ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಯುವವರ ಕಡೆಗೆ ದೃಷ್ಟಿ ಇರಲಿ

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಹೊಸ ಸಿಲೆಬಸ್ ಮಾಡುವುದು, ಸರಿಯಾದ ರೀತಿಯಲ್ಲಿ ಹೇಳಬೇಕು ಅಂದರೆ ಒಂದು ಹೊಸ ಕರಿಕ್ಯುಲಂ ಮಾಡುವುದು, ಬಹಳ ರೇಜಿಗೆಯ ಸಂಗತಿ. ಒಂದು ಹೊಸ ಸಿಲೆಬಸ್ ಎಂದರೆ ಈಗಿರುವ ಅಂಶಗಳ ಬದಲಿಗೆ ಹೊಸ ಅಂಶಗಳನ್ನು ಸೇರಿಸುವುದು, ಈಗಿರುವ ಪುಸ್ತಕಗಳ ಪಟ್ಟಿಯ ಬದಲು ಹೊಸದೊಂದು ಪಟ್ಟಿಯನ್ನು ನೀಡುವುದು ಮತ್ತು ಈಗಿರುವ ವಿಷಯಗಳ ಜೊತೆಗೆ ಹೊಸದಾಗಿ ತಿಳಿವಳಿಕೆಗೆ ಬಂದ ವಿಷಯಗಳನ್ನು ಸೇರಿಸುವುದು, ಒಟ್ಟಾರೆಯಾಗಿ ಒಂದು ರೀತಿಯಲ್ಲಿ ಅಪ್‌ಡೇಟ್‌ ಮಾಡುವುದು ಎನ್ನುವುದು ಸದ್ಯದ ಕ್ರಮ.

ಆದರೆ ಇದು ಒಂದು ಪಾಠಕ್ರಮ ಅಂದರೆ ಏನು, ಅದರಿಂದ ಏನು ಸಾಧಿಸಬೇಕು, ಅದರ ಪ್ರಯೋಜನ ಏನು ಎನ್ನುವ ವಿಚಾರದ ಬಗ್ಗೆ ಗಮನ ಹರಿಸುವ ರೀತಿಯ ಕೆಲಸವಲ್ಲ. ನಿಜಕ್ಕೂ ನಮ್ಮಲ್ಲಿ ಪಾಠಕ್ರಮ ಎಂದರೆ ಪಾಠ ಮಾಡಲು ಇರುವ ಮೇಷ್ಟ್ರು ಏನನ್ನು ಪಾಠ ಮಾಡಬೇಕು ಎನ್ನುವುದಕ್ಕೆ ಇರುವ ಒಂದು ಸಾಮಾನು ಚೀಟಿಯ ರೀತಿಯ ಪಟ್ಟಿ ಎಂದುಕೊಂಡಿರುವ ಮನೋಭಾವವೇ ಹೆಚ್ಚು. ಆದರೆ ಒಂದು ಒಳ್ಳೆಯ ಸಿಲೆಬಸ್ ಇರುವುದು ಮೇಷ್ಟ್ರು ಏನನ್ನು ಪಾಠ ಮಾಡಬೇಕು ಎಂದು ಹೇಳುವುದಕ್ಕಷ್ಟೇ ಅಲ್ಲ. ಅದಕ್ಕೆ ಇನ್ನೂ ಮಹತ್ವದ ಒಂದು ಉದ್ದೇಶ ಇದೆ. ಆ ಉದ್ದೇಶ ಸರಳವೂ ಹೌದು, ಈಡೇರಿಸಲು ಕಷ್ಟವಾದದ್ದೂ ಹೌದು. ಪಾಠಕ್ರಮದ ಉದ್ದೇಶ ವಿದ್ಯಾರ್ಥಿಗಳು ಕಲಿಯಬೇಕಾದ ವಿದ್ಯೆ ಏನು ಮತ್ತು ಅದನ್ನು ಸರಿಯಾಗಿ ಕಲಿಯುವ ಕಲಿಸುವ ಕ್ರಮ ಮತ್ತು ಕಲಿಸಲು ಬೇಕಾದ ಸರಕುಗಳು ಏನು ಎಂದು ಹೇಳುವುದು.

ಒಂದು ಉದಾಹರಣೆಗೆ, ರಾಜಕೀಯ ಶಾಸ್ತ್ರದಲ್ಲಿ ವಿದ್ಯಾರ್ಥಿಗಳು ರಾಜ್ಯ ಎನ್ನುವ ಸಂಸ್ಥೆಯ ಕುರಿತು ಕಲಿಯುತ್ತಿದ್ದಾರೆ ಎಂದುಕೊಳ್ಳಿ. ಈಗಿನ ನಮ್ಮ ಸಿಲೆಬಸ್‌ಗಳು ಹೆಚ್ಚಿನವು ಮಾಡುವ ಕೆಲಸ ಏನೆಂದರೆ, ರಾಜ್ಯ ಎನ್ನುವ ಪರಿಕಲ್ಪನೆಯ ವಿವರಣೆ, ರಾಜ್ಯ ಎನ್ನುವ ಪರಿಕಲ್ಪನೆಯ ವಿವಿಧ ಪ್ರಕಾರಗಳು, ರಾಜ್ಯ ಎನ್ನುವ ಸಂಸ್ಥೆಯ ಉಗಮ ಮತ್ತು ವಿಕಾಸ ಮತ್ತು ರಾಜ್ಯದ ಕುರಿತು ವಿವಿಧ ಚಿಂತಕರು ಹೇಳಿರುವ ವಿಚಾರಗಳ ಒಂದು ಪಟ್ಟಿ ಇಂತಹ ಕೆಲವು ವಿಚಾರಗಳನ್ನು ಸೇರಿಸುವುದು.

ಇದನ್ನು ನೋಡಿದರೆ, ‘ಹೌದು, ಇಷ್ಟು ಸಾಕಲ್ಲ, ಇನ್ನೆಷ್ಟು ವಿಚಾರ ಬೇಕು? ಅದೂ ಯುವಕರಾದ ಕಾಲೇಜು ಹುಡುಗರಿಗೆ ಮೊದಲು ಇಷ್ಟು ತಿಳಿಯಲಿ, ಆಮೇಲೆ ಮಿಕ್ಕಿದ್ದು ತಿಳಿಸಿದರೆ ಆಯಿತು’ ಎನ್ನುವ ಮನೋಭಾವ ಬೇರೆ. ಆದರೆ ಹೀಗೇ ಅಧ್ಯಯನ ಮಾಡುವುದರಿಂದ ‘ಏನು ತಿಳಿದ ಹಾಗಾಯಿತು’ ಎನ್ನುವುದಂತೂ ಗೊತ್ತಾಗುವುದಿಲ್ಲ.

ಇದರ ಬದಲು ಇನ್ನೊಂದು ರೀತಿಯಿಂದ ಇದೇ ವಿಚಾರವನ್ನು ಗಮನಿಸಿ. ರಾಜ್ಯ ಅಥವಾ ಸ್ಟೇಟ್ ಎನ್ನುವ ಪರಿಕಲ್ಪನೆ ಯಾವ ರೀತಿಯ ಉದಾಹರಣೆಗಳಲ್ಲಿ ಒಂದು ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ? ಒಂದು ಉದಾಹರಣೆ, ಇವತ್ತಿನ ಕಾಶ್ಮೀರದ ಉದಾಹರಣೆ; ಅದರಲ್ಲೂ ವಿಶೇಷವಾಗಿ ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಆಜಾದ್ ಕಾಶ್ಮೀರ ಎಂದು ಕರೆಯಲಾಗುವ ಪ್ರದೇಶದ ಉದಾಹರಣೆ. ಅಥವಾ ಸಿರಿಯಾದ ಉದಾಹರಣೆ, ಅಥವಾ ಇತ್ತೀಚಿನವರೆಗೂ ತಾಲಿಬಾನಿಗಳ ಹಿಡಿತದಲ್ಲಿದ್ದ ಅಫ್ಘಾನಿಸ್ತಾನದ ಉದಾಹರಣೆ.

ಇಲ್ಲೆಲ್ಲಾ ಯಾವುದೋ ಒಂದು ರೀತಿಯ ಆಳ್ವಿಕೆ ಇದ್ದರೂ, ಈ ದೇಶಗಳನ್ನು ಭಾರತ, ಇಂಗ್ಲೆಂಡ್‌ ಅಥವಾ ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಇಂತಹ ದೇಶಗಳಿಗೆ ಹೋಲಿಸಿದಾಗ ಇವುಗಳು ಒಂದು ಅಸಲಿಯಾದ ಸ್ಟೇಟ್ ಅಥವಾ ರಾಜ್ಯ ಎಂದು ಪರಿಗಣಿಸುವುದು ಕಷ್ಟ. ಯಾಕೆ ಹೀಗೆ? ಅಂದಮೇಲೆ, ಯಾವ ಕಾರಣದಿಂದ, ಭಾರತ–ಪಾಕಿಸ್ತಾನಗಳನ್ನು ಸ್ಟೇಟ್ ಎಂದು ಒಪ್ಪಿಕೊಳ್ಳುವ ನಾವು ಅಫ್ಘಾನಿಸ್ತಾನ ಮತ್ತು ಸಿರಿಯಾ, ಕುರ್ದಿಸ್ತಾನ ಮತ್ತು ಪ್ಯಾಲೆಸ್ಟೀನ್‌, ಆಜಾದ್ ಕಾಶ್ಮೀರ ಮುಂತಾದವನ್ನು ಸ್ಟೇಟ್ ಎಂದು ಕರೆಯುವುದಕ್ಕೆ ಹಿಂದೇಟು ಹಾಕುತ್ತಿದ್ದೇವೆ. ಹಾಗಾದರೆ, ಸ್ಟೇಟ್ ಎಂದರೆ ನಿಜಕ್ಕೂ ಏನು? ಈ ಪರಿಕಲ್ಪನೆಯ ಕೇಂದ್ರ ಸೆಲೆ ಏನು?

ಇಂತಹ ಇನ್ನೂ ಹಲವು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಸರಿಯಾದ ಉತ್ತರಗಳನ್ನು ಕಂಡುಕೊಳ್ಳುವ ಕ್ಷಮತೆಯನ್ನು ಅವರಲ್ಲಿ ಬೆಳೆಸುವುದು, ಮತ್ತೂ ಮುಖ್ಯವಾಗಿ ಇಂತಹ ಇನ್ನು ಹಲವು ಪ್ರಶ್ನೆಗಳನ್ನು ಅವರೇ ಎತ್ತುವಂತೆ ಮಾಡುವುದು, ಇದನ್ನು ಆಗಮಾಡುವುದು ಹೇಗೆ ಎನ್ನುವುದು ರಾಜ್ಯಶಾಸ್ತ್ರದ ಪಾಠಕ್ರಮದ ಒಂದು ಗುರಿ ಎಂದಿಟ್ಟುಕೊಂಡರೆ, ಈಗ ಇಂತಹ ಕ್ಷಮತೆಯನ್ನು ಬೆಳೆಸಲು ಯಾವ ಕ್ರಮ ಅನುಸರಿಸಬೇಕು. ಅದಕ್ಕೆ, ವಿದ್ಯಾರ್ಥಿಗಳು ಏನನ್ನು ಓದಬೇಕು, ಏನನ್ನು ವಿಮರ್ಶಾತ್ಮಕವಾಗಿ ಅವಲೋಕಿಸಬೇಕು, ಏನನ್ನು ಯಾವುದರ ಜೊತೆ ತಾಳೆ ಮಾಡಿ ನೋಡಬೇಕು ಇಂತಹ ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಸೂಚಿಸುವುದೇ ಒಂದು ಪಾಠಕ್ರಮದ ಉದ್ದೇಶ. ಹಾಗಾಗಿ, ಇಡೀ ಪಾಠಕ್ರಮ ನಿಂತಿರುವುದು ಕಲಿಯುವವರನ್ನು ಕೇಂದ್ರವಾಗಿಸಿಕೊಂಡು. ಕಲಿಸುವವರನ್ನಲ್ಲ.

ಹಾಗಾಗಿ, ಒಂದು ಪಾಠಕ್ರಮದ ಮೊದಲ ಹೆಜ್ಜೆಯೇ ನಾವು ವಿದ್ಯಾರ್ಥಿಗಳಲ್ಲಿ ಯಾವ ಕ್ಷಮತೆಯನ್ನು ಬೆಳೆಸಲು ಹೊರಟಿದ್ದೇವೆ ಎನ್ನುವ ಚಿತ್ರಣವನ್ನು ನೀಡುವುದು. ಅದು ತಿಳಿದ ನಂತರ, ಆ ಕ್ಷಮತೆಯನ್ನು ಅವರಲ್ಲಿ ರೂಪಿಸುವುದಕ್ಕೆ ಇರುವ ಕ್ರಮಗಳೇನು ಎನ್ನುವ ಪ್ರಶ್ನೆಯೂ ಏಳುತ್ತದೆ. ಜೊತೆಗೆ, ಆ ಕ್ರಮಗಳನ್ನು ಕಾರ್ಯರೂಪಕ್ಕೆ ತರಲು ನಾವು ಬಳಸಬಹುದಾದ ಸಾಧನಗಳು, ಮಾಹಿತಿಗಳು, ಪುಸ್ತಕಗಳು ಮತ್ತು ಇತರೆ ಸಂಪನ್ಮೂಲಗಳು ಏನು ಎನ್ನುವುದೂ ಗಮನಿಸಬೇಕು.

ಕೊನೆಗೆ, ನಾವು ಕಲಿಸಲು ಉದ್ದೇಶಿಸಿದ ಕ್ಷಮತೆಯನ್ನೇ ವಿದ್ಯಾರ್ಥಿಗಳು ಕಲಿತಿದ್ದಾರಾ ಅಥವಾ ಇನ್ನೇನನ್ನೋ ಕಲಿತಿದ್ದಾರ – ಎಂದು ಅಳೆಯಲು ಇರುವ ಪರೀಕ್ಷೆಯ ಮಾಪನಗಳೂ ಏನು ಎನ್ನುವುದನ್ನೂ ತಿಳಿಯಬೇಕು. ನಮ್ಮ ಪರೀಕ್ಷೆಗಳು ಕೂಡ ಅಷ್ಟೇ. ನಾವು ಹೇಳಿದ್ದನ್ನು ಅವರು ಕಲಿತಿದ್ದಾರ ಎಂದು ನೋಡುವ ಕ್ರಮವೇ ವಿನಾ, ನಾವು ಕಲಿಸಲು ಹೊರಟ ಕ್ಷಮತೆಯನ್ನು ಅವರು ಬೆಳೆಸಿಕೊಂಡಿದ್ದಾರ ಎನ್ನುವುದನ್ನು ಪರೀಕ್ಷಿಸುವುದೇ ಇಲ್ಲ.

ಒಂದು ಉತ್ತಮ ಪಾಠಕ್ರಮ ಎನ್ನುವುದು ಹೀಗೇ ಕಲಿಕೆಯನ್ನು ಅಳೆಯಲು ಇರುವ ಸಾಧನ. ಅದನ್ನು ಸಂಗೀತಗಾರರು ಹಾಡು ಮರೆತುಹೋದರೆ ಇರಲಿ ಎಂದು ಚೀಟಿಯಲ್ಲಿ ಬರೆದುಕೊಂಡಿರುವ ಸಾಲುಗಳು ಇರುತ್ತವಲ್ಲ, ಆ ರೂಪಕ್ಕೆ ಇಳಿಸಿದ್ದೇವೆ. ಶಾಲಾ ಶಿಕ್ಷಣದಲ್ಲಿ ನಿಜವಾದ ಪಾಠಕ್ರಮ ಹೇಗಿರಬೇಕು ಎನ್ನುವ ಕುರಿತು ಹಲವಾರು ಅತ್ಯುತ್ತಮ ಪ್ರಯೋಗಗಳು ನಮ್ಮ ದೇಶದಲ್ಲೇ ನಡೆದಿವೆ. ಆದರೆ ಉನ್ನತ ಶಿಕ್ಷಣದಲ್ಲೇ ನಾವು ಇನ್ನೂ ಸ್ವಲ್ಪ ಹಿಂದಿದ್ದೇವೆ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT