ವರ್ತೂರು ಕೆರೆಯಲ್ಲಿ ಮತ್ತೆ ನೊರೆ!

ಬೆಂಗಳೂರು: ಮಹದೇವಪುರ ಕ್ಷೇತ್ರ ವ್ಯಾಪ್ತಿಯ ವರ್ತೂರು ಕೆರೆ ಕೋಡಿಯಲ್ಲಿ ಮತ್ತೆ ಭಾರಿ ನೊರೆ ಕಾಣಿಸಿಕೊಂಡಿದೆ. ಇದರಿಂದಾಗಿ ಕೆರೆ ದಂಡೆ ಮೇಲೆ ಮೇಲೆ ಸಂಚರಿಸುವವರು ಮತ್ತು ಸುತ್ತಮುತ್ತಲ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.
ವರ್ತೂರು ಕೆರೆಗೆ ರಾಮಗೊಂಡನಹಳ್ಳಿ ಹಾಗೂ ವರ್ತೂರು ಗ್ರಾಮದ ಬಳಿ ಎರಡು ಕೋಡಿಗಳಿವೆ. ಎರಡೂ ಕೋಡಿಗಳಲ್ಲಿ ರಾಶಿ ರಾಶಿ ನೊರೆ ಉತ್ಪತ್ತಿಯಾಗುತ್ತಿದೆ. ನೊರೆ ಗಾಳಿಯಲ್ಲಿ ತೇಲುತ್ತಾ ರಸ್ತೆ ಹಾಗೂ ಕೋಡಿ ಬಳಿಯ ಮನೆಗಳನ್ನು ಆವರಿಸುತ್ತಿದೆ. ನೊರೆ ದುರ್ನಾತ ಬೀರುತ್ತಿರುವುದರಿಂದ ಉಸಿರಾಟ, ಅಲರ್ಜಿ, ತುರಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಮೂಗು ಮುಚ್ಚಿಕೊಂಡು ದಿನ ಕಳೆಯುವಂತಾಗಿದೆ ಎಂದು ಸ್ಥಳೀಯರಾದ ಶ್ರೀಧರ ದೂರಿದರು.
ವರ್ತೂರು ಕೋಡಿಯಲ್ಲಿ ನೊರೆ ತಡೆಗಟ್ಟಲು ಕೆಲ ತಿಂಗಳುಗಳ ಹಿಂದೆ ಎತ್ತರದ ಜಾಲರಿ (ಮೆಶ್) ಅಳವಡಿಸಲಾಗಿದೆ. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ನೊರೆ ಹಾವಳಿ ಹೆಚ್ಚಿರುವುದರಿಂದ ಗಾಳಿ ಬೀಸಿದಾಗ, ಮೆಶ್ ದಾಟಿ ನೊರೆ ತೂರಿ ಬರುತ್ತಿದೆ ಎಂದು ಅವರು ಅಳಲು ತೋಡಿಕೊಂಡರು.
ಕೆರೆಕೋಡಿಯಲ್ಲಿ ನೊರೆಯ ಪ್ರಮಾಣವನ್ನು ಕಡಿಮೆ ಮಾಡಲು ಸ್ಪ್ರೀಂಕ್ಲರ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಮೇಸ್ಸ್‍ಅನ್ನು ಅಳವಡಿಸಿದ ಬಳಿಕ ಸ್ಪ್ರೀಂಕ್ಲರ್ ವ್ಯವಸ್ಥೆಯನ್ನು ತೆಗೆದು ಹಾಕಲಾಗಿದೆ. ಹೀಗಾಗಿ ನೊರೆ ಪ್ರಮಾಣ ಹೆಚ್ಚಾಗಿ ಮೇಸ್ಸ್‍ಅನ್ನು ದಾಟಿಕೊಂಡು ರಸ್ತೆಯ ಮೇಲೆ ಬೀಳುತ್ತಿದೆ ಎಂದು ಅವರು ದೂರಿದರು.
‘ಮಳೆ ಬಂದಾಗ ಕೆರೆಯಲ್ಲಿ ಹೆಚ್ಚು ನೊರೆ ಕಾಣಿಸಿಕೊಳ್ಳುತ್ತಿದೆ. ಗ್ರಾಮದಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನೊರೆ ಬಂದಾಗ ಅಧಿಕಾರಿಗಳು ಕಾಟಾಚಾರಕ್ಕೆ ಕೆರೆಯ ನೀರಿನ ಮಾದರಿ ಸಂಗ್ರಹಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ನೊರೆ ಸಮಸ್ಯೆ ಶಾಶ್ವತವಾಗಿ ತಡೆಯಲು ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ ಕ್ರಮಕೈಗೊಂಡಿಲ್ಲ’ ಎಂದು ಸ್ಥಳೀಯ ನಿವಾಸಿ ಪಿ.ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.