ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆಯಿಲ್ಲದೆ ಸೊರಗಿದ ರಂಗಮಂದಿರ

Last Updated 4 ಡಿಸೆಂಬರ್ 2017, 5:08 IST
ಅಕ್ಷರ ಗಾತ್ರ

ರಾಯಚೂರು: ನಗರದ ಪಂಡಿತ ಸಿದ್ಧ ರಾಮ ಜಂಬಲದಿನ್ನಿ ರಂಗಮಂದಿರದ ನವೀಕರಣ ಕೈಗೊಂಡು ಒಂದು ವರ್ಷ ಪೂರ್ಣಗೊಳಿಸುವುದರೊಳಗೆ ಮತ್ತೆ ಅವ್ಯವಸ್ಥೆಯ ಆಗರವಾಗುವ ಆತಂಕ ನಿರ್ಮಾಣಗೊಂಡಿದೆ. ಸಮರ್ಪಕವಾದ ನಿರ್ವಹಣೆ ಕೊರತೆಯಿಂದ ದಿನದಿಂದ ದಿನಕ್ಕೆ ಸೊರಗುತ್ತಿದೆ.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ₹98 ಲಕ್ಷ ಅನುದಾನದಲ್ಲಿ ಆರಂಭಗೊಂಡ ನವೀಕರಣ ಕಾಮಗಾರಿಗೆ ಹೆಚ್ಚುವರಿಯಾಗಿ ₹62 ಲಕ್ಷ ಒದಗಿಸಿ ಒಟ್ಟು ₹1.60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ನವೀಕರಣಗೊಂಡ ರಂಗಮಂದಿರವನ್ನು 2016ರ ಸೆಪ್ಟೆಂಬರ್‌ 29ರಂದು ಉದ್ಘಾಟಿಸಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಆದರೆ, ಒಂದು ವರ್ಷ ಪೂರ್ಣಗೊಳ್ಳುವುದರೊಳಗೆ ಹಲವು ಸಮಸ್ಯೆಗಳು ತಲೆಎತ್ತಿವೆ.

ನವೀಕರಣಗೊಂಡ ರಂಗ ಮಂದಿರದ ಉದ್ಘಾಟನೆ ದಿನದಂದೆ ಆಸನಗಳಲ್ಲಿ ಪ್ರೇಕ್ಷಕರು ಕುಳಿತುಕೊಳ್ಳಲು ಹೋದಾಗ ಮುರಿದು ಬಿದ್ದ ಘಟನೆ ನಡೆದಿತ್ತು. ಅಲ್ಲದೇ ನವೀಕರಣಕ್ಕೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಕೆ ಮಾಡಿಲ್ಲ ಎನ್ನುವ ದೂರುಗಳು ಕೇಳಿಬಂದಿದ್ದವು. ಆನಂತರದಲ್ಲೂ ಅವುಗಳನ್ನು ಸರಿಪಡಿಸುವ ಕೆಲಸ ನಡೆಯಲಿಲ್ಲ.

ಒಂದು ವರ್ಷ ಕಳೆಯುವದರೊಳಗೆ ಶೌಚಾಲಯ ನಿರ್ವಹಣೆಯಿಲ್ಲದೆ, ದುರ್ನಾತ ಹರಡುವ ತಾಣವಾಗಿ ಮಾರ್ಪಟ್ಟಿದೆ. ಬಳಕೆ ಮಾಡಲು ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಬಹಳಷ್ಟು ಆನಸಗಳು ಮುರಿದುಹೋಗಿವೆ. ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಸರ್ಕಾರಿ ಹಾಗೂ ಖಾಸಗಿ ಸಮಾರಂಭಗಳು ನಡೆದಾಗ ಊಟದ ವ್ಯವಸ್ಥೆಯೂ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಸಂಘಟಕರು ಗಲಿಬಿಲಿಯಾಗುತ್ತಾರೆ. ಅನಿವಾರ್ಯವಾಗಿ ಹೊರಗಿನಿಂದಲೇ ಎಲ್ಲ ವ್ಯವಸ್ಥೆ ಮಾಡಿಕೊಂಡರೂ, ಕೊರತೆಗಳಿಗೆ ಕೊನೆಯಿಲ್ಲದಂತಾಗಿದೆ.

ರಂಗಮಂದಿರದ ಸುತ್ತಮುತ್ತಲಿನ ಪರಿಸರ ಕೂಡ ಶುಚಿತ್ವವಿಲ್ಲ. ರಂಗ ಮಂದಿರಕ್ಕೆ ಹೊಂದಿಕೊಂಡು ಚರಂಡಿ ಗಳು ಗಬ್ಬು ನಾರುತ್ತಿವೆ. ಹಂದಿಗಳು ನೆಲೆ ಮಾಡಿಕೊಂಡಿವೆ. ಇದರಿಂದ ಪರಿಸರ ಇನ್ನಷ್ಟು ಹದಗೆಡುತ್ತಿದೆ. ಮಳೆ ಬಂದಾಗ ನೀರು ಸರಾಗವಾಗಿ ಹರಿಯದೇ ನೀರು ಶೇಖರಣೆಯಾಗುತ್ತವೆ. ಸರಿಯಾದ ವಿದ್ಯುತ್‌ ದೀಪಗಳು ಇಲ್ಲದಿರುವುರಿಂದ ರಾತ್ರಿ ಹೊತ್ತಲ್ಲಿ ತುಂಬಾ ತೊಂದರೆ ಅನುಭವಿಸುವಂತಾಗಿದೆ.

ಕ್ಯಾಶುಟೆಕ್‌ ಸಂಸ್ಥೆಯಿಂದ ನವೀಕರಣ ಕೈಗೊಳ್ಳಲಾಗಿದ್ದು, ಸೋರುತ್ತಿದ್ದ ಛತ್ತಿಗೆ (ತಾರಸಿಗೆ) ಪಿಯುಪಿ ಶೀಟ್‌ ಅಳವಡಿಸಲಾಗಿತ್ತು. ನೆಲಹಾಸು ಪುನರ್‌ ನಿರ್ಮಾಣ ಮಾಡಿ, ಡ್ರೆಸಿಂಗ್‌ ರೂಂ ನವೀಕರಣ, ಶೌಚಾಲಯ ಮರುನಿರ್ಮಾಣ, ವೇದಿಕೆ ನವೀಕರಣ, ಗೋಡೆಗಳಿಗೆ ಪ್ರತಿಧ್ವನಿ ಪ್ರತಿಬಂಧಕ ಕೋಟಿಂಗ್‌ ಪ್ಯಾನಲ್‌ ಅಳವಡಿಕೆ ಮಾಡಲಾಗಿತ್ತು. ಜೊತೆಗೆ ಹೊಸ ಆಸನಗಳನ್ನು, ಲೈಟಿಂಗ್‌ ಮತ್ತು ಸೌಂಡ್ ವ್ಯವಸ್ಥೆ ಅಳವಡಿಸಲಾಗಿತ್ತು. ಒಂದು ವರ್ಷದಲ್ಲೆ ಎಲ್ಲವೂ ಬಣ್ಣ ಕಳೆದುಕೊಳ್ಳಲಾರಂಭಿಸಿವೆ.

ರಂಗಮಂದಿರದ ಇತಿಹಾಸ
1983 ಜನವರಿ 1ರಂದು ರಂಗಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಆದರೆ ಮಂದಗತಿಯಲ್ಲಿ ಕಾಮಗಾರಿ ನಡೆದು 1998 ರಲ್ಲಿ ಪೂರ್ಣಗೊಂಡಿತ್ತು. 1999ರ ಏಪ್ರಿಲ್‌ 10ರಂದು ಉದ್ಘಾಟನೆಗೊಂಡಿತ್ತು. ರಂಗಮಂದಿರ ನಿರ್ಮಾಣಕ್ಕೆ ₹1.38 ಕೋಟಿ ವೆಚ್ಚ ಮಾಡಲಾಗಿತ್ತು. ಜಿಲ್ಲೆಯ ಹೆಸರಾಂತ ಹಿಂದೂಸ್ತಾನಿ ಗಾಯಕ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ಅವರ ಹೆಸರನ್ನು ರಂಗಮಂದಿರಕ್ಕೆ ಇರಿಸಲಾಯಿತು.

* * 

ಆಸನಗಳ ವ್ಯವಸ್ಥೆ ಸರಿಪಡಿಸುವುದು ಸೇರಿದಂತೆ ವಿವಿಧ ಸುಧಾರಣೆಗಳು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ.
ನಿರ್ಮಲಾ, ಸಹಾಯಕ ನಿರ್ದೇಶಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT