7

ಸ್ವಾವಲಂಬಿ ಬದುಕು ಕಟ್ಟಿಕೊಂಡ ನಾರಾಯಣ ಪವಾರ

Published:
Updated:
ಸ್ವಾವಲಂಬಿ ಬದುಕು ಕಟ್ಟಿಕೊಂಡ ನಾರಾಯಣ ಪವಾರ

ಲಿಂಗಸುಗೂರು: ತಾಲ್ಲೂಕಿನ ಹಾಲಭಾವಿತಾಂಡಾದ ಲಂಬಾಣಿ ಸಮುದಾಯದ ನಾರಾಯಣ ಬದ್ದೆಪ್ಪ ಪವಾರ ಅಂಗವಿಕಲರಾಗಿದ್ದರೂ, ಕೃಷಿ, ಸಾಮಾಜಿಕ ಚಟುವಟಿಕೆಗಳ ಜೊತೆಗೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಂಡಿರುವುದು ವಿಶೇಷ.

ಜನ್ಮತಃ ಅಂಗವಿಕಲತೆ ಜೊತೆಗೆ ಬಾಲ್ಯದಲ್ಲಿಯೆ ತಂದೆ–ತಾಯಿ ಕಳೆದುಕೊಂಡ ನೋವಿನಲ್ಲಿ ನಾರಾಯಣ ಮುಳುಗಿದ್ದರು. ಸಜ್ಜಲಗುಡ್ಡದಲ್ಲಿ ಪ್ರಾಥಮಿಕ, ಸುರಪುರದಲ್ಲಿ ಕಾಲೇಜು ಶಿಕ್ಷಣ ಪಡೆದರು. ಕೌಟುಂಬಿಕ ಸಮಸ್ಯೆಯಿಂದಾಗಿ ಪದವಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಆನಂತರ ಗೌಡೂರಿನ ಅನುಸೂಯಾ ಅವರನ್ನು ಮದುವೆಯಾಗಿ ಸಂಸಾರದ ಹೊಣೆ ನಿಭಾಯಿಸುತ್ತಿದ್ದಾರೆ.

ತಂದೆಯಿಂದ ದೊರೆತ ಎರಡು ಎಕರೆ ಜಮೀನಿನಲ್ಲಿ ಪತ್ನಿಯೊಂದಿಗೆ ಕೃಷಿ ಚಟುವಟಿಕೆ ಕೆಲಸ ಮಾಡುತ್ತ ಬಂದಿದ್ದು, ಅದರಲ್ಲಿ ಲಾಭ ಪಡೆಯುವುದಕ್ಕೆ ಸಾಧ್ಯವಾಗಿಲ್ಲ. ಸರ್ಕಾರದಿಂದ ಸಿಗುವ ಮಾಸಾಶನದಲ್ಲೆ ಸ್ವಲ್ಪ ಉಳಿಸಿಕೊಂಡು ಹಾಗೂ ₹6ಸಾವಿರ ಸಾಲ ಪಡೆದು ಸಣ್ಣ ಪ್ರಮಾಣದ ಹೊಟೇಲ್‌ ವ್ಯಾಪಾರ ಆರಂಭಿಸಿದ್ದಾರೆ.

ಕೃಷಿ ಚಟುವಟಿಕೆಯೊಂದಿಗೆ ಕುರಿ–ಮೇಕೆ ಸಾಕಾಣಿಕೆ ಮಾಡಿಕೊಂಡಿದ್ದಾರೆ. ಹೊಟೇಲ್‌ನಿಂದ ನಿತ್ಯ ₹1,000 ರಿಂದ ₹1500 ವ್ಯಾಪಾರ ಮಾಡುತ್ತಿದ್ದಾರೆ.

ತಾಂಡಾದ ಪ್ರಾಥಮಿಕ ಶಾಲೆಗೆ ಕಳೆದ ಶೈಕ್ಷಣಿಕ ಅವಧಿಯಲ್ಲಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ನಾರಾಯಣ ಅವರು ಸರ್ಕಾರದ ಹಲವು ಸೌಲಭ್ಯಗಳನ್ನು ತಾಂಡಾ ಮಕ್ಕಳಿಗೆ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸುವ ಜೊತೆಗೆ ಸಮಾಜಮುಖಿ ಕೆಲಸ ಮಾಡುವುದು ಹವ್ಯಾಸ. ಕುಟುಂಬದ ಹೊಣೆಗಾರಿಕೆ, ನಿರ್ವಹಣೆ ಅಂಗವಿಲಕತೆಯನ್ನು ಮರೆಸುವಂತೆ ಮಾಡಿದೆ.

‘ಅಂಗವಿಕಲರಿಗೆ ದೊರಕುವ ತ್ರಿಚಕ್ರ ಬೈಕ್‌, ವ್ಯಾಪಾರಕ್ಕಾಗಿ ಡಬ್ಬಿ, ಮಾಸಾಶನ ಸೌಲಭ್ಯ ಹಾಗೂ ನನ್ನ ಜೊತೆ ಸಹಕಾರ ನೀಡುತ್ತಿರುವ ಅರಿತು ನಡೆಯುವ ಮಡದಿ, ಶಾಲೆಗೆ ಹೋಗುವ ಮಕ್ಕಳೊಂದಿಗೆ ಸಂಕಷ್ಟದ ಬದುಕು ಕಟ್ಟಿಕೊಂಡಿರುವೆ. ಇತರರಂತೆ ನಾವು ಕೂಡ ಸುಭದ್ರ ಬದುಕು ನಡೆಸಬಲ್ಲೆವು ಎಂಬುದನ್ನು ಸಮಾಜಕ್ಕೆ ತೋರಿಸುವ ಛಲ ತಮ್ಮದು’ ಎಂದು ನಾರಾಯಣ ಪವಾರ ಹೇಳುತ್ತಾರೆ.

‘ತಾಂಡಾದ ನೂರಾರು ಯುವಕರು ಉದ್ಯೋಗ ಸಿಗದೆ, ನಿರುದ್ಯೋಗ ಬವಣೆಯಿಂದ ದುಶ್ಚಟಗಳಿಗೆ ಬಲಿಯಾಗಿದ್ದಾರೆ. ಅನೇಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂಗವಿಕಲನಾಗಿದ್ದರೂ ಸ್ವಾವಲಂಬಿ ಜೀವನ ಕಟ್ಟಿಕೊಂಡಿರುವ ನಾರಾಯಣ ಪವಾರ ಬದುಕು ನಿಜಕ್ಕೂ ಮಾದರಿಯಾಗಿದೆ’ ಎನ್ನುತ್ತಾರೆ ಪ್ರಗತಿಪರ ಚಿಂತಕರಾದ ನಾಗರಾಜ ತಿಪ್ಪಣ್ಣ, ಪ್ರಭುಲಿಂಗ ಮೇಗಳಮನಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry