ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ರೋಹಿಣಿಗೆ ಸ್ವಾಮೀಜಿ ಅಭಿನಂದನೆ

Last Updated 3 ಡಿಸೆಂಬರ್ 2017, 7:42 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಶ್ರವಣ ಬೆಳಗೊಳವನ್ನು ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪಾರಂಪರಿಕ ತಾಣಗಳಲ್ಲಿ ಗುರುತಿಸುವಂತೆ ಮಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯವೈಖರಿ ಶ್ಲಾಘಿಸಿ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿನಂದನೆ ಸಲ್ಲಿಸಿದರು.

ಮಹಾಮಸ್ತಕಾಭಿಷೇಕ ಮಹೋ ತ್ಸವದ ಅಂಗವಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷರ ಕಚೇರಿಯಲ್ಲಿ ಸ್ವಾಮೀಜಿ ಅವರೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಜಿಲ್ಲಾಧಿಕಾರಿ ಅವರನ್ನು ಅಭಿನಂದಿಸಲಾಯಿತು.

ನವದೆಹಲಿಯ ಸಿವಿಲ್ ಸರ್ವಿಸರ್ಸ್ ಅಧಿಕಾರಿಗಳ ಸಂಸ್ಥೆಯಲ್ಲಿ (ಸಿ.ಎಸ್.ಒ.ಐ) ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನೆ ಸಭೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ, ಶ್ರವಣಬೆಳಗೊಳದ ಅಗತ್ಯತೆ ಮತ್ತು ಮಹಾಮಸ್ತಕಾಭಿಷೇಕದ ಮಹತ್ವ ಎರಡನ್ನೂ ಪೂರಕವಾಗಿ ಇಟ್ಟುಕೊಂಡು ಹೆಚ್ಚಿನ ಅನುದಾನ ನೀಡುವಂತೆ ಬಲವಾಗಿ ಪ್ರತಿಪಾದಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪಾರಂಪರಿಕ ತಾಣಗಳಲ್ಲಿ ಶುಚಿತ್ವ, ನೈರ್ಮಲ್ಯ ಮತ್ತು ಮೂಲಸೌಕರ್ಯಗಳನ್ನು ಉತ್ತಮ ಮಟ್ಟಕ್ಕೆ ಒಯ್ಯಲು ಗುರುತಿಸಿರುವ ದೇಶದ 10 ಪ್ರಮುಖ ಸ್ವಚ್ಛ ಐಕಾನಿಕ್‍ಸ್ಥಳಗಳಲ್ಲಿ ಶ್ರವಣಬೆಳಗೊಳವೂ ಸೇರಿದೆ.

ಪಾರಂಪರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದಿಂದಾಗಿ ಗುರುತಿಸಿಕೊಂಡಿರುವ ಸ್ಥಳಗಳ ಪೈಕಿ 100 ತಾಣಗಳಲ್ಲಿ ಸ್ವಚ್ಛತೆ ಸ್ಥಿತಿಯನ್ನು ಉನ್ನತ ದರ್ಜೆಗೆ ಏರಿಸಲು ನಿರ್ಧರಿಸಿದೆ. ಒಂದನೇ ಮತ್ತು ಎರಡನೇ ಹಂತದಲ್ಲಿ ತಲಾ 10 ಪಾರಂಪರಿಕ ಸ್ಥಳಗಳನ್ನು ಆಯ್ಕೆ ಮಾಡಿದೆ. ಅಭಿವೃದ್ಧಿಗೆ ಪೂರಕವಾಗಿ ತುರ್ತಾಗಿ ₹ 50 ಕೋಟಿ ಅನುದಾನ ನೀಡುವಂತೆಯೂ ಜಿಲ್ಲಾಧಿಕಾರಿ ಮನವಿ ಮಾಡಿದ್ದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದೊಂದಿಗೆ (ಎಂ.ಡಿ.ಡಬ್ಲ್ಯೂ.ಎಸ್) ಕೇಂದ್ರದ ನಗರಾ ಭಿವೃದ್ಧಿ, ಸಂಸ್ಕೃತಿ, ಪ್ರವಾಸೋದ್ಯಮ ಸಚಿವಾಲಯ, ಸಂಬಂಧಪಟ್ಟ ರಾಜ್ಯಗಳು ಹಾಗೂ ಪಾಲುದಾರರಾಗಿ ಸಾರ್ವಜನಿಕ ವಲಯ ಮತ್ತು ಖಾಸಗಿ ಕಂಪೆನಿಗಳ ಸಹಯೋಗದೊಂದಿಗೆ ಅಭಿವೃದ್ಧಿ ಕೆಲಸಗಳು ಅನುಷ್ಠಾನವಾಗಲಿವೆ.
ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್.ಎ.ಎಲ್) ಸಂಸ್ಥೆಯು ಆರ್ಥಿಕ ಮತ್ತು ತಾಂತ್ರಿಕ ನೆರವಿನೊಂದಿಗೆ ಶ್ರವಣಬೆಳಗೊಳದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT