ಬುಧವಾರ, ಮಾರ್ಚ್ 3, 2021
23 °C

ಸಿಗದ ಶುದ್ಧ ನೀರು: ಪ್ರಯಾಣಿಕರ ಪರದಾಟ

ಮಲ್ಲೇಶ್ ನಾಯಕನಹಟ್ಟಿ . Updated:

ಅಕ್ಷರ ಗಾತ್ರ : | |

ಸಿಗದ ಶುದ್ಧ ನೀರು: ಪ್ರಯಾಣಿಕರ ಪರದಾಟ

ಯಾದಗಿರಿ: ನಗರದ  ಕೇಂದ್ರ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಮೂಲ ಸೌಲಭ್ಯ ಕೊರತೆ ಇದ್ದು, ಪ್ರಯಾಣಿಕರು ತೊಂದರೆ ಎದುರಿಸುವಂತಾಗಿದೆ.

ಇಲ್ಲಿನ ನಗರ ಘಟಕದಿಂದ ಜಿಲ್ಲೆಯ ವಿವಿಧೆಡೆ ಒಟ್ಟು 420 ಮಾರ್ಗಗಳಲ್ಲಿ 359 ಕೆಂಪು ಬಸ್‌ಗಳು ಹಾಗೂ ಎರಡು ಸುಹಾಸ್ ಬಸ್‌ಗಳು ಸಂಚರಿಸುತ್ತವೆ. ಇದರಿಂದ ಬಸ್‌ ನಿಲ್ದಾಣಕ್ಕೆ ನಿತ್ಯ 24 ಸಾವಿರ ಪ್ರಯಾಣಿಕರು ಬಂದು ಹೋಗುತ್ತಾರೆ. ಆದರೆ, ಈ ಪ್ರಯಾಣಿಕರಿಗೆ ದಾಹ ನೀಗಿಸಿಕೊಳ್ಳಲು ಬಸ್‌ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಪ್ರಯಾಣಿಕರು ಅನಿವಾರ್ಯವಾಗಿ ದುಬಾರಿ ಬಾಟಲ್‌ ನೀರನ್ನೇ ಅವಲಂಬಿಸುವಂತಾಗಿದೆ.

ವಿಧಾನ ಪರಿಷತ್‌ ಸದಸ್ಯ ಡಾ.ಎಂ.ಆರ್.ಸೀತಾರಾಮ್ ಅವರ ಶಾಸಕರ ವಿವೇಚನಾ ನಿಧಿಯಿಂದ ₹4.96 ಲಕ್ಷ ವೆಚ್ಚದ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ಆದರೆ, ತಾಂತ್ರಿಕದೋಷದಿಂದಾಗಿ ಅದು ಸ್ಥಗಿತಗೊಂಡಿದೆ.

‘ತಾಂತ್ರಿಕದೋಷ ಸರಿಪಡಿಸುವಂತೆ ಸಂಬಂಧಿಸಿದ ಏಜೆನ್ಸಿಗೆ ಪತ್ರ ಬರೆಯಲಾಗಿದೆ’ ಎಂದು ಪ್ರಾದೇಶಿಕ ಸಾರಿಗೆ ಘಟಕ ಅಧಿಕಾರಿ ನಾಗರಡ್ಡಿ ಹೇಳುತ್ತಾರೆ. ಪತ್ರ ಬರೆದು ಎರಡು ತಿಂಗಳು ಕಳೆದರೂ ಏಜೆನ್ಸಿ ಶುದ್ಧಕುಡಿಯುವ ನೀರಿನ ಘಟಕದತ್ತ ಗಮನ ಹರಿಸಿಲ್ಲ ಎಂದು ಪ್ರಯಾಣಿಕರು ದೂರುತ್ತಾರೆ.

ಮುಂಗಡ ಟಿಕೆಟ್ ಪಡೆಯಲು ಹರಸಾಹಸ: ಬಸ್‌ ನಿಲ್ದಾಣದಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸುವ ಘಟಕವನ್ನೇ ಆರಂಭಿಸಿಲ್ಲ. ಮುಂಗಡ ಟಿಕೆಟ್‌ ಕಾಯ್ದಿರಿಸಬೇಕಾದರೆ ಸಾಮಾನ್ಯ ಸಿಬ್ಬಂದಿಯನ್ನು ವಿಚಾರಿಸುತ್ತಾ ದುರಸ್ತಿ ಘಟಕ ಇರುವಲ್ಲಿಗೆ ಹೋಗಬೇಕಾಗುತ್ತದೆ. ಅಲ್ಲಿಯೂ ಮತ್ತೆ ವಿಚಾರಣೆ ಆರಂಭಿಸಿ ಕಡೆ ಕೋಣೆಯಲ್ಲಿ ಕುಳಿತ ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿ ಬಳಿ ಸಾಗಬೇಕು.

ಅಷ್ಟು ಶ್ರಮಪಟ್ಟರೂ ಒಮ್ಮೊಮ್ಮೆ ಮುಂಗಡ ಟಿಕೆಟ್‌ ಕಾಯ್ದಿರಿಸುವ ಸಿಬ್ಬಂದಿ ಸಿಗುವುದಿಲ್ಲ. ಇರುವ ಸಿಬ್ಬಂದಿಗೆ ಮುಂಗಡ ಟಿಕೆಟ್ ಪಡೆಯುವ ಬಗ್ಗೆ ಕಂಪ್ಯೂಟರ್‌ ಜ್ಞಾನ ತಿಳಿದಿಲ್ಲ. ಹಾಗಾಗಿ, ಮುಂಗಡ ಟಿಕೆಟ್ ಕಾಯ್ದಿರಿಸಬೇಕೆಂದರೆ ಇಲ್ಲಿನ ಬಸ್‌ ನಿಲ್ದಾಣದಲ್ಲಿ ಹರಸಾಹಸ ಪಡಬೇಕು ಎಂದುಪ್ರಯಾಣಿಕರಾದ ಉಮೇಶ್, ಶಾಂತಪ್ಪ ಜಾಧವ ದೂರುತ್ತಾರೆ.

‘ಹೈದರಾಬಾದ್, ಶ್ರೀಶೈಲಂ, ವಿಜಯಪುರ, ರಾಯಚೂರು, ಕಲಬುರ್ಗಿಯಂತಹ ದೂರದ ನಗರಗಳಿಗೆ ಪ್ರಯಾಣಿಸುವವರಿಗೆ ವಾಹನಗಳನ್ನು ನಿಲುಗಡೆ ಮಾಡಬೇಕಾಗುತ್ತದೆ. ಆದರೆ, ವಾಹನ ನಿಲುಗಡೆಗೆ ನಿರ್ದಿಷ್ಟ ಸ್ಥಳ ಇಲ್ಲದಿರುವುದರಿಂದ ಇಲ್ಲಿ ನಿಲುಗಡೆಯಾಗುವ ವಾಹನಗಳಿಗೆ ಸುರಕ್ಷತೆಯೂ ಇಲ್ಲ. ಹಾಗಾಗಿ, ಎಷ್ಟೋ ಪ್ರಯಾಣಿಕರ ದ್ವಿಚಕ್ರ ವಾಹನಗಳನ್ನು ಕಳವು ಮಾಡಲಾಗಿದೆ‘ ಎನ್ನುತ್ತಾರೆ ಅವರು.

‘ಪರ್ಯಾಯ ವ್ಯವಸ್ಥೆ’

‘ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದ್ದರೂ ಸನಿಹದಲ್ಲಿ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ ನಡೆದಿದೆ’ ಎಂದು ಪ್ರಾದೇಶಿಕ ಸಾರಿಗೆ ನಿಯಂತ್ರಣಾಧಿಕಾರಿ ಸಂತೋಷ್ ಗೊಗೇರಿ ತಿಳಿಸಿದರು.

* * 

ಕುಡಿಯುವ ನೀರು ನೈರ್ಮಲ್ಯ ವಿಭಾಗದಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಆಗಿದೆ

ನಾಗರೆಡ್ಡಿ, ಅಧಿಕಾರಿ, ವಿಭಾಗೀಯ ಸಾರಿಗೆ ಘಟಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.