ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯಕ್ಕೆ ಬಳಲಿದ ಆಟಗಾರರು

ಮುಖಗವಸು ಧರಿಸಿ ಆಡಿದ ಲಂಕಾ ಫೀಲ್ಡರ್ ಗಳು
Last Updated 3 ಡಿಸೆಂಬರ್ 2017, 20:21 IST
ಅಕ್ಷರ ಗಾತ್ರ

ದೆಹಲಿ: ಪಂದ್ಯದ ಎರಡನೇ ದಿನ ದೆಹಲಿಯ ವಾಯುಮಾಲಿನ್ಯವು ಆಟಕ್ಕೆ ಅಡ್ಡಿಪಡಿಸಿತು. ಆರೋಗ್ಯ ಸಮಸ್ಯೆ ಆಗುತ್ತಿದೆ ಎಂದು ಶ್ರೀಲಂಕಾ ಆಟಗಾರರು ಫೀಲ್ಡಿಂಗ್ ಮಾಡಲು ನಿರಾಕರಿಸಿದ್ದರಿಂದ ಎರಡು ಬಾರಿ ಆಟವನ್ನು ಸ್ಥಗಿತಗೊಳಿಸಲಾಯಿತು. ಕೊನೆಗೆ ವಿರಾಟ್ ಕೊಹ್ಲಿ ಅನಿವಾರ್ಯವಾಗಿ ಇನಿಂಗ್ಸ್ ಡಿಕ್ಲೇರ್‌ ಮಾಡಬೇಕಾಯಿತು.

ಭೋಜನ ವಿರಾಮದ ನಂತರ ಅಂಗಣಕ್ಕೆ ಇಳಿಯುವಾಗ ಶ್ರೀಲಂಕಾದ ಐವರು ಆಟಗಾರರು ಮುಖಗವಸು ಧರಿಸಿದ್ದರು. ಎರಡೇ ನಿಮಿಷಗಳಲ್ಲಿ ವೇಗದ ಬೌಲರ್‌ ಲಾಹಿರು ಗಾಮಗೆ ಆರೋಗ್ಯ ಸಮಸ್ಯೆ ಇರುವುದಾಗಿ ಹೇಳಿದರು. ತಂಡದ ವೈದ್ಯರು ಬಂದು ಅವರ ಪರೀಕ್ಷೆ ಮಾಡಿದರು. ಈ ಸಂದರ್ಭದಲ್ಲಿ ಅಂಪೈರ್‌ಗಳಾದ ನಿಗೆಲ್‌ ಲಾಂಗ್ ಮತ್ತು ಜೋಯೆಲ್‌ ವಿಲ್ಸನ್‌ ಜೊತೆ ಮಾತುಕತೆ ನಡೆಸಿದ ನಾಯಕ ದಿನೇಶ್‌ ಚಾಂಡಿಮಲ್‌ ಆಟ ಸ್ಥಗಿತಗೊಳಿಸುವಂತೆ ಕೋರಿದರು.

ಭಾರತ ತಂಡದ ಕೋಚ್ ರವಿಶಾಸ್ತ್ರಿ ಮತ್ತು ಶ್ರೀಲಂಕಾ ತಂಡದ ಕೋಚ್‌ ನಿಕ್ ಪೋಥಾಸ್‌ ಕೂಡ ಅಂಪೈರ್‌ಗಳ ಜೊತೆ ಮಾತನಾಡಿದರು. ಮ್ಯಾಚ್ ರೆಫರಿ ಡೇವಿಡ್‌ ಬೂನ್ ವೈದ್ಯರ ಜೊತೆ ಸಮಾಲೋಚನೆ ನಡೆಸಿದರು. ಹೀಗಾಗಿ 17 ನಿಮಿಷ ಆಟಕ್ಕೆ ಅಡ್ಡಿಯಾಯಿತು. ಸ್ವಲ್ಪ ಹೊತ್ತಿನಲ್ಲೇ ಸುರಾಂಗ ಲಕ್ಮಲ್‌ ಅಂಗಣ ತೊರೆದರು.

ಈ ಸಂದರ್ಭದಲ್ಲೂ ಲಂಕಾ ಆಟಗಾರರು ಫೀಲ್ಡಿಂಗ್ ಮಾಡಲು ಸಾಧ್ಯವಿಲ್ಲ ಎಂದು ದೂರಿದರು. ಈ ವೇಳೆ ಐದು ನಿಮಿಷ ಆಟ ಸ್ಥಗಿತಗೊಂಡಿತು. ಕೊನೆಗೆ ಒಲ್ಲದ ಮನಸ್ಸಿನಿಂದ ಫೀಲ್ಡಿಂಗ್ ಮುಂದುವರಿಸಲು ಲಂಕಾ ನಾಯಕ ಮುಂದಾದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿ ‘ನಮಗೆ ಫೀಲ್ಡಿಂಗ್ ಮಾಡಲು ಯಾವುದೇ ತೊಂದರೆ ಇಲ್ಲ’ ಎಂದು ಸನ್ನೆ ಮಾಡಿದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಲ್ಲಿ ‘ಹೊಂಜು’ ಸಮಸ್ಯೆಯಿಂದಾಗಿ ಬಂಗಾಲ ಮತ್ತು ಗುಜರಾತ್ ನಡುವಿನ ರಣಜಿ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

**

ಡ್ರೆಸಿಂಗ್ ಕೊಠಡಿಯಲ್ಲಿ ಆಮ್ಲಜನಕ ಸಿಲಿಂಡರ್‌!

ವಾಯುಮಾಲಿನ್ಯದಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಶ್ರೀಲಂಕಾ ಆಟಗಾರರ ಪೈಕಿ ಮೂವರು ವಾಂತಿ ಮಾಡಿಕೊಂಡಿದ್ದಾರೆ ಎಂದು ಕೋಚ್‌ ನಿಕ್ ಪೋಥಾಸ್ ಹೇಳಿದ್ದಾರೆ. ಶ್ರೀಲಂಕಾ ಡ್ರೆಸಿಂಗ್ ಕೊಠಡಿಯಲ್ಲಿ ಆಮ್ಲಜನಕ ಸಿಲಿಂಡರ್ ಕೂಡ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ. ‘ದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತ ಆಗಿರುವುದು ಎಲ್ಲರಿಗೂ ತಿಳಿದಿದೆ. ನಮ್ಮ ಆಟಗಾರರು ಇಂದು ತೀರಾ ಆರೋಗ್ಯ ಸಮಸ್ಯೆ ಅನುಭವಿಸಿದ್ದಾರೆ. ಪಂದ್ಯದ ಸಂದರ್ಭದಲ್ಲಿ ಆಟಗಾರರು ಈ ರೀತಿ ತೊಂದರೆಗೆ ಒಳಗಾಗುವುದರಿಂದ ಅವರ ಸಾಮರ್ಥ್ಯದ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಈ ವಿಷಯವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗಂಭೀರವಾಗಿ ಪರಿಗಣಿಸಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT