ಟಿನ್‌ ಮತ್ತು ಮೈಕೆಲ್‌ ಈ ಅನಿರೀಕ್ಷಿತ ಆಪತ್ತಿನಿಂದ ಬಚಾವಾದರೆ ಸಾಕು ಎಂಬಂತಾಗಿದ್ದರು. ಆದರೆ ಧನಿಕ್ ಮಾತ್ರ ಎದೆಗುಂದಿರಲಿಲ್ಲ. ಛಲಗಾರನಾಗಿದ್ದ ಆತ ನೇರವಾಗಿ ಲೋಕಾಯುಕ್ತ ಕಚೇರಿಗೆ ಬಂದವನೇ ಈ ಹಿಂದೆ ಭೇಟಿಯಾಗಿದ್ದ ಉನ್ನತ ಪೊಲೀಸ್ ಅಧಿಕಾರಿಯನ್ನು ಕಂಡು ತನಗಾದ ಹಿಂಸೆ, ಅವಮಾನವನ್ನು ಎಳೆಎಳೆಯಾಗಿ ಬಿಡಿಸಿಟ್ಟ.

ಪೊಲೀಸರ ದೌರ್ಜನ್ಯವನ್ನು ಆಲಿಸಿದ ಅಧಿಕಾರಿಯ ರಕ್ತ ಕುದ್ದು ಹೋಯಿತು. ಧನಿಕ್‌ನನ್ನು ಕರೆದೊಯ್ದು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆಯವರ ಮುಂದೆ ನಿಲ್ಲಿಸಿ ‘ಭ್ರಷ್ಟಾಚಾರದ ವಿರುದ್ಧ ಸೆಣಸಲು ಹೋದವ ಹೇಗೆ ಹೆಣಗುತ್ತಿದ್ದಾನೆ ನೋಡಿ’ ಎಂದರು.

ಲೋಕಾಯುಕ್ತರು ನೇರವಾಗಿ ಪೊಲೀಸ್‌ ಕಮಿಷನರ್‌ಗೆ ಫೋನಾಯಿಸಿ ತುರ್ತಾಗಿ ಬಂದು ಕಾಣುವಂತೆ ಸೂಚಿಸಿದರು. ಲೋಕಾಯುಕ್ತರನ್ನು ಭೇಟಿ ಮಾಡಿದ ನಂತರ ಕಮಿಷನರ್‌, ಧನಿಕ್, ಮಾರ್ಟಿನ್‌ ಮತ್ತು ಮೈಕೆಲ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸಿಟಿ ಕ್ರೈಂ ಬ್ರ್ಯಾಂಚ್‌ಗೆ (ಸಿಸಿಬಿ) ವರ್ಗಾವಣೆ ಮಾಡಲು ಆದೇಶಿಸಿದರು. ಅಂತಿಮವಾಗಿ ಸಿಸಿಬಿ, ‘ಮೂವರೂ ತಪ್ಪಿತಸ್ಥರಲ್ಲ. ಅವರನ್ನು ಅಕ್ರಮವಾಗಿ ಬಂಧಿಸಿ ನಕಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ದೇವನಹಳ್ಳಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಿತು.

ಧನಿಕ್ ಪರವಾಗಿ ಪ್ರಕರಣ ನಡೆಸಬೇಕೆಂದು ಕೇಳಿದ್ದ ರಾಯ್‌ ಮಾತಿಗೆ ಅನುಗುಣವಾಗಿ ನಾನು ಕಾರ್ಯ ಪ್ರವೃತ್ತನಾದೆ. ಅಂತೆಯೇ, ಪ್ರಕರಣವನ್ನು ನಿರ್ವಹಿಸಲು ತಗಲುವ ವೆಚ್ಚ ಮತ್ತು ಸಂಭಾವನೆ ನೀಡಬೇಕೆಂದು ಧನಿಕ್‌ಗೆ ಕೇಳಿದಾಗ, ‘ಸರ್, ನನ್ನ ಹೆಸರೇ ಧನಿಕ್! ನೀವು ಫೀಸಿನ ಬಗ್ಗೆ ಚಿಂತೆ ಮಾಡಬೇಡಿ, ಸದ್ಯ ಮನೆ ಕಟ್ಟುತ್ತಿದ್ದೇನೆ. ಪ್ರಕರಣ ತೀರ್ಮಾನವಾದ ಕೂಡಲೇ ನೀಡುತ್ತೇನೆ’ ಎಂದು ವಾಗ್ದಾನ ಮಾಡಿದ. ಆಗಲಿ ಎಂದು ಸಮ್ಮತಿಸಿದೆ.

ಅಕ್ರಮ ಬಂಧನಕ್ಕೆ ಒಳಗಾಗಿ, ದೈಹಿಕ ಮತ್ತು ಮಾನಸಿಕ ಹಿಂಸೆಗೆ ಗುರಿಯಾಗಿದ್ದ ಧನಿಕ್ ತನಗಾದ ಸಾರ್ವಜನಿಕ ಮುಜುಗರ, ಹಿಂಸೆ, ಅವಮಾನಕ್ಕೆ ಪರಿಹಾರ ಪಡೆಯಲು ಅರ್ಹನಾಗಿದ್ದ. ಈ ಹಿನ್ನೆಲೆಯಲ್ಲಿ ಪೂರಕ ದಾಖಲೆಗಳನ್ನು ಕಲೆ ಹಾಕಿ ಒಂದು ಅರ್ಜಿ ತಯಾರಿಸಿ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಪರಿಹಾರ ಕೋರಿ ಮನವಿ ಸಲ್ಲಿಸಿದೆ.

ಆಯೋಗಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಸರ್ಕಾರದಿಂದ, ಸರ್ಕಾರದ ಯಾವುದಾದರೂ ಸಂಸ್ಥೆಯಿಂದ ಅಥವಾ ಸರ್ಕಾರಿ ನೌಕರನ ವಿವೇಚನಾರಹಿತ ನಡವಳಿಕೆಯಿಂದ ತನ್ನ ಮೂಲಭೂತ ಹಕ್ಕುಗಳಿಗೆ ಚ್ಯುತಿ ಹಾಗೂ ನಷ್ಟ ಎಷ್ಟು ಉಂಟಾಗಿದೆ ಎಂಬುದನ್ನು ಆರಂಭದಲ್ಲಿಯೇ ಮನದಟ್ಟು ಮಾಡಿಕೊಡಬೇಕು.

ನನ್ನ ಅರ್ಜಿ ಪರಿಗಣಿಸಿದ ಆಯೋಗವು ಪ್ರತಿವಾದಿ ಪೊಲೀಸರಿಗೆ ತಕರಾರು ಸಲ್ಲಿಸಲು ಆದೇಶಿಸಿತು.

ಆಯೋಗದ ಮುಂದೆ ಹಾಜರಾದ ಪೊಲೀಸರು ಲಿಖಿತ ತಕರಾರು ಸಲ್ಲಿಸಿ ನನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದ ವಿಚಾರಗಳನ್ನೆಲ್ಲ ಅಲ್ಲಗೆಳೆದರು. ‘ನಾವು ತಪ್ಪೇ ಎಸಗಿಲ್ಲ’ ಎಂದು ಪ್ರಮಾಣ ಪತ್ರವನ್ನೂ ಸಲ್ಲಿಸಿದರು. ಅಷ್ಟೇ ಅಲ್ಲ, ಸಂತ್ರಸ್ತರ ಬಂಧನವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ‘ರಾಜ್ಯದ ಸಾರ್ವಭೌಮತೆ (Principle of Sovereign immunity) ತತ್ವದಡಿ ನಮ್ಮ ಕಾರ್ಯ ನಿರ್ವಹಿಸಿದ್ದೇವೆ. ಅರ್ಜಿದಾರರಿಗೆ ಪರಿಹಾರ ನೀಡುವ ಅವಶ್ಯಕತೆಯಿಲ್ಲ’ ಎಂದು ಪ್ರತಿಪಾದಿಸಿದ್ದರು.

ಸಂವಿಧಾನದ 21ನೇ ವಿಧಿಯನ್ನುಆಧಾರವಾಗಿಟ್ಟುಕೊಂಡು ಪ್ರಕರಣದ ಬೆನ್ನು ಬಿದ್ದಿದ್ದ ನಾನು, ‘ಪೊಲೀಸರಿಂದ ಅಕ್ರಮ ಬಂಧನಕ್ಕೆ ಗುರಿಯಾಗುವವರು ತನಿಖೆಯ ಹೆಸರಿನಲ್ಲಿ ಅನುಭವಿಸುವ ದೈಹಿಕ, ಮಾನಸಿಕ ಹಿಂಸೆಯು ಬಂಧಿತರ ಮತ್ತು ಅವರ ಕುಟುಂಬದವರನ್ನು ಆಜೀವ ಪರ್ಯಂತ ಕಾಡುತ್ತದೆ. ನಾಗರಿಕರ ಘನತೆಯನ್ನು ಎತ್ತಿ ಹಿಡಿಯಬೇಕಾದ ಪೊಲೀಸರು ನಾಲ್ಕು ಗೋಡೆಗಳ ಒಳಗೆ ನಡೆಸುವ ದೌರ್ಜನ್ಯ ಎಂತಹವರನ್ನೂ ಅಸಹಾಯಕತೆಗೆ ತಳ್ಳಿ, ಅವರ ವ್ಯಕ್ತಿಗತ ಘನತೆಗೆ ಚ್ಯುತಿ ಉಂಟು ಮಾಡುತ್ತದೆ. ಇಂತಹ ಹಲವಾರು ನಿದರ್ಶನಗಳನ್ನು ಗಮನಿಸಿಯೇ ಸರ್ವೋಚ್ಚ ನ್ಯಾಯಾಲಯ 21ನೆ ವಿಧಿಯನ್ನು ವ್ಯಾಖ್ಯಾನಿಸುವಾಗ; ಜೀವಿಸುವ ಹಕ್ಕೆಂದರೆ ಕೇವಲ ಜೀವಿಸುವ ಹಕ್ಕಲ್ಲ, ಅದು ಮಾನವನೊಬ್ಬ ಘನತೆಯಿಂದ ಬದುಕಲು ಸಾಧ್ಯವಾಗುವಂತಹ ಪೂರಕ ವಾತಾವರಣವನ್ನು ಹೊಂದಿರಬೇಕು ಮತ್ತು ಪ್ರಜೆಗಳ ಬದುಕು ಆಡಳಿತ ನಡೆಸುವವರ ಹಿಂಸೆಯಿಂದ ಮುಕ್ತವಾಗಿರಬೇಕು ಎಂದು ಪ್ರತಿಪಾದಿಸುತ್ತದೆ’ ಎಂಬ ಅಂಶವನ್ನು ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟೆ.

‘ವ್ಯಕ್ತಿಯೊಬ್ಬನನ್ನು ಬಂಧಿಸಿದ ಮಾತ್ರಕ್ಕೆ ಆತನ ಮೂಲಭೂತ ಹಕ್ಕುಗಳು ಆ ಕ್ಷಣಕ್ಕೇ ರದ್ದುಗೊಳ್ಳುತ್ತವೆ ಎಂದಾಗಲಿ ಅಥವಾ ಅಮಾನತಿಗೆ ಒಳಪಟ್ಟಿವೆ ಎಂದಾಗಲೀ ಭಾವಿಸಬೇಕಾಗಿಲ್ಲ. 21ನೆ ವಿಧಿಯಲ್ಲಿ ಖಚಿತಪಡಿಸಲಾಗಿರುವ ಹಕ್ಕುಗಳು ಪೊಲೀಸರಿಂದ ಬಂಧನಕ್ಕೆ ಗುರಿಯಾದವರಿಗೂ, ವಿಚಾರಣಾಧೀನ ಬಂದಿಗಳಿಗೂ ಮತ್ತು ಸಜಾ ಬಂದಿಗಳಿಗೂ ಲಭಿಸುತ್ತವೆ’ ಎಂಬ ಅಂಶಗಳನ್ನು ಎತ್ತಿ ಹಿಡಿಯುವ ಸುಪ್ರೀಂಕೋರ್ಟ್‌ ತೀರ್ಪಿನ ಹಲವು ಪೂರ್ವ ನಿದರ್ಶನಗಳನ್ನು ಆಯೋಗಕ್ಕೆ ಸಲ್ಲಿಸಿದೆ.

ವಾದ ಮಂಡನೆ ಮುಗಿಸಿ ಆಯೋಗದ ಕಚೇರಿಯಿಂದ ಆಚೆ ಬರುತ್ತಿದ್ದ ನನ್ನನ್ನು ವಾಪಸು ಕರೆಸಿದ ನ್ಯಾಯಾಧೀಶರು, ‘ನಿಮ್ಮ ಕಕ್ಷಿದಾರ ಅತಿ ವಿನಯಂ ಧೂರ್ತ ಲಕ್ಷಣಂ ಎಂಬ ಮಾತಿಗೆ ಉದಾಹರಣೆಯಾಗಿದ್ದಾನೆ. ಕಿಲಾಡಿ ಇದ್ದಾನೆ...!’ ಎಂದು ಕಟಕಿದರು. ಇದರಿಂದ ಅಚ್ಚರಿಗೊಂಡ ನಾನು ಏನೊಂದೂ ಹೇಳದೆ ಹೊರ ಬಂದೆ.

ವಾರದ ನಂತರ ತೀರ್ಪು ಪ್ರಕಟವಾಯಿತು. ದೌರ್ಜನ್ಯವೆಸಗಿರುವ ಪೊಲೀಸರು ಸಂತ್ರಸ್ತನಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಲಾಗಿತ್ತು. ತೀರ್ಪಿನ ಪ್ರತಿ ಕೈ ಸೇರುತ್ತಿದ್ದಂತೆಯೇ ಸಂಭಾವನೆಯನ್ನು ನಾಳೆ ಕೊಡುತ್ತೇನೆ ಎಂದ ಧನಿಕ್‌ ಮತ್ತೆ ನನ್ನ ಕಣ್ಣಿಗೆ ಕಾಣಿಸಿಕೊಳ್ಳದೇ ಹೋದ!

ಆಗ ನ್ಯಾಯಾಧೀಶರು ‘ನಿಮ್ಮ ಕಕ್ಷಿದಾರ ಕಿಲಾಡಿ’ ಎಂದು ಹೇಳಿದ್ದ ಮಾತುಗಳು ನೆನಪಾದವು...!!

ಲೇಖಕ ಹೈಕೋರ್ಟ್‌ ವಕೀಲ
(ಹೆಸರುಗಳನ್ನು ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT