ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಆಸರೆಯಾದ ಅನಿತಾ

Last Updated 3 ಡಿಸೆಂಬರ್ 2017, 7:15 IST
ಅಕ್ಷರ ಗಾತ್ರ

ಹರಿಹರ: ‘ಅಂಗವೈಕಲ್ಯ ಶಾಪವಲ್ಲ; ಅದೊಂದು ಸವಾಲು’ ಎಂದು ಸ್ವೀಕರಿಸಿದ ನಗರದ ಅನಿತಾ ಎಚ್‌. ಪಾಟೀಲ್‌ ಅವರು ಅನೇಕ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಸಾಂತ್ವನ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಅನಿತಾ ಅವರಿಗೆ ಅಂಗವೈಕಲ್ಯ ಹುಟ್ಟಿನಿಂದ ಬಂದಿದ್ದಲ್ಲ. ಎರಡು ವರ್ಷದ ಮಗುವಾಗಿದ್ದಾಗ, ಅನಾರೋಗ್ಯದಿಂದಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡರು. ಮುಂದೆ ಅಂಗವೈಕಲ್ಯವನ್ನೇ ಸವಾಲಾಗಿ ಸ್ವೀಕರಿಸಿದರು. ಪ್ರತಿ ಹಂತದಲ್ಲೂ ದೈಹಿಕ ನ್ಯೂನತೆ ಮರೆತ ಅವರಿಗೆ ಸಾಧಿಸಬೇಕು ಎಂಬ ಛಲವೇ ಸ್ಫೂರ್ತಿಯಾಯಿತು.

ಹರಿಹರ ತಾಲ್ಲೂಕಿನ ನಂದಿತಾವರೆ ಗ್ರಾಮದ ಎನ್.ಪಿ.ಹನುಮಂತಗೌಡ ಮತ್ತು ಮಹದೇವಮ್ಮ ದಂಪತಿಯ ಮೂರನೇ ಪುತ್ರಿ ಅನಿತಾ. ಹನುಮಂತಗೌಡ ಅವರು ಕೆಎಸ್‌ಐಡಿಸಿಯಲ್ಲಿ ಎಂಜಿನಿಯರ್ ಆಗಿದ್ದರು. ಅವರು ಆಗಾಗ ವರ್ಗಾವಣೆಗೊಳ್ಳುತ್ತಿದ್ದರು. ಹೀಗಾಗಿ ಅನಿತಾ ಅವರು ಹಿರೇಕೇರೂರು ತಾಲ್ಲೂಕಿನ ಗುಡ್ಡದ ಮಾದಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕಲಬುರ್ಗಿಯಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣ ಪಡೆದುಕೊಂಡರು.

ಬಿ.ಕಾಂ ಪದವಿ ಪಡೆದಿದ್ದ ಅನಿತಾ, ಖಾಸಗಿ ಸಂಸ್ಥೆಯಲ್ಲಿ ಲೆಕ್ಕಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದರು. 2007ರಲ್ಲಿ ‘ಮೂನ್‌ ವೆಬ್‌ಝೋನ್’ ಹೆಸರಿನಲ್ಲಿ ಕಂಪ್ಯೂಟರ್‌ ತರಬೇತಿ ಕೇಂದ್ರ ಆರಂಭಿಸಿ ಸ್ವಉದ್ಯೋಗದಲ್ಲಿ ತೊಡಗಿಕೊಂಡರು. ಸ್ತ್ರೀಶಕ್ತಿ ಸಂಘಟನೆಗಳೊಂದಿಗೆ ಕಾರ್ಯನಿರ್ವಹಿಸಿ, ಮಹಿಳೆಯರ ಹಾಗೂ ಅಂಗವಿಕಲರ ಅಭಿವೃದ್ಧಿಗಾಗಿ 2008ರಲ್ಲಿ ‘ಮೂನ್‌ ವೆಬ್‌ಝೋನ್‌’ ಹೆಸರಿನಲ್ಲಿ ಎನ್‌ಜಿಒ ಆರಂಭಿಸಿದರು.

ನಾಲ್ಕು ವರ್ಷ ಯಾವುದೇ ದೇಣಿಗೆ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳದೆ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಅವರ ಸೇವಾತತ್ಪರತೆಯನ್ನು ಪರಿಗಣಿಸಿದ ಸರ್ಕಾರ, ಮಹಿಳಾ ಸಾಂತ್ವನ ಕೇಂದ್ರ ಆರಂಭಿಸಲು ಅವಕಾಶ ಮಾಡಿಕೊಟ್ಟಿತು. 2012ರಲ್ಲಿ ಸಾಂತ್ವನ ಕೇಂದ್ರ ಆರಂಭಗೊಂಡಿತು. ಇದರಲ್ಲಿ ಮೂವರು ಸಿಬ್ಬಂದಿ ಹಾಗೂ ಒಬ್ಬ ಆಪ್ತ ಸಮಾಲೋಚಕಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಈ ಕೇಂದ್ರದ ಮೂಲಕ ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರು ತಮ್ಮ ಕೌಟುಂಬಿಕ ಹಾಗೂ ವೃತ್ತಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಹಲವು ಬಾಲ್ಯವಿವಾಹಗಳನ್ನು ತಡೆದ ಯಶಸ್ಸು ಈ ಸಂಸ್ಥೆಗೆ ಸಲ್ಲುತ್ತದೆ.

ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಮಹಿಳಾ ಸಹಕಾರ ಬ್ಯಾಂಕ್ ಸ್ಥಾಪಿಸಬೇಕು ಎಂಬ ಕನಸು ಅನಿತಾ ಅವರಲ್ಲಿ ಚಿಗುರಿತು. 2014–15ರಲ್ಲಿ ಸರ್ಕಾರದ ಸಹಕಾರದಿಂದ ಪ್ರಿಯದರ್ಶಿನಿ ಯೋಜನೆಯಡಿ ₹ 3.50 ಲಕ್ಷ ಷೇರುಧನ ಹಾಗೂ ಸ್ಥಳೀಯ ಸದಸ್ಯರೊಂದಿಗೆ ಪ್ರಿಯದರ್ಶಿನಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘವನ್ನು ಸ್ಥಾಪಿಸಿದರು. ಸಂಘದಲ್ಲಿ ಪ್ರಸ್ತುತ 486 ಮಹಿಳಾ ಸದಸ್ಯರಿದ್ದಾರೆ. ಪಿಗ್ಮಿ ಸಂಗ್ರಾಹಕರನ್ನು ಹೊರತುಪಡಿಸಿ ಬ್ಯಾಂಕ್‌ನಲ್ಲಿ ಅಧ್ಯಕ್ಷೆ, ನಿರ್ದೇಶಕರು ಹಾಗೂ ಸಿಬ್ಬಂದಿ ಮಹಿಳೆಯರೇ ಆಗಿರುವುದು ವಿಶೇಷ.

‘ಅಂಗವೈಕಲ್ಯ ನನಗೆ ಎಂದಿಗೂ ಶಾಪ ಎನಿಸಲಿಲ್ಲ. ಎಲ್ಲೆಡೆ ನನಗೆ ವಿಶೇಷ ಮನ್ನಣೆ, ಪ್ರಾತಿನಿಧ್ಯ ದೊರೆಯುತ್ತದೆ. ಅಂಗವೈಕಲ್ಯವನ್ನೇ ಸಾಧನೆಯ ಮೆಟ್ಟಿಲನ್ನಾಗಿ ರೂಪಿಸಿಕೊಂಡು ಬದುಕುತ್ತಿದ್ದೇನೆ. ಅಂಗವೈಕಲ್ಯದ ನೆಪದಲ್ಲಿ ಮನೆಯಲ್ಲಿ ಕುಳಿತಿದ್ದರೆ, ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ’ ಎಂಬುದು ಅನಿತಾ ಅವರ ಮನದಾಳದ ಮಾತು. ಇವರ ಸಾಧನೆಯನ್ನು ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ.

ಅಂಗವೈಕಲ್ಯ ದೈಹಿಕ ನ್ಯೂನತೆಯೇ ಹೊರತು, ಮಾನಸಿಕ ಹಾಗೂ ಬೌದ್ಧಿಕ ನ್ಯೂನತೆಯಲ್ಲ ಎಂಬ ಸಂಗತಿಯನ್ನು ಅರಿತರೆ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಅನಿತಾ ಅವರ ಬದುಕು ಉತ್ತಮ ನಿದರ್ಶನವಾಗಿದೆ.

ಸಾಧನೆಯ ಹಾದಿಯಲಿ...
2006–07ರಲ್ಲಿ ಹರಿಹರದಲ್ಲಿ ಅಂಗವಿಕಲರ ಅಭಿವೃದ್ಧಿ ಸಂಘ ಸ್ಥಾಪಿಸಿ ಖಜಾಂಚಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಅಂಗವಿಕಲರನ್ನು ಗುರುತಿಸಿ ಸೌಲಭ್ಯಗಳ ಮಾಹಿತಿ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನ.

2009ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಹಾವಳಿ ಪ್ರದೇಶಕ್ಕೆ ಅಂಗವಿಕಲರ ನೆರೆವಿನೊಂದಿಗೆ ಆಹಾರ, ಅಕ್ಕಿ, ಉಡುಗೆಗಳನ್ನು ಸಂಗ್ರಹಿಸಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿಗೆ ಜಿಲ್ಲಾಡಳಿತದ ಮೂಲಕ ಕಳುಹಿಸಿಕೊಟ್ಟಿದ್ದರು.

2010–11ರಲ್ಲಿ ಪರಿಸರ ಸಂರಕ್ಷಣೆಗಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಗಿಡಮರಗಳನ್ನು ಬೆಳೆಸಲು ಜಿಲ್ಲಾಡಳಿತ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಬೀಜದುಂಡೆ ತಯಾರಿಸುವ ಕಾರ್ಯಾಗಾರದಲ್ಲಿ ತೊಡಗಿಸಿಕೊಂಡಿದ್ದರು.

2011ರಲ್ಲಿ ಸ್ತ್ರೀಶಕ್ತಿ ಸಂಘಟನೆ ಮೂಲಕ ಘನತ್ಯಾಜ್ಯ ವಿಲೆವಾರಿ ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದರು. 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತ ಅಭಿಯಾನ ಹಮ್ಮಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಿದ್ದರು.

ಸಾಂತ್ವನ ಕೇಂದ್ರದ ಸೇವೆಗಳು
ಸಾಮಾಜಿಕ ಶೋಷಣೆಗಳಾದ ವರದಕ್ಷಿಣೆಯ ಪಿಡುಗು, ಬಾಲ್ಯವಿವಾಹ, ವೈವಾಹಿಕ ಸಮಸ್ಯೆಗಳು, ಅತ್ಯಾಚಾರ, ದೌರ್ಜನ್ಯ ಹಾಗೂ ಇನ್ನಿತರ ಸಂಕಷ್ಟಗಳಿಂದ ನೊಂದ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ. ಕೌನ್ಸೆಲಿಂಗ್‌ ಮತ್ತು ಮಾರ್ಗದರ್ಶನ, ಉಚಿತ ಕಾನೂನು ಸಲಹೆ ಹಾಗೂ ನೆರವು, ಪೊಲೀಸ್‌ ನೆರವು ಮತ್ತು ರಕ್ಷಣೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT