ಮಂಗಳವಾರ, ಮಾರ್ಚ್ 2, 2021
29 °C

ವಾಮನ ಮೂರ್ತಿಯ ಚಿನ್ನದ ಸಾಧನೆ

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

ವಾಮನ ಮೂರ್ತಿಯ ಚಿನ್ನದ ಸಾಧನೆ

ಹಾಸನ: ಅಂಗವಿಕಲತೆ ಇವರನ್ನು ಬಾಧಿಸಲಿಲ್ಲ. ನ್ಯೂನತೆ ಮೀರಿ ನಿಂತು, ದೇಶ, ವಿದೇಶಗಳಲ್ಲಿ ಪದಕಗಳ ಬೇಟೆಆಡಿದ್ದಾರೆ. ಪ್ರಸಕ್ತ ವರ್ಷ ಆಗಸ್ಟ್, ಕೆನಡಾದಲ್ಲಿ ನಡೆದ ವಿಶ್ವ ಕುಬ್ಜರ ಒಲಿಂಪಿಕ್ಸ್‌ ನಲ್ಲಿ ಬೋಸಿಯ (ಚೆಂಡಾಟ) ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು.

ಚಿನ್ನದ ಸಾಧನೆ ಹಿಂದೆ ನೋವು ಇದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಥಿಕ ಸಮಸ್ಯೆ. ಪತ್ನಿಯ ಆಭರಣ ಅಡವಿಟ್ಟು, ಸ್ನೇಹಿತರು ಮತ್ತು ನೆಂಟರಿಂದ ಸಾಲ ಪಡೆದು ವಿಮಾನ ಹತ್ತಬೇಕಾಯಿತು. ಚಿನ್ನ ಗೆದ್ದರೂ ಅಡವಿಟ್ಟ ಆಭರಣ ಮಾತ್ರ ಇನ್ನೂ ಬಿಡಿಸಿಕೊಳ್ಳಲು ಆಗಿಲ್ಲ.

ಅಂಗವಿಕಲತೆ ಶಾಪ ಎನ್ನುವ ಕಾಲ ಇತ್ತೀಚಿನ ದಿನಗಳಲ್ಲಿ ದೂರವಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಅರಕಲಗೂಡು ತಾಲ್ಲೂಕಿನ ಕೊಳ್ಳಂಗಿ ಗ್ರಾಮದ ಕೆ.ಆರ್.ಶಾಂತಕುಮಾರ್.

ವಯಸ್ಸು 27 ವರ್ಷ, ಎತ್ತರ 3.3 ಅಡಿ. ಪಿಯುಸಿ ವ್ಯಾಸಂಗ. ಕೊಳ್ಳಂಗಿಯ ರಾಜಶೆಟ್ಟಿ-ನಾಗರತ್ನ ದಂಪತಿಯ ಏಕೈಕ ಪುತ್ರ. ನೋಡುವುದಕ್ಕೆ ಬಾಲಕನಂತೆ ಕಂಡರೂ, ಯಾರಿಗೂ, ಯಾವುದಕ್ಕೂ ಅಂಜಿ ಕುಳಿತಿಲ್ಲ.

ಬದಲಾಗಿ ಸಾಧಿಸುವ ಛಲದಿಂದ ಕ್ರೀಡೆ ಜತೆಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಲಿ ಹೊಳಗೋಡು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿ, ಸರ್ಕಾರದ ಯೋಜನೆ ಮತ್ತು ಸವಲತ್ತು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬರುವ ಮಾಸಿಕ ₹ 3,000 ಹಣದಿಂದ ಜೀವನ ನಡೆಸುತ್ತಿದ್ದಾರೆ.

ಪ್ರೌಢಶಾಲೆಗೆ ಹೋಗುತ್ತಿದ್ದ ದಿನಗಳು. ಇವರ ಎತ್ತರ ನೋಡಿ ಸಹಪಾಠಿಗಳು ತಮಾಷೆ ಮಾಡುತ್ತಿದ್ದರು. ಶಿಕ್ಷಕ ಕೇಶವಮೂರ್ತಿ ಅವರ ಸಲಹೆಯಂತೆ ಷಟಲ್ ಬ್ಯಾಡ್ಮಿಂಟನ್‌, ರನ್ನಿಂಗ್‌ ರೇಸ್‌ ಅಭ್ಯಾಸ ಮಾಡಿದರು.

‘ಅಂಗವಿಕಲರಾದರು ಸಾಧನೆ ಮಾಡ ಬಹುದು. ವಿಶೇಷ ಕ್ರೀಡೆಗಳಿವೆ’ ಎಂಬ ಶಿಕ್ಷಕರ ಮಾತು ಸ್ಪೂರ್ತಿ ನೀಡಿತು. ಆರ್ಥಿಕ ಬೆಂಬಲ ಇಲ್ಲದಿದ್ದರೂ ಛಲ ಬಿಡದೆ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಚೆನ್ನೈನಲ್ಲಿ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದ ಕುಬ್ಜರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. ಅಲ್ಲಿಂದ ಆರಂಭಗೊಂಡಿತು ಯಶಸ್ಸಿನ ಯಾತ್ರೆ. ಅಮೆರಿಕಾ, ಕೆನಡಾ, ದೆಹಲಿ, ಚೆನ್ನೈ, ಅಲಹಾಬಾದ್, ಕೊಲ್ಕತ್ತ, ಒಡಿಶಾ ಹಾಗೂ ಮುಂಬೈನಲ್ಲಿ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ 13 ಚಿನ್ನದ ಪದಕ, 10 ಬೆಳ್ಳಿ ಪದಕ ಮತ್ತು 15 ಕಂಚಿನ ಪದಕಗಳನ್ನು ಕೊರಳಿಗೇರಿಸಿ ಕೊಂಡಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 17 ಪದಕ ಗೆದ್ದಿದ್ದಾರೆ.

ಕೆನಡಾದಲ್ಲಿ ನಡೆದ ವಿಶ್ವ ಕುಬ್ಜರ ಒಲಿಂಪಿಕ್ಸ್ ನಲ್ಲಿ ಬೋಸಿಯ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದರು. 28 ರಾಷ್ಟ್ರದ ಕ್ರೀಡಾಪಟುಗಳು ಪಾಲ್ಗೊಂಡಿದ್ದ ಕೂಟದಲ್ಲಿ ಭಾರತದಿಂದ 17 ಮಂದಿ ಆಯ್ಕೆಯಾಗಿದ್ದರು.

‘ಕ್ರೀಡಾಕೂಟಕ್ಕೆ ಆಯ್ಕೆಯಾದಾಗ ಸರ್ಕಾರ ಆರ್ಥಿಕ ನೆರವು ನೀಡುವ ಭರವಸೆ ನೀಡಿತ್ತು. ಆದರೆ ಇದುವರೆಗೂ ವಿಮಾನ ಪ್ರಯಾಣದ ಸಹ ವೆಚ್ಚ ನೀಡಿಲ್ಲ. ಪತ್ನಿಯ ಆಭರಣ ಅಡವಿಟ್ಟು ಹಾಗೂ ಸ್ನೇಹಿತರಿಂದ ಹಣ ಪಡೆದು ಕ್ರೀಡಾಕೂಟಕ್ಕೆ ಹೋಗಿ ಬಂದೆ. ಒಟ್ಟು ₹ 2.5 ಲಕ್ಷ ವೆಚ್ಚವಾಗಿದೆ’ ಎಂದು ಶಾಂತಕುಮಾರ್‌ ಬೇಸರ ವ್ಯಕ್ತಪಡಿಸಿದರು.

‘ಮುಂದೆ ನಡೆಯುವ ಕ್ರೀಡಾಕೂಟ ಗಳಲ್ಲಿ ಭಾಗವಹಿಸಲು ಆರ್ಥಿಕ ತೊಂದರೆ ಇದೆ. ಇರುವ ಒಂದು ಎಕರೆ ಜಮೀನಿನಲ್ಲಿ ಜೀವನ ನಡೆಸುವುದು ಕಷ್ಟ. ಸರ್ಕಾರ ಉದ್ಯೋಗ ನೀಡಿದರೆ ಅನುಕೂಲವಾಗುತ್ತದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. ಆದರೆ ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಲ್ಲ. ಕ್ರೀಡಾಕೂಟಕ್ಕೆ ಮೂರು ತಿಂಗಳು ಇದ್ದಾಗ ಬಾಡಿಗೆ ಕೊಠಡಿ ಮಾಡಿಕೊಂಡು ಅಭ್ಯಾಸ ಮಾಡುತ್ತೇನೆ’ ಎಂದರು.

ಅಂಗವಿಕಲರಿಗೆ ಹೊಸ ಯೋಜನೆಗಳು

ಎ ಮತ್ತು ಬಿ ಶ್ರೇಣಿಯ ಹುದ್ದೆಗಳಲ್ಲಿ ರಾಜ್ಯ ಸರ್ಕಾರ ಶೇ 3 ರಷ್ಟು ಹಾಗೂ ಸಿ ಮತ್ತು ಡಿ ಶ್ರೇಣಿ ಹುದ್ದೆಗಳಲ್ಲಿ ಶೇ 5 ರಷ್ಟು ಹುದ್ದೆಗಳ ಮೀಸಲಾತಿ.

ಸ್ವಯಂ ಉದ್ಯೋಗಕ್ಕಾಗಿ ಉಚಿತ ಕಬ್ಬಿಣದ ಪಟ್ಟಿಗೆ ಅಂಗಡಿ, ₹ 20,000 ಬಡ್ಡಿರಹಿತ ಸಾಲ ನೀಡಲಾಗುವುದು

ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗೆ ಶುಲ್ಕ ಮರು ಪಾವತಿ

ಸಾಮಾನ್ಯ ವ್ಯಕ್ತಿ ಅಂಗವಿಕಲರನ್ನು ಮದುವೆಯಾದರೆ ₹ 50 ಸಾವಿರ ಪ್ರೋತ್ಸಾಹ ಧನ.

ಅಂಧ ಮಹಿಳೆಗೆ ಶೇ 40ಕ್ಕಿಂತ ಪಾರ್ಶ್ವ ದೃಷ್ಟಿದೋಷ ಅಥವಾ ಸಂಪೂರ್ಣ ಅಂಧತ್ವ ಮಹಿಳೆಗೆ ಜನಿಸಿದ ಮೊದಲ ಮತ್ತು ಎರಡನೇ ಮಗುವಿಗೆ ಎರಡು ವರ್ಷದವರೆಗೆ ₹ 2 ಸಾವಿರ ಪೋಷಣಾ ಭತ್ಯೆ

ಮನೆ ಬಳಿಗೇ ಸವಲತ್ತು

ಜಿಲ್ಲೆಯಲ್ಲಿ 32,232 ಅಂಗವಿಕಲರಿದ್ದಾರೆ. ಅವರ ಶ್ರೇಯೋಭಿವೃದ್ಧಿಗೆ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದ್ದು, ಮನೆ ಬಾಗಿಲಿಗೆ ಸವಲತ್ತು ಸಿಗಲಿದೆ.

ಅಂಗವಿಕಲರಿಗಾಗಿ ಲಿಫ್ಟ್‌, ರ‍್ಯಾಂಪ್‌, ಎಲಿವೇಟರ್‌ ಅನ್ನು ಸರ್ಕಾರಿ ಕಚೇರಿಗಳಲ್ಲಿ ನಿರ್ಮಿಸಲಾಗುತ್ತಿದೆ. ಪ್ರತಿ ಮಂಗಳವಾರ ತಾಲ್ಲೂಕು ಆಸ್ಪತ್ರೆ ಮತ್ತು ಬುಧವಾ ಜಿಲ್ಲಾಸ್ಪತ್ರೆಯಲ್ಲಿ ಅಂಗವಿಕಲ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಎ.ಟಿ.ಮಲ್ಲೇಶ್‌ ತಿಳಿಸಿದರು.

ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ ಇರುವ ಅಂಗವಿಕಲರು

ಅರಸೀಕೆರೆ 3405 1000 302 1000

ಆಲೂರು 1150 470 198 550

ಅರಕಲಗೂಡು 1460 780 200 650

ಹೊಳೆನರಸೀಪುರ 1109 695 250 756

ಬೇಲೂರು 1205 900 250 670

ಚನ್ನರಾಯಪಟ್ಟಣ 2500 894 475 930

ಸಕಲೇಶಪುರ 1061 556 266 350

ಒಟ್ಟು 16890 6895 2561 5886

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.