7

‘ಬೆಂಕಿ ಹಚ್ಚುವವರಿಗೆ ಧಿಕ್ಕಾರ’

Published:
Updated:
‘ಬೆಂಕಿ ಹಚ್ಚುವವರಿಗೆ ಧಿಕ್ಕಾರ’

ಮುಧೋಳ: ‘ಭೂಮಿಯ ಮೇಲೆ ಜಾತಿ-ಧರ್ಮಗಳ ಮಧ್ಯೆ ಸಮತೋಲನ ತಪ್ಪಿದಾಗ ಮಾನವೀಯ ಮೌಲ್ಯಗಳು ಏರುಪೇರು ಆದಾಗ ಮಹಮ್ಮದ್ ಪೈಗಂಬರರಂಥ ಮಹಾನ್ ಪುರುಷರು ಬಂದು ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ’ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ನಗರದ ಸರಕಾರಿ ಉರ್ದು ಶಾಲೆಯಲ್ಲಿ ಹಜರತ್ ಮಹಮ್ಮದ್‌ ಪೈಗಂಬರರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶದ ಎಲ್ಲ ಮಹಾನ್‌ ಪುರುಷರು ಸಮಾನರಾಗಿ ಬದುಕುವ ವಿಚಾರ ಧಾರೆಗಳನ್ನು ತಿಳಿಸಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಕೆಲವರು ಅಧಿಕಾರಕ್ಕೆ ಮನೆ- ಮನೆಗಳಲ್ಲಿ ಬೆಂಕಿ ಹಚ್ಚುವ ಕೆಲಸಕ್ಕೆ ಇಳಿದವರಿಗೆ ನನ್ನ ಧಿಕ್ಕಾರ ಇದೆ’ ಎಂದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರೂ ತ್ಯಾಗ, ಬಲಿದಾನ ನೀಡಿದ್ದಾರೆ. ಭರತ ಖಂಡ ಒಂದು, ಇಲ್ಲಿನ ಭಾತೃತ್ವಕ್ಕೆ ತೊಂದರೆ ಬರದ ಹಾಗೆ ಯುವಕರು ತಾಳ್ಮೆಯಿಂದ ಇರಬೇಕು. ಕಲುಷಿತ ವಾತಾವರಣಕ್ಕೆ ಪೈಗಂಬರಂಥ ಮಹಾನ ಪುರುಷರೇ ಬರಬೇಕಂತಲ್ಲ. ಪ್ರತಿಯೊಬ್ಬ ಪ್ರಜೆ ಇಲ್ಲಿಯ ನೆಲ, ಜಲ, ಎಲ್ಲದ್ದಕ್ಕೂ ಹಕ್ಕುವಿರುವಾಗ ನಾಡಿನ ಪ್ರಜೆ ಯಾವದಕ್ಕೂ ಅಂಜದೇ- ಅಳುಕದೇ, ದ್ವೇಷದ ಗುಣ ಹುಟ್ಟು ಹಾಕುವವರನ್ನು ದೂರವಿಟ್ಟು ಪರಸ್ಪರ ಪ್ರೀತಿ, ಆದರ ಗೌರವದ ಬದುಕು ನಡೆಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ‍’ ಎಂದು ಅವರು ಹೇಳಿದರು.

ಮೌಲಾನಾ ಸಜ್ಜಾದ್ ಹುಸೇನ್ ಮಾತನಾಡಿ ‘ಇಸ್ಲಾಂ ಶಾಂತಿ-ಸೌಹಾರ್ದತೆ ಬಯಸುತ್ತದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಸುರಕ್ಷತೆ, ಪರಸ್ಪರ ಗೌರವ 14 ನೂರು ವರ್ಷಗಳ ಹಿಂದೆಯೇ ಪೈಗಂಬರರು ಕಟ್ಟುನಿಟ್ಟಾಗಿ ಪಾಲಿಸಿದ್ದರು. ಸ್ವಾತಂತ್ರಕ್ಕಾಗಿ ಶಹೀದ್ ಅಷ್ಫಕ್ ಅಲ್ಲಾಖಾನ್, ಫಜಲ್ ಹಕ್ ಹೈದರಾಬಾದಿ ನೇಣುಗಂಬಗೇರಿದವರು. ದೇಶದ ಸದಾ ಹಿತ ಬಯಸುವ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದು, ಮುಸ್ಲಿಂ ಬಾಂಧವರ ರಕ್ತದ ಪ್ರತಿ ಕಣಗಳಲ್ಲಿ ದೇಶ ಭಕ್ತಿ ಹೊಂದಿರುವ ನಮಗೆ ಯಾವ ಕೊಲೆಗಡುಕರ ಸಂದೇಶ ನಮಗೆ ಬೇಕಿಲ್ಲ. ರಾಷ್ಟ್ರಕ್ಕಾಗಿ ಅವಶ್ಯಬಿದ್ದರೆ ಗಡಿಗೆ ತೆರಳಲು ಸಿದ್ಧ’ ಎಂದು ಹೇಳಿದರು.

ಮೌಲಾನಾ ನದಿಮ್ ನೂರಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಷರೀಫ್ ಜಕ್ಕಲಿ, ಉಪಾಧ್ಯಕ್ಷ ಮಹ್ಮದ್ ಶೇಖ್‌, ಮುಖ್ಯ ಶಿಕ್ಷಕ ಬ್ಯಾಕೋಡ್, ಮುಖಂಡರಾದ ಮುನೀರ್ ಮೋಮಿನ, ಎಫ್.ಎಂ. ಮೋಮಿನ, ಮಿರ್ಜಾ ನಾಯಕವಾಡಿ, ಸಿದ್ದು ಸೂರ್ಯವಂಶಿ, ಜೆಡಿಎಸ್. ತಾಲ್ಲೂಕು ಅಧ್ಯಕ್ಷ ಶಂಕರ ನಾಯಕ, ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾಂತೇಶ ಉದಪುಡಿ, ಸುಭಾಸ ಗಸ್ತಿ, ಪ್ರಕಾಶ ಮುಧೋಳ, ತಹಶೀಲ್ದಾರ್ ಡಿ.ಜಿ. ಮಹಾತ್, ಡಿಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ಶಿವಶಂಕರ ಮುಕರಿ, ಸೀರತ್ ಕಮೀಟಿ ಅಧ್ಯಕ್ಷ ಶಬ್ಬಿರ್ ಚಿಸ್ತಿ, ಉಪಾಧ್ಯಕ್ಷ ಬಿ.ಎಚ್.ಬೀಳಗಿ, ಸಿರಾಜ್ ನಾಲಬಂದ, ಫಜಲ್ ಮೋಮಿನ, ಮಹ್ಮದ್ ಗೋರಿ, ಅತ್ತಾರ ಇದ್ದರು.

ಭವ್ಯ ಮೆರವಣಿಗೆ: ಕಾರ್ಯಕ್ರಮ ಮುನ್ನ ಇಲ್ಲಿನ ಸೈಯದಸಾಬ್‌ ದರ್ಗಾ ಆವರಣದಲ್ಲಿ ಸಾವಿರಾರು ಮುಸ್ಲಿಮರು ಸೇರಿ ವಾಹನಗಳ ಅಲಂಕಾರ ಜೊತೆ ಮಕ್ಕಾ-ಮದೀನಾ ರೂಪಕದೊಂದಿಗೆ ಪೈಗಂಬರರ ಪರ ಘೋಷಣೆಗಳನ್ನುಕೂಗಿದರು. ಬಸವೇಶ್ವರ, ಜಡಗಾ-ಬಾಲ, ಗಾಂಧಿ, ಶಿವಾಜಿ ಹಾಗೂ ಅಂಬೇಡ್ಕರ್ ವೃತ್ತಗಳ ಮುಖಾಂತರ ಉರ್ದು ಶಾಲೆಯವರೆಗೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry