ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾರೋಪಿಗಳಲ್ಲಿ ಶಾಲೆ ಬಿಟ್ಟವರೇ ಹೆಚ್ಚು

ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖ * 2016ರಲ್ಲಿ 287 ಬಾಲಕರ ಬಂಧನ
Last Updated 2 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮಕ್ಕಳು/ಬಾಲಕರಿಂದಲೂ ಅತಿ ಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ.

ದೇಶದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಂದ 2016ರಲ್ಲಿ 35,849 ಅಪರಾಧ ಕೃತ್ಯಗಳು ನಡೆದಿವೆ. ಇದರಲ್ಲಿ ರಾಜ್ಯದ ಪಾಲು ಶೇ 1.3 (453). ಬೆಂಗಳೂರು ಪೊಲೀಸರು 2016ರಲ್ಲಿ 205 ಪ್ರಕರಣಗಳನ್ನು ದಾಖಲಿಸಿ, 287 ಬಾಲಕರನ್ನು ಬಂಧಿಸಿದ್ದಾರೆ. ಈ ಪೈಕಿ 139 ಮಂದಿಯನ್ನು ಬಾಲ ಮಂದಿರಕ್ಕೆ ಬಿಟ್ಟಿದ್ದರೆ, ಇನ್ನುಳಿದವರನ್ನು ಕಾನೂನು ಪ್ರಕಾರ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

77 ಪ್ರಕರಣ ಹೆಚ್ಚಳ: ‘ಬಾಲಕರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಸಂಬಂಧ 2014ರಲ್ಲಿ 107 ಪ್ರಕರಣಗಳು ದಾಖಲಾಗಿದ್ದವು. ಮರುವರ್ಷ ಈ ಸಂಖ್ಯೆ 128ಕ್ಕೆ ಏರಿದರೆ, 2016ರಲ್ಲಿ ಏಕಾಏಕಿ 205ಕ್ಕೆ ಹೆಚ್ಚಳವಾಗಿದೆ’ ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ (ಎನ್‌ಸಿಆರ್‌ಬಿ) ವರದಿಯಲ್ಲಿ ಹೇಳಿದೆ.

ನಗರದಲ್ಲಿ ಅನಾಥ ಹಾಗೂ ನಿರಾಶ್ರಿತ ಮಕ್ಕಳಿಂದ ಅಪರಾಧ ನಡೆದಿರುವ ಬಗ್ಗೆ ಒಂದೂ ಪ್ರಕರಣ ದಾಖಲಾಗಿಲ್ಲ. ಪೋಷಕರ ಆಶ್ರಯದಲ್ಲಿ ಬೆಳೆದ ಮಕ್ಕಳೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ. ‘ಬಂಧಿತರಾದ 287 ಬಾಲಕರಲ್ಲಿ 283 ಮಕ್ಕಳು ಪೋಷಕರ ಆಶ್ರಯದಲ್ಲೇ ಇದ್ದವರು. ಉಳಿದ ನಾಲ್ವರ ಇತರರ ಪಾಲನೆಯಲ್ಲಿದ್ದವರು’ ಎಂದು ವರದಿ ಹೇಳಿದೆ.

ಶಾಲೆ ಬಿಟ್ಟವರಿಂದ ಕೃತ್ಯ: ಶಾಲೆಗೆ ಹೋಗದ ಹಾಗೂ ಅರ್ಧಕ್ಕೇ ವ್ಯಾಸಂಗ ನಿಲ್ಲಿಸಿದ ಬಾಲಕರು ಅಡ್ಡ ದಾರಿ ತುಳಿದಿದ್ದಾರೆ. ಬಂಧಿತ ಮಕ್ಕಳಲ್ಲಿ 11 ಮಂದಿ ಶಾಲೆ ಮೆಟ್ಟಿಲನ್ನೇ
ಹತ್ತಿಲ್ಲ. 65 ಮಕ್ಕಳು ಪ್ರಾಥಮಿಕ ಹಾಗೂ 168 ಮಕ್ಕಳು ಪ್ರೌಢ ಶಿಕ್ಷಣ ಕಲಿತು ಶಾಲೆ ಬಿಟ್ಟಿದ್ದಾರೆ. ಉಳಿದ 43 ಮಂದಿ ಕಾಲೇಜು ಶಿಕ್ಷಣ ಪಡೆದವರಾಗಿದ್ದಾರೆ.

‘ಮೊದಲು ತಮ್ಮ ಮನೆಗಳಲ್ಲಿ ತಿಂಡಿ ಕದಿಯುತ್ತಿದ್ದ ಬಾಲಕರು, ಈಗ ಸುಲಿಗೆ ಮಾಡಲು ಬೀದಿಗೆ ಇಳಿದಿದ್ದಾರೆ. ಮನೆ‌ಯ ವಾತಾವರಣ, ಹೊರಗಿನ ಸಹವಾಸಗಳು, ಹಣದ ಅಗತ್ಯತೆ, ಹೊಸ ಆಕರ್ಷಣೆಗಳು.. ಹೀಗೆ, ನಾನಾ ಕಾರಣಗಳಿಂದಾಗಿ ಅವರು ಅಪರಾಧ ಲೋಕಕ್ಕೆ ಧುಮುಕುತ್ತಿದ್ದಾರೆ. ಕೊಲೆ, ಅತ್ಯಾಚಾರದಂಥ ಘೋರ ಕೃತ್ಯಗಳೂ ಅವರಿಂದ ಆಗುತ್ತಿವೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಮಾಲಿನಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

‘ಮಕ್ಕಳ ಮೇಲೆ ಮೊದಲು ಪೋಷಕರು ನಿಗಾ ಇಡಬೇಕು. ಅವರು ಯಾವ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಕೂಡ ಈ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಜತೆ ಸೇರಿ ಮಕ್ಕಳು ಹಾಗೂ ಪೋಷಕರಲ್ಲಿಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಹೇಳಿದರು.

***

1,491 ಮಕ್ಕಳು ನಾಪತ್ತೆ!

2016ರಲ್ಲಿ 1,951 ಹೆಣ್ಣು ಮಕ್ಕಳು ಸೇರಿದಂತೆ ರಾಜ್ಯದ 4,224 ಮಕ್ಕಳು ನಾಪತ್ತೆಯಾಗಿದ್ದರು. ಆ ಪೈಕಿ 2,733 ಮಕ್ಕಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, 1,491 ಮಕ್ಕಳು ಇನ್ನೂ ಸಿಕ್ಕಿಲ್ಲ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT