ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಸರಳ ವಿವಾಹ!

ನಿತೀಶ್‌ ಮಾತನ್ನು ಕೃತಿಯಲ್ಲಿ ತೋರಿದ ಸುಶೀಲ್‌ ಕುಮಾರ್‌ ಮೋದಿ
Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಪಟ್ನಾ: ಎರಡು ತಿಂಗಳ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವರದಕ್ಷಿಣೆಯಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಕೈಬಿಡುವಂತೆ ರಾಜ್ಯದ ಜನರಿಗೆ ಕರೆ ನೀಡಿದ್ದರು. ಅಲ್ಲದೇ ಸರಳ ವಿವಾಹವನ್ನು ಬೆಂಬಲಿಸಿ ಮಾತನಾಡಿದ್ದರು.

ನಿತೀಶ್‌ ಕುಮಾರ್‌ ಅವರ ಮನದ ಇಂಗಿತವನ್ನು ಅವರ ಸಹೋದ್ಯೋಗಿ, ರಾಜ್ಯದ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಚಾಚೂ ತಪ್ಪದೆ ಪಾಲಿಸಿದ್ದಾರೆ.

ಸುಶೀಲ್‌ ಕುಮಾರ್‌ ಮೋದಿ ಅವರ ಮಗ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಉತ್ಕರ್ಷ ಅವರು ಅತ್ಯಂತ ಸರಳ ಕಾರ್ಯಕ್ರಮದಲ್ಲಿ ಕೋಲ್ಕತ್ತದ ಲೆಕ್ಕ ಪರಿಶೋಧಕಿ ಯಾಮಿನಿ ಅವರನ್ನು ಭಾನುವಾರ ವರಿಸಿದರು. ಬ್ಯಾಂಡ್‌ ವಾದ್ಯ, ತಾಳ–ಮೇಳ ಸೇರಿ ಮದುವೆ ಸಮಾರಂಭದ ಯಾವ ಗೌಜು–ಗದ್ದಲವೂ ಅಲ್ಲಿರಲಿಲ್ಲ!

ಕುತೂಹಲಕಾರಿ ಸಂಗತಿ ಎಂದರೆ ಆಹ್ವಾನಿತ ಗಣ್ಯರಿಗೆ ಮಧ್ಯಾಹ್ನದ ಭೋಜನವಾಗಲೀ ಅಥವಾ ರಾತ್ರಿಯ ಔತಣಕೂಟವಾಗಲೀ ಇರಲಿಲ್ಲ. ನೂತನ ವಧುವರರಿಗೆ ಶುಭಹಾರೈಸಲು ಬಂದವರಿಗೆ ನಾಲ್ಕು ಲಾಡುಗಳನ್ನು ಹೊಂದಿದ್ದ ಸಿಹಿ ಪೊಟ್ಟಣ ನೀಡಲಾಯಿತು.

ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿರಲಿಲ್ಲ. ವಾಟ್ಸ್‌ಆ್ಯಪ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕವೇ ಆಹ್ವಾನ ನೀಡಲಾಗಿತ್ತು. ಉಡುಗೊರೆ ತರದಂತೆಯೂ ಅತಿಥಿಗಳಿಗೆ ಮನವಿ ಮಾಡಲಾಗಿತ್ತು.

ವಿಶೇಷ ಕೌಂಟರ್‌: ವರದಕ್ಷಿಣೆರಹಿತ ಮದುವೆಗೆ ಬೆಂಬಲ ಸೂಚಿಸಿ ಮತ್ತು ತಮ್ಮ ಕುಟುಂಬಗಳಲ್ಲೂ ಅದನ್ನೇ ಅನುಸರಿಸುವ ಪ್ರತಿಜ್ಞೆ ಮಾಡಿ ಸಹಿ ಸಂಗ್ರಹಿಸಲು ಕೌಂಟರ್‌ ಕೂಡ ತೆರೆಯಲಾಗಿತ್ತು. ದೇಹದ ಅಂಗಗಳನ್ನು ದಾನ ಮಾಡುವ ವಾಗ್ದಾನ ನೀಡುವವರಿಗಾಗಿ ಮತ್ತೊಂದು ಕೌಂಟರ್‌ನ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಕೇಂದ್ರ ಸಚಿವರಾದ ಅರುಣ್‌ ಜೇಟ್ಲಿ, ಅನಂತ್‌ ಕುಮಾರ್‌, ರಾಧಾ ಮೋಹನ್‌ ಸಿಂಗ್‌ ಮತ್ತು ರಾಮ್‌ ವಿಲಾಸ್‌ ಪಾಸ್ವಾನ್‌ ಸೇರಿದಂತೆ ಹಲವು ಗಣ್ಯರು ವಧು ವರರಿಗೆ ಶುಭ ಹಾರೈಸಿದರು.

**

(ಮುಖ್ಯಾಂಶಗಳ ಜಾಗದಲ್ಲಿ... ಸರಳಾತಿಸರಳ)

ಭೋಜನ/ಔತಣ ಕೂಟ ಇಲ್ಲ

ಅತಿಥಿಗಳಿಗೆ ಸಿಹಿ ಪೊಟ್ಟಣ

ಸಾಮಾಜಿಕ ಜಾಲತಾಣಗಳ ಮೂಲಕ ಗಣ್ಯರಿಗೆ ಆಹ್ವಾನ

**

ಗಮನ ಸೆಳೆದ ಲಾಲು ಉಪಸ್ಥಿತಿ

ಇಡೀ ಸಮಾರಂಭದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಉಪಸ್ಥಿತಿ. ತಮ್ಮ ರಾಜಕೀಯ ಕಡು ವೈರಿ ಸುಶೀಲ್‌ ಕುಮಾರ್‌ ಮೋದಿ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡ ಲಾಲು, ನವ ದಂಪತಿಗೆ ಆಶೀರ್ವಾದವನ್ನೂ ಮಾಡಿದರು. ಈ ದೃಶ್ಯಗಳನ್ನು ಸೆರೆ ಹಿಡಿಯಲು ಮುದ್ರಣ ಮತ್ತು ಟಿವಿ ಮಾಧ್ಯಮಗಳ ಪ್ರತಿನಿಧಿಗಳ ನಡುವೆ ಪೈಪೋಟಿಯೇ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT