ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಪೋಷಾಕಿಗೆ ‘ಬೆಳ್ಳಿ’ ಸಂಭ್ರಮ

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಬಣ್ಣದ ಪೋಷಾಕಿನ ಬಳಕೆಗೆ ಈಗ ‘ಬೆಳ್ಳಿ’ ಸಂಭ್ರಮ.

1992ರ ವಿಶ್ವಕಪ್‌ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿತ್ತು. ಆ ವಿಶ್ವಕಪ್‌ನಲ್ಲಿ ಬಣ್ಣದ ಜೆರ್ಸಿ ಬಳಕೆಗೆ ಐಸಿಸಿ ಅಧಿಕೃತ ಮುದ್ರೆ ಒತ್ತಿತ್ತು. ಅಂದಿನಿಂದ ಇಂದಿನವರೆಗೂ ಎಲ್ಲಾ ತಂಡಗಳ ಆಟಗಾರರು ರಂಗಿನ ದಿರಿಸಿನಲ್ಲಿ ಮಿಂಚುತ್ತಿದ್ದಾರೆ.

ಇದಕ್ಕೂ ಮುನ್ನ ಪ್ರಾಯೋಗಿಕವಾಗಿ ಬಣ್ಣದ ಉಡುಪು ಬಳಕೆ ಮಾಡಲಾಗಿತ್ತು. 1978ರ ನವೆಂಬರ್‌ 28 ರಂದು ನಡೆದಿದ್ದ ವೆಸ್ಟ್‌ ಇಂಡೀಸ್‌ ಇಲೆವನ್‌ ಮತ್ತು ಆಸ್ಟ್ರೇಲಿಯಾ ಇಲೆವನ್‌ ನಡುವಣ ವಿಶ್ವ ಸೀರಿಸ್‌ ಏಕದಿನ ಪಂದ್ಯದಲ್ಲಿ ಆಟಗಾರರು ಬಣ್ಣದ ಜೆರ್ಸಿ ತೊಟ್ಟು ಅಂಗಳಕ್ಕಿಳಿದಿದ್ದರು. ಹೊನಲು ಬೆಳಕಿನಲ್ಲಿ ನಡೆದಿದ್ದ ಮೊಟ್ಟ ಮೊದಲ ಹಣಾಹಣಿಯೂ ಅದಾಗಿತ್ತು. ಸಿಡ್ನಿ ಕ್ರೀಡಾಂಗಣದಲ್ಲಿ ನಡೆದಿದ್ದ ಆ ಪೈಪೋಟಿಯಲ್ಲಿ ಬಿಳಿ ಚೆಂಡಿನ ಬಳಕೆಗೂ ನಾಂದಿ ಹಾಡಲಾಗಿತ್ತು. ಪಂದ್ಯ ನೋಡಲು 50 ಸಾವಿರಕ್ಕೂ ಹೆಚ್ಚು ಮಂದಿ ಕ್ರೀಡಾಂಗಣಕ್ಕೆ ಬಂದಿದ್ದರು.

ಆ ನಂತರ ಮೂರು (1979, 1983 ಮತ್ತು 1987) ವಿಶ್ವಕಪ್‌ಗಳು ಜರುಗಿದ್ದವು. ಎಲ್ಲಾ ಕೂಟಗಳಲ್ಲೂ ಆಟಗಾರರು ಶ್ವೇತ ವರ್ಣದ ಸಮವಸ್ತ್ರ ಧರಿಸಿಯೇ ಆಡಿದ್ದರು.

ಬಣ್ಣದ ಹಿಂದಿನ ಗುಟ್ಟು..
25 ವರ್ಷಗಳ ಅವಧಿಯಲ್ಲಿ ತಂಡಗಳ ಪೋಷಾಕಿನ ವಿನ್ಯಾಸದಲ್ಲಿ ಹಲವು ಬದಲಾವಣೆಗಳಾಗಿವೆ. ಆದರೆ ಮೂಲ ಬಣ್ಣದ ಮಾರ್ಪಾಡಿನ ವಿಷಯದಲ್ಲಿ ಯಾವ ತಂಡವೂ ಅಷ್ಟಾಗಿ ರಾಜಿಯಾಗಿಲ್ಲ. ತಂಡಗಳು ನಿರ್ದಿಷ್ಟ ಬಣ್ಣಗಳ ಮೇಲೆ ಹೊಂದಿರುವ ಒಲವಿನ ಹಿಂದಿನ ಗುಟ್ಟು ಏನು ಎಂಬುದಕ್ಕೆ ಇಲ್ಲಿದೆ ಉತ್ತರ.

1. ಆಸ್ಟ್ರೇಲಿಯಾ:(ಹಳದಿ): ಆಸ್ಟ್ರೇಲಿಯಾ ತಂಡದ ಪೋಷಾಕು ಹಳದಿ ಬಣ್ಣದಿಂದ ಕೂಡಿದೆ. ಹಳದಿ, ಪ್ರಭುತ್ವ ಮತ್ತು ತೇಜಸ್ಸಿನ ಪ್ರತೀಕ ಎಂಬುದು ಬಹುತೇಕರ ನಂಬಿಕೆ. ಕಾಂಗರೂಗಳ ನಾಡಿನ ತಂಡ ಆರಂಭದಿಂದಲೂ ಕ್ರಿಕೆಟ್‌ ಲೋಕದಲ್ಲಿ ಆಧಿಪತ್ಯ ಸಾಧಿಸಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ. ಏಕದಿನ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಪ್ರಶಸ್ತಿ ಗೆದ್ದ ಹೆಗ್ಗಳಿಕೆ ಈ ತಂಡದ್ದು. ಆಸ್ಟ್ರೇಲಿಯಾ ಐದು ಬಾರಿ ವಿಶ್ವಕಪ್‌ ಟ್ರೋಫಿ ಎತ್ತಿಹಿಡಿದಿದೆ.

2. ಭಾರತ (ನೀಲಿ): ಭಾರತ ತಂಡ ಆರಂಭದಿಂದಲೂ ನೀಲಿಬಣ್ಣದ ‍ಪೋಷಾಕು ಬಳಸುತ್ತಿದೆ. ತ್ರಿವರ್ಣ ಧ್ವಜದಲ್ಲಿರುವ ಅಶೋಕ ಚಕ್ರದ ಬಣ್ಣ ನೀಲಿ. ಆಕಾಶ ಮತ್ತು ಸಾಗರದ ಬಣ್ಣವೂ ನೀಲಿ. ಇವುಗಳಿಗೆ ಕೊನೆಯೆಂಬುದೇ ಇಲ್ಲ. ಭಾರತ ತಂಡವನ್ನು ‘ಮೆನ್‌ ಇನ್‌ ಬ್ಲ್ಯೂ’ ಎಂದೂ ಕರೆಯಲಾಗುತ್ತದೆ.

3. ದಕ್ಷಿಣ ಆಫ್ರಿಕಾ (ಹಸಿರು ಮತ್ತು ಹಳದಿ): ಹಸಿರು, ಮರು ಜನ್ಮ ಮತ್ತು ಹೊಸತನದ ಸಂಕೇತ. ಹಳದಿ ಬಣ್ಣವನ್ನು ಬೆಂಕಿಯ ಪ್ರತೀಕ ಎಂದೂ ಗುರುತಿಸಲಾಗುತ್ತದೆ. 1970ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಮೇಲೆ ಐಸಿಸಿ ನಿಷೇಧ ಹೇರಿತ್ತು. 1991ರಲ್ಲಿ ತಂಡ ನಿಷೇಧದಿಂದ ಪಾರಾಗಿತ್ತು. ಹೀಗಾಗಿ ಮತ್ತೆ ಹರಿಣಗಳ ನಾಡಿನಲ್ಲಿ ಕ್ರಿಕೆಟ್‌ ಚಟುವಟಿಕೆ ಗರಿಗೆದರಿತ್ತು. ಹೀಗೆ ಮರುಜನ್ಮ ಪಡೆದಿದ್ದ ಈ ತಂಡ ಈಗ ಕ್ರಿಕೆಟ್‌ ಲೋಕದ ಶಕ್ತಿಕೇಂದ್ರಗಳಲ್ಲಿ ಒಂದೆನಿಸಿದೆ.

4.ನ್ಯೂಜಿಲೆಂಡ್‌ (ಕಪ್ಪು ಮತ್ತು ನೀಲಿ): ನ್ಯೂಜಿಲೆಂಡ್‌ ತಂಡದ ಪೋಷಾಕನ್ನು ಅತ್ಯಂತ ಆಕರ್ಷಣೀಯ ಎಂದೇ ಗುರುತಿಸಲಾಗುತ್ತದೆ. ನೀಲಿ ಬಣ್ಣ ಶಾಂತತೆಯನ್ನು ಸೂಚಿಸುತ್ತದೆ. ನ್ಯೂಜಿಲೆಂಡ್‌ 2004, 2009, 2010 ಮತ್ತು 2012ರಲ್ಲಿ ‘ಐಸಿಸಿ ಸ್ಪಿರಿಟ್‌ ಆಫ್‌ ಕ್ರಿಕೆಟ್‌ ’ ಗೌರವಕ್ಕೆ ಪಾತ್ರವಾಗಿದ್ದು ವಿಶೇಷ. ಕಪ್ಪು, ಆಕರ್ಷಕ ವ್ಯಕ್ತಿತ್ವದ ದ್ಯೋತಕ.

5. ಶ್ರೀಲಂಕಾ (ಕಡು ನೀಲಿ): ಆರಂಭದಲ್ಲಿ ಸಿಂಹಳೀಯ ನಾಡಿನ ಆಟಗಾರರು ಬಳಸುತ್ತಿದ್ದ ಪೋಷಾಕು ಹಳದಿ ಮತ್ತು ನೀಲಿ ಬಣ್ಣಗಳಿಂದ ಕೂಡಿರುತ್ತಿತ್ತು.  ಕ್ರಮೇಣ ತಂಡದವರು ಕಡುನೀಲಿ ಬಣ್ಣದ ಪೋಷಾಕು ಉಪಯೋಗಿಸಲು ಶುರುಮಾಡಿದರು. ಕಡು ನೀಲಿ ಬಣ್ಣ ಆಳ ಮತ್ತು ಸ್ಥಿರತೆಯನ್ನು ಸಾರುತ್ತದೆ.

6. ಇಂಗ್ಲೆಂಡ್‌ (ತಿಳಿ ನೀಲಿ): ಆಂಗ್ಲರ ನಾಡಿನ ತಂಡ ಆರಂಭದಿಂದಲೂ ತಿಳಿನೀಲಿ ಬಣ್ಣದ ಪೋಷಾಕನ್ನು ಬಳಸುತ್ತಿದೆ. ಈ ಬಣ್ಣ ಒಗ್ಗಟ್ಟು ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಇಂಗ್ಲೆಂಡ್‌ ತಂಡ 2005 ಮತ್ತು 2006ರಲ್ಲಿ ‘ಐಸಿಸಿ ಸ್ಪಿರಿಟ್‌ ಆಫ್‌ ಕ್ರಿಕೆಟ್‌‘ ಗೌರವ ಗಳಿಸಿತ್ತು.

7. ವೆಸ್ಟ್ ಇಂಡೀಸ್‌ (ಕೆಂಗಂದು): ಕೆರಿಬಿಯನ್‌ ನಾಡಿನ ತಂಡದವರು ಕೆಂಗಂದು ಬಣ್ಣದ ಪೋಷಾಕನ್ನು ಧರಿಸುತ್ತಾರೆ. ಈ ಬಣ್ಣ ಶೌರ್ಯ ಮತ್ತು ಆಧಿಪತ್ಯದ ಸಂಕೇತ. ವಿಂಡೀಸ್‌ ಆರಂಭದ ದಿನಗಳಲ್ಲಿ ಕ್ರಿಕೆಟ್‌ ಲೋಕದ ಅನಭಿಷಿಕ್ತ ದೊರೆ ಎಂದೇ ಗುರುತಿಸಿಕೊಂಡಿತ್ತು.  1975 ಮತ್ತು 1979ರಲ್ಲಿ ವಿಶ್ವಕಪ್‌ ಗೆದ್ದಿದ್ದ ತಂಡ 1983ರಲ್ಲಿ ರನ್ನರ್ಸ್‌ ಅಪ್‌ ಆಗಿತ್ತು. ಮಾಲ್ಕಮ್‌ ಮಾರ್ಷಲ್‌, ಇಯಾನ್‌ ಬಿಷಪ್‌, ಮೈಕಲ್‌ ಹೋಲ್ಡಿಂಗ್‌ ಮತ್ತು ಕರ್ಟ್ನಿ ವಾಲ್ಶ್‌ ಅವರಂತಹ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳು ಈ ತಂಡದಲ್ಲಿದ್ದವರು.

8 ಪಾಕಿಸ್ತಾನ (ಹಸಿರು): ಪಾಕಿಸ್ತಾನ ತಂಡ ಶುರುವಿನಿಂದಲೂ ಹಸಿರು ಪೋಷಾಕನ್ನು ಬಳಸುತ್ತಿದೆ. ಹಸಿರು ಬಣ್ಣ, ಅಭಿವೃದ್ಧಿಯನ್ನು ಸೂಚಿಸುತ್ತದೆ. ಈ ತಂಡದ ರಾಷ್ಟ್ರಧ್ವಜದ ಬಣ್ಣವೂ ಹಸಿರು. ಪಾಕಿಸ್ತಾನ ಈ ಹಿಂದೆ ವೇಗದ ಬೌಲರ್‌ಗಳ ಕಣಜ ಎಂದೇ ಬಿಂಬಿತವಾಗಿತ್ತು. ಇಮ್ರಾನ್‌ ಖಾನ್‌, ವಾಸೀಂ ಅಕ್ರಂ, ವಕಾರ್‌ ಯೂನಿಸ್‌ ಮತ್ತು ಶೋಯಬ್‌ ಅಖ್ತರ್‌ ಅವರು ಇದಕ್ಕೆ ಉದಾಹರಣೆ.

ಸಚಿನ್‌, ಶ್ರೀನಾಥ್‌ ಪಾಲಿಗೆ ಚೊಚ್ಚಲ ವಿಶ್ವಕಪ್‌
1992ರ ಬೆನ್ಸನ್‌ ಹೆಡ್ಜೆಸ್‌ ವಿಶ್ವಕಪ್‌ ಸಚಿನ್‌ ತೆಂಡೂಲ್ಕರ್‌ ಮತ್ತು ಕರ್ನಾಟಕದ ಜಾವಗಲ್‌ ಶ್ರೀನಾಥ್‌ ಅವರ ಪಾಲಿಗೆ ಚೊಚ್ಚಲ ವಿಶ್ವಕಪ್‌ ಕೂಡ ಆಗಿತ್ತು. ಕಪಿಲ್‌ ದೇವ್‌ ಕೂಡ ತಂಡದಲ್ಲಿದ್ದರು. ಆಗ ಅವರಿಗೆ 33 ವರ್ಷ. 1983ರಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟಿದ್ದ ಅವರು ಮಹಮ್ಮದ್‌ ಅಜರುದ್ದೀನ್‌ ನಾಯಕತ್ವದಲ್ಲಿ ಆಡಿದ್ದರು. ಸಚಿನ್‌ ತಮ್ಮ ಕ್ರಿಕೆಟ್‌ ಬದುಕಿನ ಆರಂಭದಿಂದಲೂ ಸಂಖ್ಯೆ ‘10’ರ ಜೆರ್ಸಿಯನ್ನೇ ತೊಡುತ್ತಿದ್ದಾರೆ. ಸಚಿನ್‌ಗೆ ಗೌರವ ನೀಡುವ ಸಲುವಾಗಿ ಬಿಸಿಸಿಐ ಭಾರತ ತಂಡದ ಇತರ ಆಟಗಾರರು 10 ಸಂಖ್ಯೆಯ ಪೋಷಾಕು ಧರಿಸದಂತೆ ನಿರ್ಬಂಧ ಹೇರುವ ಸಾಧ್ಯತೆ ಇದೆ.

ಅಭ್ಯಾಸಕ್ಕೆ ಬೇರೆ ಪೋಷಾಕು
ಆಟಗಾರರು ಪಂದ್ಯದ ದಿನ ತೊಡುವ ಜೆರ್ಸಿಯನ್ನು ಅಭ್ಯಾಸದ ವೇಳೆ ಹಾಕುವಂತಿಲ್ಲ. ತಾಲೀಮು ನಡೆಸುವ ಸಂದರ್ಭದಲ್ಲಿ ಬಳಸುವುದಕ್ಕಾಗಿಯೇ ಬೇರೆ ಪೋಷಾಕು ಇರುತ್ತದೆ. ಟೂರ್ನಿಗಳ ವೇಳೆ ಪ್ರಯಾಣ ಮಾಡುವಾಗಲೂ ಆಟಗಾರರಿಗೆ ವಿಶೇಷ ಪೋಷಾಕು ನೀಡಲಾಗುತ್ತದೆ.

‘ಮೆನ್‌ ಇನ್‌ ಬ್ಲ್ಯೂ’
1980ರಲ್ಲಿ ಭಾರತದ ಆಟಗಾರರು ಮೊದಲ ಬಾರಿಗೆ ಬಣ್ಣದ ಪೋಷಾಕಿನಲ್ಲಿ ಕಂಗೊಳಿಸಿದ್ದರು. ತಿಳಿ ನೀಲಿ ಬಣ್ಣದ ಜೆರ್ಸಿಯ ಮೇಲೆ ಹಳದಿ ಬಣ್ಣದ ಪಟ್ಟಿಗಳೂ ಇದ್ದವು. ಅದರ ಮೇಲೆ ಈಗಿರುವಂತೆ ತಂಡದ ಹೆಸರು (ಇಂಡಿಯಾ) ಇರಲಿಲ್ಲ. ಪ್ರಾಯೋಜಕರು ಮತ್ತು ಬ್ರ್ಯಾಂಡ್‌ನ ಹೆಸರುಗಳನ್ನೂ ಜೆರ್ಸಿ ಹೊಂದಿರಲಿಲ್ಲ.

1992ರ ವಿಶ್ವಕಪ್‌ ವೇಳೆ  ಭಾರತದ ಆಟಗಾರರು ಕಡುನೀಲಿ ಬಣ್ಣದ ಪೋಷಾಕು ಧರಿಸಿ ಅಂಗಳಕ್ಕಿಳಿದಿದ್ದರು. ಆಗ  ಮೊದಲ ಬಾರಿಗೆ ಜೆರ್ಸಿ ಮೇಲೆ ‘ಇಂಡಿಯಾ’ ಎಂದು ಮುದ್ರಿಸಲಾಗಿತ್ತು. 1996ರ ವಿಶ್ವಕಪ್‌ ವೇಳೆ  ಮತ್ತೆ ತಿಳಿ ನೀಲಿ ಬಣ್ಣದ ಪೋಷಾಕು ಬಳಸಲಾಗಿತ್ತು. ಜೆರ್ಸಿಯ ಹಿಂದೆ ಆಟಗಾರರ ಹೆಸರು ಬಳಸುವ ಪ್ರತೀತಿಯೂ ಅಂದಿನಿಂದ ಶುರುವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT