7

ನೈತಿಕ ಶಿಕ್ಷಣದ ಪ್ರಸ್ತುತತೆ

Published:
Updated:
ನೈತಿಕ ಶಿಕ್ಷಣದ ಪ್ರಸ್ತುತತೆ

ಇಂದಿನ ಶಾಲಾಮಕ್ಕಳನ್ನು ನೋಡಿದಾಗ ಮೊದಲು ಅನ್ನಿಸುವುದು ‘ಅಯ್ಯೋ ಪಾಪ’ ಎಂದು. ಹೊರಲಾರದ ಹೊರೆಯನ್ನು ಹೊತ್ತು ತಿರುಗುತ್ತಾ ತಮ್ಮ ಟ್ಯೂಷನ್, ಶಾಲಾ ಹೋಮ್‌ವರ್ಕ್‌, ಚಿತ್ರಕಲೆ, ಸಂಗೀತ, ಕರಾಟೆ ಮೊದಲಾದ ಹತ್ತು ಹಲವು ಕ್ಲಾಸುಗಳ ಮಧ್ಯೆ ಸಿಲುಕಿರುತ್ತವೆ ಮುದ್ದು ಕಂದಮ್ಮಗಳು. ಈ ಒತ್ತಡದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಿಗುವ ಜಾಗ ಬಹಳ ಕಡಿಮೆ. ಇಂದಿನ ಯುವಜನತೆಯಲ್ಲಿ ಅಪರಾಧದ ಮನೋಭಾವ ಹೆಚ್ಚುತ್ತಿದೆ.

ಶಾಲೆಗೆ ಹೋಗುವ ಮಕ್ಕಳಿಂದ ಕೂಡ ಅಪರಾಧಗಳು ನಡೆಯುತ್ತಿರುವುದನ್ನು ನೋಡಿದಾಗ, ಅಪರಾಧಗಳ ಹಿಂದಿನ ಕಾರಣ ಮೃದುವಾದ ಮುಗ್ಧ ಮನಸ್ಸುಗಳು ಒರಟಾಗಿ ಬದಲಾಗುತ್ತಿರುವುದೇ ಆಗಿದೆ. ಮನಸ್ಸುಗಳು ಮುಗ್ಧತೆಯಿಂದ ವಿಕೃತವಾಗಿ ಬದಲಾಗುತ್ತಿರುವುದನ್ನು ನೋಡಿದಾಗ ಇದರ ಹಿಂದಿನ ಕಾರಣಗಳನ್ನು ಮನಸ್ಸು ಹುಡುಕುತ್ತದೆ.

ಬದಲಾಗುತ್ತಿರುವ ಈ ಹೈಟೆಕ್ ಯುಗದಲ್ಲಿ ತಮ್ಮ ಮಕ್ಕಳಿಗೆ ಎಲ್ಲ ರೀತಿಯ ತರಬೇತಿಗಳನ್ನು ಕೊಡಿಸುವುದರಲ್ಲಿ ಪೋಷಕರು ಪರದಾಡುತ್ತಾರೆ. ‘ಚೈಲ್ಡ್ ಪ್ರಾಡಿಜಿ’ಗಳನ್ನು ತಮ್ಮ ಮಕ್ಕಳಲ್ಲಿ ಹುಡುಕುವುದರಲ್ಲಿ ಅವರ ಮೃದು ಮನಸ್ಸುಗಳು ಮುಗ್ಧತೆಯನ್ನು ಕಳೆದುಕೊಳುತ್ತಿರುವುದನ್ನು ನಾವು ಗಮನಿಸುವುದಿಲ್ಲ. ಮೊನ್ನೆ ಒಬ್ಬ ಯುವಕ್ರಿಕೆಟಿಗ ಪೂಜೆ ಮಾಡಿಸಲು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದ. ಕೆಲವು ಅಭಿಮಾನಿಗಳು ಮಾತನಾಡಿಸಲು ಹೋದಾಗ ಬಹಳ ಒರಟಾಗಿ ಬೈದು ‘ಅನಾಗರಿಕ ಜನರು’ ಎಂದು ನುಡಿದ.

ಮೆಚ್ಚಿನ ಕ್ರಿಕೆಟಿಗನ ಒರಟು ವರ್ತನೆಯಿಂದ ಹಲವರು ಹುಡುಗರು ಹತಾಶರಾದರು. ಇಂತಹ ಸಾವಿರಾರು ಉದಾಹರಣೆಗಳು ನಾವು ಕಣ್ಣಾಡಿಸಿದರೆ ಸಿಗುತ್ತವೆ. ಇದು ಬೆಳೆಯುವ ಮಕ್ಕಳು ಅಸಡ್ಡೆ ಹಾಗೂ ಒರಟುತನವನ್ನು ಮೈಗೂಡಿಸಿಕೊಂಡದ್ದರ ಪರಿಣಾಮ. ಇಂತಹ ಬೆಳವಣಿಗೆಗಳು ಒಂದು ಕಡೆಯಾದರೆ, ವಿಕೃತ ಅಪರಾಧವನ್ನು ಮಾಡುವವರ ಸಂಖ್ಯೆಯೂ ಹೆಚ್ಚುತ್ತಲಿದೆ.

ಇತ್ತೀಚೆಗಷ್ಟೇ ನಡೆದ ಪುಟ್ಟ ಹುಡುಗ ಪ್ರದುಮ್ನನ ಕೊಲೆ ಇಂತಹ ವಿಕೃತ ಮನಸ್ಸಿಗೆ ಒಂದು ಕನ್ನಡಿ. ಶಾಲಾಬಸ್ಸಿನ ಕಂಡಕ್ಟರ್‌ನ ಮೇಲೆ ಬಂದ ಆರೋಪ ಕೊನೆಗೆ ತಿರುಗಿದ್ದು ಒಬ್ಬ 14 ವರ್ಷದ ವಿದ್ಯಾರ್ಥಿಯತ್ತ. ಶಾಲೆಯ ಪರೀಕ್ಷೆ ಮುಂದೂಡಬೇಕೆಂಬ ಒಂದೇ ಕಾರಣದಿಂದ ಒಂಬತ್ತನೇ ತರಗತಿಯ ಹುಡುಗ ಈ ಕೊಲೆಗೈದಿದ್ದಾನೆ ಎಂದಾಗ ಹಲವಾರು ಪೋಷಕರು ಮಾತ್ರವಲ್ಲ, ಸಮಾಜವೂ ಆಘಾತಕ್ಕೊಳಗಾಯಿತು.

14 ವರ್ಷದ ಬಾಲಕನಲ್ಲಿ ಕೊಲೆ ಎನ್ನುವುದು ಅಷ್ಟೊಂದು ಸುಲಭ ಎಂದು ಕಾಣಿಸಲು ಕಾರಣವೇನು? ತಾನು ಸರಿಯಾಗಿ ಓದದ ಕಾರಣಕ್ಕೆ, ಪರೀಕ್ಷೆಯನ್ನು ಮುಂದೂಡಬೇಕೆಂಬುದು ಮಕ್ಕಳಲ್ಲಿ ಬರುವ ಸಹಜ ಆಲೋಚನೆ. ಆದರೆ ಅದಕ್ಕೆ ಕೊಲೆಯೇ ಪರಿಹಾರ ಎಂಬಂತಹ ಯೋಚನೆ ಬರಲು ಹೇಗೆ ಸಾಧ್ಯ? ಈ ಘಟನೆಯ ಬಳಿಕ ಶಾಲೆಗಳಲ್ಲಿ ತಮ್ಮ ಮಕ್ಕಳ ರಕ್ಷಣೆಗೆ ಏನು ಗ್ಯಾರಂಟಿ ಎಂದು ಪೋಷಕರು–ಪಾಲಕರು ಆತಂಕಕ್ಕೊಳಗಾದರು.

ಸುಮಾರು ಶಾಲೆಗಳಲ್ಲಿ, ಪ್ರತಿ ತರಗತಿಯಲ್ಲಿ, ಕಾರಿಡಾರಿನಲ್ಲಿ ಎಲ್ಲ ಕಡೆಯೂ ಸಿಸಿಟಿವಿಗಳನ್ನು ಹಾಕಿಸುವ ಪ್ರಕ್ರಿಯೆ ಆರಂಭವಾಯಿತು. ಅದರಿಂದ ಅಪರಾಧಿ ಯಾರೆಂದು ಪತ್ತೆಹಚ್ಚಬಹುದು, ಆದರೆ ಅಪರಾಧಗಳನ್ನು ತಡೆಯಲು ಸಾಧ್ಯವೆ? ಅಂತಹ ಕ್ರೂರ ಆಲೋಚನೆಗಳು ಮಕ್ಕಳ ಮನಸ್ಸಿನಲ್ಲಿ ಮೂಡುವುದನ್ನು ತಡೆಯಲು ಸಾಧ್ಯವಾಗುತ್ತದೆಯೇ?

ಇಂದಿನ ಮೀಡಿಯಾಗಳಲ್ಲಿ ತೋರಿಸುವ ಸುದ್ದಿಗಳು, ಧಾರಾವಾಹಿಗಳು ಎಲ್ಲವೂ ಕ್ರೌರ್ಯವನ್ನು ಸಾಮಾನ್ಯ ಎಂಬಂತೆ ತೋರಿಸುತ್ತವೆ. ರಕ್ತ, ನೋವು, ಕ್ರೂರತೆ, ಅಸಹಾಯಕತೆ, ಇವ್ಯಾವೂ ಈಗ ಮಕ್ಕಳಲ್ಲಿ ಆತಂಕವನ್ನು ಬಿತ್ತುವುದಿಲ್ಲ. ಇವನ್ನೆಲ್ಲ ಅವರು ಟಿವಿಯಲ್ಲಿ ಬೇಕಾದಷ್ಟು ಬಾರಿ ನೋಡಿರುತ್ತಾರೆ. ಅಲ್ಲಿಯ ಕಲ್ಪನೆಗಳನ್ನು ಪಾಲಿಸಿ ತಾವೂ ಏನೋ ಮಾಡಲೆಂದು ಹೊರಟು ಹಲವಾರು ಬಾರಿ ಅತಿಬುದ್ಧಿಯ ಅವಿವೇಕಿಗಳಾಗುತ್ತಾರೆ.

ನಮ್ಮ ಸುತ್ತಲಿನ ಇಂತಹ ಬದಲಾವಣೆಗಳನ್ನು ನಾವು ತಡೆಯಲಾಗುವುದಿಲ್ಲ. ಆದರೆ ಮಕ್ಕಳ ಅಂತರಂಗವನ್ನು ಶುದ್ಧವಾಗಿಡುವ ಪ್ರಕ್ರಿಯೆಯನ್ನು ಸದಾ ಪೋಷಕರು ಹಾಗೂ ಶಿಕ್ಷಕರು ಮಾಡುತ್ತಲೇ ಇರಬೇಕಾಗಿದೆ. ಇದು ಈಗಿನ ಸ್ಥಿತಿಯಲ್ಲಿ ಅನಿವಾರ್ಯ ಕೂಡ.

‘ಜನರಲ್ ನಾಲೆಡ್ಜ್ ಹಾಗೂ ಮಾರಲ್ ಸೈನ್ಸ್’ ತರಗತಿಗಳು ಹಲವಾರು ಶಾಲೆಗಳ ಪಠ್ಯಕ್ರಮದಲ್ಲಿ ಸೇರಿವೆ. ಆದರೆ ಅವು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದರ ಕಡೆಗೂ ಗಮನಹರಿಸಬೇಕಾಗಿದೆ. ಅದು ಕೇವಲ ಪಠ್ಯದ ಭಾಗವಷ್ಟೇ ಆದಾಗ ಮಕ್ಕಳು ಅದನ್ನು ಪರೀಕ್ಷೆ ಮುಗಿದ ಕೂಡಲೇ ಮರೆತಿರುತ್ತಾರೆ ಅಥವಾ, ನೀತಿಯೇನೆಂಬುದನ್ನು ಅರಿಯದೇ ಕೇವಲ ಕಥೆಯಷ್ಟನ್ನೆ ಕೇಳಿರುತ್ತಾರೆ. ಆದರೆ ಈ ನೀತಿಗಳನ್ನು ಸ್ವತಃ ಶಿಕ್ಷಕರು ಹಾಗೂ ಪೋಷಕರು ಪಾಲಿಸುವುದು ಮಕ್ಕಳಿಗೆ ತುಂಬಾ ಮುಖ್ಯವಾಗುತ್ತದೆ.

ಸಾಧಾರಣವಾಗಿ ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ತಿಳಿಯುವುದು ಜಾಸ್ತಿ. ತಮ್ಮ ಸುತ್ತಮುತ್ತಲಿನವರು ವ್ಯವಹರಿಸುವ ರೀತಿ, ತಂದೆ-ತಾಯಿ, ಅಜ್ಜ-ಅಜ್ಜಿಯರ ಮಾತುಕಥೆಗಳು ಮುಂತಾದುವನ್ನು ತಮ್ಮ ಗೊಂಬೆಗಳೊಂದಿಗೆ ಅಥವಾ ಓರಗೆಯವರೊಂದಿಗೆ ಮಕ್ಕಳು ಪುನರ್ ಸೃಷ್ಟಿಸುತ್ತಾರೆ. ಅದನ್ನು ಸೂಕ್ಷ್ಮವಾಗಿ ಅಭ್ಯಸಿಸಿದಾಗ ಮಕ್ಕಳ ಮನಸ್ಸಿನ ಮೇಲಾಗುತ್ತಿರುವ ಬದಲಾವಣೆಗಳು ತಿಳಿಯುತ್ತಾ ಹೋಗುತ್ತವೆ.

ಬೆಳೆಯುವ ಮಕ್ಕಳಿಗೆ ಇತರರನ್ನು ಗೌರವಿಸುವ ಬಗೆಯನ್ನು ತಿಳಿಸುವುದು ಅತ್ಯಂತ ಮುಖ್ಯವಾದ ಪ್ರಕ್ರಿಯೆ. ಬೇರೆಯವರ ಭಾವನೆಗಳನ್ನು ಗೌರವಿಸುವುದು, ಅವರ ನೋವನ್ನು ಅರಿಯುವುದು, ವಿಶಾಲ ಮನೋಭಾವದಿಂದ ಯೋಚಿಸುವುದು ಮುಂತಾದ ಹಲವು ಗುಣಗಳು ರಕ್ತಗತವಾಗಿ ಬಂದರೂ, ಅವನ್ನು ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಹುಟ್ಟುಹಾಕಬಹುದು. ಪುಟ್ಟಮಗುವಿನಿಂದಲೇ ಬೇರೆಯವರ ಭಾವನೆಯ ಬಗ್ಗೆ ಚಿಂತಿಸದವನ ಮನಸ್ಸಲ್ಲಿ ಇತರರ ಬಗೆಗೆ ಅನುಕಂಪ, ಕರುಣೆ ಮೂಡುವುದಕ್ಕೆ ಹೇಗೆ ಸಾಧ್ಯ? ಅವನು ಕ್ರೌರ್ಯವನ್ನು ತೀರಾ ಸಹಜವಾಗಿ ಸ್ವೀಕರಿಸುವ ಮಟ್ಟದಲ್ಲಿ ಯೋಚಿಸುತ್ತಿರುತ್ತಾನೆ. ಅಂತಹ ಮನಸ್ಸುಗಳಿಗೆ ಹಲವಾರು ಸಮಸ್ಯೆಗಳಿಗೆ ಸುಲಿಗೆ, ದರೋಡೆ, ಕೊಲೆಗಳು ಪರಿಹಾರವೆಂಬಂತೆ ಕಾಣಿಸುತ್ತದೆ.

‘ವಿದ್ಯೆಗೆ ವಿನಯವೇ ಭೂಷಣ’ ಎಂಬ ಗಾದೆ ಮಾತು ಎಂದೆಂದಿಗೂ ಪ್ರಸ್ತುತ. ಮಕ್ಕಳು ಬೆಳೆಯುತ್ತ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತವೆ. ಅಂತಹ ಸಮಯದಲ್ಲಿ ಗರ್ವ ಅಥವಾ ಅಹಂಕಾರದ ಬದಲಾಗಿ ಸಂತೋಷವನ್ನು ಮಾತ್ರವೇ ಪಡುವುದು, ತನ್ನೊಂದಿಗೆ ತನ್ನ ಸಹಪಾಠಿಗಳನ್ನೂ ಜೊತೆಗೂಡಿಸಿಕೊಂಡು ಕಲಿಯುವುದು, ತ್ಯಾಗಮನೋಭಾವ, ಉದಾರತೆ, ಸತ್ಯಪರತೆ ಮುಂತಾದ ಗುಣಗಳನ್ನು ಮಕ್ಕಳು ತಮ್ಮ ಹಿರಿಯರಿಂದ ನೋಡಿ ಕಲಿಯುತ್ತಾರೆ. ತಮ್ಮ ಸಂಸ್ಕೃತಿಯ ಪರಿಚಯ, ತಮ್ಮ ಸುತ್ತಲಿನ ಸಮಸ್ಯೆಗಳು, ಸವಾಲುಗಳನ್ನು ಎದುರಿಸುವ ರೀತಿ, ಇತರರೊಂದಿಗೆ ವ್ಯವಹರಿಸುವ ರೀತಿ ಇವೆಲ್ಲವನ್ನೂ ಮಕ್ಕಳಿಗೆ ತಿಳಿಸುವುದು ಅವಶ್ಯವಾಗುತ್ತದೆ.

ಹಲವಾರು ಸಂಘ–ಸಂಸ್ಥೆಗಳು ಮಕ್ಕಳಿಗೆ ಸಂಸ್ಕೃತಿ, ಸಮಾಜದ ಅರಿವನ್ನು ಮೂಡಿಸಲು ಶ್ಲೋಕಗಳನ್ನು ಹೇಳಿಕೊಡುವುದು, ರಾಮಾಯಣ, ಮಹಾಭಾರತದ ಕಥೆಗಳು, ಹಲವು ಸಂತರ, ಸಾಧಕರ ಜೀವನಪಾಠಗಳನ್ನು ತಿಳಿಸಲೆಂದೇ ವಿಶೇಷ ತರಗತಿಗಳನ್ನು ಮಾಡುತ್ತವೆ. ಇದನ್ನು ಪೋಷಕರು ಮನೆಯಲ್ಲಿಯೇ ಮಾಡಬಹುದು. ಆದರೆ ಸಮಯದ ಅಭಾವ ಇಂತಹ ತರಗತಿಗಳನ್ನಾದರೂ ಆಶ್ರಯಿಸುವಂತೆ ಮಾಡುತ್ತದೆ. ಮಕ್ಕಳಿಗೆ ಇದರ ಅಗತ್ಯ ಬಹಳಷ್ಟಿದೆ. ದಿನನಿತ್ಯ ಕ್ರೈಮ್ ಸ್ಟೋರಿಯನ್ನು ನೋಡುವ ಪೋಷಕರು, ಅಥವಾ ತಮ್ಮ ಸ್ವಭಾವವನ್ನು, ಮನಸ್ತಾಪಗಳನ್ನು ಮಕ್ಕಳೆದುರು ತೋರಿಸುವ ಪೋಷಕರು ತಮ್ಮ ಮಕ್ಕಳಿಗೆ ಹೊಡೆತ-ಬಡಿತ, ಕ್ರೌರ್ಯ ಎಲ್ಲಾ ಸರ್ವೇಸಾಮಾನ್ಯ ಎಂಬ ಬೀಜವನ್ನು ತಮಗರಿವಿಲ್ಲದಂತೆಯೇ ಬಿತ್ತುತ್ತಿದ್ದಾರೆ.

ಪರಿಚಯದವರೊಬ್ಬರು ನಾಲ್ಕು ವರ್ಷದ ಮಗುವಿಗೆ ಪ್ರತಿದಿನ ಸಂಜೆ ದೇವರ ಮುಂದೆ ಕುಳಿತು ನಮಸ್ಕರಿಸಿ ಎರಡು ನಿಮಿಷವಾದರೂ ಪ್ರಾರ್ಥಿಸುವ ಅಭ್ಯಾಸ ಬೆಳೆಸಿದ್ದಾರೆ. ಅದಕ್ಕೆ ಅವರ ವಿವರಣೆ ಹೀಗೆ: ಮಗು ದೊಡ್ಡವನಾದ ಮೇಲೆ ಆಸ್ತಿಕನಾದರೂ ಆಗಬಹುದು, ನಾಸ್ತಿಕನಾದರೂ ಆಗಬಹುದು. ಆದರೆ ಈ ಧ್ಯಾನದ ಸಮಯದಲ್ಲಿ ಅದು ಆತ್ಮಸಾಕ್ಷಿಯನ್ನು ಎದುರಿಸಲು ಕಲಿಯುತ್ತದೆ. ಅದಕ್ಕೆ ಒಪ್ಪುವ ಕೆಲಸ ಮಾಡುತ್ತದೆ. ಒಮ್ಮೊಮ್ಮೆ ಬೇರೆಯವರಿಗಾಗಿ ಪ್ರಾರ್ಥಿಸುತ್ತಾ ಬೇರೆಯವರ ನೋವನ್ನೂ ಅರಿಯುತ್ತದೆ. ಪ್ರಾರ್ಥನೆ ತನ್ನನ್ನು ತಾನೇ ತಿದ್ದಿಕೊಳ್ಳುವ ಮಾರ್ಗ ಎಂದರು. ನಾಲ್ಕು ವರ್ಷದ ಮಗುವಿಗೆ ಇದರ ಅಗತ್ಯ ಇಲ್ಲದಿರಬಹುದು. ಆದರೆ ಬೆಳೆಯುತ್ತಾ ಅದರ ಮಹತ್ವ ಅಗಾಧ. ತನ್ನ ತಪ್ಪುಗಳನ್ನು ತಾನೇ ಅರಿತು, ಮುಂದೆ ಎಚ್ಚರವಾಗಿರುವ ಪ್ರಕ್ರಿಯೆ ಇಲ್ಲಿಯೇ ಆರಂಭವಾಗುವುದು.

ನೈತಿಕ ಪ್ರಜ್ಞೆ ಎಂಬುದು ಪ್ರತಿಯೊಬ್ಬ ನಾಗರಿಕನಲ್ಲಿಯೂ ಇದ್ದಾಗ ಅವನು ತಪ್ಪು ಮಾಡಲು ಹಿಂಜರಿಯುತ್ತಾನೆ. ಸಮಸ್ಯೆಗಳಿಗೆ ಅತಿರೇಕದ ಮಾರ್ಗಗಳನ್ನು ಹಿಡಿಯದೆ ಪರ್ಯಾಯವಾಗಿ ಆಲೋಚಿಸುತ್ತಾನೆ. ಆದರೆ ನೈತಿಕ ಪ್ರಜ್ಞೆ ಇದ್ದಕ್ಕಿದ್ದಂತೆ ಬರುವಂಥದ್ದಲ್ಲ. ಬೆಳೆಯುವ ವಯಸ್ಸಿನಲ್ಲಿ ಅವರಿಗೆ ಸರಿ ತಪ್ಪುಗಳ ವ್ಯತ್ಯಾಸ ತಿಳಿದಾಗ, ಅದರ ಆಗುಹೋಗುಗಳನ್ನು ಅರಿತಾಗ ಮನಸ್ಸು ಮೃದುವಾಗಿಯೇ ಉಳಿಯುತ್ತದೆ. ಮಕ್ಕಳಿಗೆ ಸಮಯ ನೀಡಿ ನೀತಿಮಾರ್ಗವನ್ನು ತೋರಿಸುವುದು ಅತ್ಯಂತ ಮುಖ್ಯವಾದದ್ದು. ಇದರಿಂದ ಮುಂದಿನ ಹಲವಾರು ಅಪರಾಧಗಳನ್ನು ತಡೆಗಟ್ಟಬಹುದು.

ಮಕ್ಕಳಿಗೆ ಕೇವಲ ನೀತಿಕಥೆಗಳನ್ನು ಪುಸ್ತಕದಲ್ಲಿ ಓದಿಸುವುದರ ಜೊತೆಗೆ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಪೋಷಕರು, ಶಿಕ್ಷಕರು ಮತ್ತು ನಾಗರಿಕರೆಲ್ಲರೂ ತಮ್ಮ ನಡೆ–ನುಡಿಗಳಲ್ಲಿ ತೋರಿಸಿದಾಗಷ್ಟೇ ಮಕ್ಕಳು ಅದನ್ನು ಪಾಲಿಸುವುದು ಸಾಧ್ಯವಾಗುತ್ತದೆ. ಬೆಳೆಯುವ ವಯಸ್ಸಿನಲ್ಲಿ ಇಂತಹ ನೈತಿಕ ಪ್ರಜ್ಞೆಯನ್ನು ಬೆಳೆಸಿದಾಗ ಮುಂದೆ ಪಶ್ಚಾತ್ತಾಪ ಪಡುವ ಸಂಭವ ಮಕ್ಕಳಿಗೂ ಇರುವುದಿಲ್ಲ, ಪೋಷಕರಿಗೂ ಇರುವುದಿಲ್ಲ.

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry