ಶುಕ್ರವಾರ, ಫೆಬ್ರವರಿ 26, 2021
18 °C
ಭಾರತ–ಇರಾನ್–ಅಫ್ಗಾನಿಸ್ತಾನ ವಾಣಿಜ್ಯ ಮಾರ್ಗ

ಚಾಬಹಾರ್ ಬಂದರು ಕಾರ್ಯಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಚಾಬಹಾರ್ ಬಂದರು ಕಾರ್ಯಾರಂಭ

ನವದೆಹಲಿ: ಇರಾನ್‌ನಲ್ಲಿ ಭಾರತ ಅಭಿವೃದ್ಧಿಪಡಿಸುತ್ತಿರುವ ಚಾಬಹಾರ್ ಬಂದರಿನ ಪ್ರಥಮ ಹಂತವು ಭಾನುವಾರ ಕಾರ್ಯಾರಂಭ ಮಾಡಿದೆ.

ಭಾರತ–ಇರಾನ್–ಅಫ್ಗಾನಿಸ್ತಾನ ವಾಣಿಜ್ಯ ಮಾರ್ಗದ ಪ್ರಮುಖ ಕೊಂಡಿಯಾಗಿರುವ ಈ ಬಂದರು ಮೂರೂ ದೇಶಗಳ ಮಧ್ಯೆ ವಾಣಿಜ್ಯ ವಹಿವಾಟನ್ನು ವೃದ್ಧಿಸಲಿದೆ. ಇದರ ಜತೆಯಲ್ಲೇ ಮಧ್ಯಪ್ರಾಚ್ಯ ದೇಶಗಳ ಜತೆ ಭಾರತದ ವಾಣಿಜ್ಯ ವಹಿವಾಟು ವೃದ್ಧಿಸಲು ಈ ಮಾರ್ಗ ನೆರವಾಗಲಿದೆ.

₹ 550 ಕೋಟಿ ವೆಚ್ಚದಲ್ಲಿ ಭಾರತವು ಈ ಬಂದರನ್ನು ಅಭಿವೃದ್ಧಿಪಡಿಸಿದೆ. ಇನ್ನೂ ಕೆಲವು ಕಾಮಗಾರಿಗಳು ಪೂರ್ಣವಾಗಬೇಕಿದ್ದು, 2018ರ ಅಂತ್ಯದ ವೇಳೆಗೆ ಬಂದರು ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸಲಿದೆ. ಎರಡನೇ ಹಂತದ ಯೋಜನೆಯ ಭಾಗವಾಗಿ ಭಾರತವು ಬಂದರನ್ನು 10 ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ. ನಿರ್ವಹಣೆಗೆ ₹ 148 ಕೋಟಿ ವಿನಿಯೋಗಿಸಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಮೂರೂ ದೇಶಗಳ ವಾಣಿಜ್ಯ ಮಾರ್ಗದ ಭಾಗವಾಗಿ ಅಫ್ಗಾನಿಸ್ತಾನದಲ್ಲಿ 218 ಕಿ.ಮೀ ಉದ್ದದ ದ್ವಿಪಥ ಹೆದ್ದಾರಿಯನ್ನು ಭಾರತವು ಈಗಾಗಲೇ ಅಭಿವೃದ್ಧಿಪಡಿಸಿದೆ. ಈ ಹೆದ್ದಾರಿಯ ಕಾಮಗಾರಿ 2005ರಲ್ಲೇ ಪ್ರಾರಂಭವಾಗಿತ್ತು. ಇರಾನ್ ಸಹ ತನ್ನ ನೆಲದಲ್ಲಿ 200 ಕಿ.ಮೀ ಉದ್ದದ ಹೆದ್ದಾರಿಯ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಇನ್ನೂ 1,380 ಕಿ.ಮೀ ಉದ್ದದ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಚಾಬಹಾರ್‌ ಬಂದರು ಅಭಿವೃದ್ಧಿ ಮತ್ತು ಅಫ್ಗಾನಿಸ್ತಾನವು ಈ ಮಾರ್ಗದ ಮೂಲಕವೇ ಭಾರತದ ಜತೆ ವಾಣಿಜ್ಯ ವಹಿವಾಟು ನಡೆಸಬೇಕು ಎಂಬ ಒಪ್ಪಂದಕ್ಕೆ ಮೂರೂ ದೇಶಗಳು 2016ರಲ್ಲಿ ಸಹಿ ಹಾಕಿದ್ದವು.

ಪಾಕಿಸ್ತಾನಕ್ಕೆ ಸಡ್ಡು: ಈ ಬಂದರಿನಿಂದ ಕೇವಲ 130 ಕಿ.ಮೀ ದೂರದಲ್ಲಿರುವ ಪಾಕಿಸ್ತಾನದ ಗ್ವಾದರ್‌ನಲ್ಲಿ ಚೀನಾ ಬಂದರೊಂದನ್ನು ಅಭಿವೃದ್ಧಿಪಡಿಸುತ್ತಿದೆ.  ಭಾರತ–ಅಫ್ಗಾನಿಸ್ತಾನಗಳು ತನ್ನ ನೆಲದ ಮೂಲಕ ಸರಕುಗಳ ಸಾಗಣೆ ನಡೆಸದಂತೆ ಪಾಕಿಸ್ತಾನವು ತಡೆಯೊಡ್ಡಿದೆ. ಈಗ ಈ ವಾಣಿಜ್ಯ ಮಾರ್ಗವು ಕಾರ್ಯಾರಂಭ ಮಾಡಿರುವುದರಿಂದ ಪಾಕಿಸ್ತಾನ ಮತ್ತು ಚೀನಾಕ್ಕೆ ಭಾರತವು ಸಡ್ಡು ಹೊಡೆದಂತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.