ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಬಳಗದ ಬಲೆಯಲ್ಲಿ ಲಂಕನ್ನರು

Last Updated 3 ಡಿಸೆಂಬರ್ 2017, 20:23 IST
ಅಕ್ಷರ ಗಾತ್ರ

ದೆಹಲಿ: ನಿರಂತರ ದಾಖಲೆಗಳ ಮಳೆ ಸುರಿಸುತ್ತಿರುವ ವಿರಾಟ್ ಕೊಹ್ಲಿ  ಭಾನುವಾರ ತವರಿನ ಅಂಗಳದಲ್ಲಿ  ಬೆಳಗಿದರು. ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತ ಗಳಿಸಿದೆ.

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನ ಕೊಹ್ಲಿ ಗಳಿಸಿದ 243 ರನ್‌ಗಳ ಬಲದಿಂದ ಭಾರತ 536 ರನ್ ಗಳಿಸಿ ಡಿಕ್ಲೇರ್ ಮಾಡಿತು. ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಮೂರು ವಿಕೆಟ್‌ಗಳಿಗೆ 131 ರನ್‌ ಗಳಿಸಿದೆ. ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಬೇಕಾದರೆ ತಂಡದ ಇನ್ನೂ 405 ರನ್‌ ಗಳಿಸಬೇಕಾಗಿದೆ.

ವಾಯುಮಾಲಿನ್ಯದಿಂದ ಆರೋಗ್ಯ ಸಮಸ್ಯೆ ಕಾಡುತ್ತಿದ್ದು ಫೀಲ್ಡಿಂಗ್ ಮಾಡಲು ಸಾಧ್ಯವಿಲ್ಲ ಎಂದು ಪ್ರವಾಸಿ ತಂಡ ಎರಡು ಬಾರಿ ದೂರಿದ್ದರಿಂದ ಭೋಜನ ವಿರಾಮದ ನಂತರ ಆಟಕ್ಕೆ ಅಡ್ಡಿಯಾಯಿತು. ಕೊನೆಗೆ ವಿರಾಟ್ ನಿರೀಕ್ಷೆಗೆ ಮೊದಲೇ ಇನಿಂಗ್ಸ್‌ ಡಿಕ್ಲೇರ್ ಮಾಡಿದರು.

ಶನಿವಾರ 20ನೇ ಶತಕ ಸಿಡಿಸಿ ಔಟಾಗದೇ ಉಳಿದಿದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಭವ ಎರಡನೇ ದಿನವೂ ಮುಂದುವರಿಯಿತು.  ಒಟ್ಟು ಏಳೂವರೆ ತಾಸು ಕ್ರೀಸ್‌ನಲ್ಲಿದ್ದ ಅವರು 25 ಬೌಂಡರಿಗಳನ್ನು ಸಿಡಿಸಿದರು. ಭಾನುವಾರದ ರಜೆ ಕಳೆಯಲು ಕ್ರೀಡಾಂಗಣಕ್ಕೆ ಬಂದಿದ್ದ ಕ್ರಿಕೆಟ್ ಪ್ರಿಯರು ವಿರಾಟ್ ಆಟಕ್ಕೆ ಮುದಗೊಂಡರು. ನಾಯಕನಾಗಿ ಆರು ದ್ವಿಶತಕ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅವರ ಎಲ್ಲ ದ್ವಿಶತಕಗಳು ಕಳೆದ 17 ತಿಂಗಳಲ್ಲಿ ದಾಖಲಾಗಿವೆ.

ಕೊಹ್ಲಿ–ರೋಹಿತ್ ಆಕರ್ಷಕ ಜೊತೆಯಾಟ: ಕೊಹ್ಲಿ ಅವರ ಜೊತೆ ಐದನೇ ವಿಕೆಟ್‌ಗೆ 135 ರನ್‌ ಸೇರಿಸಿದ ರೋಹಿತ್ ಶರ್ಮಾ ಅರ್ಧ ಶತಕ ಗಳಿಸಿದರು. 102 ಎಸೆತಗಳಲ್ಲಿ 65 ರನ್ ಗಳಿಸಿದ ಅವರು ಎರಡು ಸಿಕ್ಸರ್ ಸಿಡಿಸಿದ್ದರು. ಏಳು ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆ ಅಟ್ಟಿದ್ದರು. ಲಕ್ಷಣ್‌ ಸಂಡಗನ್ ಅವರ ಎಸೆತವನ್ನು ಲಾಂಗ್ ಆಫ್‌ ಮೇಲಿಂದ ಸಿಕ್ಸರ್‌ಗೆ ಅಟ್ಟಿದ ರೋಹಿತ್‌ ಅವರು ಪೆರೇರ ಎಸೆತವನ್ನು ಸಿಕ್ಸರ್‌ ಹೊಡೆದು ಅರ್ಧಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ನಿರಂತರ ಐದು ಅರ್ಧಶತಕ ಗಳಿಸಿದ ಸಾಧನೆ ಮಾಡಿದರು.

ರೋಹಿತ್, ರವಿಚಂದ್ರನ್ ಅಶ್ವಿನ್ ಮತ್ತು ಕೊಹ್ಲಿ 23 ರನ್‌ಗಳ ಅಂತರದಲ್ಲಿ ಔಟಾದರು. ವೃದ್ಧಿಮಾನ್ ಸಹಾ ಮತ್ತು ರವೀಂದ್ರ ಜಡೇಜ 13 ರನ್‌ಗಳನ್ನು ಜೋಡಿಸಿದ್ದಾಗ ಗೊಂದಲದ ವಾತಾವರಣದಲ್ಲಿ ಇನಿಂಗ್ಸ್‌ಗೆ ತೆರೆ ಬಿತ್ತು.

ಮೊದಲ ಎಸೆತದಲ್ಲೇ ಆಘಾತ

ಶ್ರೀಲಂಕಾ ತಂಡಕ್ಕೆ ಮೊದಲ ಎಸೆತದಲ್ಲೇ ಮಹಮ್ಮದ್‌ ಶಮಿ ಆಘಾತ ನೀಡಿದರು. ದಿಮುತ್ ಕರುಣರತ್ನೆ ಅವರನ್ನು ವೃದ್ಧಿಮಾನ್‌ ಸಹಾ ಅವರ ಮುಷ್ಠಿಯಲ್ಲಿ ಬಂಧಿಯಾಗಿಸಿದರು. ತಂಡದ ಮೊತ್ತ 75 ರನ್ ಆಗುವಷ್ಟರಲ್ಲಿ ಧನಂಜಯ ಡಿ ಸಿಲ್ವಾ ಮತ್ತು ದಿಲ್ರುವಾರನ್ ಪೆರೇರ ಕೂಡ ಪೆವಿಲಿಯನ್ ಸೇರಿದರು.

ಏಂಜೆಲೊ ಮ್ಯಾಥ್ಯೂಸ್ (57; 118 ಎ, 2 ಸಿ, 8 ಬೌಂ) ಮತ್ತು ನಾಯಕ ದಿನೇಶ್‌ ಚಾಂಡಿಮಲ್‌ (25; 81 ಎ, 3 ಬೌಂ) ನಾಲ್ಕನೇ ವಿಕೆಟ್‌ಗೆ 56 ರನ್ ಸೇರಿಸಿ ಸೋಮವಾರಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

**

ಕೊಹ್ಲಿ ಅವರಿಗೆ ಇನಿಂಗ್ಸ್ ಡಿಕ್ಲೇರ್ ಮಾಡಲು ಒತ್ತಡ ಇರಲಿಲ್ಲ. ತಂಡ 550 ರನ್‌ ಗಳಿಸುವ ಗುರಿ ಹೊಂದಿತ್ತು. ಆದರೆ ಪರಿಸ್ಥಿತಿಯ ಕಾರಣ ನಿರೀಕ್ಷೆಗೂ ಮೊದಲು ಡಿಕ್ಲೇರ್ ಮಾಡಬೇಕಾಯಿತು.

–ಭರತ್ ಅರುಣ್‌ ‌, ಬೌಲಿಂಗ್ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT