7

ಮಂದಿರದಲ್ಲಿ ಹೋಮ, ಮಸೀದಿಯಲ್ಲಿ ಪ್ರಾರ್ಥನೆ

Published:
Updated:

ಗಂಗಾವತಿ: ಕಳೆದ ವರ್ಷ ನಡೆದ ಕೋಮುಗಲಭೆಯಿಂದಾಗಿ ಎಚ್ಚೆತ್ತ ಪೊಲೀಸರು ಈ ಬಾರಿ ಬಿಗಿಬಂದೋಸ್ತ್ ಕೈಗೊಂಡ ಪರಿಣಾಮ ನಗರದಲ್ಲಿ ಶನಿವಾರ ಹನುಮ ಜಯಂತಿ ಹಾಗೂ ಈದ್ ಮಿಲಾದ್ ಆಚರಣೆ ಶಾಂತಿಯುತವಾಗಿ ನಡೆಯಿತು.

ಹನುಮ ಜಯಂತಿ ಅಂಗವಾಗಿ ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹನುಮಮಾಲೆ ಧರಿಸಿದ ಮಾಲಾಧಾರಿಗಳು ನಗರಕ್ಕೆ ಬಂದು ಇಲ್ಲಿಂದ ಅಂಜನಾದ್ರಿ ಬೆಟ್ಟಕ್ಕೆ ಯಾತ್ರೆ ಹೋಗುವುದನ್ನು ತಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ನಗರದಲ್ಲಿ ಯಾವುದೇ ಧಾರ್ಮಿಕ ಸಭೆ, ಈದ್ ಹಬ್ಬದ ಮೆರವಣಿಗೆಗೆ ಪೊಲೀಸರು ಅನುಮತಿ ನೀಡದ ಪರಿಣಾಮ ಉಭಯ ಕೋಮಿನ ಜನ ಶಾಂತಿಯುತವಾಗಿ ಹನುಮ ಜಯಂತಿ, ಈದ್ ಮಿಲಾದ್ ಹಬ್ಬಗಳನ್ನು ಮಂದಿರ ಮತ್ತು ಮಸೀದಿಗಳಲ್ಲಿ ಆಚರಿಸಿದರು.

ಹನುಮಮಾಲಾ ಧಾರಿಗಳು ಅಂಜನಾದ್ರಿ ಪರ್ವತದಲ್ಲಿ ಪವಮಾನ ಹೋಮ ನಡೆಸಿ ಮಾಲೆ ವಿರಮಣ ಮಾಡಿದರೆ, ಮುಸ್ಲಿಮರು ಕೇವಲ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ಮನೆಗಳಿಗೆ ವಾಪಸ್ ತೆರಳಿ ಕುಟುಂಬಿಕರು, ಸ್ನೇಹಿತರೊಂದಿಗೆ ಹಬ್ಬ ಆಚರಿಸಿದರು.

ಅಂಜನಾದ್ರಿ ಪರ್ವತದಲ್ಲಿ ಬೆಳಗ್ಗೆ ಐದು ಗಂಟೆಯಿಂದಲೇ ಆರಂಭವಾದ ಪರ್ವತ ರೋಹಣ ಬಳಿಕ ಮಾಲೆ ವಿರಮಣ ಧಾರ್ಮಿಕ ಕಾರ್ಯಕ್ರಮ ಬೆಳಗ್ಗೆ ಹನ್ನೊಂದು ಗಂಟೆಗೆ ಪೂರ್ಣಗೊಂಡಿತ್ತು. ಬೇರೆ ಜಿಲ್ಲೆಗಳಿಂದ ಬಂದವರು ಉಪಹಾರ ಸೇವಿಸಿ ಹೊರಟು ಹೋದರು.

ಇತ್ತ ನಗರದಲ್ಲಿ ಮಸೀದಿಗಳಲ್ಲಿ ಈ ಬಾರಿ ಗಂಧದ ಮೆರವಣಿಗೆಗೂ ನಿಷೇಧ ಹೇರಲಾಗಿತ್ತು. ಸಾಮೂಹಿಕ ಪ್ರಾರ್ಥನೆ ಬಳಿಕ ಜುಮ್ಮಾ ಮಸೀದಿ ಹಾಗೂ ಈದ್ಗಾ ಮೈದಾನದಲ್ಲಿ ಸಾರ್ವಜನಿಕರಿಗೆ ಹಬ್ಬದ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಳೆದ ವರ್ಷದ ಘಟನೆಯಿಂದ ಭೀತಿಗೊಳಗಾಗಿದ್ದ ನಗರದ ವಿವಿಧ ರಸ್ತೆ, ವೃತ್ತಗಳಲ್ಲಿನ ವ್ಯಾಪಾರಿಗಳು ಶನಿವಾರ ಬೆಳಿಗ್ಗೆ ಎಂದಿನಂತೆ ಅಂಗಡಿ ಮುಂಗಟ್ಟುಗಳನ್ನು ಆರಂಭಿಸದ ಕಾರಣ ಕೆಲಕಾಲ ಅಘೋಷಿತ ಬಂದ್ ದೃಶ್ಯ ಕಂಡು ಬಂತು.

ಬಳಿಕ ನಿಧಾನವಾಗಿ ಒಂದೊಂದೆ ಅಂಗಡಿ ಮುಂಗಟ್ಟು ಆರಂಭವಾದವು. ಜನ ಹಾಗೂ ವಾಹನ ಸಂಚಾರವೂ ಬೆಳಿಗ್ಗೆ ನಿಧಾನಗತಿಯಲ್ಲಿತ್ತು. ಎಲ್ಲ ವೃತ್ತ, ರಸ್ತೆಗಳಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಕಂಡು ಬಂತು. ಜಿಲ್ಲಾ ಎಸ್ಪಿ ಅನೂಪ್ ಶೆಟ್ಟಿ ಮಧ್ಯರಾತ್ರಿ 2 ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಸ್ವಯಂ ಪಹರೆ ನಡೆಸಿದರು.

* * 

ಪೊಲೀಸರ ಮನವಿ ಮೇರೆಗೆ ಗಂಧದ ಮೆರವಣಿಗೆಯನ್ನು ರದ್ದುಗೊಳಿಸಿ ಸಾಂಕೇತಿಕವಾಗಿ ಹಬ್ಬ ಆಚರಿಸಿದ್ದೇವೆ. ಹಬ್ಬ ಆಚರಣೆ ಗಿಂತ ನಗರದ ಶಾಂತಿ, ನೆಮ್ಮದಿ ಹಾಗೂ ಮಹಿಳೆಯರು, ಮಕ್ಕಳ ರಕ್ಷಣೆ ಮುಖ್ಯ.

ಇಕ್ಬಾಲ್ ಅನ್ಸಾರಿ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry