ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳಿಕೊಂಡೇ ಕೃಷಿಯಲ್ಲಿ ಸಾಧನೆ

Last Updated 3 ಡಿಸೆಂಬರ್ 2017, 6:59 IST
ಅಕ್ಷರ ಗಾತ್ರ

ಮಾಲೂರು: ಅಂಗವಿಕಲತೆ ಮೆಟ್ಟಿ ನಿಂತು ವಿಶಿಷ್ಟ ಸಾಧನೆ ಮೂಲಕ ತಾಲ್ಲೂಕಿನ ಜೋಡಿಪುರ ಗ್ರಾಮದ ಗೋಪಾಲ್‌ರೆಡ್ಡಿ ರೈತರಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ. ಐದನೇ ವರ್ಷದವರಿದ್ದಾಗ ಪೋಲಿಯೊಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಗೋಪಾಲ್‌ರೆಡ್ಡಿ ಸಾಧನೆಗೆ ಅಂಗವಿಕಲತೆ ಅಡ್ಡಿಯಾಗಿಲ್ಲ. ಬರ ಪರಿಸ್ಥಿತಿಯಿಂದ ಕೃಷಿ ಚಟುವಟಿಕೆಗಳು ನೆಲಕಚ್ಚಿರುವ ಸಂದರ್ಭದಲ್ಲಿ ಇವರು ಕೃಷಿಯಲ್ಲೇ ಸಾಧನೆ ಮಾಡುವ ಮೂಲಕ ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಇವರಿಗೆ ಪಿತ್ರಾರ್ಜಿತವಾಗಿ ಬಂದ 4 ಎಕರೆ ಜಮೀನು ಇದೆ. ಕಾಲುಗಳ ಬೆಳವಣಿಗೆ ಇಲ್ಲದ ಕಾರಣ ತೆವಳಿಕೊಂಡು ಹೋಗುವ ಇವರು ಟೊಮೆಟೊ, ಸೋರೆಕಾಯಿ, ಮೆಣಸಿನ ಕಾಯಿಯಂತಹ ವಾಣಿಜ್ಯ ಬೆಳೆಗಳನ್ನು ಪ್ರಮುಖವಾಗಿ ಬಳೆದಿದ್ದಾರೆ. ಸಸಿ ನಾಟಿ ಮಾಡುವುದು, ಕಳೆ ಕೀಳುವುದು, ಅಂಬು ಕಟ್ಟುವುದು, ನೀರು ಹಾಯಿಸುವುದು, ಕಾಯಿ ಬಿಡಿಸುವುದು ಮತ್ತು ಬೆಳೆಗಳಿಗೆ ಕೀಟನಾಶಕ ಸಿಂಪಡಿಸುವುದು ಸೇರಿದಂತೆ ಎಲ್ಲ ರೀತಿಯ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.

ಮನೆಯಲ್ಲಿ ಎರಡು ಸೀಮೆ ಹಸು ಸಾಕಿರುವ ಗೋಪಾಲ್‌ರೆಡ್ಡಿ ಗ್ರಾಮದ ಡೇರಿಗೆ ದಿನಕ್ಕೆ ಸುಮಾರು 18 ಲೀಟರ್‌ ಹಾಲು ಹಾಕುತ್ತಾರೆ. ಹಸುಗಳನ್ನು ಮೇಯಿಸುವುದು, ಹಾಲು ಕರೆಯುವುದು ಸೇರಿದಂತೆ ಹಸು ಸಾಕಣೆಯ ಸಂಪೂರ್ಣ ಜವಾಬ್ದಾರಿ ಇವರದೆ. ಕೃಷಿಯ ಜತೆಗೆ ಹೈನುಗಾರಿಕೆಯೂ ಇವರ ಕೈಹಿಡಿದಿದೆ.

ಕೋಳಿ ಸಾಕಾಣಿಕೆ: ಎಸ್ಸೆಸ್ಸೆಲ್ಸಿ ಓದಿರುವ ಗೋಪಾಲ್‌ರೆಡ್ಡಿ ಕೋಳಿ ಫಾರಂ ಸಹ ನಡೆಸುತ್ತಿದ್ದಾರೆ. 3 ವರ್ಷಗಳ ಹಿಂದೆ ಪಿಎಲ್‌ಡಿ ಬ್ಯಾಂಕ್‌ನಿಂದ ₹ 10 ಲಕ್ಷ ಸಾಲ ಪಡೆದು ಒಂದು ಎಕರೆ ಪ್ರದೇಶದಲ್ಲಿ ಕೋಳಿ ಫಾರಂ ಆರಂಭಿಸಿ, ಫಾರಂನ ನಿರ್ವಹಣೆಗೆ ಇಬ್ಬರು ಕೂಲಿ ಆಳುಗಳನ್ನು ನೇಮಿಸಿಕೊಂಡಿದ್ದಾರೆ. ಕೋಳಿ ಸಾಕಾಣಿಕೆಯಿಂದ ಪ್ರತಿ 45 ದಿನಗಳ ಬ್ಯಾಚ್‌ಗೆ ಖರ್ಚು ಕಳೆದು ಸುಮಾರು ₹ 40 ಸಾವಿರ ಲಾಭ ಗಳಿಸುತ್ತಿದ್ದು, ಬ್ಯಾಂಕ್‌ನ ಸಾಲ ಬಹುಪಾಲು ತೀರಿಸಿದ್ದಾರೆ.

ಹನಿ ನೀರಾವರಿ: ಬರದಿಂದಾಗಿ ಕೃಷಿ ಮಾಡುವುದು ಕಷ್ಟವಾಗಿದೆ. ಹೀಗಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಕೊಳವೆ ಬಾವಿ ನೀರನ್ನು ಪೋಲಾಗದಂತೆ ಬಳಸುತ್ತಿದ್ದೇನೆ. ಕೃಷಿಯ ಜತೆಗೆ ಹೈನುಗಾರಿಕೆ ಹಾಗೂ ಕೋಳಿ ಸಾಕಾಣಿಕೆಯು ಸ್ವಲ್ಪಮಟ್ಟಿಗೆ ಲಾಭ ತಂದು ಕೊಡುತ್ತಿದೆ’ ಎಂದು ಗೋಪಾಲ್‌ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಹೀಗೆ ಎಲ್ಲದರಲ್ಲೂ ಯಶಸ್ಸು ಕಂಡಿರುವ ಗೋಪಾಲ್‌ರೆಡ್ಡಿ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಮಾದರಿಯಾಗಿದ್ದಾರೆ.

* * 

ಅಂಗವಿಕಲ ಎಂದು ಕೈ ಕಟ್ಟಿ ಕೂತರೆ ತುತ್ತಿನ ಚೀಲ ಹೇಗೆ ತುಂಬುತ್ತದೆ. ಸಾಧನೆ ಮಾಡುವ ಮನಸ್ಸಿದ್ದರೆ ಅಂಗವೈಕಲ್ಯ ಸಮಸ್ಯೆಯೇ ಅಲ್ಲ
ಗೋಪಾಲ್ ರೆಡ್ಡಿ, ಅಂಗವಿಕಲ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT