ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಕರ್ನಾಟಕವೇ ಮಾದರಿ

Last Updated 3 ಡಿಸೆಂಬರ್ 2017, 9:09 IST
ಅಕ್ಷರ ಗಾತ್ರ

ಕೊಪ್ಪ: ‘ನಮ್ಮದು ‘ಗುಜರಾತ್ ಮಾದರಿ’ ಎಂದು ಪ್ರಚಾರಕ್ಕೆ ಸೀಮಿತವಾದ ಆಡಳಿತವಲ್ಲ ‘ಅಭಿವೃದ್ಧಿಗೆ ಕರ್ನಾಟಕವೇ ಮಾದರಿ’ ಎಂಬುದನ್ನು ಸಾಬೀತುಪಡಿಸಿದ ಜನಪರ ಆಡಳಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಪುರಸಭಾ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಬ್ಲಾಕ್ ಕಾಂಗ್ರೆಸ್‌ನಿಂದ ಏರ್ಪಡಿಸಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ‘ಸರ್ವೋದಯ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು. ‘ನಾವು ಅಧಿಕಾರಕ್ಕೆ ಬರುವಾಗ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ 11ನೇ ಸ್ಥಾನದಲ್ಲಿತ್ತು. ಕಳೆದ ವರ್ಷ ನಾವು ಮೊದಲ ಸ್ಥಾನ ಗಳಿಸಿದ್ದೇವೆ.

ಈ ವರ್ಷವೂ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದೇವೆ. ಕಳೆದ ಚುನಾವಣೆ ವೇಳೆ ಮತದಾರರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದಲ್ಲದೆ, ಪ್ರಣಾಳಿಕೆಯಲ್ಲಿ ತಿಳಿಸದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಾಲ್ಕೂವರೆ ವರ್ಷ ಭ್ರಷ್ಠಾಚಾರ ರಹಿತ, ಸ್ಥಿರ ಸರ್ಕಾರ ನಡೆಸಿದ್ದೇವೆ.

ರಾಜ್ಯದ ಶೇ 90ರಷ್ಟು ಮಂದಿಗೆ ಒಂದಿಲ್ಲೊಂದು ಯೋಜನೆಗಳ ಮೂಲಕ ಸರ್ಕಾರದ ಸವಲತ್ತನ್ನು ತಲುಪಿಸಿದ್ದೇವೆ. ನಮ್ಮ ಸಾಧನೆಯ ಆಧಾರದ ಮೇಲೆ ಮುಂದಿನ ಚುನಾವಣೆ ಎದುರಿಸುತ್ತೇವೆ. ರಾಜ್ಯದ ಜನತೆ ನಮ್ಮನ್ನು ಬೆಂಬಲಿಸಲಿದ್ದು, ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ. ಅಪಪ್ರಚಾರ, ಮತೀಯ ಭಾವನೆ ಕೆರಳಿಸಿ ಅಧಿಕಾರಕ್ಕೇರುವ ಬಿಜೆಪಿ ನಾಯಕರ ಹಗಲುಗನಸು ನುಚ್ಚು ನೂರಾಗಲಿದೆ’ ಎಂದರು.

‘ಪ್ರಧಾನಿ ಮೋದಿಯವರ ಅಚ್ಚೇ ದಿನ್ ದೇಶದ ಜನತೆಗೆ ಈವರೆಗೂ ಬಂದಿಲ್ಲ. ಬರಲು ಸಾಧ್ಯವೂ ಇಲ್ಲ. ಅದೇನಿದ್ದರೂ ಅಂಬಾನಿ, ಅದಾನಿ ಜಯ್ ಷಾ, ರಾಮದೇವ್‍ರಂಥವರಿಗೆ ಸೀಮಿತವಾಗಿದೆ. ವರ್ಷಕ್ಕೆ 2 ಕೋಟಿಯಂತೆ 7 ಕೋಟಿ ಉದ್ಯೋಗ ನೀಡುವ ಭರವಸೆ ಹುಸಿಯಾಗಿದ್ದು, 7 ಲಕ್ಷ ಉದ್ಯೋಗವನ್ನೂ ನೀಡಿಲ್ಲ. ವಿದೇಶ ತಿರುಗಿದ್ದು, ಮನ್‍ಕೀ ಬಾತ್ ಆಡಿದ್ದೇ ಮೋದಿ ಸಾಧನೆ. ನಮ್ಮದೇನಿದ್ದರೂ ಕಾಮ್‍ಕಿ ಬಾತ್’ ಎಂದರು.

ರಾಜ್ಯದ ಜನ ಜಾತ್ಯತೀತ ತತ್ವವನ್ನು ಅಪ್ಪಿದ್ದಾರೆ, ಒಪ್ಪಿದ್ದಾರೆ, ಸಮಾಜ ಒಡೆಯುವ ಕೋಮುವಾದಿಗಳಿಗೆ ಇಲ್ಲಿ ಅವಕಾಶ ಇಲ್ಲ. ಮೋದಿ, ಅಮಿತ್ ಷಾ ತಂತ್ರಗಾರಿಕೆ ಇಲ್ಲಿ ನಡೆಯದು. ನಮ್ಮ ಜನಪರ ಕೆಲಸಗಳು ಜನರ ಮನಸ್ಸಿನಲ್ಲಿವೆ. ಅದನ್ನು ಅಳಿಸಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಮೂಡಿದೆ’ ಎಂದರು.

ಕ್ಷೇತ್ರ ಕಾಂಗ್ರೆಸ್ ಮುಖಂಡ ಟಿ.ಡಿ. ರಾಜೇಗೌಡ ಸ್ವಾಗತಿಸಿದರು. ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಪ್ರಾಸ್ತಾವಿಕ ಮಾತನಾಡಿದರು. ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆರ್. ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಮಾಜಿ ಕೇಂದ್ರ ಸಚಿವೆ ತಾರಾದೇವಿ ಸಿದ್ಧಾರ್ಥ, ಮಾಜಿ ಸಚಿವ ಬೇಗಾನೆ ರಾಮಯ್ಯ, ತರೀಕೆರೆ ಶಾಸಕ ಶ್ರೀನಿವಾಸ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮೀಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ಮುಖಂಡರಾದ ಡಾ. ಕೆ.ಪಿ. ಅಂಶುಮಂತ್, ಮಾರನಕೊಡಿಗೆ ನಟರಾಜ್, ಗೋಪಾಲ ಭಂಡಾರಿ, ಶಾಂತೇಗೌಡ, ಎ.ಎನ್. ಮಹಮ್ಮದ್, ಬಿ.ಸಿ. ಗೀತ, ಬಿಸಿ. ಸಂತೋಷ್ ಮುಂತಾದವರಿದ್ದರು. ಎಚ್.ಎಸ್. ಇನೇಶ್ ಕಾರ್ಯಕ್ರಮ ನಿರೂಪಿಸಿದರು.

ವಿಶಿಷ್ಟ ರೀತಿಯಲ್ಲಿ ಅಭಿನಂದನೆ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯ ಯೋಜನೆಗಳಾದ ಅನ್ನಭಾಗ್ಯದ ಫಲಾನುಭವಿಗಳ ಪರವಾಗಿ ಅಕ್ಕಿಯಲ್ಲಿ ಬರೆದ ಕೃತಜ್ಞತಾ ಪತ್ರ, ರೈತರ ಸಾಲ ಮನ್ನಾ ಮಾಡಿದ್ದಕ್ಕಾಗಿ ನೇಗಿಲಿನ ಪ್ರತಿಕೃತಿ ನೀಡಿ ಗೌರವಿಸಲಾಯಿತು. ನಾಡಪ್ರಭು ಕೆಂಪೇಗೌಡ, ನಾರಾಯಣಗುರು, ವಿಶ್ವಕರ್ಮ, ಟಿಪ್ಪು ಸುಲ್ತಾನ್ ಜಯಂತಿಗಳನ್ನು ಸರ್ಕಾರಿ ಕಾರ್ಯಕ್ರಮವಾಗಿಸಿದ್ದಕ್ಕೆ ಒಕ್ಕಲಿಗ, ಬಿಲ್ಲವ, ವಿಶ್ವಕರ್ಮ, ಮುಸ್ಲಿಂ ಸಮುದಾಯದ ಪ್ರಮುಖರು, ದೇವಸ್ಥಾನಗಳ ತಸ್ತೀಕ್ ಹಣ ಹೆಚ್ಚಿಸಿದ್ದಕ್ಕೆ ಬ್ರಾಹ್ಮಣ ಸಮುದಾಯದವರು ಗೌರವಿಸಿದರು.

ಗಿರಿಜನರಿಗೆ ಪೌಷ್ಟಿಕ ಆಹಾರ ಯೋಜನೆ ಕಲ್ಪಿಸಿದ್ದಕ್ಕಾಗಿ ಗಿರಿಜನ ಸಮುದಾಯದವರು ಮಂಡಾಳೆ, ಕಂಬಳಿ ಹೊದಿಸಿ ಗೌರವಿಸಿದರು. ಆಶ್ರಯ, ಮಾತೃಪೂರ್ಣ, ವಿದ್ಯಾಸಿರಿ ಫಲಾನುಭವಿಗಳು ಸನ್ಮಾನಿಸಿದರು. ಡಿಸಿಸಿ ಬ್ಯಾಂಕ್ ಪರವಾಗಿ ಅಧ್ಯಕ್ಷ ಎಸ್.ಎಲ್. ಭೋಜೇಗೌಡ ಸನ್ಮಾನಿಸಿದರು. ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗ ಕಾರ್ಯಕ್ರಮದ ಪ್ರಚಾರದ ಬ್ಯಾನರ್‍ಗಾಗಿ ಮೀಸಲಿಟ್ಟಿದ್ದ ₹1 ಲಕ್ಷ ಮೊತ್ತದ ಚೆಕ್ ನೀಡಿದರು.

* * 

ನಮ್ಮ ಸರ್ಕಾರ ದೇಶದಲ್ಲೇ ಪ್ರಥಮವಾಗಿ ದಲಿತರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸಿದೆ. ಬಿಜೆಪಿ ಸರ್ಕಾರ ಇದ್ದಾಗ ₹25ಸಾವಿರ ಕೋಟಿ ಇದ್ದ ಎಸ್‌ಸಿಟಿಬಿ ಅನುದಾನವನ್ನು ₹86 ಸಾವಿರ ಕೋಟಿಗೆ ಹೆಚ್ಚಿಸಿದೆ.
ಸಿದ್ದರಾಮಯ್ಯ
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT