ಮಲ್ಯ ವಿಚಾರಣೆ ಇಂದು ಆರಂಭ

ಲಂಡನ್ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ವಿಜಯ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರದಿಂದ ಲಂಡನ್ ನ್ಯಾಯಾಲಯದಲ್ಲಿ ಆರಂಭವಾಗಲಿದೆ.
ಸದ್ಯ ಜಾಮೀನಿನ ಮೇಲೆ ಹೊರಗಿರುವ ಮಲ್ಯ ಸೋಮವಾರ ಖುದ್ದಾಗಿ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಹಾಜರಾಗಲಿದ್ದಾರೆ.
ನ್ಯಾಯಾಧೀಶೆ ಎಮ್ಮಾ ಲೂಯಿಸ್ ಅವರು ಮಂಗಳವಾರದಿಂದ ಡಿಸೆಂಬರ್ 14ರವರೆಗೆ ಮಲ್ಯ ಹಸ್ತಾಂತರ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ತೀರ್ಪು ಹೊರಬೀಳುವ ಸಾಧ್ಯತೆ ಇದೆ.
ಒಂದು ವೇಳೆ ನ್ಯಾಯಾಲಯ ಮಲ್ಯ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದಲ್ಲಿ ಎರಡು ತಿಂಗಳ ಒಳಗಾಗಿ ಬ್ರಿಟನ್ ಸರ್ಕಾರ ಹಸ್ತಾಂತರ ಆದೇಶ ಹೊರಡಿಸಬೇಕಾಗುತ್ತದೆ. ಆದರೆ, ಅದಕ್ಕೂ ಮೊದಲು ಸರಣಿ ಅರ್ಜಿ, ಮೇಲ್ಮನವಿ ಸೇರಿದಂತೆ ಅನೇಕ ಸಂಕೀರ್ಣ ಕಾನೂನು ಪ್ರಕ್ರಿಯೆಗಳು ನಡೆಯುವ ಸಾಧ್ಯತೆ ಇರುತ್ತದೆ.
ಬ್ರಿಟನ್ ಮ್ಯಾಟ್ರಿಕ್ಸ್ ಚೇಂಬರ್ಸ್‌ನ ಹೆಸರಾಂತ ವಕೀಲೆ ಕ್ಲೇರ್ ಮಾಂಟ್ ಗೋಮರಿ ನೇತೃತ್ವದ ವಕೀಲರ ತಂಡ ಮಲ್ಯ ಪರ ವಾದ ಮಂಡಿಸಲಿದೆ. ಹಸ್ತಾಂತರ ಪ್ರಕರಣಗಳಲ್ಲಿ ಪರಿಣತಿ ಗಳಿಸಿರುವ ಮಾರ್ಕ್ ಸಮ್ಮರ್ಸ್ ನೇತೃತ್ವದ ದ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (ಸಿಪಿಎಸ್) ಸಂಸ್ಥೆ ಭಾರತ ಸರ್ಕಾರದ ಪರ ವಾದ ಮಂಡಿಸಲಿದೆ.
ಭಾರತದ ಜೈಲುಗಳ ಗುಣಮಟ್ಟದ ಬಗ್ಗೆ ಶಂಕೆ: ಭಾರತದಲ್ಲಿಯ ಜೈಲುಗಳ ದಯನೀಯ ಸ್ಥಿತಿ ಮತ್ತು ಕೈದಿಗಳ ಹಕ್ಕುಗಳ ರಕ್ಷಣೆ ಬಗ್ಗೆ ನ್ಯಾಯಾಧೀಶೆ ಎಮ್ಮಾ ಲೂಯಿಸ್ ಈ ಹಿಂದಿನ ವಿಚಾರಣೆ ವೇಳೆ ಕಳವಳ ವ್ಯಕ್ತಪಡಿಸಿದ್ದರು.
ನ್ಯಾಯಮೂರ್ತಿಗಳು ಎತ್ತಿದ ಪ್ರಶ್ನೆಯನ್ನು ಭಾರತದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಮಸ್ಯೆ ಬಗೆಹರಿಸುವತ್ತ ಅಧಿಕಾರಿಗಳು ಗಮನ ಹರಿಸಿದ್ದಾರೆ ಎಂದು ಸಿಪಿಎಸ್ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.
ಒಂದು ವೇಳೆ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಿದಲ್ಲಿ ಅವರನ್ನು ಇರಿಸುವ ಜೈಲಿನಲ್ಲಿರುವ ವ್ಯವಸ್ಥೆ ಮತ್ತು ಸುರಕ್ಷಾ ಕ್ರಮಗಳ ಬಗ್ಗೆ ಭಾರತದ ಅಧಿಕಾರಿಗಳು ಇ–ಮೇಲ್ ಮೂಲಕ ನೀಡಿರುವ ಮಾಹಿತಿ ಮತ್ತು ಚಿತ್ರಗಳನ್ನು ಸಿಪಿಎಸ್ ತಂಡ ನ್ಯಾಯಾಲಯದ ಗಮನಕ್ಕೆ ತರಲಿದೆ.
ಹಲವರ ಹೇಳಿಕೆ ಪಡೆಯುವ ಸಾಧ್ಯತೆ: ವಿಮಾನಯಾನ ತಜ್ಞ ಡಾ. ಬಿ. ಹಂಫ್ರಿ, ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ಮುಖ್ಯ ಹಣಕಾಸು ಅಧಿಕಾರಿ ಮಾರ್ಗರೆಟ್ ಸ್ವೀನಿ, ಭಾರತದ ಕಾನೂನುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಪ್ರಾಧ್ಯಾಪಕ ಲೌ ಸೇರಿದಂತೆ ಹಲವರ ಹೇಳಿಕೆ ಪಡೆಯುವ ಸಾಧ್ಯತೆ ಇದೆ.
ಸದ್ಯ ಲಂಡನ್‌ನಿಂದ 30 ಮೈಲು ದೂರವಿರುವ ಟೆವಿನ್ ಎಂಬಲ್ಲಿನ ಲೇಡಿವಾಕ್ ಎಸ್ಟೇಟ್‌ನಲ್ಲಿರುವ ಮಲ್ಯ ಭಾರತಕ್ಕೆ ತೆರಳಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ನ್ಯಾಯಾಲಯ ಆದೇಶ ನೀಡಿದಲ್ಲಿ ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಮಲ್ಯ ಭಾರತಕ್ಕೆ ಮರಳಿ ಕಾನೂನು ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ.
ಮಲ್ಯ ಮೇಲಿರುವ ಆರೋಪ ಏನು?
ಭಾರತದ ಹಲವು ಬ್ಯಾಂಕ್‌ಗಳಿಂದ ಪಡೆದಿದ್ದ ₹9 ಸಾವಿರ ಕೋಟಿ ಸಾಲ ಮರು ಪಾವತಿ ಮಾಡದೆ 2016ರ ಮಾರ್ಚ್‌ನಲ್ಲಿ ಮಲ್ಯ ಬ್ರಿಟನ್‌ಗೆ ಪಲಾಯನ ಮಾಡಿದ್ದರು.
ಜಾರಿ ನಿರ್ದೇಶನಾಲಯ (ಇ.ಡಿ) ಮಲ್ಯ ವಿರುದ್ಧ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರೆಡ್ ಕಾರ್ನರ್ ನೋಟಿಸ್ ಸೇರಿದಂತೆ ಹಲವು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.
ಅಕ್ಟೋಬರ್‌ನಲ್ಲಿ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಮಲ್ಯ ಅವರನ್ನು ಬಂಧಿಸಿದ್ದರು. ಆದರೆ, ಕೆಲ ಹೊತ್ತಿನಲ್ಲಿಯೇ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.