5

ಸಾಹಿತ್ಯ ಮತ್ತು ರಾಜಕೀಯ: ಒಂದು ಚಿಂತನೆ

Published:
Updated:
ಸಾಹಿತ್ಯ ಮತ್ತು ರಾಜಕೀಯ: ಒಂದು ಚಿಂತನೆ

ಜೇನ್ ಆಸ್ಟಿನ್ 18ನೇ ಶತಮಾನದ ಕೊನೆಯಲ್ಲಿ ಬರುವ ಪ್ರಸಿದ್ಧ ಬ್ರಿಟಿಷ್ ಕಾದಂಬರಿಕಾರ್ತಿ. ಅವಳ ಕಾದಂಬರಿಗಳ ಕ್ಷೇತ್ರ (ತ್ರಿವೇಣಿಯವರ ಕಾದಂಬರಿಗಳಂತೆ) ತುಂಬಾ ಸೀಮಿತವಾದದ್ದು. ಅವಳ ಎಲ್ಲಾ ಕಾದಂಬರಿಗಳೂ ಒಂದೆರಡು ಕುಟುಂಬಗಳ ಕಥೆಯನ್ನು ವೈನೋದಿಕ ಶೈಲಿಯಲ್ಲಿ ನಿರೂಪಿಸುತ್ತಾ, ಸ್ತ್ರೀ-ಪುರುಷ ಸಂಬಂಧಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತವೆ. ‘ಮ್ಯಾನ್ಸ್‌ಫೀಲ್ಡ್‌ ಪಾರ್ಕ್’ ಎನ್ನುವುದು ಆಸ್ಟಿನ್‌ಳ ಅಷ್ಟೇನೂ ಜನಪ್ರಿಯವಲ್ಲದ ಒಂದು ಕಾದಂಬರಿ. ‘ಮ್ಯಾನ್ಸ್‌ಫೀಲ್ಡ್‌’ ಎಂಬುದು ಸರ್ ಟಾಮಸ್ ಬರ್ಟ್ರಮ್ ಎಂಬ ಶ್ರೀಮಂತನ ಭವ್ಯ ಬಂಗಲೆಯ ಹೆಸರು. ಲೇಡಿ ಬರ್ಟ್ರಮ್‌ಳ ಬಡ ಸಹೋದರಿಯ ಮಗಳು, ಫ್ಯಾನಿ ಪ್ರೈಸ್ ಮನೆಗೆಲಸಕ್ಕಾಗಿ ಮ್ಯಾನ್ಸ್‌ಫೀಲ್ಡ್‌ ಬಂಗಲೆಗೆ ಬಂದು ಸೇರುತ್ತಾಳೆ. ಅಲ್ಲಿ ಅನೇಕ ಕಷ್ಟ-ಅಪಮಾನಗಳನ್ನು ಅನುಭವಿಸುತ್ತಾ, ನಿಧಾನವಾಗಿ ಅವಳು ನಗರದ ನಯ-ನಾಜೂಕು, ಭಾಷೆ-ವರ್ತನೆ, ಸಂಸ್ಕೃತಿ, ಇತ್ಯಾದಿಗಳನ್ನು ಕಲಿತು, ಕೊನೆಗೆ ಆ ಬರ್ಟ್ರಮ್‌ನ ಮಗನನ್ನು ಮದುವೆಯಾಗುವುದು ಕಾದಂಬರಿಯ ವಸ್ತು.

ತನ್ನ ‘ಕಲ್ಚರ್ ಅಂಡ್ ಇಂಪೀರಿಯಲಿಸಂ’ (1993) ಎಂಬ ಕೃತಿಯಲ್ಲಿ ಎಡ್ವರ್ಡ್ ಸೈದ್ ಈ ಕೌಟುಂಬಿಕ ಕಾದಂಬರಿಯಲ್ಲಿ ಅಂತರ್ಗತವಾಗಿರುವ ರಾಜಕೀಯ ಆಯಾಮವನ್ನು ಮೊದಲ ಬಾರಿಗೆ ಗುರುತಿಸುತ್ತಾನೆ. ತನ್ನ ದೀರ್ಘ ವಿಶ್ಲೇಷಣೆಯಲ್ಲಿ ಅವನು ಎತ್ತುವ ಒಂದು ಮುಖ್ಯ ಪ್ರಶ್ನೆಯೆಂದರೆ ‘ಮ್ಯಾನ್ಸ್‌ಫೀಲ್ಡ್‌ ಪಾರ್ಕ್‌ನಂತಹ ಬೃಹತ್ ಬಂಗಲೆಯನ್ನು, ಆ ಬಂಗಲೆ ಸಂಕೇತಿಸುವ ಸಂಸ್ಕೃತಿಯನ್ನು ಪೋಷಿಸುತ್ತಿರುವುದು ಯಾವುದು?’. ಕಾದಂಬರಿ ಈ ಬಗ್ಗೆ ಏನೂ ಹೇಳುವುದಿಲ್ಲ.  ಒಂದೆರಡು ಸಂದರ್ಭಗಳಲ್ಲಿ ಬರ್ಟ್ರಮ್‌ ಹೆಚ್ಚು ಕಾಲ ಮನೆಯಿಂದ ದೂರವಾಗಿ ಆಂಟೀಗ್ವ ಎಂಬ ದ್ವೀಪದಲ್ಲಿರುವ ತನ್ನ ಕಬ್ಬಿನ ತೋಟಗಳನ್ನು ನೋಡಿಕೊಳ್ಳುತ್ತಾ ಅಲ್ಲಿಯೇ ಇರುತ್ತಾನೆಂಬ, ಅವನ ಪ್ಲಾಂಟೇಷನ್‌ನಲ್ಲಿ ನೂರಾರು ಗುಲಾಮರು ದುಡಿಯುತ್ತಾರೆಂಬ ಆನುಷಂಗಿಕ ವಿವರಗಳು ಬರುತ್ತವೆ. ಅರ್ಥಾತ್, ‘ಮ್ಯಾನ್ಸ್‌ಫೀಲ್ಡ್‌ ಪಾರ್ಕ್’ ನಂತಹ ಭವ್ಯ ಬಂಗಲೆ, ಅದರಲ್ಲಿರುವ ಸಂಸ್ಕೃತಿ, ಮೌಲ್ಯಗಳು ಇತ್ಯಾದಿಗಳೆಲ್ಲವೂ ಆಧರಿಸಿರುವುದು ಹಿಂಸೆಯಿಂದ ಕೂಡಿದ ಆಫ್ರಿಕನ್ ಗುಲಾಮರ ದುಡಿಮೆ ಎಂಬುದು ಸ್ಪಷ್ಟವಾಗುತ್ತದೆ.

ಒಮ್ಮೆ, ಫ್ಯಾನಿ ಮುಗ್ಧತೆಯಿಂದ ‘ಗುಲಾಮರ ಮಾರಾಟವೆಂದರೇನು’ ಎಂದು ಕೇಳಿದಾಗ ‘ಎಲ್ಲೆಡೆಯೂ ಸಾವಿನ ಮನೆಯಲ್ಲಿರುವಂತಹ ಕಡು ಮೌನ ಆವರಿಸಿತು’. ಏಕೆಂದರೆ, ಗುಲಾಮರ ಮಾರಾಟ, ಕರಿಯರ ಶೋಷಣೆ ಇತ್ಯಾದಿ ಎಲ್ಲೋ ಒಂದು ಕಡೆ (ಹೊರ ಜಗತ್ತಿನಲ್ಲಿ) ನಡೆಯುತ್ತವೆ, ನಿಜ; ಆದರೆ ಅದೆಲ್ಲಾ ‘ಸುಸಂಸ್ಕೃತ, ಸಭ್ಯ ಗೃಹಸ್ಥರ ಮನೆಯಲ್ಲಿ ಮಾತನಾಡುವ ವಿಷಯವಲ್ಲ’.

***

ಸೈದ್‌ನ ವ್ಯಾಖ್ಯಾನವನ್ನು ನನ್ನ ನೆನಪಿಗೆ ತಂದುದು ಮೈಸೂರು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರು ಮಾಡಿದರೆನ್ನಲಾಗುವ ‘ರಾಜಕೀಯ’ ಭಾಷಣವನ್ನು ಕುರಿತು ಸದ್ಯ ನಡೆಯುತ್ತಿರುವ ಚರ್ಚೆ, ಮುಖ್ಯವಾಗಿ, ‘ಸಾಹಿತ್ಯಕ ವೇದಿಕೆಯಲ್ಲಿ ರಾಜಕೀಯವನ್ನು ತಂದು ಆ ವೇದಿಕೆಯ ಘನತೆಯನ್ನು ಕುಗ್ಗಿಸಿದರು’ ಎಂಬ ನಿಲುವು. ಈ ನಿಲುವಿನ ಆಳದಲ್ಲಿ ‘ರಾಜಕೀಯ’ವೆಂಬುದರ ತಿರಸ್ಕಾರ ಹಾಗೂ ಶ್ರೇಷ್ಠ ಸಾಹಿತ್ಯದಲ್ಲಿ ‘ರಾಜಕೀಯವಿರುವುದಿಲ್ಲ’ ಎಂಬ ಗೃಹೀತಗಳಿವೆ. ಎಂದರೆ, ಇಂದು ಅಧಿಕಾರದಲ್ಲಿರುವ ವ್ಯಕ್ತಿಗಳಿಂದ ಆಗುತ್ತಿರುವ ಮೋಸ, ವಂಚನೆ ಹಾಗೂ ಭ್ರಷ್ಟಾಚಾರವೇ ‘ರಾಜಕೀಯ’ ಎಂಬ ಗೃಹೀತ.

‘ರಾಜಕೀಯ’ ಎಂಬ ಪದವನ್ನು ಅನೇಕರು ವ್ಯಾಖ್ಯಾನಿಸಿದ್ದಾರೆ. ಕೇಟ್ ಮಿಲೆಟ್ ಎಂಬ ಅಮೆರಿಕನ್ ಲೇಖಕಿ ತನ್ನ ‘ಲೈಂಗಿಕ ರಾಜಕೀಯ’ (Sexual Politics, 1970) ಎಂಬ ಕೃತಿಯಲ್ಲಿ ‘ರಾಜಕೀಯ’ ಎಂಬ ಪರಿಕಲ್ಪನೆಯನ್ನು ಹೀಗೆ ನಿರ್ವಚಿಸುತ್ತಾಳೆ: ‘The term ‘politics’ shall refer to power-structured relationships, arrangements whereby one group of persons is controlled by another’ (‘ಒಂದು ಸಮುದಾಯವು ಮತ್ತೊಂದು ಸಮುದಾಯವನ್ನು ನಿಯಂತ್ರಿಸುವ, ಅಧಿಕಾರವನ್ನಾಧರಿಸಿರುವ ಸಂಬಂಧಗಳನ್ನು ಹಾಗೂ ವ್ಯವಸ್ಥೆಗಳನ್ನು ನಾವು ‘ರಾಜಕೀಯ’ವೆಂದು ಕರೆಯಬಹುದು’– ಪುಟ 31).

ಈ ನಿರ್ವಚನವನ್ನು ಇನ್ನೂ ಸರಳಗೊಳಿಸಿ ಹೇಳಬೇಕಾದರೆ, ‘ರಾಜಕೀಯವೆಂದರೆ ಅಸಮಾನ ಅಧಿಕಾರಾಧರಿತ ಸಂಬಂಧಗಳ ವಿಮರ್ಶೆ-ವ್ಯಾಖ್ಯಾನಗಳು’. ಈ ತಾತ್ವಿಕ ನೆಲೆಯಲ್ಲಿಯೇ ಕೇಟ್ ಮಿಲೆಟ್ ಸ್ತ್ರೀ-ಪುರುಷ ಸಂಬಂಧವನ್ನು ಮತ್ತು ಅಂತಹ ಸಂಬಂಧವನ್ನು ಚಿತ್ರಿಸುವ ವಾಙ್ಮಯವನ್ನೂ ಲೈಂಗಿಕ ರಾಜಕೀಯವೆಂದು ನಿರ್ದೇಶಿಸುತ್ತಾಳೆ. ಅದೇ ನೆಲೆಯಲ್ಲಿ, ಪಿತೃಕೇಂದ್ರಿತ ಕೌಟುಂಬಿಕ ವ್ಯವಸ್ಥೆಯನ್ನು ‘ಕೌಟುಂಬಿಕ ರಾಜಕೀಯ’ವೆಂದು, ‘ಇದು ಶ್ರೇಷ್ಠ ಸಾಹಿತ್ಯ, ಇದು ಕೇವಲ ಮಹಿಳಾ ಸಾಹಿತ್ಯ’ ಎಂದು ಪ್ರಭಾವಿ ಸಂಸ್ಥೆಗಳು– ವ್ಯಕ್ತಿಗಳು ತೀರ್ಮಾನಿಸುವುದನ್ನು ‘ಸಾಹಿತ್ಯಕ ರಾಜಕೀಯ’ವೆಂದು, ಗುರುತಿಸುತ್ತಾ ಹೋಗಬಹುದು.

ಎಲ್ಲಾ ವ್ಯವಸ್ಥೆಗಳನ್ನೂ ಕಟ್ಟಿಕೊಡುವ ಅಸಮಾನ ಅಧಿಕಾರಾಧರಿತ ವೈಚಾರಿಕತೆಯನ್ನು ಫೂಕೋ ‘ಡಿಸ್‍ಕೋರ್ಸ್’ ಅಥವಾ ‘ಸಂಕಥನ’ ಎಂದು ಕರೆಯುತ್ತಾನೆ. ಎರಡು ಸಂಗತಿಗಳು, ವ್ಯಕ್ತಿಗಳು, ಸಮುದಾಯಗಳು, ಭೌಗೋಳಿಕ ಪ್ರದೇಶಗಳು... ಇವೇ ಮುಂತಾದವುಗಳ ನಡುವೆ ಸಮಾನ ಅಧಿಕಾರವಿಲ್ಲದ ಸಂಬಂಧದ ಸ್ವರೂಪವನ್ನು ಕುರಿತ ಚಿಂತನೆಯನ್ನು ರಾಜಕೀಯ ಎಂದು ಕರೆಯಬಹುದು.

ಈ ತಾತ್ವಿಕ ಹಿನ್ನೆಲೆಯಲ್ಲಿ ಸಾಹಿತ್ಯದ ಸ್ವರೂಪವು ಸ್ಪಷ್ಟವಾಗುತ್ತದೆಂದು ತೋರುತ್ತದೆ. ಭಾಷೆಯೆಂದರೆ ವ್ಯವಸ್ಥೆಗಳ ವ್ಯವಸ್ಥೆ (ಸೋಸ್ಯೋ, ‘ಅ ಸಿಸ್ಟಮ್ ಆಫ್ ಸಿಸ್ಟಮ್ಸ್’); ಅಂತಹ ಭಾಷೆಯನ್ನು ಉಪಯೋಗಿಸುವ ಎಲ್ಲಾ ಬಗೆಯ ಬರವಣಿಗೆಯೂ ವ್ಯವಸ್ಥೆಗಳ ವ್ಯವಸ್ಥೆ; ಮತ್ತು ಈ ಭಾಷಿಕ ವ್ಯವಸ್ಥೆಯ ಮೂಲಕ ಲೇಖಕನು ಸಾಮಾಜಿಕ ವ್ಯವಸ್ಥೆಯೊಂದನ್ನು, ಉಪ- ವ್ಯವಸ್ಥೆಗಳನ್ನು ಮತ್ತು ಅವು ಒಳಗೊಳ್ಳುವ ಘಟಕಗಳನ್ನು ಕುರಿತು ಚಿಂತಿಸುತ್ತಾನೆ, ಅರ್ಥೈಸುತ್ತಾನೆ-ಸಮಾಜ ವಿಜ್ಞಾನಿಯಂತೆ, ಚರಿತ್ರಕಾರನಂತೆ, ತತ್ವಜ್ಞಾನಿಯಂತೆ. ಹಾಗಾದರೆ, ‘ಸಾಹಿತ್ಯ’ವೆಂಬುದು ಸಮಾಜ ವಿಜ್ಞಾನ, ಚರಿತ್ರೆ, ತತ್ವಶಾಸ್ತ್ರ, ಮುಂತಾದವುಗಳಿಗಿಂತ ಭಿನ್ನವಾದ ವಿಶಿಷ್ಟ ಶಿಸ್ತು ಅಥವಾ ಡಿಸಿಪ್ಲಿನ್ ಅಲ್ಲವೆ? ಅಹುದು; ಆದರೆ ಇದು ತನ್ನ ಶೋಧಕ್ಕೆ ಹಾಗೂ ವ್ಯಾಖ್ಯಾನಕ್ಕೆ ಲೇಖಕ-ಲೇಖಕಿಯರು ಆರಿಸಿಕೊಳ್ಳುವ ಮಾರ್ಗದಲ್ಲಿ ಮಾತ್ರ ವಿಶಿಷ್ಟ. ಸಾಮಾಜಿಕ ವ್ಯವಸ್ಥೆಗಳನ್ನು ವ್ಯಾಖ್ಯಾನಿಸುವುದಕ್ಕೆ ಸಾಹಿತಿಯು ಸಮಾಜ ವಿಜ್ಞಾನಿಗಿಂತ-ಚರಿತ್ರಕಾರನಿಗಿಂತ ಭಿನ್ನವಾಗಿ, ಒಂದು ಕಲ್ಪಿತ ಕಥನದ ಮೂಲಕ (ಕಥೆ-ರೂಪಕ-ಅನ್ಯೋಕ್ತಿ-ಭಾಷಿಕ ವಿನ್ಯಾಸಗಳು, ಇತ್ಯಾದಿಗಳ ಮೂಲಕ) ಒಂದು ವ್ಯವಸ್ಥೆಯನ್ನು ಅಥವಾ ಅದರೊಳಗಿರುವ ಯಾವುದಾದರೂ ಒಂದು ಉಪ-ವ್ಯವಸ್ಥೆಯನ್ನು ಅರ್ಥೈಸುತ್ತಾನೆ, ವ್ಯಾಖ್ಯಾನಿಸುತ್ತಾನೆ. ಸಾಹಿತ್ಯ, ಚರಿತ್ರೆ, ಸಮಾಜ ವಿಜ್ಞಾನ, ತತ್ವಶಾಸ್ತ್ರ ಇವೆಲ್ಲವುಗಳ ಸ್ವರೂಪ ಮೂಲತಃ ‘ರಾಜಕೀಯವೆ’; ಎಂದರೆ, ಯಾವುದಾದರೂ ಒಂದು ವ್ಯವಸ್ಥೆಯಲ್ಲಿರುವ ಅಸಮಾನ ಅಧಿಕಾರಾಧರಿತ ಸಂಬಂಧವನ್ನು ವಿಶ್ಲೇಷಿಸುವುದು, ವ್ಯಾಖ್ಯಾನಿಸುವುದು, ಮೌಲ್ಯಮಾಪನ ಮಾಡುವುದು. ಈ ಕಾರಣದಿಂದಲೇ, ಫ್ರೆಡರಿಕ್ ಜೇಮ್ಸನ್‌ ಇನ್ನೂ ಮುಂದೆ ಹೋಗಿ ‘ಅಂತಿಮವಾಗಿ ಎಲ್ಲವೂ ರಾಜಕೀಯವೆ’ ಎಂಬ ನಿಲುವನ್ನು ತಳೆಯುತ್ತಾನೆ (The Political Unconscious, 1985).

ಆದುದರಿಂದ, ‘ಇದು ರಾಜಕೀಯ’ ಎಂದರೆ ಏನೂ ಹೇಳಿದಂತಾಗುವುದಿಲ್ಲ; ರಾಜಕೀಯ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ; ಅದೊಂದು ಪರಿಕಲ್ಪನೆ. ವಿಮರ್ಶೆ ಎತ್ತಬೇಕಾದ ಪ್ರಶ್ನೆಯೆಂದರೆ ‘ಈ ಕೃತಿ– ಬರವಣಿಗೆ– ಮಾತು ರಾಜಕೀಯವೆ ಅಥವಾ ಅಲ್ಲವೆ’ ಎಂಬುದಲ್ಲ. ಬದಲಿಗೆ, ಈ ಕೃತಿ ತನ್ನ ಕಥನದ ಮೂಲಕ ಯಾವ ವ್ಯವಸ್ಥೆಯನ್ನು– ವ್ಯವಸ್ಥೆಗಳನ್ನು ವಿಶ್ಲೇಷಿಸುತ್ತದೆ, ವ್ಯಾಖ್ಯಾನಿಸುತ್ತದೆ, ಆ ವ್ಯವಸ್ಥೆಯನ್ನು ಕುರಿತ ಕೃತಿಯ ಒಟ್ಟಾರೆ ನಿಲುವೇನು ಮತ್ತು ಆ ನಿಲುವು ಸಮಾಜಕ್ಕೆ ಆರೋಗ್ಯಕರವೆ ಎಂಬ ಪ್ರಶ್ನೆಗಳು. ಯಾವ ಕೃತಿ ಅತಿ ಹೆಚ್ಚಿನ ವ್ಯವಸ್ಥೆಗಳನ್ನು ಹಾಗೂ ಭಿನ್ನ ಘಟಕಗಳನ್ನು ವ್ಯಾಖ್ಯಾನಿಸುತ್ತದೋ ಅದು ಶ್ರೇಷ್ಠ ಕೃತಿ–ಮಹಾಭಾರತದಂತೆ, ಪಂಪನ ಆದಿಪುರಾಣದಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry