7

‘ಸುಳ್ಳು ಹೇಳಿಕೆ ನೀಡುವುದನ್ನು ನಾಡಗೌಡ ನಿಲ್ಲಿಸಲಿ’

Published:
Updated:

ತಾಳಿಕೋಟೆ: ಬೂದಿಹಾಳ- ಪಿರಾಪುರ ಏತ ನೀರಾವರಿ ಯೋಜನೆಯಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಯಾವುದೇ ಹಳ್ಳಿಗಳನ್ನು ಕೈಬಿಟ್ಟಿಲ್ಲ ಎಂದು ತಪ್ಪು ಹೇಳಿಕೆ ನೀಡುವುದನ್ನು ಶಾಸಕ ಸಿ.ಎಸ್.ನಾಡಗೌಡ ನಿಲ್ಲಿಸಬೇಕು ಎಂದು ಬೂದಿಹಾಳ–ಪಿರಾಪುರ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶಬಾಬುಗೌಡ ಬಿರಾದಾರ ಸಲಹೆ ನೀಡಿದ್ದಾರೆ.

ಶಾಸಕರು ಜನರನ್ನು ತಪ್ಪು ದಾರಿಗೆ ತರುವಂತ ಹೇಳಿಕೆ ನೀಡಬಾರದು, ಬೇಕಿದ್ದರೆ ದಾಖಲೆಯನ್ನು ತರೆಸಿಕೊಂಡು ಪರಿಶೀಲಿಸಿ ಹೇಳಿಕೆ ನೀಡಲಿ. ಆಧಾರ ರಹಿತವಾದ ಹೇಳಿಕೆಗಳನ್ನು ನೀಡುವುದು ಹಿರಿಯರಾದ ಅವರ ಘನತೆ ತಕ್ಕುದಾದುದಲ್ಲ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮುದ್ದೇಬಿಹಾಳ ತಾಲ್ಲೂಕಿನ ಹಳ್ಳಿಗಳನ್ನು ಕೈಬಿಟ್ಟಿದ್ದನ್ನು ಖಂಡಿಸಿ ಪ್ರತಿಭಟಿಸಿದ್ದಕ್ಕೆ ಯಾವುದೇ ಹಳ್ಳಿಗಳನ್ನು ಕೈಬಿಟ್ಟಿಲ್ಲ ಎಂದು ಶಾಸಕ ನಾಡಗೌಡರು ಹೇಳಿಕೆ ನೀಡಿದ್ದಾರೆ. ಮುದ್ದೇಬಿಹಾಳ ತಾಲ್ಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರದ ಬೋಳವಾಡ, ಗುತ್ತಿಹಾಳ, ಬೊಮ್ಮನಹಳ್ಳಿ, ಫತ್ತೆಪೂರ, ಗಡಿಸೋಮನಾಳ, ಖ್ಯಾತನಾಳ, ತುಂಬಗಿ ಗ್ರಾಮ ಸೇರಿದಂತೆ ಏಳು ಗ್ರಾಮಗಳನ್ನು ಯೋಜನೆ ವ್ಯಾಪ್ತಿಯಲ್ಲಿ ಇಲ್ಲ. ತಾಳಿಕೋಟೆ ಪಟ್ಟಣವನ್ನು ಕೈಬಿಟ್ಟಿಲ್ಲ ಎಂದು ತಿಳಿಸಿದ್ದಾರೆ. ತಾಳಿಕೋಟೆ ಪಟ್ಟಣದ ಕೇವಲ ಏಳು ಹೇಕ್ಟರ್ ಪ್ರದೇಶವನ್ನು ಮಾತ್ರ ನೀರಾವರಿಗೊಳಪಡಿಸಲಾಗಿದೆ ಎಂದರು.

ನಾಡಗೌಡರು ಹಿರಿಯರು, ಪ್ರಬುದ್ದ ರಾಜಕಾರಣಿಯೆಂದು ಗುರುತಿಸಿಕೊಂಡವರು. ಹೋರಾಟಗಾರರ ಹಾಗೂ ರೈತರ ದಾರಿ ತಪ್ಪಿಸಲು ಯಾರದೋ ಕೈಗೊಂಬೆಯಾಗಿ ಹೇಳಿಕೆಯನ್ನು ನೀಡಬಾರದು. ಯೋಜನೆ ಬಗ್ಗೆ ಸಂಬಂಧಪಟ್ಟ ದಾಖಲಾತಿಗಳನ್ನು ಮುಂದಿಟ್ಟುಕೊಂಡು ಜನರಿಗೆ ಸತ್ಯವನ್ನು ಹೇಳಲಿ. ಕೈ ಬಿಟ್ಟಿರುವ ರೈತರ ಜಮೀನಿಗೆ ನೀರು ತರುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ. ಅದನ್ನ ಬಿಟ್ಟು ಹೋರಾಟದ ದಿಕ್ಕು ತಪ್ಪಿಸಬೇಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಹರನಾಳ ಗ್ರಾಮದ 21 ಹೆಕ್ಟರ್, ಹೊಸಹಳ್ಳಿ ಗ್ರಾಮದ 98 ಹೆಕ್ಟರ್, ಹೂವಿನಹಳ್ಳಿ ಗ್ರಾಮದ 17.5 ಹೆಕ್ಟರ್, ಬಿಂಜಲಬಾವಿ ಗ್ರಾಮದ 76 ಹೆಕ್ಟರ್ ಭೂಮಿ ಮಾತ್ರ ನೀರಾವರಿಗೊಳಪಡಲಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ನೀಡಿದ ಪ್ರತಿಗಳನ್ನು ಪ್ರದರ್ಶನ ಮಾಡಿದ ಅವರು, ಈ ಯೋಜನೆ ಅವೈಜ್ಞಾನಿಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಯೋಜನೆಗೆ ಚಾಲನೆ ನೀಡಲಾಗಿದೆ. ತರಾತುರಿಯಲ್ಲಿ ಕಾಮಗಾರಿ ಚಾಲನೆ ನೀಡಿದವರಿಗೆ ಮುಂದಿನ ದಿನಗಳಲ್ಲಿ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸಂಗನಗೌಡ ಹೆಗರಡ್ಡಿ, ರಾಜುಗೌಡ ಕೋಳೂರ, ಬಸನಗೌಡ ಬಿರಾದಾರ, ಸೋಮನಗೌಡ ಹಾದಿಮನಿ, ಸಾಯಬಣ್ಣ ಆಲ್ಯಾಳ, ಬಿಜಾನಅಲಿ ನೀರಲಗಿ, ಯಂಕಾರಡ್ಡಿ ಬಿರಾದಾರ, ಬಸನಗೌಡ ಬಸರಡ್ಡಿ, ಡಾ.ಬಲವಂತ್ರಾಯ ನಡಹಳ್ಳಿ, ಶಂಕ್ರಗೌಡ ದೇಸಾಯಿ, ಪ್ರಭುಗೌಡ ನಾಡಗೌಡ, ಅಸ್ಕಿ ಗ್ರಾಪಂ ಅಧ್ಯಕ್ಷ ರಾಯಪ್ಪಗೌಡ ಪಾಟೀಲ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry