5

ಶಾಸಕ ಬಿ.ಆರ್.ಪಾಟೀಲ ನಂಬಿಕೆದ್ರೋಹಿ

Published:
Updated:
ಶಾಸಕ ಬಿ.ಆರ್.ಪಾಟೀಲ ನಂಬಿಕೆದ್ರೋಹಿ

ಆಳಂದ: ‘ಶಾಸಕ ಬಿ.ಆರ್.ಪಾಟೀಲ ನಂಬಿಕೆದ್ರೋಹಿ, ಕಳೆದ ಚುನಾವಣೆಯಲ್ಲಿ ನನ್ನ ಸಹಾಯದಿಂದ ಶಾಸಕರಾಗಿ ಆಯ್ಕೆಯಾಗಿ ನನಗೆ ಕೈಕೊಟ್ಟು ಇಂದು ಮುಖ್ಯಮಂತ್ರಿಯ ಬಾಲಗೋಂಚಿಯಾಗಿ ಅಲೆಯುತ್ತಿದ್ದಾರೆ. ಮತ್ತೊಮ್ಮೆ ರಾಜಕೀಯಕ್ಕೆ ಬರದಂತೆ ಅವರಿಗೆ ಪಾಠ ಕಲಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಭಾನುವಾರ ಪರಿವರ್ತನಾ ಯಾತ್ರೆಯ ರ‍್ಯಾಲಿ ಅಂಗವಾಗಿ ಭಾರಿ ಸಂಖ್ಯೆಯಲ್ಲಿ ನೆರದ ಜನಸ್ತೋಮ ಉದ್ದೇಶಿಸಿ ಅವರು ಮಾತನಾಡಿದರು.

‘ದುಷ್ಟ, ದುರಹಂಕಾರ ಹಾಗೂ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ದುರಾಡಳಿತದ ಅಂತ್ಯ ಸನ್ನಿಹಿತವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದರು.

ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ‘ಆಳಂದ ಕ್ಷೇತ್ರದಲ್ಲಿ ಶಾಸಕ ಬಿ.ಆರ್.ಪಾಟೀಲ ಅವರಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. 200 ಕೆರೆ ನಿರ್ಮಾಣ, ಮದ್ಯಪಾನ ನಿಷೇಧ ಹಾಗೂ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸಂಸದರಾದ ಭಗವಂತ ಖೂಬಾ, ಶ್ರೀರಾಮಲು, ಶಾಸಕ ಗೋವಿಂದ ಕಾರಜೋಳ, ರಘುನಾಥ ಮಲ್ಕಾಪುರೆ, ಬಿಜೆಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ಮುಖಂಡರಾದ ರೇವೂನಾಯಕ್ ಬೆಳಮಗಿ, ಅಬ್ದುಲ್ ಅಜೀಜ್ ಮಾತನಾಡಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಶಾಸಕರಾದ ಬಿ.ಜಿ.ಪಾಟೀಲ, ಅಮರನಾಥ ಪಾಟೀಲ, ಅರುಣ ಶಹಾಪುರ, ಬಾಬುರಾವ ಚವಾಣ್, ಎನ್.ರವಿಕುಮಾರ್, ಶಶೀಲ್ ಜಿ.ನಮೋಶಿ, ಸುಭಾಷ ರಾಠೋಡ, ಜಿಲ್ಲಾ ಪಮಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ಗುತ್ತೇದಾರ, ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಹರ್ಷಾನಂದ ಗುತ್ತೇದಾರ, ಗುರುಶಾಂತಪ್ಪ ಪಾಟೀಲ, ಮುಖಂಡರಾದ ವೀರಣ್ಣಾ ಮಂಗಾಣೆ, ಶಿವಪುತ್ರಪ್ಪ ಪಾಟೀಲ, ಅಶೋಕ ಸಾವಳೇಶ್ವರ, ಮಲ್ಲಣ್ಣಾ ನಾಗೂರೆ, ಸಿ.ಕೆ.ಪಾಟೀಲ ಇದ್ದರು.

ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿ ಪರಿವರ್ತನಾ ಯಾತ್ರೆಗೆ ಭವ್ಯ ಸ್ವಾಗತ ನೀಡಲಾಯಿತು. ನಂತರ ಆಳಂದ ಬಸ್‌ ನಿಲ್ದಾಣದಿಂದ ಯಾತ್ರೆಗೆ ಡೊಳ್ಳು ಕುಣಿತ, ಭಾಜಾ ಭಜಂತ್ರಿ ಮುಖಾಂತರ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ವಿವಿಧ ಪಕ್ಷ ತೊರೆದು ಅನೇಕ ಮುಖಂಡರು, ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry