ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಸ್ಥಗಿತ: ಜನರ ಪರದಾಟ

Last Updated 3 ಡಿಸೆಂಬರ್ 2017, 9:10 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಅಭಿವೃದ್ಧಿಯ ನೆಪದಲ್ಲಿ ಅಗೆದು ಹಾಕಿರುವ ರಸ್ತೆಗಳು, ಅಪಾಯಕ್ಕೆ ಆಹ್ವಾನ ನೀಡುವಂತೆ ಬಾಯ್ತೆರೆದು ನಿಂತ ಚರಂಡಿಗಳು, ಮೂಗು ಮುಚ್ಚಿಕೊಂಡು ಓಡಾಡುವ ಅಸಹನೀಯ ವಾತಾವರಣ ನಿರ್ಮಿಸಿರುವ ಕೊಳಚೆ ನೀರು, ಬೀದಿಯಲ್ಲಿ ಕಾಲಿಟ್ಟರೆ ಮೈಯೆಲ್ಲ ಮೆತ್ತಿಕೊಳ್ಳುವ ದೂಳು...

ಇದು ತಾಲ್ಲೂಕಿನ ಹಂಗಳ ಗ್ರಾಮದ ಬೀದಿಗಳ ಪರಿಸ್ಥಿತಿ. ಗ್ರಾಮದ ಬೀದಿಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿ ವಿಳಂಬವಾಗಿದ್ದು, ಬಡಾವಣೆಯ ಜನರು ಓಡಾಡಲು ರಸ್ತೆ ಇಲ್ಲದೆ ಪರಿತಪಿಸುವಂತಾಗಿದೆ.

ಕಾಂಕ್ರಿಟ್ ಹಾಕುವ ಕಾರ್ಯಕ್ಕಾಗಿ ಪಂಚಾಯಿತಿಯಿಂದ ಗ್ರಾಮದ ಪ್ರಮುಖ ರಸ್ತೆಯಾದ ಮಾರಿಗುಡಿ ರಸ್ತೆಯನ್ನು ಎರಡು ತಿಂಗಳ ಹಿಂದೆ ಅಗೆಯಲಾಗಿದೆ. ಆದರೆ, ಆರಂಭದಲ್ಲಿ ಚುರುಕಿನಿಂದ ನಡೆದ ಕೆಲಸ ಬಳಿಕ ಸ್ಥಗಿತವಾಗಿದ್ದು, ಓಡಾಡಲು ತೀವ್ರ ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಒಂದು ತಿಂಗಳಿನಿಂದ ಈ ರಸ್ತೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಮುಖ್ಯ ರಸ್ತೆಗೆ ಅಥವಾ ಅಂಗಡಿ ಮುಂಗಟ್ಟುಗಳಿಗೆ ಬರಬೇಕಾದರೆ ಬಳಸಿ ಬರಬೇಕು. ಶಾಲಾ ಮಕ್ಕಳು ಶಾಲೆಗಳಿಗೆ ಹೋಗಲು ತೊಂದರೆಯಾಗುತ್ತಿದೆ. ವಯಸ್ಸಾದವರು ಇಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಗುಂಡಿಗಳೆಲ್ಲ ನೀರು ನಿಂತು ಸೊಳ್ಳೆ ಉತ್ಪತ್ತಿಯ ತಾಣವಾಗಿವೆ. ಕೂಡಲೇ ಕೆಲಸ ಪ್ರಾರಂಭಿಸುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರೊಬ್ಬರು ದೂರಿದರು.

‘₹ 10 ಲಕ್ಷ ಅನುದಾನದಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿ ಕಾಮ ಗಾರಿ ಪ್ರಾರಂಭಿಸಿ ನಂತರ ಜಿಲ್ಲಾ ಪಂಚಾಯಿತಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ. ಇದರಿಂದ ಒಂದು ತಿಂಗಳಿನಿಂದ ಕೆಲಸ ನಿಂತು ಹೋಗಿದೆ. ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ರೀತಿಯ ಅಭಿವೃದ್ಧಿಯಿಂದ ಪ್ರಯೋಜನವೇನು’ ಎಂದು ಬಿಜೆಪಿ ಯುವ ಮುಖಂಡ ಪ್ರಣಯ್ ಪ್ರಶ್ನಿಸಿದರು.

‘ಸದ್ಯದಲ್ಲೇ ಕೆಲಸ ಪ್ರಾರಂಭಿಸಲಾಗುವುದು. ಅನುದಾನದ ಕೊರತೆಯಿಂದ ಕೆಲಸ ವಿಳಂಬವಾಗಿತ್ತು’ ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ಕುಮಾರ ಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT