ಭಾನುವಾರ, ಮಾರ್ಚ್ 7, 2021
27 °C
ವೈರಲ್‌ ಆದ ವಿಡಿಯೊ, ಯುವಕನಿಗೆ ಸಂಕಷ್ಟ

75ನೇ ಅಂತಸ್ತಿನ ಕಟ್ಟಡದ ಮೇಲೆ ನಿಂತು ಸೆಲ್ಫಿ ವಿಡಿಯೊ ತೆಗೆದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

75ನೇ ಅಂತಸ್ತಿನ ಕಟ್ಟಡದ ಮೇಲೆ ನಿಂತು ಸೆಲ್ಫಿ ವಿಡಿಯೊ ತೆಗೆದ ಯುವಕ

ಮುಂಬೈ: 75 ಮಹಡಿಯ ನಿರ್ಮಾಣ ಹಂತದ ಕಟ್ಟಡವೊಂದರ ಮೇಲೆ ‌‌‌ಕ್ರೇನ್‌ನಲ್ಲಿ ಹತ್ತಿ ಅಪಾಯಕಾರಿ ಸೆಲ್ಫಿ ವಿಡಿಯೊ ಚಿತ್ರೀಕರಿಸಿ ಯುಟ್ಯೂಬ್‌ನಲ್ಲಿ ಹರಿಯಬಿಟ್ಟ 17ರ ಹರೆಯದ ಯುವಕ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಇಂತಹ ಅಪಾಯಕಾರಿ ಸ್ಥಳಗಳಿಗೆ ಹೋಗುವಾಗ ಸಂಬಂಧಪಟ್ಟವರ ಅನುಮತಿ ಪಡೆದಿರಬೇಕು ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಬೇಕು. ಆದರೆ, ಅಂತಹ ಯಾವುದೇ ನಿಯಮವನ್ನು ಪಾಲಿಸದೇ ಈ ಅಪಾಯಕಾರಿ ಸಾಹಸ ಮಾಡಿ ಸುದ್ದಿಯಾದವನು ಮೊದಲ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿದ್ಯಾರ್ಥಿ ಪ್ರಣಾಳ್‌ ಚೌಹಾಣ್‌.

ಯುಟ್ಯೂಬ್‌ನಲ್ಲಿ ಹಾಕಿದ್ದ ವಿಡಿಯೊ ವೈರಲ್‌ ಆಗಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ವಿಡಿಯೊವನ್ನು ತೆಗೆದು ಹಾಕಿದ್ದಾನೆ. ಅಷ್ಟೇ ಅಲ್ಲ, ಯುವಕರಿಗೆ ತಪ್ಪು ಸಂದೇಶ ನೀಡಿರುವುದಕ್ಕಾಗಿ ಕ್ಷಮೆ ಯಾಚಿಸಿದ್ದಾನೆ. ‘ನಾನು ಮಾಡಬೇಕು ಎಂದುಕೊಂಡಿರುವ ಸಾಹಸವನ್ನು ಮಾಡಿಯೇ ತೀರುತ್ತೇನೆ. ಆದರೆ, ಇನ್ನು ಮುಂದೆ ಇಂಥಾ ಸಾಹಸ ಮಾಡುವಾಗ ಅನುಮತಿ ಪಡೆಯುತ್ತೇನೆ’ ಎಂದು ಹೇಳಿದ್ದಾನೆ.

ವಿಡಿಯೊ ವೈರಲ್‌ ಆಗುತ್ತಿದ್ದಂತೆ ವರ್ಲಿ ಪೊಲೀಸರು ಯುವಕನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ‘ಯುಟ್ಯೂಬ್‌ನಿಂದ ವಿಡಿಯೊ ಡಿಲಿಟ್‌ ಮಾಡಿದ್ದೇನೆ. ನಾನು ಯಾರನ್ನೂ ಕೆರಳಿಸಲು ಬಯಸುವುದಿಲ್ಲ. ಈ ರೀತಿ ಮಾಡುವುದು ಕಾನೂನುಬಾಹಿರ ಮತ್ತು ಅಪಾಯಕಾರಿ ಎಂಬ ಅರಿವಾಗಿದೆ. ಮುಂದಿನ ಬಾರಿ ಪೊಲೀಸರ ಅನುಮತಿ ಪಡೆದು, ಸುರಕ್ಷತಾ ಕ್ರಮಗಳನ್ನು ಅನುಸರಿಸಿಯೇ ಸಾಹಸ ಮಾಡುತ್ತೇನೆ’ ಎಂದು ಹೇಳಿದ್ದಾನೆ.

‘ನನ್ನ ವಿಡಿಯೊ ನೋಡಿದ ಅನೇಕ ಗೆಳೆಯರು ಇದೊಂದು ಅಪಾಯಕಾರಿ ಸಾಹಸ ಎಂದಿದ್ದಾರೆ. ಸಂಬಂಧಪಟ್ಟವರಿಂದ ಅನುಮತಿ ಪಡೆಯದೇ, ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಯಾರೂ ಈ ಸಾಹಸಕ್ಕೆ ಕೈ ಹಾಕಬೇಡಿ’ ಎಂದು ಮನವಿ ಮಾಡಿದ್ದಾನೆ.

ವಿಡಿಯೊ ನೋಡಿದ ಕೆಲವರು ನಗರ ಪೊಲೀಸರಿಗೆ ಟ್ವಿಟರ್‌ ಮೂಲಕ ದೂರು ದಾಖಲಿಸಿದ್ದಾರೆ. ‘ಯುವಕನ ವಿರುದ್ಧ ಅಧಿಕೃತವಾಗಿ ಯಾರೂ ದೂರು ನೀಡದಿರುವ ಕಾರಣ ಪ್ರಕರಣ ದಾಖಲಿಸಿಲ್ಲ’ ಎಂದು ವರ್ಲಿ ಠಾಣೆಯ ಇನ್‌ಸ್ಪೆಕ್ಟರ್‌ ಗಜಾನನ್‌ ದೆಸೂರ್ಕರ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.