ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸನಗಳ ಬೀಡು ಶ್ರವಣಬೆಳಗೊಳ

Last Updated 3 ಡಿಸೆಂಬರ್ 2017, 8:48 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಜೈನ ಕಾಶಿ ದಾಖಲೆ ಸಂಖ್ಯೆಯ ಪ್ರಾಚೀನ ಶಿಲಾ ಶಾಸನಗಳಿಂದಲೂ ಪ್ರಾಮುಖ್ಯತೆ ಪಡೆದಿದೆ. ಕ್ರಿ.ಶ. ಸುಮಾರು 6ನೇ ಶತಮಾನದಿಂದ 19ನೇ ಶತಮಾನಕ್ಕೆ ಅಂದರೆ 1300 ವರ್ಷಗಳಿಗೆ ಸೇರಿದ 573 ಶಾಸಗಳಿದ್ದು, ನಾಡಿನ ಸಮಗ್ರ ಇತಿಹಾಸದ ಅಧ್ಯಯನಕ್ಕೆ ಆಧಾರಗಳಾಗಿವೆ. ಸಾಹಿತ್ಯ, ಕಲೆ, ಧರ್ಮ, ಸಮಾಜ ಜೀವನ, ಇವನ್ನೆಲ್ಲಾ ತಿಳಿಯಲು ಇಲ್ಲಿಯ ಶಾಸನಗಳು ಅತ್ಯಂತ ಉಪಯುಕ್ತವಾಗಿವೆ.

‘ಕನ್ನಡ, ಸಂಸ್ಕೃತ, ತಮಿಳು, ಮರಾಠಿ, ಮಾರ್ವಾಡಿ, ಮಹಾಜನಿ ಭಾಷೆಗಳಲ್ಲಿದ್ದು, ಎಲ್ಲಾ ಶಾಸನಗಳು ಜೈನ ಸಂಸ್ಕೃತಿಗೆ ಸೇರಿವೆ’ ಎಂದು ಇತಿಹಾಸ ಪ್ರಾಧ್ಯಾಪಕ ಜೀವಂಧರ ಕುಮಾರ್‌ ಹೋತಪೇಟೆ ತಿಳಿಸಿದರು.

ಕ್ರಿ.ಶ. 1889ರಲ್ಲಿ ಬೆಂಜಮಿನ್‌ ಲೂಯಿಸ್‌ ರೈಸ್‌ 144 ಶಾಸನ ಹುಡುಕಿ ‘ಎಪಿಗ್ರಾಫಿಯಾ ಕರ್ನಾಟಕ’ ಸಂಪುಟ ಪ್ರಕಟಿಸಿದಾಗ ಶ್ರವಣಬೆಳಗೊಳದ ಬಗ್ಗೆ ಮಾಹಿತಿ ತಿಳಿಯಿತು. ನಂತರ ಈ ಕಾರ್ಯವನ್ನು ಪುರಾತತ್ವ ಇಲಾಖೆಯ ನಿರ್ದೇಶಕ ಆರ್‌. ನರಸಿಂಹಾಚಾರ್ಯರು ಮುಂದುವರೆಸಿ 366 ಶಾಸನ ಶೋಧಿಸಿ 1923ರಲ್ಲಿ ಎಪಿಗ್ರಾಫಿಯಾ ಕರ್ನಾಟಕದ ಪರಿಷ್ಕೃತ ಸಂಪುಟ ಪ್ರಕಟಿಸಿದರು.

ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಬಿ.ಆರ್‌. ಗೋಪಾಲ್‌ 36 ಶಾಸನ ಶೋಧಿಸಿದರು. ಈ ಮೂರೂ ಜನರು ಶೋಧಿಸಿದ ಶಾಸನಗಳನ್ನು ಒಟ್ಟು ಸೇರಿಸಿ 3ನೇ ಪರಿಷ್ಕೃತ ಆವೃತ್ತಿಯನ್ನು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ 1973ರಲ್ಲಿ ಪ್ರಕಟಿಸಲಾಯಿತು. ಇದರಲ್ಲಿ ಪಟ್ಟಣದ ಚಂದ್ರಗಿರಿಯಲ್ಲಿ 271, ವಿಂಧ್ಯಗಿರಿಯಲ್ಲಿ 172, ಶ್ರವಣಬೆಳಗೊಳ ಊರಿನಲ್ಲಿ 80 ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ 50 ಶಾಸನಗಳಿವೆ.

ಈ ಎಲ್ಲಾ ಶಾಸನಗಳು ಬಂಡೆಗಲ್ಲು, ಸ್ತಂಭ, ದೇವಾಲಯ, ಶಿಲೆಯ ಮೇಲೆ ಹಾಗೂ ಲೋಹದ ವಿಗ್ರಹಗಳ ಪೀಠ ಭಾಗದಲ್ಲಿ ಕೊರೆಯಲ್ಪಟ್ಟಿದ್ದು, ಇವು ತಲಕಾಡಿನ ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಒಡೆಯರು ಈ ಧಾರ್ಮಿಕ ಕ್ಷೇತ್ರದೊಡನೆ ಸಂಪರ್ಕವನ್ನಿಟ್ಟುಕೊಂಡಿದ್ದರು ಎಂದು ತಿಳಿಸುತ್ತವೆ.

ಇಲ್ಲಿಯ ಶಾಸನಗಳನ್ನು 3 ವಿಧಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯದಾಗಿ ಜಿನ ಮುನಿಗಳ ಕುರಿತ ಶಾಸನದಲ್ಲಿ ಜೈನ ಆಚಾರ್ಯರು, ವಿದ್ವತ್‌, ತಪಸ್ಸು ಮತ್ತು ಸಲ್ಲೇಖನ ವಿಧಿಯಿಂದ ದೇಹ ತ್ಯಾಗ ಮಾಡಿದ ಬಗ್ಗೆ ವಿವರಗಳಿವೆ.

ಎರಡನೆಯದರಲ್ಲಿ ರಾಜರು, ಹೆಗ್ಗಡೆಗಳು ಮತ್ತು ದಂಡನಾಯಕರ ಕುರಿತದ್ದು. ಶೌರ್ಯ, ದಿಗ್ವಿಜಯ, ದಾನ, ಧರ್ಮ, ದತ್ತಿಗಳನ್ನು ನೀಡಿ ಬಸದಿ ನಿರ್ಮಿಸಿರುವುದು ಮತ್ತು ಧಾರ್ಮಿಕ ವಿಧಿಯಿಂದ ದೇಹ ತ್ಯಾಗ ಮಾಡಿದ ಬಗ್ಗೆ ಉಲ್ಲೇಖಿತವಾಗಿವೆ.

ಮೂರನೆಯದು ಸ್ತ್ರೀ ಕುರಿತಾಗಿದ್ದು, ಇವರು ರಾಜ ಪರಿವಾರಕ್ಕೆ ಸೇರಿದವರಾಗಿದ್ದಾರೆ. ಅವರ ರೂಪ, ಗುಣ, ಚಾರಿತ್ರ್ಯದ ವರ್ಣನೆ ಮತ್ತು ಅವರು ಬಿಟ್ಟ ದಾನ ದತ್ತಿ ಹಾಗೂ ಸಲ್ಲೇಖನದಿಂದ ದೇಹ ತ್ಯಾಗ ಮಾಡಿದ ಸಂಗತಿಗಳು ಉಲ್ಲೇಖಿಸಲಾಗಿದೆ.

ಪ್ರಾಚೀನ ಶಾಸನಗಳು ಚಂದ್ರಗಿರಿಯ ಚಿಕ್ಕಬೆಟ್ಟದಲ್ಲೇ ಇದ್ದು, 7ನೇ ಶತಮಾನದ 54 ಶಾಸನಗಳ ಪೈಕಿ 41 ಶಾಸನಗಳು ಸಲ್ಲೇಖನ ಮೂಲಕ ದೇಹ ತ್ಯಾಗ ಮಾಡಿದ ಕುರಿತಾಗಿದೆ. ರಾಷ್ಟ್ರಕೂಟರ 2 ಶಾಸನಗಳು, ಗಂಗರ ಕಾಲದ 10, ಕಲ್ಯಾಣ ಚಾಲುಕ್ಯರ ಕಾಲದ 3, ಹೊಯ್ಸಳರ ಕಾಲದ 63, ವಿಜಯನಗರದ 6, ಚಂಗಾಳ್ವರ 1 ಮತ್ತು ವಿವಿಧ 488 ಶಾಸನಗಳು ಇಲ್ಲಿವೆ.

6ನೇ ಶತಮಾನದ ಭದ್ರಬಾಹು ಕುರಿತ ಶಾಸನ ಅತ್ಯಂತ ಪ್ರಾಚೀನವಾಗಿದೆ. ಹಾಗೆಯೇ ಚಂದ್ರಗಿರಿಯಲ್ಲಿ ಕವಿ ರನ್ನ ಹಾಗೂ ಚಾವುಂಡರಾಯನ ಹಸ್ತಾಕ್ಷರಗಳ ಶಿಲಾ ಶಾಸನ ಎಲ್ಲರ ಗಮನ ಸೆಳೆಯುತ್ತಿವೆ.

ಕ್ರಿ.ಶ. 1180ರಲ್ಲಿ ಕವಿ ಬೊಪ್ಪಣನು ಬಾಹುಬಲಿಯ ಔನತ್ಯ, ಸೌಂದರ್ಯ ಮತ್ತು ಅತಿಶಯದ ಬಗ್ಗೆ ಗೊಮ್ಮಟ ಜಿನ ಸ್ತುತಿಯ ರಚನೆ ಮಾಡಿ ಶಾಸನದಲ್ಲಿ ಕೆತ್ತಿಸಿದ್ದಾನೆ. ಈ ಶಾಸನ ಗೊಮ್ಮಟೇಶ್ವರ ಸ್ವಾಮಿಯ ದ್ವಾರಪಾಲಕರ ಬಾಗಿಲ ಎಡಗಡೆ ನಿಲ್ಲಿಸಿದ್ದು, ಇದು ಕನ್ನಡದ ಪ್ರಥಮ ಶಿಲಾ ಶಾಸನ ಕಾವ್ಯವಾಗಿದೆ.

‘ಈ ವರೆಗೂ ಶ್ರವಣಬೆಳಗೊಳದ ಇತಿಹಾಸ, ಸಂಸ್ಕೃತಿ, ವಾಸ್ತು ಶಿಲ್ಪಗಳನ್ನು ಆಧರಿಸಿ ಡಾ. ಎಸ್‌.ಶೆಟ್ಟರ್‌, ಡಾ. ಬಿ.ವಿ.ಶಿರೂರು ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿಯ ಡಾ. ತಬಸನಂ ಪ್ರಬಂಧಗಳನ್ನು ಮಂಡಿಸಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ’ ಎಂದು ಹಿರಿಯ ಪತ್ರಕರ್ತ ಎಸ್‌.ಎನ್‌.ಅಶೋಕ್‌ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT