ಸೋಮವಾರ, ಮಾರ್ಚ್ 8, 2021
31 °C

ಕಸ್ತೂರ ಬಾ ವಿಹಾರಕ್ಕೆ ಮೊದಲ ಚುನಾವಣೆ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

ಕಸ್ತೂರ ಬಾ ವಿಹಾರಕ್ಕೆ ಮೊದಲ ಚುನಾವಣೆ

ದೊಡ್ಡಬಳ್ಳಾಪುರ: 74 ವರ್ಷಗಳ ಇತಿಹಾಸ ಹೊಂದಿರುವ ಮಹಿಳಾ ಸಮಾಜ ಕಸ್ತೂರ ಬಾ ಶಿಶು ವಿಹಾರಕ್ಕೆ ಇದೇ ಪ್ರಥಮ ಬಾರಿಗೆ ಡಿ.3 ರಂದು ಚುನಾವಣೆ ನಡೆಯುತ್ತಿದೆ. ಬೆ.10 ರಿಂದ ಮಧ್ಯಾಹ್ನ 3ಗಂಟೆ ವರೆಗೆ ಸಮಾಜದ ಆವರಣದಲ್ಲಿ ಮತದಾನ ನಡೆಯಲಿದೆ.

ಪ್ರಸ್ತುತ ಮಹಿಳಾ ಸಮಾಜದಲ್ಲಿ 416 ಜನ ಸದಸ್ಯರಿದ್ದಾರೆ. ಇವರು ಮಾತ್ರ ಮತದಾನ ಮಾಡಲು ಅರ್ಹರಾಗಿದ್ದಾರೆ. ಒಂಬತ್ತು ನಿರ್ದೇಶಕ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಒಬ್ಬ ಸದಸ್ಯರು 9 ಮತಗಳನ್ನು ಮಾತ್ರ ಚಲಾಯಿಸಲು ಅವಕಾಶ ಇದೆ.

ಸಮಾಜ ನಡೆದು ಬಂದ ಹಾದಿ: ಮಹಿಳಾ ಸಮಾಜದ ಸ್ಥಾಪನೆಗೆ 1943ರಲ್ಲಿ ಕಾರಣಕರ್ತರಾದವರು ಭೀಮಕ್ಕ.ಸಮಾಜವನ್ನು ಅಂದಿನ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಪತ್ನಿಪ್ರತಾಪಕುಮಾರಿ ಅವರು ಉದ್ಘಾಟಿಸಿದ್ದಾರೆ ಎನ್ನುತ್ತಾರೆ ಉಪನ್ಯಾಸಕ ಕೆ.ವೆಂಕಟೇಶ್‌.

‘ಹೆಣ್ಣು ಅಂದರೆ ಹೀಗೇ ಇರಬೇಕು ಎಂಬ ಸಾಮಾಜಿಕ ಕಟ್ಟುಪಾಡುಗಳು ಇದ್ದ ಸಮಾಜ ನಮ್ಮದು. ಹೀಗೇ ಇರಬೇಕು ಎಂದು ನಿರ್ಧರಿಸುವವರು ಪುರುಷರಾಗಿರುತ್ತಾರೆ. ಆಜ್ಞೆ–ಅಪ್ಪಣೆಗಳ ಈ ವ್ಯವಸ್ಥೆಯಲ್ಲಿ ಸಾಮರ್ಥ್ಯವಿದ್ದೂ ಬಳಸಲಾರದ ಮಾತಿದ್ದೂ ಧ್ವನಿಯಾಗದ

ಸ್ಥಿತಿ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಸಮಾಜವನ್ನು ಸ್ಥಾಪಿಸಿ ಸ್ತ್ರೀ ಸಬಲೀಕರಣದ ಹಾದಿ ಮಾಡಿಕೊಟ್ಟ ಭೀಮಕ್ಕ ಅವರ ಕ್ರೀಯಾಶೀಲತೆ ಅನನ್ಯವಾದುದು’ ಎಂದು ಅವರು ಹೇಳುತ್ತಾರೆ.

ಮಹಿಳಾ ಸಮಾಜದ ಏಳು ಬೀಳುಗಳನ್ನು ಏಳು ದಶಕಗಳಿಂದಲೂ ನೋಡುತ್ತ ಬಂದಿರುವ ಹಿರಿಯರಾದ ಎಂ.ಎಸ್‌.ಸಂಪತ್ತಯ್ಯಂಗಾರ್‌ ಹೇಳುವಂತೆ, 1936ರಲ್ಲಿಯೇ ಭೀಮಕ್ಕ ಅವರು ತಮ್ಮ ಮನೆ ಸಮೀಪದಲ್ಲಿ ಮಹಿಳಾ ಸಮಾಜ ಆರಂಭಿಸಿದ್ದರು. ಅಲ್ಲಿ ಮಹಿಳೆ

ಯರಿಗೆ ಹೊಲಿಗೆ ತರಬೇತಿ, ಸಂಗೀತ, ಕಸೂತಿ ಕೆಲಸಗಳ ಬಗ್ಗೆ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಿದ್ದರು. ದಿನ ಕಳೆದಂತೆ ಮಹಿಳಾ ಸಮಾಜಕ್ಕಾಗಿ ಸ್ವಂತ ಕಟ್ಟಡ ನಿರ್ಮಿಸಲು ಮುಂದಾದಗ ಅಂದಿನ ನಗರದ ನ್ಯಾಯಾಧೀಶರಾಗಿದ್ದ ರಂಗರಾವ್‌ಕದಮ್‌ ಹಾಗೂ ಲೋಕ

ಸೇವಾ ನಿರತ ಡಿ.ಕೊಂಗಾಡಿಯಪ್ಪ ಅವರು ಬೆಂಬಲವಾಗಿ ನಿಂತಿದ್ದರು ಎಂದಿದ್ದಾರೆ.

ಮಹಿಳೆಯರಿಗೆ ಆರೋಗ್ಯ ಹಾಗೂ ಪ್ರಗತಿಪರವಾದ ಆಲೋಚನಾ ವಿಚಾರಗಳನ್ನು ತಲುಪಿಸಲು ಅಪಾರ ಕಾಳಜಿ ವಹಿಸುತ್ತಿದ್ದ ಭೀಮಕ್ಕ ಸ್ವಾತಂತ್ರ್ಯ ಪೂರ್ವದಲ್ಲೇ ನಗರದ ಮಹಿಳಾ ಸಮಾಜದಲ್ಲಿ ಮಹಿಳಾ ಕಾನ್ಪರೆನ್ಸ್‌ (ಸಮ್ಮೇಳನ) ನಡೆಸಿದ್ದರು. ಅಂದಿನ ಈ ಸಮ್ಮೇಳನದಲ್ಲಿ ಸುಮಾರು 1,500 ಮಹಿಳೆಯರು ಭಾಗವಹಿಸಿ ಮಹಿಳೆಯರ ಪರವಾದ ಹಕ್ಕುಗಳು, ದೌರ್ಜನ್ಯ ತಡೆಗಟ್ಟುವಿಕೆ ಕುರಿತು ಚರ್ಚಿಸಿ ನಿರ್ಣಯಗಳನ್ನು ಕೈಗೊಂಡಿದ್ದರು ಎನ್ನುತ್ತಾರೆ.

ನಗರದಲ್ಲಿ ಮಹತ್ವಪೂರ್ಣವಾದ ದೀರ್ಘ ಇತಿಹಾಸ ಹೊಂದಿರುವ ಮಹಿಳಾ ಸಮಾಜದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸದಸ್ಯರನ್ನು ಹೊಂದಿದೆ. ಇದು ಹೆಚ್ಚಾಗಬೇಕು. ಪ್ರಜಾಪ್ರಭುತ್ವ ಮಾದರಿಯಲ್ಲಿ ಕನಿಷ್ಠ 3 ವರ್ಷಗಳಿಗೆ ಒಮ್ಮೆಯಾದರೂ ಚುನಾವಣೆ ನಡೆಯುವ

ಮೂಲಕ ಕ್ರಿಯಾಶೀಲ ಮಹಿಳಾ ಪ್ರತಿನಿಧಿಗಳು ಆಯ್ಕೆಯಾಗಿ ಹೆಣ್ಣುಮಕ್ಕಳ ಪರವಾದ ಕೆಲಸಗಳನ್ನು ಮಾಡಬೇಕು ಎನ್ನುತ್ತಾರೆ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ.

ಡಿ.3 ರಂದು ನಡೆಯುತ್ತಿರುವ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳೆಂದರೆ ಎಲ್‌.ಸಿ.ದೇವಕಿ, ಎಸ್‌.ಗೌರಮ್ಮ, ಎನ್‌.ಕೆ.ವತ್ಸಲ, ವಿ.ನಿರ್ಮಲ, ಕೆ.ಎನ್‌.ರಜನಿ, ಎಂ.ಎಸ್‌.ತ್ರಿವೇಣಿ, ನಾಗರತ್ನ, ಬಿ.ಗಿರಿಜಾ, ವನಲಕ್ಷ್ಮಿ, ಕೆ.ಎಸ್‌.ಪ್ರಭಾ, ಶೀಲಾ ಲಕ್ಷ್ಮೀನಾರಾಯಣ, ಎನ್‌.ಸಿ.ಲಕ್ಷ್ಮೀ ಚಂದ್ರಶೇಖರ್‌, ಟಿ.ಪಿ.ವರಲಕ್ಷ್ಮೀ, ಕೆ.ಜಿ.ಕವಿತ, ರೇಣುಕಾ ಪ್ರಕಾಶ, ಶೀಲಾ, ಕೆ.ಸಿ.ಪ್ರಭಾವತಿ, ಟಿ.ಕೆ.ವಸುಂಧರ, ಎಸ್‌.ಜಿ.ರುಕ್ಷ್ಮಿಣಿದೇವಿ, ಡಿ.ಪ್ರಮೀಳಾ, ಯಶೋದಾ, ಮಂಗಳ ಎಸ್‌.ಕುಮಾರ್‌, ಜಿ.ವಿ.ಯಶೋಧಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.