ಬುಧವಾರ, ಮಾರ್ಚ್ 3, 2021
26 °C

ಪ್ರಧಾನಿ ಮೋದಿ ‘ಮೂಗು’ ಕತ್ತರಿಸಲು ಕಾಂಗ್ರೆಸ್‌ ಕಸರತ್ತು

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಪ್ರಧಾನಿ ಮೋದಿ ‘ಮೂಗು’ ಕತ್ತರಿಸಲು ಕಾಂಗ್ರೆಸ್‌ ಕಸರತ್ತು

ಅಹಮದಾಬಾದ್: ಗುಜರಾತಿನಲ್ಲಿ ಈಗ ಹಿಂದ ಮತ್ತು ಹಿಂದೂ ಮತಗಳದ್ದೇ ಮಾತು. ಚುನಾವಣಾ ಪ್ರಚಾರ ಕೂಡ ಇವುಗಳ ನಡುವೆಯೇ ಗಿರಕಿ ಹೊಡೆಯುತ್ತಿದೆ.

‘ಗುಜರಾತ್ ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಮೂಗು ಇದ್ದ ಹಾಗೆ. ಇದನ್ನು ಕತ್ತರಿಸಿದರೆ ಇಡೀ ದೇಶದಲ್ಲಿಯೇ ಬಿಜೆಪಿ ಕಷ್ಟ ಅನುಭವಿಸಬೇಕಾಗುತ್ತದೆ. ಅದಕ್ಕೆ ಹೇಗಾದರೂ ಇದನ್ನು ಉಳಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತದೆ. ಮೂಗು ಕತ್ತರಿಸಲು ಕಾಂಗ್ರೆಸ್ ಹೊಂಚು ಹಾಕಿ ಕುಳಿತಿದೆ. ಮೋದಿ ಮೂಗು ಕತ್ತರಿಸಲು ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೆಶ್ ಠಾಕೂರ್ ಅವರು ರಾಹುಲ್ ಗಾಂಧಿ ಜೊತೆಗೂಡಿ ಚಾಕು ಮಸೆಯುತ್ತಿದ್ದಾರೆ. ಆದರೆ ಅವರ ಚಾಕು ಹರಿತವಾಗುವುದರೊಳಗೆ ಗುಜರಾತ್ ಚುನಾವಣೆ ಮುಗಿದು ಹೋಗುತ್ತದೆ’ ಎಂದು ಪಟೇಲ್ ಸಮುದಾಯದ ಹಿರಿಯ ಮುಖಂಡ ದಿನೇಶ್ ಪಟೇಲ್ ಹೇಳುತ್ತಾರೆ.

ಅಹಮದಾಬಾದ್ ಎಸ್.ಜಿ.ರಸ್ತೆಯಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದ ಬಳಿಯೇ ಇರುವ ಬಂಬೂ ಹೊಟೇಲ್ ನಲ್ಲಿ ಬಿಸಿ ಬಿಸಿ ಜಿಲೇಬಿ ತಿನ್ನುತ್ತಾ ಪಟೇಲ್ ಚಳವಳಿಯ ಬುತ್ತಿಯನ್ನು ಬಿಚ್ಚುತ್ತಾರೆ ಅವರು. ಅವರ ದೃಷ್ಟಿಯಲ್ಲಿ ಈಗ ಪಟೇಲ್ ಸಮುದಾಯ ಸ್ಪಷ್ಟವಾಗಿ ಎರಡು ಹೋಳಾಗಿದೆ. ಹಿರಿಯರು ಬಿಜೆಪಿ ಬೆಂಬಲಿಸಿದರೆ ಯುವಕರು ಹಾರ್ದಿಕ್ ಬೆಂಬಲಿಸುತ್ತಾರೆ. ಯಾಕೆ ಹೀಗೆ ಎಂದು ಪ್ರಶ್ನಿಸಿದರೆ ‘ಈಗಿನ ಯುವಕರಿಗೆ ಕಾಂಗ್ರೆಸ್ ಕತೆ ಗೊತ್ತಿಲ್ಲ. ಅವರಿಗೆ ಈಗಿನ ಪರಿಸ್ಥಿತಿ ಮಾತ್ರ ಮುಖ್ಯ. ಆದರೆ ನಮಗೆ ಇತಿಹಾಸವೂ ಮುಖ್ಯವಾಗಬೇಕಲ್ಲ. ನಾವು ಬಹಳಷ್ಟು ವರ್ಷಗಳಿಂದ ಬಿಜೆಪಿಯನ್ನೇ ಬೆಂಬಲಿಸಿಕೊಂಡು ಬಂದಿದ್ದೇವೆ. ಬಿಜೆಪಿ ಬಗ್ಗೆ ನಮಗೆ ಎಷ್ಟೇ ಸಿಟ್ಟಿದ್ದರೂ ನಾವು ಬಿಜೆಪಿಯನ್ನೇ ಬೆಂಬಲಿಸುತ್ತೇವೆ’ ಎಂದು ಹೇಳುತ್ತಾರೆ.

ಒಟ್ಟಾರೆ ಗುಜರಾತ್ ನ ಪರಿಸ್ಥಿತಿ ಅವಲೋಕಿಸಿದರೆ ಅವರ ಮಾತಿನಲ್ಲಿ ಸತ್ಯ ಇರುವಂತೆ ಕಾಣುತ್ತದೆ. ಹಿರಿಯ ಪಟೇಲರ ಮಾತನ್ನು ಯುವ ಮೆಹುಲ್ ಪಟೇಲ್ ಒಪ್ಪುವುದಿಲ್ಲ. ಪಟೇಲ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಸೌರಾಷ್ಟ್ರ ಮತ್ತು ಉತ್ತರ ಗುಜರಾತಿನ ಕಷ್ಟಗಳನ್ನು ಅವರು ಬಿಚ್ಚಿಡುತ್ತಾರೆ. ‘ನಿರುದ್ಯೋಗ ಸಮಸ್ಯೆ ಭೀಕರವಾಗಿದೆ. ನೀವು ಕೇವಲ ಅಹಮದಾಬಾದ್ ಮತ್ತು ದಕ್ಷಿಣ ಗುಜರಾತ್ ಮಾತ್ರ ನೋಡಬೇಡಿ. ಉತ್ತರದ ಕಡೆಗೂ ಒಮ್ಮೆ ಕಣ್ಣು ಹಾಯಿಸಿ. ಹಿಂದೆ ಏನಾಗಿದೆ ಎನ್ನುವುದು ಮುಖ್ಯವಲ್ಲ. ಈಗ ಏನಾಗಬೇಕು ಎನ್ನುವುದು ಮುಖ್ಯ’ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಲ್ಪೆಶ್, ಹಾರ್ದಿಕ್ ಮತ್ತು ಮೇವಾನಿ ಹಿಂದುಳಿದ ಮತ್ತು ದಲಿತ ಮತಗಳನ್ನು ಒಟ್ಟಗೂಡಿಸಿ ಬಿಜೆಪಿ ಹಿಂದುತ್ವದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದರೆ ಬಿಜೆಪಿ ತನ್ನ ಸಾಂಪ್ರದಾಯಿಕ ಹಿಂದೂ ಮತಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಈಗ ಇಲ್ಲಿ ಹಿಂದೂ ಮತಗಳು ಮತ್ತು ಹಿಂದುಳಿದ ಮತಗಳದ್ದೇ ಮಾತು. ರಾಹುಲ್ ಗಾಂಧಿ ‘ನಾನ್ ಹಿಂದು’ ಎಂದು ಸೋಮನಾಥ ದೇವಾಲಯದಲ್ಲಿ ಬರೆಸಿದ್ದು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಿಂದೂ ಅಲ್ಲ ಎಂದು ಟೀಕೆ ಮಾಡಿದ್ದರ ಸುತ್ತಲೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ‘ನಾನು ತಲೆತಲಾಂತರದಿಂದ ಹಿಂದೂ. ಈಗಲೂ ಹಿಂದೂ, ಮುಂದೆಯೂ ಹಿಂದೂ. ಆದರೆ ರಾಹುಲ್ ಗಾಂಧಿ ಈಗ ಯಾಕೆ ಹಿಂದೂ ದೇವಾಲಯಗಳಿಗೆ ಹೋಗುತ್ತಿದ್ದಾರೆ. ದೆಹಲಿಯಲ್ಲಿ ಯಾಕೆ ಅವರು ಹಿಂದೂ ದೇವಾಲಯಗಳಿಗೆ ಹೋಗುವುದಿಲ್ಲ’ ಎಂದು ಅಮಿತ್ ಪ್ರಶ್ನಿಸಿದರೆ ಕೇಂದ್ರ ವಾಣಿಜ್ಯ ಸಚಿವ ಅರುಣ್ ಜೇಟ್ಲಿ ಅವರು ‘ನಮ್ಮ ಸಂಪ್ರದಾಯವನ್ನು ಹೊಸದಾಗಿ ಯಾರಾದರೂ ಪಾಲಿಸಲು ಆರಂಭಿಸಿದರೆ ಅದು ಫಲ ನೀಡುವುದಿಲ್ಲ. ನಮ್ಮ ಹಿಂದುತ್ವ ಸಂಪ್ರದಾಯದಿಂದ ಬಂದಿದ್ದು. ರಾಹುಲ್ ಅವರದ್ದು ಕಸಿ ಮಾಡಿದ್ದು’ ಎಂದು ವ್ಯಂಗ್ಯವಾಡಿದ್ದಾರೆ.

ಜನಸಾಮಾನ್ಯರೂ ಈ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಓಲಾ ಚಾಲಕ ಸಚ್ಚಿದಾನಂದ ನಾರಾಯಣ ಅವರೂ ಬಿಜೆಪಿ ವಾದವನ್ನೇ ಬೆಂಬಲಿಸುತ್ತಾರೆ. ‘ರಾಹುಲ್ ಗಾಂಧಿ ಅವರು ಈಗ ಹಿಂದೂ ಎಂದು ಹೇಳಿಕೊಂಡರೆ ಅವರಿಗೆ ಮತಗಳು ಬರುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಪಟೇಲರು, ಹಿಂದುಳಿದ ವರ್ಗ ಮತ್ತು ದಲಿತರನ್ನು ಸೇರಿಸಿದರೆ ಗುಜರಾತ್ ಜನಸಂಖ್ಯೆಯ ಶೇ 40ರಷ್ಟಾಗುತ್ತದೆ. ಇತರ ಹಿಂದುಳಿದ ವರ್ಗದವರು ಸುಮಾರು 70 ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ದಲಿತರು 13 ಮತ್ತು ಆದಿವಾಸಿಗಳು 26 ಕ್ಷೇತ್ರಗಳಲ್ಲಿ ನಿರ್ಣಾಯಕರು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ಈ ಬಾರಿ ತರಾತುರಿಯ ಸಿದ್ಧತೆಯನ್ನು ನಡೆಸಿದೆ.

1980ರಲ್ಲಿ ಕಾಂಗ್ರೆಸ್ಸಿನ ಮಾಧವ ಸಿಂಗ್ ಸೋಳಂಕಿ ಅವರು ‘ಖಾಮ್’(KHAM) ಸೂತ್ರವನ್ನು ಅಳವಡಿಸಿಕೊಂಡು ಅಧಿಕಾರಕ್ಕೆ ಬಂದಿದ್ದರು. K ಎಂದರೆ ಕ್ಷತ್ರಿಯ, H ಹರಿಜನ, A ಆದಿವಾಸಿ M ಮುಸ್ಲಿಂ ಒಟ್ಟುಗೂಡಿಸಿ ಗೆದ್ದಿದ್ದರು. ಈಗಲೂ ಕಾಂಗ್ರೆಸ್ ಅಂತಹದ್ದೇ ಒಂದು ಪ್ರಯತ್ನ ಮಾಡುತ್ತಿದೆ.

ಆದರೆ ಇದಕ್ಕೆ ಜನ ಒಲಿಯುವುದಿಲ್ಲ ಎನ್ನುವುದು ಬಿಜೆಪಿ ನಂಬಿಕೆ. ‘ಕಳೆದ 22 ವರ್ಷಗಳಲ್ಲಿ ಬಿಜೆಪಿ ಆಡಳಿತವನ್ನು ಗುಜರಾತ್ ಜನ ಒಪ್ಪಿಕೊಂಡಿದ್ದಾರೆ. 1995ರ ಹಿಂದಿನ ಗುಜರಾತಿಗೂ ಇಂದಿನ ಗುಜರಾತಿಗೂ ಅಜಗಜಾಂತರ ವ್ಯತ್ಯಾಸ ಇದೆ. ನಾವು ನಮ್ಮ ಸಾಧನೆಯನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತಿದ್ದೇವೆ. ಜನ ನಮಗೆ ನಿರಾಸೆ ಮಾಡುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಜೈನ್ ಹೇಳಿದರು. ‘ಈಗಿನ ಪರಿಸ್ಥಿತಿಯಲ್ಲಿ ಜಾತಿ ಮುಖ್ಯ ಅಲ್ಲ. ಅಭಿವೃದ್ಧಿಯೇ ಮುಖ್ಯ’ ಎಂದೂ ಅವರು ಸೇರಿಸುತ್ತಾರೆ.

ಗುಜರಾತಿನವರೇ ಆದ ನರೇಂದ್ರ ಮೋದಿ ಪ್ರಧಾನಿ ಆಗಿರುವಾಗ ಕೇಂದ್ರದಿಂದ ಸಿಗುವ ಲಾಭವನ್ನು ಕಳೆದುಕೊಳ್ಳಲು ಗುಜರಾತ್ ಜನ ಬಯಸುವುದಿಲ್ಲ ಎಂದೂ ಅವರು ಹೇಳುತ್ತಾರೆ.

ಆದರೆ ಕಾಂಗ್ರೆಸ್ ವಕ್ತಾರರಾದ ಪ್ರಿಯಾಂಕಾ ಚತುರ್ವೇದಿ ಇದನ್ನು ಸ್ಪಷ್ಟವಾಗಿ ನಿರಾಕರಿಸುತ್ತಾರೆ. ‘ಬಿಜೆಪಿ ದುರಾಡಳಿತದಿಂದ ಜನರು ಬೇಸತ್ತಿದ್ದು ಈ ಬಾರಿ ಕಾಂಗ್ರೆಸ್ ಬೆಂಬಲಿಸುತ್ತಾರೆ. ಅಂಡರ್ ಕರೆಂಟ್ ಅರಿತುಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ’ ಎಂದು ಆರೋಪಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.