7

ಮುಸ್ಲಿಮರ ಶಿಸ್ತುಬದ್ಧ ಮೆರವಣಿಗೆ

Published:
Updated:

ಕೊಪ್ಪಳ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪ್ರವಾದಿ ಮಹಮದ್‌ ಪೈಗಂಬರ್‌ ಜಯಂತಿಯನ್ನು ಮುಸ್ಲಿಂ ಬಾಂಧವರು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕೊಪ್ಪಳದಲ್ಲಿ ಸಾಲಾರ್‌ಜಂಗ್‌ ರಸ್ತೆಯಿಂದ ಅಶೋಕ ವೃತ್ತದ ಮೂಲಕ ಯುಸೂಫಿಯಾ ಮಸೀದಿಯವರೆಗೆ ಮುಸ್ಲಿಂ ಬಾಂಧವರ ಬೃಹತ್‌ ಮೆರವಣಿಗೆ ನಡೆಯಿತು.

ಇಸ್ಲಾಂ ಧರ್ಮದ ಸಂದೇಶವುಳ್ಳ ಬೃಹತ್‌ ಪತಾಕೆ, ಕಾಬಾದ ಕಪ್ಪು ಶಿಲೆಯ ಪ್ರತಿಕೃತಿ ಸಹಿತ ವಿವಿಧ ಮಸೀದಿಗಳ ಸ್ತಬ್ದಚಿತ್ರಗಳು, ಅಲ್ಲಾಹನ ಸಂದೇಶ ಹೊಂದಿದ ಫಲಕಗಳು, ಬಾವುಟ ಮೆರವಣಿಗೆಯಲ್ಲಿದ್ದವು. ಧ್ವನಿವರ್ಧಕಗಳಲ್ಲಿ ಪವಿತ್ರ ಕುರ್‌ ಆನ್‌ ಸಂದೇಶ ಮೊಳಗಿದವು. ಮೆರವಣಿಗೆಯ ಕೊನೆಯಲ್ಲಿ ದೊಡ್ಡ ಗಾತ್ರದ ರಾಷ್ಟ್ರಧ್ವಜ ಪ್ರದರ್ಶಿಸಲಾಯಿತು.

ಅದರ ಹಿಂಭಾಗದಲ್ಲಿ ಇಸ್ಲಾಂ ಸಂದೇಶ ಹೊತ್ತ ವಾಹನ ಸಂಚರಿಸಿತು. ಹೊಸ ಬಟ್ಟೆ ಧರಿಸಿದ್ದ ಮುಸ್ಲಿಂ ಬಾಂಧವರು ಇಸ್ಲಾಂ ಪರ ಘೋಷಣೆ ಕೂಗುತ್ತಾ ಶಿಸ್ತುಬದ್ಧವಾಗಿ ಮೆರವಣಿಗೆ ನಡೆಸಿದರು. ಸ್ವಯಂ ಸೇವಕರು ಮೆರವಣಿಗೆಯಲ್ಲಿ ನೀರಿನ ಪೊಟ್ಟಣಗಳನ್ನು ವಿತರಿಸಿದರು. ಕೊನೆಯ ವಾಹನ ಕಸ ಸಂಗ್ರಹಿಸುತ್ತಾ ಸಾಗಿತು. ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಅಲ್ಲಲ್ಲಿ ಉಪಾಹಾರ, ಪಾನೀಯ ವ್ಯವಸ್ಥೆ ಮಾಡಲಾಗಿತ್ತು.

ಗಮನಸೆಳೆದ ಧರ್ಮ ಧ್ವಜಗಳು...

ನಗರದ ದಿಡ್ಡೀಕೇರಿ ಓಣಿಯ ಮುಸ್ಲಿಂ ಬಾಂಧವರು ಸುಮಾರು 250 ಮೀಟರ್‌ ಉದ್ದದ ಧರ್ಮ ಸಂದೇಶ ಸಾರುವ ಧ್ವಜದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಓಣಿಯ ಚಿಣ್ಣರು, ಯುವಕರು, ಸಾರ್ವಜನಿಕರು ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಅಲ್ಲದೆ ನಗರದ ಸಮಸ್ತ ಮುಸ್ಲಿಂ ಸಮಾಜದಿಂದ ಪ್ರಸ್ತುತಪಡಿಸಿದ 50 ಅಡಿ ಎತ್ತರದ ಧರ್ಮ ಸಂದೇಶ ಸಾರುವ ಧ್ವಜ ಸಹ ನೋಡುಗರ ಗಮನಸೆಳೆಯಿತು.

ಪುಟ್ಟ ಮಕ್ಕಳ ಕೆನ್ನೆಯ ಮೇಲೆ ಹಸಿರು ಬಣ್ಣದ ಮೇಲೆ ಇಸ್ಲಾಂ ಧರ್ಮದ ಚಿಹ್ನೆಯಾದ ಬಿದಿಗೆ ಚಂದ್ರ ಮತ್ತು ನಕ್ಷತ್ರವನ್ನು ಬಿಡಿಸಲಾಗಿತ್ತು. ಇದು ಮೆರವಣಿಗೆಯನ್ನು ಇನ್ನಷ್ಟು ಆಕರ್ಷಕಗೊಳಿಸಿತು. ಬೆಳಿಗ್ಗೆ 11ರ ವೇಳೆಗೆ ಶುರುವಾದ ಮೆರವಣಿಗೆ ಮಧ್ಯಾಹ್ನ 2 ಗಂಟೆ ವೇಳೆಗೆ ಅಂತ್ಯಗೊಂಡಿತು. ಗಂಗಾವತಿಯಲ್ಲಿ ಮೆರವಣಿಗೆ ಬದಲು ವಿಶೇಷ ಪ್ರಾರ್ಥನೆ ಮಾತ್ರ ಜರುಗಿತು.

ಮುಸ್ಲಿಂ ಸಮಾಜದ ಮುಖಂಡತರಾದ ಕೆ.ಎಂ. ಸೈಯದ್‌, ಮಾನ್ವಿ ಪಾಷಾ, ಮುನೀರ್‌ ಸಿದ್ದಿಕಿ, ಕಾಟನ್‌ ಪಾಷಾ, ಅಮ್ಜದ್‌ ಪಟೇಲ್‌ ನೇತೃತ್ವ ವಹಿಸಿದ್ದರು. ಯುಸೂಫಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಭಾಗವಹಿಸಿ ಶುಭಕೋರಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ್‌, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ಭೂಮರಡ್ಡಿ, ಪ್ರಸನ್ನ ಗಡಾದ, ಅಕ್ಬರ್‌ ಪಾಷಾ ಇದ್ದರು.

ಈದ್‌ ಮಿಲಾದ್‌ ಮತ್ತು ಹನುಮಜಯಂತಿ ಏಕಕಾಲದಲ್ಲಿ ಬಂದ ಕಾರಣ ಪೊಲೀಸರು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದ್ದರು. ಎರಡೂ ಹಬ್ಬಗಳು ಶಾಂತಿಯುತವಾಗಿ ಆಚರಣೆಗೊಂಡವು.

ಮಾನವೀಯತೆ ಮೆರೆದರು...

ಸಜ್ಜೆ ಹೊಲದ ಮುಸ್ಲಿಂರು ಏರ್ಪಡಿಸಿದ್ದ ಉಪಾಹಾರ ಕೇಂದ್ರದ ಬಳಿ ವ್ಯಕ್ತಿಯೊಬ್ಬರು ಮೂರ್ಛೆ ರೋಗದಿಂದ ರಸ್ತೆಯಲ್ಲಿಯೆ ಕುಸಿದು ಬಿದ್ದರು. ಅಲ್ಲಿದ್ದ ಮುಸ್ಲಿಂ ಬಾಂಧವರು ಬೀಗದ ಕೀಲಿಗಳನ್ನು ಅವರ ಕೈಗಿತ್ತು ಪ್ರಥಮಚಿಕಿತ್ಸೆ ನೀಡಿದರು. ವ್ಯಕ್ತಿ ಚೇತರಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry