ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿಯೇ ಆಗಿಲ್ಲ, ಉದ್ಘಾಟನೆಗೆ ತಯಾರಿ

Last Updated 3 ಡಿಸೆಂಬರ್ 2017, 9:51 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಟ್ಟಣದಲ್ಲಿ ನಿರ್ಮಾಣವಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಇದೇ 15ರಂದು ಉದ್ಘಾಟಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಎಂ.ಸಿ. ಮೋಹನಕುಮಾರಿ ಹೇಳಿದ್ದಾರೆ. ಅವರ ತಿಂಗಳ ಅಧಿಕೃತ ವೇಳಾಪಟ್ಟಿಯಲ್ಲಿಯೂ ಉದ್ಘಾಟನೆಯ ಕಾರ್ಯಕ್ರಮ ನಿಗದಿಯಾಗಿದೆ. ಆದರೆ, ಆಸ್ಪತ್ರೆಗೆ ಅಗತ್ಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಯ ನೇಮಕಾತಿ ಇನ್ನೂ ಆಗಿಲ್ಲ.

ಕಾಮಗಾರಿ ಮುಗಿದ 5 ತಿಂಗಳು ಕಳೆದ ಬಳಿಕ ಉದ್ಘಾಟನೆಗೆ ತಯಾರಿ ನಡೆಸಲಾಗಿದೆ. ಪ್ರಸ್ತುತ ಹಳೆಯ ಸಾರ್ವಜನಿಕ ಆಸ್ಪತ್ರೆಯಲ್ಲೇ ತಾಯಿ ಮತ್ತು ಮಕ್ಕಳ ಚಿಕಿತ್ಸೆ ಹಾಗೂ ಹೆರಿಗೆಯನ್ನು ಮಾಡಿಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಇದ್ದಿದ್ದರಿಂದ, ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು ಈ ಆಸ್ಪತ್ರೆಯನ್ನು ಮಂಜೂರು ಮಾಡಿಸಿದ್ದರು.

ಆರೋಗ್ಯ ಮತ್ತು ಕುಟುಂಬ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸುಮಾರು 2 ವರ್ಷದ ಹಿಂದೆ ಆರಂಭವಾದ ಆಸ್ಪತ್ರೆ ₹10 ಕೋಟಿ ವೆಚ್ಚದಲ್ಲಿ ಸಿದ್ಧಗೊಂಡಿದೆ. ತಾಯಿ ಮತ್ತು ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳು ಲಭ್ಯವಾಗಲಿವೆ. 60 ಸುಸಜ್ಜಿತ ಹಾಸಿಗೆಗಳಿವೆ. ಅಲ್ಲದೆ, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಮಾಡಲಾಗಿದೆ.

ಆದರೆ, ಆಸ್ಪತ್ರೆಗೆ ವೈದ್ಯರು, ದಾದಿಯರು ಮತ್ತು ಇತರೆ ಸಿಬ್ಬಂದಿಯ ನೇಮಕಾತಿ ಇನ್ನೂ ನಡೆದಿಲ್ಲ. ವೈದ್ಯರ ನೇಮಕಾತಿಯಾಗದೆಯೇ ಆಸ್ಪತ್ರೆ ಉದ್ಘಾಟಿಸಲು ಮುಂದಾಗಿದ್ದಾರೆ. ಆಸ್ಪತ್ರೆ ಅಗತ್ಯವಿರುವ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ, ಸಾಧನ ಉಪಕರಣಗಳು ಎಲ್ಲವೂ ಲಭ್ಯವಾದ ಬಳಿಕವೇ ಉದ್ಘಾಟನೆ ಮಾಡಬೇಕಲ್ಲವೇ ಎನ್ನುವುದು ಸ್ಥಳೀಯರ ಪ್ರಶ್ನೆ.

ನೇಮಕಾತಿ ನಡೆಯದ ಕಾರಣದಿಂದಲೇ ಕಾಮಗಾರಿ ಮುಗಿದು ತಿಂಗಳುಗಳು ಕಳೆದರೂ ಉದ್ಘಾಟನೆ ನಡೆದಿರಲಿಲ್ಲ. ನೂತನ ಕಟ್ಟಡದಲ್ಲಿ ಪೀಠೋಪಕರಣ ಮತ್ತು ವೈದ್ಯಕೀಯ ಪರೀಕ್ಷಾ ಯಂತ್ರಗಳನ್ನು ಜೋಡಿಸಲಾಗಿದೆ. ಆಸ್ಪತ್ರೆಗೆ ಬೇಕಾದ ಸೌಲಭ್ಯಗಳನ್ನು ಆಳವಡಿಸಲಾಗಿದೆ. ಯಾವ ಸೌಲಭ್ಯ ಕಲ್ಪಿಸಿದ್ದರೂ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಪ್ರಯೋಜನವಿಲ್ಲ. ಆದರೂ ಉದ್ಘಾಟನೆ ನೆರವೇರಿಸಲು ಆತುರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ಆಸ್ಪತ್ರೆಗೆ 2 ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, 1 ಅರವಳಿಕೆ ಪರಿಣತರು, 8 ಸ್ಟಾಫ್‌ ನರ್ಸ್‌, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸುಮಾರು 30 ಸಿಬ್ಬಂದಿಯ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT