ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಪರೀಕ್ಷೆ ನಿಗದಿ: ಬಾರದ ಪ್ರವೇಶ ಪತ್ರ

Last Updated 3 ಡಿಸೆಂಬರ್ 2017, 7:02 IST
ಅಕ್ಷರ ಗಾತ್ರ

ಕೋಲಾರ: ಪರೀಕ್ಷೆ ಸೋಮವಾರ (ಡಿ.4)ರಂದು ನಿಗಧಿಯಾಗಿದ್ದರೂ ಪ್ರವೇಶ ಪತ್ರ ಸಿಗದೇ ಇರುವುದರಿಂದ ಪದವಿ ವಿದ್ಯಾರ್ಥಿಗಳು ಅತಂಕಕ್ಕೆ ಒಳಗಾಗಿದ್ದಾರೆ. ಬೆಂಗಳೂರು ವಿಶ್ವ ವಿದ್ಯಾನಿಲಯದ ನಿರ್ಲಕ್ಷ್ಯದಿಂದ ಅಂಕಪಟ್ಟಿ ನೀಡಿಕೆಯಲ್ಲಿ ವಿಳಂಬ, ಆಂತರಿಕ ಅಂಕ ದಾಖಲಿಸುವಲ್ಲಿ ವ್ಯತ್ಯಾಸ ಸೇರಿದಂತೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ವಿದ್ಯಾರ್ಥಿಗಳನ್ನು ಸಿಲುಕಿಸುತ್ತಿದೆ. ವಿಶ್ವ ವಿದ್ಯಾನಿಲಯದ ಆಡಳಿತ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುನ್ನಾದಿನವೂ ಪ್ರವೇಶ ಪತ್ರ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ.

ನಗರದ ಸರ್ಕಾರಿ ಮಹಿಳಾ ಕಾಲೇಜು, ಬಾಲಕರ ಕಾಲೇಜು ಸೇರಿದಂತೆ ನಗರದ ಎಲ್ಲ ಖಾಸಗಿ ಕಾಲೇಜುಗಳಲ್ಲೂ ಪ್ರವೇಶ ಪತ್ರ ಬಾರದೇ ಪದವಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಡಿ.4ರ ಸೋಮವಾರದಂದು ಆರಂಭಗೊಳ್ಳಲಿರುವ ಪರೀಕ್ಷೆಗೆ ಮನೆಯಲ್ಲಿ ಕುಳಿತು ಅಭ್ಯಾಸ ಮಾಡಬೇಕಾದ ವಿದ್ಯಾರ್ಥಿನಿಯರು ಈದ್ ಮಿಲಾದ್ ಸರ್ಕಾರಿ ರಜೆ ಇದ್ದರೂ ಶನಿವಾರ ಕಾಲೇಜಿಗೆ ಬಂದು ತಮಗೆ ಪರೀಕ್ಷಾ ಪ್ರವೇಶಪತ್ರ ನೀಡಿ ಎಂದು ಅಂಗಲಾಚುತ್ತಿದ್ದ ದೃಶ್ಯ ಕಂಡು ಬಂದಿತು.

ಕಾಲೇಜಿನಿಂದ ನಾವು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳ ವಿವರಗಳನ್ನು ಒಎಂಆರ್ ತುಂಬಿ ಕಳುಹಿಸಿದ್ದೇವೆ. ಆದರೆ ವಿಶ್ವ ವಿದ್ಯಾನಿಲಯದ ಆಡಳಿತ ಮಂಡಳಿಯೇ ಇದಕ್ಕೆ ಕಾರಣ ಎಂದು ಕಾಲೇಜಿನ ಸಿಬ್ಬಂದಿ ತಿಳಿಸಿದ್ದಾರೆ.

ಡೇಟಾ ದಾಖಲು ಹಾಗೂ ಒಎಂಆರ್ ಅಪ್‍ಲೋಡ್ ಮಾಡಲು ಖಾಸಗಿ ಏಜೆನ್ಸಿಯೊಂದಕ್ಕೆ ವಿಶ್ವ ವಿದ್ಯಾನಿಲಯದವರು ಟೆಂಡರ್ ನೀಡಿದ್ದು, ಆ ಏಜೆನ್ಸಿಯ ವಿಳಂಬ ಧೋರಣೆಯಿಂದಾಗಿ ಸಮಸ್ಯೆ ಎದುರಾಗಿದೆ ಎಂದು ದೂರಿದರು.

‘ಕಾಲೇಜಿಗೆ ನೋಂದಣಿ ಯಾಗುವಾಗ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ. ಸಕಾಲಕ್ಕೆ ಪರೀಕ್ಷಾ ಶುಲ್ಕವನ್ನು ಪಾವತಿಸಿದ್ದೇನೆ. ಸೋಮವಾರ ಪರೀಕ್ಷೆ ಆರಂಭವಾಗಲಿದೆ. ಆದರೆ ಇದುವರೆಗೂ ಪ್ರವೇಶ ಪತ್ರ ಬಂದಿಲ್ಲ. ಇದರಿಂದಾಗಿ ನಮ್ಮಲ್ಲಿ ಅತಂಕ ಎದುರಾಗಿದೆ’ ಎಂದು ಪ್ರಥಮ ಪದವಿ ವಿದ್ಯಾರ್ಥಿನಿ ಅನಿತಾ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರದೊಳಗೆ ಏಜೆನ್ಸಿ ಪ್ರವೇಶ ಪತ್ರ ಅಪ್‍ಲೋಡ್ ಮಾಡುವ ಭರವಸೆ ನೀಡಿದ್ದು, ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರ್ಯಾಯ ಕ್ರಮ ಕೈಗೊಂಡು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿರುವುದರಿಂದ ವಿದ್ಯಾರ್ಥಿನಿಯರಲ್ಲಿ ಸ್ವಲ್ಪಮಟ್ಟಿನ ಆತಂಕ ದೂರ ಮಾಡಿದಂತಾಗಿದೆ.

ಕಾಲೇಜು ಸಿದ್ಧಪಡಿಸಿರುವ ಗುರುತಿನ ಚೀಟಿ ಹಾಗೂ ಕಾಲೇಜಿನ ಹಂತದಲ್ಲಿ ನೀಡುವ ನೋಂದಣಿ ಸಂಖ್ಯೆ ಆಧಾರದಂತೆಯೇ ಸೋಮವಾರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಂದು ಕಾಲೇಜು ಆಡಳಿತ ಸೂಚಿಸಿದ ಕಾರಣ ವಿದ್ಯಾರ್ಥಿಗಳು ಶನಿವಾರ ಕಾಲೇಜಿಗೆ ಬಂದು ನೋಂದಣಿ ಸಂಖ್ಯೆ ಹುಡುಕಿಕೊಂಡು ವಾಪಸ್ಸಾದರು.

ಕನಿಷ್ಠ ಸೌಜನ್ಯವಿಲ್ಲ: ನಗರದ ಸರ್ಕಾರಿ ಮಹಿಳಾ ಕಾಲೇಜಿನ ವಿಜ್ಞಾನ ವಿಭಾಗದ ಅನುಶ್ರೀ ವಿಶ್ವ ವಿದ್ಯಾನಿಲಯದ ಅಂತಿಮ ಪರೀಕ್ಷೆಯಲ್ಲಿ 9ನೇ ರ‍್ಯಾಂಕ್‌ ಪಡೆದು ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪ್ರಾಂಶುಪಾಲ ಹಾಗೂ ಕಾಲೇಜಿನ ಆಡಳಿಮಂಡಳಿಯವರು ಕನಿಷ್ಠ ವಿದ್ಯಾರ್ಥಿಯನ್ನು ಅಭಿನಂದಿಸುವ ಸೌಜನ್ಯ ತೋರದೆ ಪ್ರತಿಭೆಗಳನ್ನು ಕಡೆಗಣಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT