ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌ ಮಿಲಾದ್‌ ಸಂಭ್ರಮ: ಪ್ರವಾದಿಯ ಸ್ಮರಣೆ

Last Updated 3 ಡಿಸೆಂಬರ್ 2017, 7:24 IST
ಅಕ್ಷರ ಗಾತ್ರ

ದಾವಣಗೆರೆ: ‍ಪ್ರವಾದಿ ಮಹಮ್ಮದ್ ಪೈಂಗಬರರ ಜನ್ಮದಿನವಾದ ಈದ್‌ ಮಿಲಾದ್ ಹಬ್ಬವನ್ನು ಶನಿವಾರ ನಗರದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ನಗರದ ತುಂಬೆಲ್ಲ ಹಸಿರು ಬಣ್ಣದ ಬ್ಯಾನರ್‌ಗಳು, ಬಂಟಿಂಗ್ಸ್‌ಗಳು ರಾರಾಜಿಸುತ್ತಿದ್ದವು. ವಿನೋಬ ನಗರ, ಭಾಷಾ ನಗರ, ಹಳೆಯ ದಾವಣಗೆರೆ ಭಾಗದಲ್ಲಿರುವ ಮಸೀದಿ, ದರ್ಗಾಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಈದ್ ಶುಭ ಕೋರುವ ಬ್ಯಾನರ್‌ಗಳನ್ನು ಹಾಕಲಾಗಿತ್ತು.

ಆಜಾದ್ ನಗರ ವೃತ್ತದಲ್ಲಿ ಮಧ್ಯಾಹ್ನ 2.30ಕ್ಕೆ ಮಿಲಾದ್ ಕಮಿಟಿ‌ಯಿಂದ ಈದ್‌ ಆಚರಿಸಲಾಯಿತು. ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಐಜಿಪಿ ಎಂ.ಎ.ಸಲೀಂ, ಎಸ್‌ಪಿ ಡಾ.ಭೀಮಾಶಂಕರ ಎಸ್‌.ಗುಳೇದ್‌ ಮೆರವಣಿಗೆಗೆ ಚಾಲನೆ ನೀಡಿದರು.

ಅಹಮ್ಮದ್ ನಗರ, ಚಾಮರಾಜಪೇಟೆ, ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಬಾರ್‌ಲೈನ್‌ ರಸ್ತೆ, ಅರುಣ ಟಾಕೀಸ್‌, ಪಿ.ಬಿ. ರಸ್ತೆಯ ಮೂಲಕ ಗಾಂಧಿ ವೃತ್ತ, ಕೆ.ಆರ್.ರಸ್ತೆ, ಮಾಗಾನಹಳ್ಳಿ ರಸ್ತೆಯ ಮಹಮ್ಮದ್ ಅಲಿ ಜೋಹರ್ ನಗರದ ಈದ್ ಮೈದಾನದಲ್ಲಿ ಸಮಾಪನಗೊಂಡಿತು.

ಪಿ.ಬಿ ರಸ್ತೆಯಲ್ಲಿ ಅದ್ಧೂರಿ ಮೆರವಣಿಗೆ: ಮತ್ತೊಂದೆಡೆ, ಪಿ.ಬಿ ರಸ್ತೆಯುದ್ದಕ್ಕೂ ಮುಸ್ಲಿಮರು ಮೆರವಣಿಗೆ ನಡೆಸಿದರು. ಗುಂಬಜ್‌ ಮಾದರಿಯನ್ನು ಟ್ರ್ಯಾಕ್ಟರ್‌ಗಳಲ್ಲಿ ಪ್ರತಿಷ್ಠಾಪಿಸಿ ಅಲ್ಲಾಹುವಿನ ಸ್ಮರಣೆ ಮಾಡಲಾಯಿತು. ಪೈಗಂಬರರ ಗುಣಗಾನ ಮಾಡುವ ಗೀತೆಗಳನ್ನು ಹಾಡಲಾಯಿತು. ಮದೀನಾ ಚಿತ್ರಗಳನ್ನು ಒಳಗೊಂಡ ಹಾಗೂ ಕುರಾನ್‌ ಧರ್ಮಗ್ರಂಥದ ಸಾಲುಗಳನ್ನು ಒಳಗೊಂಡ ಬಾವುಟಗಳನ್ನು ಹಿಡಿದು ಸಾಗಿದರು. ಮತ್ತೊಂದೆಡೆ, ಮಕ್ಕಳು ಹಾಗೂ ಯುವಕರು ಮುಖದ ಮೇಲೆ ಇಸ್ಲಾಂ ಧರ್ಮವನ್ನು ಸಾರುವ ಚಿಹ್ನೆಗಳನ್ನು ಹಾಕಿಸಿಕೊಂಡು ಸಂಭ್ರಮಿಸಿದರು.

ಕಬ್ಬಿನ ಹಾಲು, ಮಜ್ಜಿಗೆ ವಿತರಣೆ: ಮೆರವಣಿಗೆಯಲ್ಲಿ ಸಾಗುವವರ ಬಾಯಾರಿಕೆ ನೀಗಿಸಲು ರೈಲ್ವೆ ನಿಲ್ದಾಣದ ಸಮೀಪ ಕಬ್ಬಿನ ಹಾಲು ಹಾಗೂ ಜ್ಯೂಸ್‌ ವಿತರಣಾ ಮಳಿಗೆಗಳನ್ನು ತೆರೆಯಲಾಗಿತ್ತು. ಎಲ್ಲರಿಗೂ ಉಚಿತವಾಗಿ ಪಾನೀಯವನ್ನು ವಿತರಿಸಲಾಯಿತು. ಪ್ರತಿವರ್ಷ ಕಬ್ಬಿನ ಹಾಲು ಹಂಚಲಾಗುತ್ತದೆ. ಈ ಬಾರಿ 6 ಜ್ಯೂಸ್‌ ಅಂಗಡಿಗಳನ್ನು ತೆರೆದು, 2.5 ಟನ್‌ ಕಬ್ಬು ಅರೆಯಲಾಗಿದೆ ಎಂದು ಮುಸ್ಲಿಂ ಮುಖಂಡರೊಬ್ಬರು ಮಾಹಿತಿ ನೀಡಿದರು. ಮೆರವಣಿಗೆ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆಯ ವಿಡಿಯೋ ಚಿತ್ರಣ ಮಾಡಲಾಯಿತು.

ಮಿಲಾದ್ ಕಮಿಟಿ ಅಧ್ಯಕ್ಷ ಕೆ.ಅತಾವುಲ್ಲಾ ರಜ್ವಿ, ತಂಜಿಂ ಕಮಿಟಿ ಅಧ್ಯಕ್ಷ ಸಾದಿಕ್‌ ಪೈಲ್ವಾನ್, ಉಪಾಧ್ಯಕ್ಷ ಎ.ಬಿ.ಜಬೀವುಲ್ಲಾ, ಪರಿಷತ್ ಸದಸ್ಯ ಕೆ.ಅಬ್ದುಲ್‌ ಜಬ್ಬಾರ್, ಮುಖಂಡರಾದ ಸೈಯದ್ ಶಫಿ, ಯಾಸೀನ್‌ ಪೀರ್, ರಜ್ವಿ, ಮೆಹಬೂಬ್‌ ಸಾಬ್‌, ಸೈಯದ್ ಚಾರ್ಲಿ, ಮೊಹಿದ್ದೀನ್‌ ಸಾಬ್‌ ಅವರೂ ಇದ್ದರು.

ಗಮನ ಸೆಳೆದ ಬಾಲಕ
ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್‌ ಭಾವಚಿತ್ರಗಳು ರಾರಾಜಿಸಿದವು. ಪಿ.ಬಿ ರಸ್ತೆಯಲ್ಲಿ ಟಿಪ್ಪು ವೇಷ ಧರಿಸಿದ್ದ ಬಾಲಕನೊಬ್ಬ ಎಲ್ಲರ ಗಮನ ಸೆಳೆದ. ಮತ್ತೊಂದೆಡೆ, ಚಾಮರಾಜಪೇಟೆಯ ವೃತ್ತದಲ್ಲಿ ನಿರ್ಮಿಸಿದ್ದ ಬೃಹತ್ ಗುಂಬಜ್‌ ಮಾದರಿ ಆಕರ್ಷಣೀಯವಾಗಿತ್ತು. ಅರುಣಾ ಚಿತ್ರಮಂದಿರ ಸಮೀಪ ನೂರಾರು ಮುಸ್ಲಿಂ ಮಹಿಳೆಯರು ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT