4

ನುಡಿಸಿರಿಯಲ್ಲಿ ಸಮಗ್ರ ಜೀವನ ದರ್ಶನ

Published:
Updated:
ನುಡಿಸಿರಿಯಲ್ಲಿ ಸಮಗ್ರ ಜೀವನ ದರ್ಶನ

ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ಆರಂಭವಾಗಿರುವ ಮೂರು ದಿನಗಳ ಆಳ್ವಾಸ್ ನುಡಿಸಿರಿ, ಸಮಗ್ರ ಜೀವನದ ದರ್ಶನ ಮಾಡಿಸುವಲ್ಲಿ ಯಶಸ್ವಿಯಾಯಿತು. ಜೀವನದಲ್ಲಿ ಹಾಸು ಹೊಕ್ಕಾಗಿರುವ ಪ್ರತಿ ಕ್ಷೇತ್ರದ 'ಸಿರಿ'ಯನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿತು. ದೂರದ ಊರುಗಳಿಂದ ಬಂದಿದ್ದ ಜನರು ನುಡಿಸಿರಿ ಭೇಟಿಯ ಸಾರ್ಥಕತೆ ಅನುಭವಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಆರಂಭದಿಂದಲೇ ವಿದ್ಯಾರ್ಥಿ ಸಿರಿಯ ಮೂಲಕ ನುಡಿಸಿರಿಗೆ ಸುಂದರ ಮುನ್ನಡಿ ಬರೆಯಲಾಯಿತು. ಭವಿಷ್ಯದ ನಾಗರಿಕರಾಗಿರುವ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ, ಅವರ ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳಿಂದಲೇ ಗೋಷ್ಠಿಗಳು ನಡೆದವು. ಇನ್ನೊಂದು ಹೆಜ್ಜೆ ಮುಂದಿಟ್ಟು, ವಿದ್ಯಾರ್ಥಿಗಳ ಕವಿಗೋಷ್ಠಿಯೂ ನಡೆಯಿತು. ಹಲವಾರು ಪ್ರತಿಭೆಗಳು ತಮ್ಮ ಕಾವ್ಯ, ಸಾಹಿತ್ಯ, ವಿಚಾರಧಾರೆಗಳನ್ನು ಅಭಿವ್ಯಕ್ತಪಡಿಸಲು ಸಾಧ್ಯವಾಯಿತು.

ವಿದ್ಯಾರ್ಥಿ ಸಿರಿಗೆ ಪೂರಕವಾಗಿ ಇದೇ ಮೊದಲ ಬಾರಿ ವಿಜ್ಞಾನ ಸಿರಿಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮಾದರಿ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ವಿಜ್ಞಾನ ಆಸಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಲಾಯಿತು. ಈ ವಸ್ತು ಪ್ರದರ್ಶನದಲ್ಲಿ ಇಸ್ರೋದ ಒಂದು ಮಾದರಿ, ಅಗಸ್ತ್ಯ ವಿಜ್ಞಾನ ಸಂಸ್ಥೆಯ 70 ಮಾದರಿಗಳು, ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿದ 18 ಮಾದರಿ, ಆಳ್ವಾಸ್ ಪ್ರೌಢಶಾಲಾ ವಿದ್ಯಾರ್ಥಿಗಳ ನಾಲ್ಕು ಮಾದರಿಗಳು ಗಮನ ಸೆಳೆದವು. ಶನಿವಾರ ಬಹುತೇಕ ಶಾಲಾ ವಿದ್ಯಾರ್ಥಿಗಳು, ವಿಜ್ಞಾನ ಶಿಕ್ಷಕರೊಂದಿಗೆ ವಿಜ್ಞಾನ ಸಿರಿಗೆ ಭೇಟಿ ನೀಡಿದರು.

ನಮ್ಮ ಸಂಸ್ಕೃತಿಯ ಬಹುಮುಖ್ಯ ಅಂಗವಾಗಿರುವ ಕೃಷಿಯ ಎಲ್ಲ ಆಯಾಮಗಳನ್ನು ಪರಿಚಯಿಸುವ ಕೃಷಿ ಸಿರಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವಿಧ ತರಕಾರಿ, ಹಣ್ಣು, ಹೂವು, ವಿವಿಧ ಧಾನ್ಯಗಳು, ಹಲವಾರು ಜಾತಿ ಗೆಡ್ಡೆಗಳು, 44 ವಿಧದ ಬಿದಿರಿನ ತಳಿಗಳು, ತರಕಾರಿಯಿಂದ ರಚಿಸಿದ ಕಲಾಕೃತಿಗಳು, ಬೋನ್ಸಾಯ್, ಚಿಪ್ಪುಗಳ ಪ್ರದರ್ಶನ, ಕೃಷಿ ಚಟುವಟಿಕೆಯ ಆಧಾರವಾಗಿರುವ ಜಾನುವಾರುಗಳು, ಬೆಲ್ಲದ ಗಾಣ ಹೀಗೆ ಹತ್ತು ಹಲವಾರು ಪ್ರಾತ್ಯಕ್ಷಿಕೆಗಳು ಕಣ್ಮನ ಸೆಳೆದವು. ಎರಡು ಎಕರೆ ಪ್ರದೇಶದಲ್ಲಿ ಸುಧಾರಿತ ಮತ್ತು ರಾಸಾಯನಿಕ ರಹಿತ ನೈಜ ಕೃಷಿಯ ದರ್ಶನ ಮಾಡಿಸಲಾಯಿತು.

ಕೋಣಗಳ ಗತ್ತು-ಗಮ್ಮತ್ತು: ಕೃಷಿ ಸಿರಿಯ ಪ್ರಮುಖ ಆಕರ್ಷಣೆಯಾಗಿದ್ದ ಕಂಬಳದ ಕೋಣಗಳ ಗತ್ತಿನ ಹೆಜ್ಜೆ ಗಮನ ಸೆಳೆಯಿತು. ಕೃಷಿ ಸಿರಿ ಆವರಣದಿಂದ ತುಳು ಐಸಿರಿ ಆವರಣಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಕಂಬಳದ ಕೋಣಗಳ ಮೆರವಣಿಗೆ ನಡೆಯಿತು.

ವಾದ್ಯ, ಬ್ಯಾಂಡ್, ಕೊಂಬು ನಾದಕ್ಕೆ ಕೋಣಗಳೂ ಸೊಗಸಾಗಿ ಹೆಜ್ಜೆ ಹಾಕಿದವು. ಪಾವಡೆ ಹಾಕಿ, ನೊಗ, ನೆತ್ತಿಬಲ್ಲ್‌, ಕರಿಗೊಂಡೆಗಳಿಂದ ಅಲಂಕೃತವಾಗಿದ್ದ ಕಂಬಳದ ಕೋಣಗಳಿಗೆ ರಾಜಾತಿಥ್ಯವೂ ಲಭ್ಯವಾಗಿತ್ತು.

ಕೋಣಗಳ ಸೌಂದರ್ಯ ಸ್ಪರ್ಧೆಯಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ್ ಸುಬ್ಬಯ್ಯ ಕೋಟ್ಯಾನ್ ಅವರ 'ಕುಟ್ಟಿ-ಕುದ್ರಾಡಿ ಕೋಣದ ಜೋಡಿಗೆ ಪ್ರಥಮ ಬಹುಮಾನ ₹ 50 ಸಾವಿರ ಲಭಿಸಿತು. ಹೊಸಬೆಟ್ಟು ಗೋಪಾಲಕೃಷ್ಣ ಭಟ್ ಅವರ ಕುಂಞಿ-ಕಾಜ ಕೋಣಗಳಿಗೆ ದ್ವಿತೀಯ ಬಹುಮಾನ ₹ 30 ಸಾವಿರ ದೊರೆಯಿತು. ಓಟಗಾರರಿಗೆ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಕೊಳಕೆ ಇರ್ವತ್ತೂರು ಆನಂದ ಪ್ರಥಮ ಹಾಗೂ ಶಂಕರ್ ವಾಲ್ಪಾಡಿ ದ್ವಿತೀಯ ಬಹುಮಾನ ಪಡೆದರು.

ಭಾನುವಾರ ಉದ್ಯೋಗ ಸಿರಿ ನಡೆಯಲಿದ್ದು, ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈಗಾಗಲೇ ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ಉದ್ಯೋಗ ಮೇಳವನ್ನು ನಡೆಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ನುಡಿಸಿರಿಯಲ್ಲಿ ಉದ್ಯೋಗ ಸಿರಿಯನ್ನು ಸೇರ್ಪಡೆ ಮಾಡಲಾಗಿದೆ. 100ಕ್ಕೂ ಹೆಚ್ಚು ವಿವಿಧ ಕಂಪೆನಿಗಳು ಭಾನುವಾರ ಮೂಡುಬಿದಿರೆಗೆ ಬರಲಿದ್ದು, ಉದ್ಯೋಗವನ್ನು ಎದುರು ನೋಡುತ್ತಿರುವವರಿಗೆ ಮತ್ತೊಂದು ಅವಕಾಶ ಸಿಗಲಿದೆ. ಸಾಹಿತ್ಯ ಸಂಸ್ಕೃತಿಯ ಸಂಗಮ: ನೃತ್ಯ, ಸಂಗೀತ, ವಾದ್ಯ ಗೋಷ್ಠಿ, ನಾಟಕ ಹೀಗೆ ಸಾಂಸ್ಕೃತಿಕ ಕ್ಷೇತ್ರದ ಹತ್ತು ಹಲವು ಆಯಾಮಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕಾವ್ಯ ಸಂಗೀತ, ನೃತ್ಯ ದರ್ಪಣ, ಆಳ್ವಾಸ್ ಸಾಂಸ್ಕೃತಿಕ ವೈಭವಗಳ ಮೂಲಕ ನೃತ್ಯದ ಸಂಭ್ರಮ ಮನೆ ಮಾಡಿದರೆ, ಸುಭದ್ರಾ ಕಲ್ಯಾಣ, ಅತೀತ, ವಾಲಿ ವಧೆ, ಸಿರಿ ನಾಟಕಗಳ ಪ್ರದರ್ಶನ ನಡೆಯಿತು. ಇನ್ನು ದಾಸವಾಣಿ, ತತ್ವಪದ, ಜಾನಪದ ಗೀತೆ, ಸುಗಮ ಸಂಗೀತ, ರಂಗಗೀತೆಗಳು, ಚಕ್ರಿ ಭಜನೆ, ಗೊಂದಲಿಗರ ಮೇಳ, ಭಜನಾವಳಿಗಳು ಜಾನಪದ ವೈಭವಕ್ಕೆ ಸಾಕ್ಷಿಯಾದವು. ಯಕ್ಷ ಹಾಸ್ಯ ವೈಭವ, ಬಡಗುತಿಟ್ಟು ಯಕ್ಷಗಾನ, ಪುಂಡು ವೇಷ- ಸ್ತ್ರೀ ವೇಷ ವೈಭವ, ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗಳೂ ನಡೆದವು.

ಯೋಗದ ಭಾಗ್ಯ: ಸಾಹಿತ್ಯ, ಸಂಸ್ಕೃತಿ ಸಂಭ್ರಮದಲ್ಲಿ ಭಾಗಿಯಾಗಿರುವ ಜನರಿಗೆ ವೈದ್ಯಕೀಯ ಶಿಬಿರವನ್ನು ನಡೆಸಲಾಗುತ್ತಿದೆ. ಮೂರು ದಿನ ನಡೆಯುವ ಶಿಬಿರವನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನ 123 ಮತ್ತು 125 ನೇ ಕೊಠಡಿಯಲ್ಲಿ ಏರ್ಪಡಿಸಲಾಗಿದೆ.

ಇಲ್ಲಿ ಪ್ರಕೃತಿ ಚಿಕಿತ್ಸೆಯ ವಿವರಣೆ, ಯೋಗಾಭ್ಯಾಸ, ಅಕ್ಯುಪ್ರಷರ್ ಚಿಕಿತ್ಸೆ, ಉಪಕರಣಗಳ ಮಾರಾಟ, ಆಹಾರ ಪದ್ಧತಿಯ ಮಾಹಿತಿ, ಮಣ್ಣಿನ ಚಿಕಿತ್ಸೆಗಳನ್ನು ನುರಿತ ತಜ್ಞರಿಂದ ನೀಡಲಾಗುತ್ತಿದೆ.

36 ಸಾವಿರ ಪ್ರತಿನಿಧಿಗಳು

ಆಳ್ವಾಸ್ ನುಡಿಸಿರಿಯಲ್ಲಿ ₹ 100 ಪಾವತಿಸಿ ನೋಂದಣಿ ಮಾಡಿಸಿಕೊಂಡಿರುವ ಒಟ್ಟು 36,482 ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಇದರಲ್ಲಿ ಕರ್ನಾಟಕದ 34,055, ಇತರ ರಾಜ್ಯದಿಂದ 2,477 ಜನರು ಸೇರಿದ್ದಾರೆ. ಬೆಂಗಳೂರಿನಿಂದ 6,096, ದಕ್ಷಿಣ ಕನ್ನಡ ಜಿಲ್ಲೆಯಿಂದ 4,080, ಉಡುಪಿ ಜಿಲ್ಲೆಯ 1,190 ಜನರು ನೋಂದಾಯಿತ ಪ್ರತಿನಿಧಿಗಳಾಗಿ ಭಾಗವಹಿಸಿದ್ದಾರೆ. ಇದರ ಜತೆಗೆ ಬೇರೆ ಊರುಗಳಿಂದ ಅಸಂಖ್ಯಾತ ಜನರು ನುಡಿಸಿರಿಯಲ್ಲಿ ಭಾಗಿಯಾಗಿದ್ದಾರೆ.

ಸಿನಿಮಾ ಪ್ರದರ್ಶನ 

ಕೇವಲ ಸಾಹಿತ್ಯ, ಸಂಸ್ಕೃತಿ, ನೃತ್ಯ, ಸಂಗೀತಕ್ಕೆ ಮಾತ್ರವಲ್ಲದೇ, ಸಿನಿಮಾಕ್ಕೂ ಈ ಬಾರಿ ಆದ್ಯತೆ ನೀಡಲಾಗಿದೆ. ಆಳ್ವಾಸ್ ಸ್ನಾತಕೋತ್ತರ ಕೇಂದ್ರದ ಪುಟ್ಟಣ್ಣ ಕಣಗಾಲ್ ವೇದಿಕೆಯಲ್ಲಿ ಶುಕ್ರವಾರ ಹಾಗೂ ಶನಿವಾರ ಚಲನಚಿತ್ರ ಪ್ರದರ್ಶನ ಮಾಡಲಾಯಿತು. ಶುಕ್ರವಾರ ಬೆಳಿಗ್ಗೆ ‘ಭೂತಯ್ಯನ ಮಗ ಅಯ್ಯು’, ಮಧ್ಯಾಹ್ನ ‘ತಿಥಿ’, ಸಂಜೆ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರಗಳ ಪ್ರದರ್ಶನ ನಡೆಯಿತು. ಶನಿವಾರ ‘ಶರಪಂಜರ’, ‘ಕೇರ್ ಆಫ್ ಫುಟ್ಪಾತ್’, ‘ಚಿಗುರಿದ ಕನಸು’ ಚಿತ್ರ ಪ್ರದರ್ಶಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry