4

‘ಸಕ್ಕರೆ ನಾಡಿಗೆ ಸಾಹಿತ್ಯದ ಕಂಪು ನೀಡಿದ ಹೆಬ್ರಿ’

Published:
Updated:

ಮಂಡ್ಯ: ‘ದೂರದ ಉಡುಪಿಯಿಂದ ಬಂದು ನಗರದಲ್ಲಿ ನೆಲೆಸಿದ ಸಾಹಿತಿ ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ ಅವರು ತಮ್ಮ ಸಾಹಿತ್ಯ ಹಾಗೂ ಕಲೆಯ ಕಂಪನ್ನು ಸಕ್ಕರೆ ನಾಡಿಗೂ ನೀಡಿದ್ದಾರೆ’ಎಂದು ಮೈಸೂರಿನ ಗುಬ್ಬಿಗೂಡು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಗುಬ್ಬಿಗೂಡು ರಮೇಶ್ ಹೇಳಿದರು.

ಸಂಸ್ಕೃತಿ ಸಂಘಟನೆ ವತಿಯಿಂದ ನಗರದ ಗಾಂಧಿಭವನದಲ್ಲಿ ಶನಿವಾರ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಹೆಬ್ರಿ ಅವರು ವೈದ್ಯ ವೃತ್ತಿ ಹಾಗೂ ಪ್ರಯೋಗಶಾಲೆಯ ವೃತ್ತಿಯ ಜೊತೆಗೆ ಸಾಹಿತ್ಯ ಕೃಷಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಪ್ರವೃತ್ತಿಯ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಅವರ ಸಾಹಿತ್ಯ ಸೃಷ್ಟಿಯ ಆರಂಭದ ದಿನಗಳಲ್ಲಿ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಎದುರಿಸಿದ್ದಾರೆ. ಎಲ್ಲವನ್ನು ಜೀರ್ಣಿಸಿಕೊಂಡು ಅವರ ಬೆಳೆದ ರೀತಿ ಮಾದರಿಯಾದುದು’ ಎಂದರು.

ಇಂತಹ ಹಿರಿಯ ಸಾಹಿತಿಗೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವ ಸಂದಿರುವುದು ಸಕ್ಕರೆ ನಾಡಿನ ಗೌರವ ಮತ್ತಷ್ಟು ಹೆಚ್ಚಾಗಿದೆ. ಅವರ ಈ ಸಾಧನೆಯ ಹಿಂದೆ ಅಪಾರ ಶ್ರಮವಿದೆ. ವಿವಿಧ ಪ್ರಕಾರದ ಕೃತಿಗಳ ಜೊತೆಗೆ ಹತ್ತು ಮಹಾಕಾವ್ಯವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು 48 ಪುಟಗಳಲ್ಲಿ ರಚಿಸಿರುವುದು ಅವರ ಅಧ್ಯಯನಶೀಲತೆಯನ್ನು ತೋರುತ್ತದೆ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಶ್ರೀ ರಾಮಾಯಣ ದರ್ಶನಂ ರಚಿಸಿದ್ದಾರೆ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿಕುಮಾರ ಚಾಮಲಾಪುರ ‘ಡಾ.ಹೆಬ್ರಿ ಅವರು ವೃತ್ತಿ ಹಾಗೂ ಪ್ರವೃತ್ತಿಗಳ ನಡುವೆ ಈ ಭಾಗದ ಹಲವು ಯುವ ಸಾಹಿತಿಗಳನ್ನು ಬೆಳಸುವ ಕೆಲಸ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಇವರು ಸಾಂಸ್ಕೃತಿಕ ಜಗತ್ತಿನಲ್ಲೂ ಸಾಧನೆ ಮಾಡಿದ್ದಾರೆ. ಇಂಥವರು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಗೌರವದ ವಿಷಯವಾಗಿದೆ’ ಎಂದರು.

ಡಾ.ಹೆಬ್ರಿ ಮಾತನಾಡಿ ‘ನಾವು ಬೆಳೆಯುವುದು ಮಾತ್ರವಲ್ಲದೆ ಮುಂದಿನ ತಲೆಮಾರನ್ನು ಸಹ ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿ ಬೆಳೆಸುವುದೂ ಜವಾಬ್ದಾರಿ ಪ್ರಮುಖವಾದುದು’ ಎಂದು ಹೇಳಿದರು.

ಡಾ.ಪ್ರದೀಪ್‌ಕುಮಾರ ಹಬ್ರಿ ದಂಪತಿಯನ್ನು ಸನ್ಮಾನಿಸಲಾಯಿತು. ಸಂಸ್ಕೃತಿ ಸಂಘಟನೆ ಅಧ್ಯಕ್ಷ ಕೆ.ಪ್ರಹ್ಲಾದರಾವ್, ಡ್ಯಾಫೊಡಿಲ್ಸ್‌ ಶಾಲೆ ಕಾರ್ಯದರ್ಶಿ ಸುಜಾತಾ ಕೃಷ್ಣ, ಪ್ರತಿಭೆ ವೇದಿಕೆಯ ಅಧ್ಯಕ್ಷ ಎಸ್. ರಾಜರತ್ನಂ, ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಎಸ್. ಶೆಟ್ಟಿ, ಶ್ರೀನಿವಾಸಶೆಟ್ಟಿ, ಉಮಾ, ಹೊಳಲು ಶ್ರೀಧರ್, ಎಂವಿ.ಧರಣೇಂದ್ರಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry