7

‘ಸಾಧಿಸಲೇಬೇಕು ಎಂಬ ಛಲವಿದ್ದಲ್ಲಿ ಅಂಗವೈಕಲ್ಯ ಅಡ್ಡಿಯಾಗದು’

Published:
Updated:
‘ಸಾಧಿಸಲೇಬೇಕು ಎಂಬ ಛಲವಿದ್ದಲ್ಲಿ ಅಂಗವೈಕಲ್ಯ ಅಡ್ಡಿಯಾಗದು’

ಭಾಲ್ಕಿ: ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂಬ ಅಚಲ ನಿರ್ಧಾರ, ಆತ್ಮವಿಶ್ವಾಸ, ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಮನೋಸ್ಥೈರ್ಯ ಇದ್ದಲ್ಲಿ ಗುರಿ ಈಡೇರಿಕೆಗೆ ಅಂಗವೈಕಲ್ಯ ಯಾವತ್ತೂ ಅಡ್ಡಿಯಾಗದು ಎಂಬುದನ್ನು ಏಕಾಂಗಿಯಾಗಿ ಶಾಲೆ ಸ್ಥಾಪಿಸುವುದರ ಮೂಲಕ ಸಾಧಿಸಿ ತೋರಿಸಿದ್ದಾರೆ ಸಂತೋಷ ಭಾಲ್ಕೆ.

‘ತಾಲ್ಲೂಕಿನಿಂದ 18 ಕಿ.ಮೀ ದೂರದ ಮದಕಟ್ಟಿ ಇವರ ಗ್ರಾಮ. ನಮ್ಮದು ಬಡ ಕುಟುಂಬ. ಕೇವಲ ಒಂದು ಎಕರೆ ಭೂಮಿ ಇದೆ. ತಂದೆ–ತಾಯಿಗೆ ಅವರಿವರ ಹತ್ತಿರ ಕೂಲಿ–ನಾಲಿ ಮಾಡಿ ಮೂವರು ಮಕ್ಕಳನ್ನು ಸಾಕುವುದೇ ದುಸ್ತರ. ಆದರೆ, ನಮ್ಮಂತೆ ಮಕ್ಕಳು ಬದುಕಿನಲ್ಲಿ ಕಷ್ಟಪಡಬಾರದು ಎಂಬ ಉದ್ದೇಶದಿಂದ ಹಿರಿಯ ಮಗನಾದ ನನಗೆ ಪಿಯುಸಿ. ಡಿ.ಇಡಿ., ಬಿ.ಎ., ಬಿ.ಇಡಿ. ಹಾಗೂ ತಮ್ಮ, ತಂಗಿಗೆ ಪಿಯುವರೆಗೆ ಓದಿಸಿದ್ದಾರೆ. ಅವರ ತ್ಯಾಗ, ಪ್ರೀತಿಯ ಫಲವಾಗಿಯೇ ಇಂದು ನಾನು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಗ್ರಾಮದ ನೂರಾರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗಿದೆ ಎಂದು ಸಂತಸದಿಂದ ನುಡಿಯುತ್ತಾರೆ ಸಂತೋಷ ಭಾಲ್ಕೆ.

ಶಾಲೆ–ಕಾಲೇಜು ದಿನಗಳಲ್ಲಿ ಅಂಗವೈಕಲ್ಯ ಕಂಡು ಅಪಹಾಸ್ಯ ಮಾಡಿ ಮನ ನೋಯಿಸಿದವರು, ಆತ್ಮವಿಶ್ವಾಸ ಕುಗ್ಗಿಸಿದವರು ಅನೇಕರು. ಅನುಕಂಪ ತೋರಿಸಿ ಸಾಧನೆಗೆ ಸ್ಪೂರ್ತಿ ನೀಡಿದವರು ಬೆರಳೆಣಿಕೆಯಷ್ಟು ಜನ ಮಾತ್ರ. ನಿಂದನೆ, ಅನುಕಂಪದ ಬಗ್ಗೆ ಎಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಪಾಲಕರ ಪ್ರೀತಿಯ ಪ್ರೋತ್ಸಾಹ ದಿಂದ ಇತರರಿಗಿಂತ ಅಂಗವಿಕಲರೇನು ಕಡಿಮೆ ಇಲ್ಲ ಎಂದು ತೋರಿಸಬೇಕು ಎಂಬ ಉತ್ಕಟ ಬಯಕೆ ನನ್ನದಾಗಿತ್ತು. ಡಿ.ಇಡಿ., ಬಿ.ಇಡಿ ತರಬೇತಿ ಮುಗಿಸಿದ ನಂತರ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿ ಸ್ವಲ್ಪ ಅಂಕಗಳ ಅಂತರದಲ್ಲಿ ವಿಫಲನಾದೆ. ಮುಂದೇನು ಎನ್ನುವ ಚಿಂತೆ ನನ್ನನ್ನು ಬಲವಾಗಿ ಕಾಡತೊಡಗಿತು. ಆವಾಗ ಹೊಳೆದಿದ್ದೆ ಶಾಲೆ ಸ್ಥಾಪನೆಯ ಚಿಂತನೆ ಎಂದು ವಿವರಿಸುತ್ತಾರೆ ಭಾಲ್ಕೆ.

2008–09ನೇ ಸಾಲಿನಲ್ಲಿ ಗ್ರಾಮದ ಒಂದು ಸಣ್ಣ ಬಾಡಿಗೆ ಕೋಣೆಯಲ್ಲಿ ಏಕಾಂಗಿಯಾಗಿ ಜ್ಞಾನಭಾರತಿ ಶಿಶು ವಿಹಾರ ಪ್ರಾರಂಭಿಸಿದೆ. ಆರಂಭದಲ್ಲಿ ಮಕ್ಕಳ ಸಂಖ್ಯೆ 40 ಇತ್ತು. ವರ್ಷದಿಂದ ವರ್ಷಕ್ಕೆ ಹಂತ ಹಂತವಾಗಿ ಒಂದೊಂದು ತರಗತಿಗಳನ್ನು ಹೆಚ್ಚಿಸುತ್ತಾ ಬಂದೆ. ಸದ್ಯ ಎಲ್‌ಕೆಜಿ ಯಿಂದ 6ನೇ ತರಗತಿವರೆಗೆ ಶಾಲೆ ನಡೆಸುತ್ತಿದ್ದು, ಒಟ್ಟು 210 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಎಂಟು ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಿ, 10ನೇ ವರೆಗೆ ತರಗತಿ ವಿಸ್ತರಿಸಬೇಕು ಎಂಬ ಯೋಚನೆ ಇದೆ ಎನ್ನುತ್ತಾರೆ ಸಂತೋಷ.

ಶಾಲೆಯಲ್ಲಿ ಸ್ನೇಹಮಯ ವಾತಾವರಣ ಇದೆ. ಗಣಿತ ಶಿಕ್ಷಕ, ಶಾಲೆಯ ಮುಖ್ಯಶಿಕ್ಷಕ ಆಗಿರುವ ಸಂತೋಷ ಸರ್‌ ಅವರು ಎಲ್ಲ ಸಹ ಶಿಕ್ಷರೊಂದಿಗೆ ಆತ್ಮೀಯವಾಗಿ ಬೆರೆಯುತ್ತಾರೆ. ಶೈಕ್ಷಣಿಕ ಕಾರ್ಯ, ಪಾಠ ಬೋಧನೆಯ ಕೌಶಲಗಳ ಕುರಿತು ಆಗಾಗೆ ಸಲಹೆ ನೀಡುತ್ತಾರೆ ಎಂದು ಸಹ ಶಿಕ್ಷಕರಾದ ತಾಜೋದ್ದಿನ್‌ ಎಫ್‌.ಪಠಾಣ, ಆನಂದ ಎನ್‌. ಖ್ಯಾಡೆ, ನೀಲಾಂಬಿಕಾ ಎನ್‌.ಗೌಡನೋರ್‌, ಸುಜ್ಞಾನಾದೇವಿ ಹೂಗಾರ ತಿಳಿಸುತ್ತಾರೆ.

ಜಾನಪದ ವಲಯ ಘಟಕದ ಅಧ್ಯಕ್ಷರೂ ಆಗಿರುವ ಸಂತೋಷ ಅವರ ಹತ್ತಿರ ಒಳ್ಳೆಯ ಸಂಘಟನಾ ಚಾತುರ್ಯ, ನಾಯಕತ್ವ, ಮುಂದಾಲೋಚನೆ ಗುಣ ಇದೆ. ಅದೆಷ್ಟೋ ಅಂಗವಿಕಲರಿಗೆ ತಮ್ಮ ಬದುಕು ನಡೆಸುವುದೇ ಕಷ್ಟವಾಗಿದೆ. ಅಂತಹದರಲ್ಲಿ ತಮ್ಮ ಶಾಲೆಯಲ್ಲಿ ಎಂಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿರುವುದು ಮಾದರಿ ಕಾರ್ಯವಾಗಿದೆ ಎಂದು ತಾಲ್ಲೂಕು ಜಾನಪದ ಪರಿಷತ್‌ ಅಧ್ಯಕ್ಷ ಅಶೋಕ ಮೈನಾಳೆ ನುಡಿಯುತ್ತಾರೆ.

* * 

ಅಂಗವಿಕಲತೆ ಇರುವುದು ದೇಹಕ್ಕೆ ಮಾತ್ರ. ಮನಸ್ಸಿಗೆ ಅಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಸಮಾಜ ಅಂಗವಿಕಲರನ್ನು ತಮಗಿಂತ ಭಿನ್ನ ಎಂದು ಕಾಣಬಾರದು.

ಸಂತೋಷ ಭಾಲ್ಕೆ,

ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry