7

ಕ್ಷಿಪ್ರವಾಗಿ ಹಣ ಗಳಿಸಲು ಹೆಚ್ಚಿದ ಆದ್ಯತೆ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯಲ್ಲಿ ತ್ವರಿತ ಅವಕಾಶ- ತ್ವರಿತ ಲಾಭ, ಕ್ಷಿಪ್ರ ಹಣಗಳಿಕೆಯೊಂದೇ ಸದ್ಯದ ವಹಿವಾಟಿನ ಆದ್ಯತೆಯಾಗಿದೆ. ಇದಕ್ಕೆ ಈ ವಾರ ಹಲವಾರು ಕಂಪನಿಗಳು ಪ್ರದರ್ಶಿಸಿದ ಅಬ್ಬರದ ಏರಿಳಿತಗಳೇ ಸಾಕ್ಷಿಯಾಗಿವೆ. 

ಸೋಮವಾರ ಮ್ಯೂಚುವಲ್ ಫಂಡ್ ಸಂಸ್ಥೆ ಫ್ರಾಂಕ್ಲಿನ್ ಟೆಂಪಲ್ ಟನ್  17.81 ಲಕ್ಷ  ರಾಲಿಸ್ ಇಂಡಿಯಾ  ಷೇರನ್ನು ₹230 ರಂತೆ ಖರೀದಿಸಿತು. ನಂತರ  ದಿನಗಳಲ್ಲಿ ಷೇರಿನ ಬೆಲೆ ₹258  ಕ್ಕೆ ಜಿಗಿದು  ₹240 ರಲ್ಲಿ ವಾರಾಂತ್ಯ ಕಂಡಿತು.

ಮಂಗಳವಾರ ಕೆಳಮಧ್ಯಮ ಶ್ರೇಣಿ ಕಂಪನಿ ಬಾಂಬೆ ರೇಯಾನ್ ಫ್ಯಾಷನ್ಸ್ ₹168 ರ ಸಮೀಪದಿಂದ ದಿಢೀರನೆ ₹35 ರಷ್ಟು  ಜಿಗಿತ ಕಂಡು ನಂತರದ ದಿನದಲ್ಲಿ ₹214 ರ ವಾರ್ಷಿಕ ಗರಿಷ್ಠ ತಲುಪಿ ₹187 ರ ಸಮೀಪ ವಾರಾಂತ್ಯ ಕಂಡಿತು.

ಮತ್ತೊಂದು ಪ್ರಮುಖ ಕಂಪನಿ ಎವರೆಸ್ಟ್ ಇಂಡಸ್ಟ್ರೀಸ್ ಷೇರು ಅಂದು ಸುಮಾರು ₹96 ರಷ್ಟು ಜಿಗಿತ ಕಂಡು ನಂತರದ ದಿನ ₹583 ರ ವಾರ್ಷಿಕ ಗರಿಷ್ಠ ದಾಖಲಿಸಿತು. ಒಂದೇ ವಾರದಲ್ಲಿ ಷೇರಿನ ಬೆಲೆ ₹469 ರಿಂದ ₹583 ಕ್ಕೆ ಜಿಗಿತ ಕಂಡಿರುವುದು ವಿಸ್ಮಯಕಾರಿ ಸಂಗತಿಯಾಗಿದೆ.

ಅದೇ ರೀತಿ, ಇದೇ ಸಮೂಹದ ಮತ್ತೊಂದು ಕಂಪನಿ ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್ ಆಗಸ್ಟ್ ತಿಂಗಳಲ್ಲಿ ವಾರ್ಷಿಕ ಕನಿಷ್ಠ ₹ 490 ರಲ್ಲಿದ್ದು ಅಲ್ಲಿಂದ ಚೇತರಿಕೆ ಕಂಡು   ಒಂದು ತಿಂಗಳಲ್ಲಿ ₹574 ರ ಸಮೀಪದಿಂದ ₹752 ರ ವಾರ್ಷಿಕ ಗರಿಷ್ಠ ದಾಖಲಿಸಿದೆ. ಮಂಗಳವಾರ 28 ರಂದು ಸುಮಾರು ₹90 ರಷ್ಟು ಏರಿಕೆ ಪ್ರದರ್ಶಿಸಿ ಅಂದೇ  ಗರಿಷ್ಠದಿಂದ ಮೂವತ್ತು ರೂಪಾಯಿಗಳ ಇಳಿಕೆಗೊಳಗಾಯಿತು.

ಲ ಒಪಾಲಾ ಆರ್‌ಜಿ ಕಂಪನಿಯ ಷೇರಿನ ಬೆಲೆಯೂ ₹100 ರಷ್ಟು ಏರಿಕೆ ಕಂಡಿತಾದರೂ ಅಂದೇ ಈ ಗರಿಷ್ಠದಿಂದ ₹35 ರಷ್ಟು ಇಳಿಕೆ ಕಂಡಿತು. ಗುರುವಾರ ಈ ಷೇರು ವಾರ್ಷಿಕ ಗರಿಷ್ಠ ₹685ನ್ನು ತಲುಪಿ ₹620ರಲ್ಲಿ ವಾರಾಂತ್ಯ ಕಂಡಿದೆ.  ಒಂದೇ ವಾರದಲ್ಲಿ ಈ ಷೇರಿನ ಬೆಲೆ ₹545 ರ ಸಮೀಪದಿಂದ ₹685 ರವರೆಗೂ ಚಿಮ್ಮಿರುವುದು ಪೇಟೆಯಲ್ಲಿ ನಡೆಯುತ್ತಿರುವ ತ್ವರಿತ ಚಟುವಟಿಕೆಗೆ ಹಿಡಿದ ಕನ್ನಡಿಯಾಗಿದೆ.

ವಿಐಪಿ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು  ಒಂದು ತಿಂಗಳಿನಲ್ಲಿ ₹276 ರ ಸಮೀಪದಿಂದ ₹393 ರವರೆಗೂ ಏರಿಕೆ ಕಂಡಿದ್ದು ಒಂದು ವಾರದಲ್ಲಿ ₹337 ರಿಂದ ₹395 ರ ವಾರ್ಷಿಕ ಗರಿಷ್ಠಕ್ಕೆ ತಲುಪಿ ₹360 ರಲ್ಲಿ ಕೊನೆಗೊಂಡಿರಿವುದು ಕ್ಷಿಪ್ರ ಏರಿಕೆ ತ್ವರಿತ ಹಣ ಮಾಡುವ ನಿಯಮಕ್ಕೆ ಮತ್ತೊಂದು ಉದಾಹರಣೆ.

ಸಾಧನೆಯಾಧಾರಿಸಿದ ಏರಿಕೆಯನ್ನು ಅಗ್ರಮಾನ್ಯ ಕಂಪನಿಗಳಲ್ಲಿ ಕಾಣದಾಗಿದೆ. ಇದಕ್ಕೆ ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರ ಕಾರಣವಿದ್ದರೂ ಇರಬಹುದು.

ಪ್ರತಿ ಷೇರಿಗೆ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿರುವ ಕ್ಯಾಸ್ಟ್ರಾಲ್ ಇಂಡಿಯಾ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿತು. ಟಾಟಾ ಗ್ಲೋಬಲ್ ಬೆವರೇಜಸ್  ಕಂಪನಿಯ ಷೇರಿನ ಬೆಲೆಯು ಈ ತಿಂಗಳಲ್ಲಿ ₹221 ರಿಂದ ₹293 ರವರೆಗೂ ಏರಿಕೆ ಪ್ರದರ್ಶಿಸಿ ₹283 ರಲ್ಲಿ ವಾರಾಂತ್ಯ ಕಂಡಿದೆ. ಅಂದರೆ ಶೇ 30 ಕ್ಕೂ  ಹೆಚ್ಚಿನ ಏರಿಕೆ ಕಂಡಿದೆ. ಪಿಐ ಇಂಡಸ್ಟ್ರೀಸ್ ಷೇರಿನ ಬೆಲೆ ಸಹ ₹795 ರಿಂದ ₹989 ರವರೆಗೂ ಒಂದೇ ತಿಂಗಳಿನಲ್ಲಿ ಏರಿಕೆ ಕಂಡಿದೆ.

ಗುರುವಾರ ನೊಮುರಾ ಟ್ರಸ್ಟ್ ಮತ್ತು ನಿಧಿಗಳು 23.13 ಲಕ್ಷ ಮ್ಯಾಕ್ಲಿಯೋಡ್ ರಸ್ಸಲ್ ಷೇರನ್ನು ₹205 ರಲ್ಲಿ ಖರೀದಿಸಿದ ನಂತರ ಷೇರಿನ ಬೆಲೆ ₹ 248 ರವರೆಗೂ ಏರಿಕೆ ಕಂಡಿತು. ಆದರೆ ಅಂದೇ ₹234 ರಲ್ಲಿ ಕೊನೆಗೊಂಡರೆ, ₹216 ರವರೆಗೂ ಶುಕ್ರವಾರ ಕುಸಿದು ₹219 ರಲ್ಲಿ ವಾರಾಂತ್ಯ ಕಂಡಿತು.   ಅಂದೇ ಝಯ್ ಡಸ್ ವೆಲ್ ನೆಸ್ ಕಂಪನಿಯ 5 ಲಕ್ಷ ಷೇರುಗಳನ್ನು ರಿಲಯನ್ಸ್ ಮ್ಯೂಚುವಲ್ ಫಂಡ್ ₹909.99 ರಂತೆ ಖರೀದಿಸಿದ ಕಾರಣ ಷೇರಿನ ಬೆಲೆ ನೇರವಾಗಿ ಜಿಗಿತ ಕಂಡು ₹948 ಕ್ಕೆ ತಲುಪಿತಾದರೂ ಸ್ಥಿರತೆ ಕಾಣದೆ ₹910 ರ ಸಮೀಪಕ್ಕೆ ಹಿಂದಿರುಗಿತು. ಒಂದೇ ದಿನ ಈ ರೀತಿಯ ಕಲ್ಪನೆ ಮೀರಿದ ಏರಿಳಿತಗಳು ಪ್ರದರ್ಶಿತವಾಗುತ್ತಿರುವುದು ಪೇಟೆಯಲ್ಲಿ ಕೇವಲ ವ್ಯಾಲ್ಯೂ ಪಿಕ್ ಪ್ರಾಫಿಟ್ ಬುಕ್ ಚಟುವಟಿಕೆ ನಡೆಯುತ್ತಿರುವುದನ್ನು ದೃಢಪಡಿಸುತ್ತದೆ.

ವಾರಾಂತ್ಯದ ಶುಕ್ರವಾರ ಆರಂಭದಲ್ಲಿ ಸಂವೇದಿ ಸೂಚ್ಯಂಕವು ಏರಿಕೆ ಕಂಡರೂ ದಿನದ ಮಧ್ಯಂತರದಿಂದ ಸತತವಾದ ಇಳಿಕೆಗೊಳಪಟ್ಟಿತು.

ಬ್ಯಾಂಕಿಂಗ್ ವಲಯದ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯಾ ಬುಲ್ ಹೌಸಿಂಗ್, ಇಂಡಿಯಾ ಬುಲ್ ರಿಯಲ್ ಎಸ್ಟೇಟ್, ದಿವಾನ್ ಹೌಸಿಂಗ್ ಫೈನಾನ್ಸ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಫೈನಾನ್ಸ್ ಕಾರ್ಪೊರೇಷನ್ ನಂತಹ ಅಗ್ರಮಾನ್ಯ ಕಂಪನಿಗಳು ಭಾರಿ ಕುಸಿತ ಕಂಡಿವೆ.

ಒಟ್ಟಾರೆ 846 ಅಂಶಗಳ ಇಳಿಕೆಗೊಳಗಾದ ಸಂವೇದಿ ಸೂಚ್ಯಂಕದ ಪ್ರಭಾವದಿಂದ ಭಾರಿ ಕುಸಿತಕ್ಕೊಳಗಾದ ಸಾಧನೆಯಾಧಾರಿತ ಕಂಪನಿಗಳು ಹೂಡಿಕೆಗೆ ಉತ್ತಮ ಅವಕಾಶ ಕಲ್ಪಿಸಿವೆ.

ವಿದೇಶಿ ವಿತ್ತೀಯ ಸಂಸ್ಥೆಗಳು ₹2,466  ಕೋಟಿ ಮೌಲ್ಯದ  ಷೇರುಗಳನ್ನು ಮಾರಾಟ ಮಾಡಿದರೆ, ಸ್ಥಳೀಯ ವಿತ್ತೀಯ ಸಂಸ್ಥೆಗಳು ₹1,791 ಕೋಟಿ ಮೌಲ್ಯದ ಷೇರು ಖರೀದಿಸಿವೆ.  ಪೇಟೆಯ ಬಂಡವಾಳ ಮೌಲ್ಯ  ಹಿಂದಿನ ವಾರದ ₹146.75 ಲಕ್ಷ ಕೋಟಿಯಿಂದ ₹144.52 ಲಕ್ಷ ಕೋಟಿಗೆ ಕುಸಿಯಿತು.

ಹಕ್ಕಿನ ಷೇರು: ಹಾಟ್ಸನ್ ಆಗ್ರೋ ಪ್ರಾಡಕ್ಟ್ ಲಿಮಿಟೆಡ್ ಕಂಪನಿ ಡಿಸೆಂಬರ್ 5 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.

(ಮೊ: 886313380, ಸಂಜೆ 4.30 ರನಂತರ)

**

‌ವಾರದ ವಿಶೇಷ

ಹಿಂದಿನ ವಾರ ಆಫರ್ ಫಾರ್ ಸೇಲ್ ಮೂಲಕ ಕ್ವೆಸ್ ಕಾರ್ಪ್ ಲಿ ಕಂಪನಿ ಷೇರು ಪ್ರದರ್ಶಿಸಿದ ರಭಸದ ಏರಿಳಿತಗಳು ಈ ವಾರವೂ ಮುಂದುವರೆದಿದೆ.  ಕಳೆದ ಶುಕ್ರವಾರ ಕಂಪನಿಯು ರಿಟೇಲ್ ಹೂಡಿಕೆದಾರರಿಗೆ ವಿತರಣೆಯ ಗವಾಕ್ಷಿಯನ್ನು ತೆರೆದಿಟ್ಟಿತ್ತು. ಅಂದು ಪೇಟೆಯಲ್ಲಿ ಷೇರಿನ ಬೆಲೆಯೂ ಅತಿಯಾದ ಏರಿಳಿತಗಳನ್ನು ಪ್ರದರ್ಶಿಸಿತು. ಸಮಾನಾಂತರವಾಗಿ ಈ ಏರಿಳಿತದ ಪ್ರಭಾವವು ಆಫರ್ ಫಾರ್ ಸೇಲ್ ಮೇಲೂ ಪ್ರಭಾವ ಬೀರಿದೆ.

ಗುರುವಾರ ಆಫರ್ ಫಾರ್ ಸೇಲ್‌ನಲ್ಲಿ  ಮ್ಯೂಚುವಲ್ ಫಂಡ್‌ಗಳು, ಇನ್ಶುರನ್ಸ್‌ ಕಂಪನಿಗಳು, ವಿತ್ತೀಯ ಸಂಸ್ಥೆಗಳು, ವಿದೇಶಿ ವಿತ್ತೀಯ ಸಂಸ್ಥೆಗಳು, ಬ್ಯಾಂಕ್ ಗಳು ಭಾಗವಹಿಸಲು ಅವಕಾಶವಿದ್ದು, ಶುಕ್ರವಾರ ರಿಟೇಲ್ ಹೂಡಿಕೆದಾರರಿಗೆ ಆಫರ್ ಫಾರ್ ಸೇಲ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಒಂದೇ  ಕಂಪನಿಯ  ಷೇರು ವಿತರಣೆಯಲ್ಲಿ ಎರಡು ದಿನಗಳ ಪೇಟೆಯಲ್ಲಿ ಉಂಟಾದ ವಿಭಿನ್ನ ನಡೆಯ  ಕಾರಣ ಬೇರೆ ಬೇರೆ ದರಗಳಲ್ಲಿ ವಿತರಣೆ ಮಾಡಲಾಗಿದೆ.  ಗುರುವಾರ ರಿಟೇಲ್ ಹೊರತುಪಡಿಸಿ ವಿತರಣೆ ಮಾಡಿದ ದರವು ಪ್ರತಿ ಷೇರಿಗೆ ₹ 851.10 ಆಗಿದ್ದರೆ ಶುಕ್ರವಾರ ರಿಟೇಲ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ ₹891.35 ರಂತಾಗಿದೆ. ಅಂದರೆ ರಿಟೇಲ್ ಹೂಡಿಕೆದಾರರಿಗೆ ಸುಮಾರು ನಲವತ್ತು ರೂಪಾಯಿಗಳ ಹೆಚ್ಚಿನ ದರದಲ್ಲಿ ವಿತರಣೆಯಾಗಿದೆ. ಷೇರಿನ ಬೆಲೆಯು ವಿತರಣೆ ದಿನದ ನಂತರ ಏರಿಕೆ ಕಂಡಿದ್ದರು ಸಹ ಎರಡು ಸಮೂಹ ಅಂದರೆ ವಿತ್ತೀಯ ಸಂಸ್ಥೆಗಳು ಮತ್ತು ರಿಟೇಲ್ ಹೂಡಿಕೆದಾರರ ವಿತರಣೆ ಅಂತರವು ನ್ಯಾಯಸಮ್ಮತವೆನ್ನಲಾಗದು.

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಲ್ಲಿ ಸುರಕ್ಷಿತ ಎಂಬ ಕಲ್ಪನೆ ಇತ್ತೀಚಿಗೆ ಹೆಚ್ಚಿನವರಲ್ಲಿ ಮೂಡಿದೆ. ಇದು ತಪ್ಪು ಕಲ್ಪನೆ. ಕಾರಣ ಮ್ಯೂಚುವಲ್‌ ಫಂಡ್ ನಲ್ಲಿರುವ ಯೋಜನೆಗಳು ಸಾವಿರಾರು. ಅದರಲ್ಲಿ ಇಂತಹ ಯೋಜನೆ ಆಯ್ಕೆ ಮಾಡಿಕೊಳ್ಳುತ್ತೀರಿ, ಆಯ್ಕೆ ಮಾಡಿಕೊಂಡ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ, ಅದರಿಂದ ಬಂದ ಆದಾಯವನ್ನಾಧರಿಸಿ ಆ ಯೋಜನೆಯ ಎನ್‌ಎವಿ ನಿರ್ಧರಿತವಾಗುವುದು. ಎನ್‌ಎವಿ ಹೆಚ್ಚಾದಾಗ ಮಾತ್ರ ಹೂಡಿಕೆ ಲಾಭದಲ್ಲಿದೆ ಎನ್ನಬಹುದು.

ಅಕ್ಟೋಬರ್ ತಿಂಗಳಲ್ಲಿ 1.73 ಕೋಟಿ ವ್ಯವಸ್ಥಿತ ಹೂಡಿಕೆ (ಎಸ್‌ಐಪಿ) ಖಾತೆಗಳನ್ನು ಆರಂಭಿಸಲಾಗಿದ್ದು,  ಈಕ್ವಿಟಿ ಯೋಜನೆಗಳಲ್ಲಿ ₹16,000 ಕೋಟಿಯಷ್ಟು ಹಣ ಹೂಡಿಕೆಯಾಗಿದೆ.  ಇಂತಹ ಸಣ್ಣ ಹೂಡಿಕೆದಾರರ ಹಣದಿಂದ ಆಫರ್ ಫಾರ್ ಸೇಲ್ ನಲ್ಲಿ ಕೊಂಡ ಷೇರಿಗೆ ಕಡಿಮೆ ಬೆಲೆಯಲ್ಲಿ ವಿತರಣೆ,  ಸಣ್ಣ ಹೂಡಿಕೆದಾರರು ಆಫರ್ ಫಾರ್ ಸೇಲ್‌ನಲ್ಲಿ ನೇರವಾಗಿ ಭಾಗವಹಿಸಿದರೆ ಅದಕ್ಕೆ ಹೆಚ್ಚಿನ ಬೆಲೆ ನೀಡಬೇಕಾದ ತಾರತಮ್ಯ ಸರಿಯಲ್ಲ. ಹಾಗಿದ್ದಲ್ಲಿ ವಿತರಣೆಯನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿ ವಿತ್ತೀಯ ಸಂಸ್ಥೆಗಳು, ವಿತ್ತೀಯೇತರರು, ಸಣ್ಣ ಹೂಡಿಕೆದಾರರು ಭಾಗವಹಿಸಿ ಏಕರೂಪದ ದರದಲ್ಲಿ ಷೇರುಪಡೆಯುವಂತಾಗುವುದು ಸಮಂಜಸಎನ್ನಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry