ಗುರುವಾರ , ಫೆಬ್ರವರಿ 25, 2021
30 °C

ಸಿಎಂ ಸ್ವಾಗತಕ್ಕಾಗಿ ‘ರಸ್ತೆಗೆ ದುರಸ್ತಿ ಭಾಗ್ಯ..!’

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಸಿಎಂ ಸ್ವಾಗತಕ್ಕಾಗಿ ‘ರಸ್ತೆಗೆ ದುರಸ್ತಿ ಭಾಗ್ಯ..!’

ವಿಜಯಪುರ: ನಗರದ ಕೇಂದ್ರ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬರೋಬ್ಬರಿ ಮೂರ್ನಾಲ್ಕು ತಿಂಗಳು ರಸ್ತೆಯಲ್ಲಿನ ದೊಡ್ಡ ಗುಂಡಿಯೊಂದರಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು, ರಕ್ಷಣೆಗಾಗಿಟ್ಟಿದ್ದ ಪೊಲೀಸ್‌ ಬ್ಯಾರಿಕೇಡ್‌ಗೆ ನಾಲ್ಕೈದು ದಿನಗಳಿಂದ ‘ಮುಕ್ತಿ ಭಾಗ್ಯ’ ದೊರಕಿದೆ.

ನಿತ್ಯ ಈ ರಸ್ತೆಯಲ್ಲಿ ಜಿಗ್‌ಜಾಗ್‌ ಸರ್ಕಸ್‌ ನಡೆಸಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು, ಕಾರು, ಬಸ್‌, ಲಾರಿ ಚಾಲಕರು ಸೇರಿದಂತೆ ನಗರದ ನಿವಾಸಿಗಳು ಇದೀಗ ಸರಾಗವಾಗಿ ಸಂಚರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆಯ ಸಮಾರಂಭವನ್ನು ಸೋಮವಾರ (ಡಿ 4) ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದರಲ್ಲಿ ಪಾಲ್ಗೊಳ್ಳಲಿದ್ದರು.

ಇದೇ ಸಂದರ್ಭ ಸಿಎಂ ನಗರ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ಮಾಸ್ಟರ್‌ ಪ್ಲಾನ್‌ನಡಿ ನೂತನವಾಗಿ ನಿರ್ಮಿಸಿದ್ದ ನವಬಾಗ ರಸ್ತೆಯನ್ನೂ ಉದ್ಘಾಟಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ಸಮಾರಂಭಕ್ಕಾಗಿ ಮಹಾನಗರ ಪಾಲಿಕೆ ಆಡಳಿತ ತರಾತುರಿಯಲ್ಲಿ ರಾತ್ರಿ ವೇಳೆಯೇ ಬಸ್‌ ನಿಲ್ದಾಣದ ಮುಂಭಾಗ, ಮನಗೂಳಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ, ಡಾಂಬರ್ ಲೇಪಿಸಿ, ಬಣ್ಣ ಬಳಿದು ಆಕರ್ಷಕಗೊಳಿಸಿತ್ತು.

ಇದರಿಂದ ಸಿದ್ದರಾಮಯ್ಯ ಸ್ವಾಗತಕ್ಕಾಗಿ ನಗರದ ಪ್ರಮುಖ ರಸ್ತೆಯೊಂದು ದುರಸ್ತಿ ಭಾಗ್ಯ ಕಂಡಿತು. ಈ ಕಾಮಗಾರಿ ಪೂರ್ಣಗೊಂಡ ಬೆನ್ನಿಗೆ ಮುಖ್ಯಮಂತ್ರಿ ಪ್ರವಾಸವೂ ರದ್ದಾಯಿತು.

‘ಮುಖ್ಯಮಂತ್ರಿ ನಗರದ ಮೂರ್ನಾಲ್ಕು ಕಡೆ ವಾಹನ ಸಂಚಾರದ ಮೂಲಕ, ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆಗೆ ತೆರಳುವ ಕಾರ್ಯಕ್ರಮ ರೂಪಿಸಬೇಕಿತ್ತು. ಇದರಿಂದಾದರೂ ನಮ್ಮೂರಿನ ಪ್ರಮುಖ ರಸ್ತೆಗಳ ಗುಂಡಿ ಮುಚ್ಚುತ್ತಿದ್ದವು. ಇನ್ನೊಂದೆರೆಡು ತಿಂಗಳು ನಿರಾತಂಕವಾಗಿ ರಸ್ತೆಗಳಲ್ಲಿ ಪಯಣಿಸಬಹುದಿತ್ತು’ ಎಂದು ಅಬ್ದುಲ್‌ ಹಮೀದ್‌ ತಿಳಿಸಿದರು.

‘ಬಸ್‌ ನಿಲ್ದಾಣ ಮುಂಭಾಗದ ಗುಂಡಿ ಮುಚ್ಚಿ. ನಮ್ಮೂರಿನ ಮಾನ ಉಳಿಸಿ ಎಂದು ಹಲ ಬಾರಿ ಪಾಲಿಕೆ ಆಡಳಿತಕ್ಕೆ ಮನವಿ ನೀಡಿದೆವು. ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಇತ್ತ ಗಮನ ಹರಿಸಲಿಲ್ಲ. ಇದೀಗ ಮುಖ್ಯಮಂತ್ರಿ ಭೇಟಿ ನೀಡಲಿದ್ದಾರೆ ಎನ್ನುತ್ತಿದ್ದಂತೆ ಒಂದೇ ರಾತ್ರಿಯಲ್ಲಿ ಗುಂಡಿ ಮುಚ್ಚಿ, ಡಾಂಬರು ಲೇಪಿಸಿ, ಬಣ್ಣ ಬಳಿದಿದ್ದಾರೆ. ಈ ಕಾಮಗಾರಿಯೂ ವ್ಯವಸ್ಥಿತವಾಗಿ ನಡೆದಿಲ್ಲ. ಕಳಪೆ ಗುಣಮಟ್ಟದಿಂದ ಕೂಡಿದೆ. ವಾರದೊಳಗೆ ಮುಖ್ಯಮಂತ್ರಿ ಮತ್ತೆ ಭೇಟಿ ನೀಡದಿದ್ದರೆ, ಯಥಾಸ್ಥಿತಿ ಹಿಂದಿನ ಗುಂಡಿ ರಸ್ತೆಯಾಗಿ ಮಾರ್ಪಡಲಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ನಗರದ ಸ್ಟೇಷನ್‌ ರಸ್ತೆ, ಬಿಎಲ್‌ಡಿಇ ರಸ್ತೆ, ಆಶ್ರಮ ರಸ್ತೆ ಸಂಪೂರ್ಣ ಹಾಳಾಗಿವೆ. ಗುಂಡಿ ಎಲ್ಲಿದೆ. ರಸ್ತೆ ಎಲ್ಲಿದೆ ಎಂಬುದೇ ವಾಹನ ಸವಾರರಿಗೆ ತಿಳಿಯದಾಗಿದೆ. ಮುಖ್ಯಮಂತ್ರಿ ಸ್ವಾಗತಕ್ಕಾಗಿ ಒಂದೇ ಒಂದು ರಸ್ತೆ ಅಭಿವದ್ಧಿಗೊಳಿಸುವ ಮಹಾನಗರ ಪಾಲಿಕೆ ಆಡಳಿತಕ್ಕೆ, ಇನ್ನುಳಿದ ಪ್ರಮುಖ ರಸ್ತೆಗಳು ಕಾಣುತ್ತಿಲ್ಲವೇ.

ಕನಿಷ್ಠ ಪಕ್ಷ ಗುಂಡಿ ಮುಚ್ಚಿ, ಡಾಂಬರು ಹಾಕುವಷ್ಟು ಅನುದಾನವೂ ಪಾಲಿಕೆ ಬಳಿಯಿಲ್ಲವೇ ? ಸಂಬಂಧಿಸಿದ ಆಯಾ ವಾರ್ಡ್‌ನ ಕಾರ್ಪೊರೇಟರ್‌ಗಳು ಏನು ಮಾಡುತ್ತಿದ್ದಾರೆ ? ಎಂಬುದೇ ಅರಿವಾಗದಾಗಿದೆ’ ಎಂದು ಸಮೀರ್ ಬಾಗೇವಾಡಿ ‘ಪ್ರಜಾವಾಣಿ’ ಬಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

* * 

ವಿಜಯಪುರ ನಗರ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳಿವೆಯೋ, ಗುಂಡಿಗಳ ನಡುವೆ ರಸ್ತೆಯಿದೆಯೋ ಎಂಬುದೇ ತಿಳಿಯದಾಗಿದೆ

ಸಮೀರ ಬಾಗೇವಾಡಿ, ವಿಜಯಪುರ ನಿವಾಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.