ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಿಯಾಗದ ಉಪಾಹಾರ ಸೌಲಭ್ಯ

Last Updated 3 ಡಿಸೆಂಬರ್ 2017, 7:20 IST
ಅಕ್ಷರ ಗಾತ್ರ

ದಾವಣಗೆರೆ: ಎಲ್ಲೆಡೆ ಸ್ವಚ್ಛ ಭಾರತದ ಅಭಿಯಾನದ್ದೇ ಮಾತು. ಆದರೆ, ಬೆಳಗಾದರೆ ನಗರವನ್ನು ಸ್ವಚ್ಛ ಮಾಡುವ ಕಾರ್ಮಿಕರ ಸಮಸ್ಯೆಗಳತ್ತ ಮಾತ್ರ ಮೌನ. ಆರೂವರೆಗೆಲ್ಲ ಮನೆ ಮಂದಿಗೆ ತಿಂಡಿ ಸಿದ್ಧಮಾಡುವ ಪೌರಕಾರ್ಮಿಕರಾದ ಲಕ್ಷ್ಮಮ್ಮ, ಖಾಲಿ ಹೊಟ್ಟೆಯಲ್ಲಿಯೇ ಮನೆ ಬಿಡುತ್ತಾರೆ. ತಮ್ಮ ವಿನೋಬನಗರದಲ್ಲಿರುವ ಮನೆಯಿಂದ ವಿದ್ಯಾನಗರಕ್ಕೆ ಬರುವ ಅವರು ಹಾಜರಾತಿ ಸಹಿ ಹಾಕಿ, ಸ್ವಚ್ಛತಾ ಕಾಯಕಕ್ಕೆ ಕೈ ಜೋಡಿಸುತ್ತಾರೆ. ದೂಳು ತಿನ್ನುತ್ತಲೇ ಅವರ ಹಸಿವು ಇಂಗಿ ಹೋಗಿರುತ್ತದೆ.

ಇದು ಲಕ್ಷ್ಮಮ್ಮ ಅವರೊಬ್ಬರ ಕಥೆಯಲ್ಲ. ನಗರದ ಬಹುತೇಕ ಪೌರಕಾರ್ಮಿಕರ ಸ್ಥಿತಿ. ಈ ಕಾಯಕದಲ್ಲಿ ತೊಡಗಿಕೊಂಡವರಲ್ಲಿ ಶೇ 70 ರಷ್ಟು ಮಹಿಳೆಯರೇ ಇದ್ದಾರೆ.ಪೌರ ಕಾರ್ಮಿಕರ ಬೆಳಗಿನ ಹಸಿವು ನೀಗಿಸುವ ಉಪಾಹಾರ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿ ವರ್ಷ ಉರುಳಿದೆ. ಆದರೆ, ದಾವಣಗೆರೆ ನಗರದಲ್ಲಿ ಅನುಷ್ಠಾನವಾಗಲು ಇನ್ನೂ ಗಳಿಗೆ ಕೂಡಿ ಬಂದಿಲ್ಲ. ಇತರ ಹಲವು ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಪಾಲಿಕೆ ಮಾತ್ರ ಇನ್ನೂ ಮೀನ ಮೇಷ ಎಣಿಸುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಎಲ್‌.ಎಂ. ಹನುಮಂತಪ್ಪ, ‘ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ಇನ್ನೂ ಸಿಕ್ಕಿಲ್ಲ. ಅದಕ್ಕೂ ಹೋರಾಟ ಮಾಡಿ ಬೀದಿಗೀಳಿಯಬೇಕೋ ಏನೊ ? ಯಾವ ಸೌಲಭ್ಯವೂ ನಮಗೆ ಸಹಜವಾಗಿ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಉಪಾಹಾರದ ಗುತ್ತಿಗೆ ವಹಿಸಲು ಟೆಂಡರ್ ಕರೆದು ಆರು ತಿಂಗಳು ಕಳೆದಿವೆ. ಮುಂದಿನ ಕ್ರಮ ತೆಗೆದುಕೊಳ್ಳಲು ಪಾಲಿಕೆಗೆ ಮನಸ್ಸು ಇದ್ದ ಹಾಗೇ ಕಾಣುತ್ತಿಲ್ಲ’ ಎಂದ ಅವರು, ‘ಯೋಜನೆಯ ಪ್ರಕಾರ ಗುತ್ತಿಗೆದಾರರು ಬೆಳಗಿನ ಉಪಾಹಾರವನ್ನು ಹಾಜರಾತಿ ಸ್ಥಳಗಳಾದ ವಿದ್ಯಾನಗರ, ನಿಟುವಳ್ಳಿ, ಜಯದೇವ ವೃತ್ತ, ಕೆಟಿಜೆ ನಗರ, ರಾಂ ಅಂಡ್ ಕೋ ವೃತ್ತಗಳಲ್ಲಿ ಸೇರುವ ಪೌರ ಕಾರ್ಮಿಕರಿಗೆ ಒದಗಿಸಬೇಕು. ಉಪಾಹಾರ ಸೇವಿಸಿ ಕೆಲಸಕ್ಕೆ ಹಾಜರಾಗಬೇಕು. ಆದರೆ ಯೋಜನೆ ಜಾರಿಯಾಗಿಲ್ಲ’ ಎನ್ನುತ್ತಾರೆ ಅವರು.

‘ನನ್ನ ಗಮನಕ್ಕೆ ಬಂದ ಹಾಗೇ ಚನ್ನಗಿರಿ, ಹರಿಹರ, ಹರಪನಹಳ್ಳಿಯಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ. ಅಲ್ಲಿನ ಪುರಸಭೆ, ನಗರಸಭೆಗಳು ನೆರವಾಗಿವೆ. ಆದರೆ, ನಗರದಲ್ಲಿರುವ ಪೌರ ಕಾರ್ಮಿಕರಿಗೆ ಮಾತ್ರ ಈ ತಾರತಮ್ಯ’ ಎಂಬುದು ಅವರ ನೋವಿನ ಮಾತು.

ಪೊರಕೆನೇ ಕೊಟ್ಟಿಲ್ಲ: ‘ಆರೋಗ್ಯದ ದೃಷ್ಟಿಯಿಂದ ಆಯಾ ಕಾಲಕ್ಕೆ ಮುಖಗೌಸು, ಕೈಗೌಸು, ಗಮ್ ಬೂಟ್‌ಗಳು ಕೊಡಬೇಕು ಎಂದೆಲ್ಲ ನಿಯಮಗಳಿವೆ. ಅವನ್ನು ಹಾಕಿಕೊಂಡು ಕೆಲಸ ಮಾಡೊ ಒಬ್ಬ ಪೌರಕಾರ್ಮಿಕನಾದರೂ ಇದ್ದರಾ? ಇದೆಲ್ಲ ಹೋಗಲಿ ಕಸ ಗುಡಿಸಲು ಪೊರಕೆ, ಕಸ ಹಾಕಲು ಬುಟ್ಟಿ ಯಾವುದೂ ಇಲ್ಲ. ಎಲ್ಲ ಮನೆಯಿಂದ ತಗೊಂಡು ಬರ್ತೀವಿ’ ಅಂತಾರೆ ಪೌರಕಾರ್ಮಿಕ ಈರಣ್ಣ.

‘ಗಮ್ ಬೂಟು ಇಲ್ಲದೇ ಚರಂಡಿಗೆ ಇಳಿತೀವಿ. ಕಸ ಕಟ್ಕೊಂಡಿದ್ರೆ ಖಾಲಿ ಕೈಯಲ್ಲೇ ತೆಗಿತೀವಿ. ಆಳೊವವರು ನಮ್ಮನ್ನ ಮನುಷ್ಯರಂಗೆ ಕಂಡಿಲ್ಲ. ನಾವು ಪ್ರತಿಭಟನೆ ಅಂತ ಕುಂತರೆ, ಬದುಕಿನ ಬಂಡಿಯೂ ನಡೆಯಲ್ಲ, ನಗರ ಗಬ್ಬುನಾರುತ್ತೆ’ ಅಂತಾರೆ ಅವರು.

‘ನಮ್ಮ ಆರೋಗ್ಯ ತಪಾಸಣೆಗೆ ಅಂತ ಪಾಲಿಕೆ ವರ್ಷಕ್ಕೆ ₹ 9 ಲಕ್ಷ ಕಟ್ಟುತ್ತೆ. ತಪಾಸಣೆಗೆ ಅಂತ ಸಿಜೆ ಆಸ್ಪತ್ರೆಗೆ ಹೋದ್ರೆ ಡಾಕ್ಟ್ರು, ಎಷ್ಟು ಸಾಧ್ಯನೋ ಅಷ್ಟೊ ಬೇಗ ಸಾಗ ಹಾಕೋಕೆ ನೋಡ್ತಾರೆ. ನಮ್ಮ ಸಮಾಧಾನಕ್ಕೆ ಒಂದು ಎಕ್ಸ್‌ರೇ ಮಾಡ್ತಾರೆ. ಎಲ್ಲ ಸರಿ ಇದೆ ಅಂತ ಹೇಳಿ ಕಳಿಸ್ತಾರೆ’ ಅಂತ ನಕ್ಕು ಸುಮ್ಮನಾದ್ರು ಪೌರ ಕಾರ್ಮಿಕ ಬಸಪ್ಪ.

‘ಹೆಚ್ಚು ಕಮ್ಮಿ 390 ಕಾಯಂ, 300 ಮಂದಿ ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಎಲ್ಲರದ್ದೂ ಒಂದೇ ಸ್ಥಿತಿ. ಯಾರಿಗೂ ಸ್ವಚ್ಛತಾ ಪರಿಕರಗಳನ್ನು ಕೊಟ್ಟಿಲ್ಲ. ಪಾಲಿಕೆನ ಕೇಳಿದ್ರೆ ಗುತ್ತಿಗೆದಾರರು ಕೊಡಬೇಕು ಅನ್ನೊತ್ತೆ. ಗುತ್ತಿಗೆದಾರರು ನೋಡಿದ್ರೆ ಬರಿಗೈ ತೋರಿಸ್ತಾರೆ’ ಎನ್ನುತ್ತಾರೆ ಅವರು.

* * 

ಉಪಾಹಾರ ಯೋಜನೆ ಎಲ್ಲ ಕಡೆ ಅನುಷ್ಠಾನ ಆಗಿಲ್ಲ. ಟೆಂಡರ್ ಆಗಿದೆ, ವರ್ಕ್ ಅರ್ಡರ್ ಆಗಿಲ್ಲ. ಶೀಘ್ರ ಜಾರಿ ಮಾಡಲು ಪ್ರಯತ್ನಿಸುತ್ತೇನೆ
ಅನಿತಾಬಾಯಿ ಮಾಲತೇಶ, ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT