7

ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ‘ಸಾಹುಕಾರ’ ಸಾಧನೆ

Published:
Updated:
ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ‘ಸಾಹುಕಾರ’ ಸಾಧನೆ

ಕಲಬುರ್ಗಿ: ರಾಷ್ಟ್ರೀಯ ಮಟ್ಟದಲ್ಲಿ 9 ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 1 ಚಿನ್ನದ ಪದಕ. ರಾಷ್ಟ್ರೀಯ ಮಟ್ಟದಲ್ಲಿ 10 ಬೆಳ್ಳಿ ಪದಕ. 2020ರಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ತವಕ. ಇವು ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಕಲಬುರ್ಗಿಯ ಅಂಗವಿಕಲ ಪ್ರತಿಭೆ ಸಿದ್ದಣ್ಣ ಸಾಹುಕಾರ ಅವರ ಸಾಧನೆ. ಅವರ ಪದಕಗಳ ಪಟ್ಟಿಯನ್ನು, ಅವರಲ್ಲಿನ ಉತ್ಸಾಹವನ್ನು ನೋಡಿದರೆ ಎಂಥವರೂ ಬೆರಗಾಗುವುದು ಖಚಿತ.

ಇಲ್ಲಿನ ಸೇಡಂ ರಸ್ತೆಯ ನಿವಾಸಿ ಶಿವಣ್ಣ ಮತ್ತು ಮಲ್ಲಮ್ಮ ದಂಪತಿಯ ಪುತ್ರ ಸಿದ್ದಣ್ಣ ಪೋಲಿಯೊ ರೋಗಕ್ಕೆ ತುತ್ತಾಗಿ ಎಡಗಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ. ಹಾಗಂತ ಅವರಾಗಲಿ, ಅವರ ಪೋಷಕರಾಗಲಿ ಎದೆಗುಂದಲಿಲ್ಲ. ಪೋಷಕರು ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದರು. ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿದಾಗ ನೀರೆರೆದು ಪೋಷಿಸಿದರು.

ಆರಂಭದಲ್ಲಿ ಟೇಬಲ್ ಟೆನಿಸ್‌ ನತ್ತ ಆಸಕ್ತಿ ಹೊಂದಿದ್ದ ಸಿದ್ದಣ್ಣ ಅವರು ದ್ವಿತೀಯ ಪಿಯುಸಿ ವಿದ್ಯಾ ಭ್ಯಾಸ ಪೂರ್ಣಗೊಂಡ ಬಳಿಕ ಬ್ಯಾಡ್ಮಿಂ ಟನ್‌ನತ್ತ ಹೊರಳಿದರು. ‘ಒಂದು ಕಾಲಿನಲ್ಲಿ ಶಕ್ತಿ ಇಲ್ಲ ಎಂಬುದನ್ನು ಬಿಟ್ಟರೆ ಬೇರೆ ಎಲ್ಲವೂ ಸರಿ ಇದೆ. ನಾನೇಕೆ ಕ್ರೀಡಾಪಟುವಾಗಬಾರದು’ ಎಂಬ ಅವರಲ್ಲಿನ ತುಡಿತವೇ ಇಂದು ಅಂತರರಾಷ್ಟ್ರೀಯ ಕ್ರೀಡಾಪಟು ವನ್ನಾಗಿಸಿದೆ.

ಬ್ಯಾಡ್ಮಿಂಟನ್‌ ತರಬೇತಿಗೆಂದು ಇವರು ಪ್ರೌಢಶಾಲೆ ಮತ್ತು ಪಿಯುಸಿ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದರು. ಅಲ್ಲಿಂದ ಹಿಂದುರಿಗಿದ ಬಳಿಕ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂ ಗಣದಲ್ಲಿರುವ ಅಂಗಣದಲ್ಲಿ ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಬೆವರು ಹರಿಸಲು ಪ್ರಾರಂಭಿಸಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು ಇವರಲ್ಲಿನ ಪ್ರತಿಭೆಯನ್ನು ಗುರುತಿಸಿ ಇವರಿಗೆ ಪ್ರತಿ ನಿತ್ಯ ಅಭ್ಯಾಸ ಮಾಡಲು ನೆರವಾಯಿತು. ಇವೆಲ್ಲದರ ಪರಿಣಾಮವಾಗಿ ಸಿದ್ದಣ್ಣ ಅವರು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಮುಡಿಗೇರಿಸಿಕೊಳ್ಳುವಂತಾಯಿತು.

2009ರಿಂದ 2015ರ ವರೆಗೆ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್‌ ಸೇರಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಜೂನಿಯರ್ ಮತ್ತು ಸೀನಿಯರ್ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 9ಚಿನ್ನದ ಪದಕ, 10 ಬೆಳ್ಳಿ ಪದಕ ಮತ್ತು 7 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ

2008ರಲ್ಲಿ ಅಮೆರಿಕಲ್ಲಿ ನಡೆದ ಯಂಗ್ ಲೀಡರ್ಸ್ ಅವಾರ್ಡ್‌ (ಆರ್‌ವೈಎಲ್‌ಎ)ನ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಚಿನ್ನದ ಪದಕ, 2010ರಲ್ಲಿ ಇಸ್ರೇಲ್‌ನಲ್ಲಿ ನಡೆದ ಟೂರ್ನಿಯಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಕ್ವಾಟರ್ ಫೈನಲ್ ಹಂತ ತಲುಪಿದ್ದಾರೆ. 2012ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕಂಚಿನ ಪದಕ, 2012ರಲ್ಲಿ ಕೋರಿಯಾದಲ್ಲಿ ನಡೆದ ಏಷಿಯನ್ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾಟರ್ ಫೈನಲ್ ಹಂತ, 2013ರಲ್ಲಿ ಜರ್ಮನಿಯಲ್ಲಿ ನಡೆದ ಬಿಡಬ್ಲ್ಯುಎಫ್ ವರ್ಲ್ಡ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. 2015ರಲ್ಲಿ ಸ್ಪೇನ್‌ನಲ್ಲಿ ನಡೆದ ವಿ ಸ್ಪ್ಯಾನಿಷ್‌ ಟೂರ್ನಿಯಲ್ಲಿ ಕ್ವಾಟರ್ ಫೈನಲ್‌ ಹಂತದ ವರೆಗೆ ತಲುಪಿ ಸೈ ಎನಿಸಿಕೊಂಡಿದ್ದಾರೆ.

‘ಒಂದು ಟೂರ್ನಿಗೆ ಹೋಗಿ ಬರಲು ₹1ರಿಂದ ₹1.50 ಲಕ್ಷ ಹಣ ಬೇಕು. ಸರ್ಕಾರ ವಿಮಾನಯಾನದ ಖರ್ಚನ್ನು ಭರಿಸುತ್ತದೆ. ಅಂತರರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾದರೆ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ. ಆದಾಗ್ಯೂ ನಾನು ಈ ಬಗ್ಗೆ ಹೆಚ್ಚು ಯೋಚಿಸದೆ ಸಾಧನೆಯತ್ತ ಗಮನಹರಿಸುತ್ತಿದ್ದೇನೆ. ಇದೇ ಮೊದಲ ಬಾರಿಗೆ ಪ್ಯಾರಾ ಒಲಿಂಪಿಕ್‌ನಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಸೇರಿಸಲಾಗಿದೆ. 2020ರಲ್ಲಿ ಜಪಾನ್‌ ದೇಶದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ್ದೇನೆ’ ಎಂದು ಸಿದ್ದಣ್ಣ ಸಾಹುಕಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರ್ನಾಟಕ ರಾಜ್ಯದಲ್ಲಿ ಪ್ಯಾರಾ ಬ್ಯಾಡ್ಮಿಂಟನ್‌ ಕ್ರೀಡಾಪಟುಗಳ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಅಪಾರ ದೈಹಿಕ ಶಕ್ತಿ ಬೇಕು. ಪ್ರತಿ ನಿತ್ಯ 4ರಿಂದ 5ಗಂಟೆ ಅಭ್ಯಾಸ ಮಾಡಬೇಕಾಗುತ್ತದೆ. ಬೆಂಗಳೂರಿನ ಜೂನಿಯರ್ ನ್ಯಾಷನಲ್ ತಂಡದ ಕೋಚ್ ಬಿ.ಎಂ.ಸುಧಾಕರ್ ಅವರ ಬಳಿ ಅಭ್ಯಾಸ ಮಾಡುತ್ತಿದ್ದೇನೆ. 2018ರಲ್ಲಿ ಚೀನಾದಲ್ಲಿ ಜರುಗಲಿರುವ ಏಷಿಯನ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ಎಂದು ತಿಳಿಸಿದರು.

* * 

ಕೊರಿಯಾದಲ್ಲಿ ಅಂಗವಿಕಲ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಪ್ರತ್ಯೇಕ ಕ್ರೀಡಾಂಗಣ ನಿರ್ಮಿಸಲಾಗಿದೆ. ನಮ್ಮ ದೇಶದಲ್ಲೂ ಪ್ರತ್ಯೇಕ ಕ್ರೀಡಾಂಗಣ ನಿರ್ಮಿಸಿ, ವಿಶೇಷ ತರಬೇತಿ ನೀಡಬೇಕು.

ಸಿದ್ದಣ್ಣ ಸಾಹುಕಾರ

ಅಂತರರಾಷ್ಟ್ರೀಯ ಕ್ರೀಡಾಪಟು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry