ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ದಿನಗಳಿಂದ ಕುಡಿಯುವ ನೀರು ಪೂರೈಕೆ ಇಲ್ಲ– ಗ್ರಾಮಸ್ಥರ ಅಳಲು

Last Updated 3 ಡಿಸೆಂಬರ್ 2017, 7:11 IST
ಅಕ್ಷರ ಗಾತ್ರ

ರಾಮದುರ್ಗ: ತಾಲ್ಲೂಕಿನ ಹಲಗತ್ತಿ ಗ್ರಾಮದ 3ನೇ ವಾರ್ಡಿನಲ್ಲಿ ಕಳೆದ ಎಂಟು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಪದಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾರೊಬ್ಬರು ಗೋಳು ಕೇಳಲು ಮುಂದೆ ಬಂದಿಲ್ಲ. ಈ ಕುರಿತು ಶಾಸಕರಿಗೆ ಫೋನಾಯಿಸಿದರೂ ಏನು ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಗ್ರಾಮದ 3ನೇ ವಾರ್ಡಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಪೈಪ್ ಲೈನ್ ಕಳೆದ ವಾರ ಒಡೆದುಹೋಗಿದೆ. ನೀರಿನ ಪೈಪ್‌ಲೈನ್‌ ಒಡೆದಿರುವ ಪರಿಣಾಮ ನೀರು ಹೊರಬಂದು, ಗ್ರಾಮದ ತಗ್ಗು ಪ್ರದೇಶಗಳಲ್ಲಿ ಆವರಿಸಿಕೊಂಡಿದೆ. ಗ್ರಾಮದಲ್ಲಿನ ತಿಪ್ಪೆಗುಂಡಿಗಳು ನೀರಿನಿಂದ ಜಲಾವೃತಗೊಂಡು ಕೊಳಚೆ ನೀರು ರಸ್ತೆ ಹಾಗೂ ಮನೆಯಂಗಳಕ್ಕೆ ಬರುತ್ತಿದೆ. ಇದರಿಂದ ಗ್ರಾಮಸ್ಥರಿಗೆ ರೋಗ-ರುಜನಿಗಳು ಹರಡಿವೆ.

ಕುಡಿಯಲು ಮತ್ತು ದನಕರುಗಳಿಗಾಗಿ ಬಳಸಲು ಮಹಿಳೆಯರು ಮತ್ತು ಮಕ್ಕಳು ದಿನವಿಡೀ ದೂರದ ಹೊಲಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರ್ಮಿಕರು, ಬಡವರು ಇಲ್ಲಿ ವಾಸಿಸುತ್ತಿದ್ದಾರೆ. ಪ್ರತಿದಿನ ದುಡಿದಾಗಲೇ ಅವರ ಹೊಟ್ಟೆ ತುಂಬುವ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ನೀರು ಪಡೆಯಲು ಅಲೆದಾಡುವ ಸ್ಥಿತಿ ಎದುರಾಗಿದೆ. ದುಡಿಮೆ ನೋಡಬೇಕೋ, ನೀರು ಪಡೆಯಬೇಕೋ ಎನ್ನುವ ಸಂಕಟ ನಮ್ಮನ್ನು ಕಾಡುತ್ತಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಒಂದೆಡೆ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಗ್ರಾಮದ ಜನತೆ ಇನ್ನೊಂದೆಡೆ ಅಸ್ವಚ್ಛತೆಯಿಂದ ಹಲವು ಕಾಯಿಲೆಗಳಿಗೆ ತುತ್ತಾಗುವ ಭಯದಲ್ಲಿದ್ದಾರೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕೆಂದು ಕೋರಿಕೊಂಡಿದ್ದಾರೆ.

**

ನಾನು ಅಧ್ಯಕ್ಷನಾಗಿದ್ದಾಗ ಇಂಥ ಸಮಸ್ಯೆಗಳು ಎದುರಾದಾಗ ಟ್ಯಾಂಕರ್ ಮೂಲಕ ನೀರು ಪೂರೈಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದ್ದೆ. ಆದರೆ ಇಲ್ಲಿ ವಾಸಿಸುವ ಹೆಚ್ಚಿನ ಜನರ ಪೈಕಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಜನ ಇರುವುದರಿಂದ ಮೇಲ್ವರ್ಗದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸಮಸ್ಯೆ ನಿವಾರಿಸಲು ಮುಂದಾಗುತ್ತಿಲ್ಲ.

ಸುರೇಶ ದೊಡವಾಡ, ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯ್ತಿ

‘ಕೆಶಿಪ್ ರಸ್ತೆಗಳ ನಿರ್ಮಾಣದ ವೇಳೆ ಪೈಪ್‍ಲೈನ್‍ಗಳು ಒಡೆದು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇನ್ನೆರಡು ದಿನಗಳಲ್ಲಿ ದುರಸ್ತಿ ಮಾಡಿಸಿ ನೀರು ಪೂರೈಸಲಾಗುವುದು.
ವೆಂಕನಗೌಡ ಮುಧೋಳ, ಅಧ್ಯಕ್ಷರು, ಗ್ರಾಮ ಪಂಚಾಯ್ತಿ.

‘ಪರಿಶಿಷ್ಟರು ಮತ್ತು ಹಿಂದುಳಿದವರು ವಾಸಿಸುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ತುಂಬಿರುವ ಚರಂಡಿಗಳನ್ನು ತ್ವರಿತವಾಗಿ ಸ್ವಚ್ಛಗೊಳಿಸಲಾಗುವುದು. ಅಲ್ಲಿನ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.
ರಾಜಶ್ರೀ ಮೆಕ್ಕೇದ, ಪಿಡಿಓ, ಗ್ರಾಮ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT