7

ಪಾಸ್‌ಪೋರ್ಟ್ ಸೇವಾಕೇಂದ್ರಕ್ಕೆ ಜಾಗದ ಕೊರತೆ

Published:
Updated:
ಪಾಸ್‌ಪೋರ್ಟ್ ಸೇವಾಕೇಂದ್ರಕ್ಕೆ ಜಾಗದ ಕೊರತೆ

ಶಿವಮೊಗ್ಗ: ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬಹು ನಿರೀಕ್ಷಿತ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಇಂದಿಗೂ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆದಿದೆ.

ದೇಶದ ಸಾಮಾನ್ಯ ನಾಗರಿಕನಿಗೂ ಸರಳವಾಗಿ ಪಾಸ್‌ಪೋರ್ಟ್‌ ದೊರೆಯಬೇಕು ಎಂಬ ಉದ್ದೇಶದಿಂದ ವಿದೇಶಾಂಗ ಸಚಿವಾಲಯವು ಶಿವಮೊಗ್ಗವನ್ನು ಒಳಗೊಂಡಂತೆ ಪ್ರಮುಖ ಜಿಲ್ಲೆಗಳ ಪ್ರಧಾನ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ತೆರೆಯುವುದಾಗಿ ಘೋಷಣೆ ಮಾಡಿತ್ತು.

ಎಲ್ಲಾ ಅಂದುಕೊಂಡಂತೆ ಸಾಗಿದ್ದರೆ ಈಗಾಗಲೇ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಮಲೆನಾಡಿನ ಜನರ ಸೇವೆಗೆ ಲಭ್ಯವಾಗಬೇಕಿತ್ತು. ಆದರೆ, ಇಂದಿಗೂ ಸೂಕ್ತ ಜಾಗ ಸಿಗದೇ ಕೇಂದ್ರ ಕನಸಾಗಿಯೇ ಉಳಿದಿದೆ.

ಹುಸಿಯಾದ ಭರವಸೆ: ಕೆಲವು ತಿಂಗಳ ಹಿಂದೆಯಷ್ಟೇ ಸಂಸದ ಬಿ.ಎಸ್.ಯಡಿಯೂರಪ್ಪ ಮತ್ತು ಅಧಿಕಾರಿಗಳ ತಂಡ, ಶಿವಮೊಗ್ಗ ಪ್ರಧಾನ ಅಂಚೆ ಕಚೇರಿ ಬಳಿ ಸ್ಥಳ ಪರಿಶೀಲನೆ ನಡೆಸಿ ಇಲ್ಲಿಯೇ ಪಾಸ್‌ಪೋರ್ಟ್ ಸೇವಾ ಕೇಂದ್ರ ತೆರೆಯಲು ಜಾಗ ನಿಗದಿ ಮಾಡಿತ್ತು. ಆದರೆ, ಕೊನೆ ಕ್ಷಣದಲ್ಲಿ ಸಮಸ್ಯೆ ಎದುರಾಗಿದ್ದು

ಪ್ರಕ್ರಿಯೆಗೆ ಅಡ್ಡಿಯಾಗಿದೆ.

ಖಾಸಗಿ ಸ್ಥಳದಲ್ಲಿ ಅವಕಾಶವಿಲ್ಲ: ಪಾಸ್‌ಪೋರ್ಟ್‌ನಂತಹ ಸೂಕ್ಷ್ಮ ಕೇಂದ್ರಗಳನ್ನು ಖಾಸಗಿ ಸ್ಥಳಗಳಲ್ಲಿ ತೆರೆಯಲು ಅವಕಾಶ ನೀಡಿದರೆ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿದೇಶಾಂಗ ಸಚಿವಾಲಯವು ಸರ್ಕಾರಿ ಕಟ್ಟಡಗಳನ್ನು ಬಿಟ್ಟು ಖಾಸಗಿ ಕಟ್ಟಡಗಳಲ್ಲಿ ಅವಕಾಶ ನೀಡುತ್ತಿಲ್ಲ. ಇದು ಕೂಡ ಕೇಂದ್ರದ ಆರಂಭಕ್ಕೆ ತೊಡಕಾಗಿದೆ.

ಪ್ರಸ್ತುತ ಶಿವಮೊಗ್ಗ ಜಿಲ್ಲೆ ಎಲ್ಲಾ ರಂಗಗಳಲ್ಲೂ ಮುಂದಿದ್ದು, ವಿದೇಶಕ್ಕೆ ಹೋಗುವವರ ಸಂಖ್ಯೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ಸ್ಥಾಪಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ.

ಬಾಡಿಗೆ ನೀಡಿದರೆ ಮಾತ್ರ ಜಾಗ

ಕೇಂದ್ರ ಸ್ಥಾಪಿಸಲು ಉದ್ದೇಶಿಸಿರುವ ಜಾಗ ಎರಡು ಇಲಾಖೆಗಳಿಗೆ ಒಳಪಟ್ಟಿದೆ. ಈ ಕಟ್ಟಡದ ಅರ್ಧ ಭಾಗ ಅಂಚೆ ಇಲಾಖೆಯದ್ದಾಗಿದೆ. ಇನ್ನರ್ಧ ಭಾಗ ಬಿಎಸ್ಎನ್ಎಲ್‌ಗೆ ಸೇರಿದೆ.

ಬಿಎಸ್ಎನ್ಎಲ್ ಮಾತ್ರ ತನಗೆ ಸೇರಿರುವ ಸಾವಿರ ಚದರ ಅಡಿ ಜಾಗಕ್ಕೆ ತಿಂಗಳಿಗೆ ₹ 12,700 ಬಾಡಿಗೆ ನೀಡುವಂತೆ ಪಟ್ಟು ಹಿಡಿದಿದೆ. ಆದರೆ, ವಿದೇಶಾಂಗ ನಿಯಮಗಳ ಪ್ರಕಾರ ಬಾಡಿಗೆ ಕಟ್ಟಿ ಪಾಸ್‌ಪೋರ್ಟ್‌ ಸೇವಾಕೇಂದ್ರ ತೆರೆಯಲು ಅವಕಾಶವಿಲ್ಲ. ಅಂಚೆ ಇಲಾಖೆಯೂ ಬಾಡಿಗೆ ಕಟ್ಟಲು ತಯಾರಿಲ್ಲ. ಹೀಗಾಗಿ ಸ್ಥಳೀಯ ಅಧಿಕಾರಿಗಳಿಗೆ ಏನೂ ಮಾಡಲಾಗದೇ ಸುಮ್ಮನಾಗಿದ್ದಾರೆ.

ಚರ್ಚಿಸಿದರಷ್ಟೇ ಇತ್ಯರ್ಥ

ಅಂಚೆ ಇಲಾಖೆ, ಬಿಎಸ್ಎನ್ಎಲ್ ಮತ್ತು ಪಾಸ್‌ಪೋರ್ಟ್ ಸೇವಾ ಕೇಂದ್ರ ಈ ಮೂರು ಪ್ರಧಾನ ಇಲಾಖೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು. ಉನ್ನತ ಮಟ್ಟದಲ್ಲಿ ಚರ್ಚೆಯಾದರಷ್ಟೇ ಈ ಸಮಸ್ಯೆ ಬಗೆಹರಿಯಲಿದೆ. ಆದರೆ, ಇಲ್ಲಿಯ ವರೆಗೆ ಅಂತಹ ಯಾವುದೇ ಬೆಳವಣಿಗೆಗಳೂ ನಡೆದಿಲ್ಲ.

ಉದ್ದೇಶಿತ ಕೇಂದ್ರದಲ್ಲಿ ಕೆಲಸ ನಿರ್ವಹಿಸಲು ಅಂಚೆ ಇಲಾಖೆಯೇ ತನ್ನ ಅಧಿಕಾರಿಗಳನ್ನು ಒದಗಿಸಲು ಸಿದ್ಧವಾಗಿತ್ತು. ಇವರಿಗೆ ತರಬೇತಿ ನೀಡಲು ವಿದೇಶಾಂಗ ಇಲಾಖೆಯ ಅಧಿಕಾರಿಗಳೇ ಶಿವಮೊಗ್ಗಕ್ಕೆ ಬರಲು ಸಿದ್ಧರಾಗಿದ್ದರು. ಆದರೆ, ಈಗ ಸಮಸ್ಯೆ ತಲೆದೋರಿರುವ ಕಾರಣ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ.

* * 

ಉದ್ದೇಶಿಸಿರುವ ಜಾಗಕ್ಕೆ ಬಿಎಸ್‌ಎನ್‌ಎಲ್‌ ಬಾಡಿಗೆ ಕೇಳುತ್ತಿದೆ. ಆದರೆ, ಬಾಡಿಗೆ ನೀಡಿ ಕೇಂದ್ರ ಪ್ರಾರಂಭಿಸಲು ಇಲಾಖೆ ಅನುಮತಿ ನೀಡುತ್ತಿಲ್ಲ.

ನವೀನ್ ಚಂದರ್

ಅಂಚೆ ಇಲಾಖೆ ಅಧೀಕ್ಷಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry