ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ರಚನೆಗೆ ಒತ್ತಾಯ; 9ರಂದು ಬಂದ್

Last Updated 4 ಡಿಸೆಂಬರ್ 2017, 6:06 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣವನ್ನು ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲ್ಲೂಕು ರಚನೆ ಮಾಡಬೇಕು ಎಂದು ಒತ್ತಾಯಿಸಿ ಡಿ. 9ರಂದು ತಾಲ್ಲೂಕು ವ್ಯಾಪ್ತಿಯಲ್ಲಿ ಸಂಪೂರ್ಣ ಬಂದ್ ನಡೆಸಲಾಗುವುದು ಎಂದು ಕಾವೇರಿ ತಾಲ್ಲೂಕು ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.

ಬಂದ್‌ಗೆ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂದ್‌ ಸಂದರ್ಭದಲ್ಲಿ ರಸ್ತೆ ತಡೆ ನಡೆಸಲಾಗುವುದು. ಅಂದು ಬೆಳಿಗ್ಗೆ 6ರಿಂದ ಸಂಜೆ 6ಗಂಟೆವರೆಗೆ ವಾಹನ ಸಂಚಾರ ಸ್ಥಗಿತಗೊಳ್ಳಲಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಬೇಕು ಎಂದು ಮನವಿ ಮಾಡಿದರು.

ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಸಂಸ್ಥೆಗಳ ಮುಖಂಡರನ್ನು ಒಳಗೊಂಡಂತೆ ಬೆಂಗಳೂರಿಗೆ ನಿಯೋಗ ತೆರಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಅವರನ್ನು ಭೇಟಿ ಮಾಡಿ ತಾಲ್ಲೂಕು ರಚನೆಗೆ ಒತ್ತಾಯಿಸಲಾಗುವುದು ಎಂದರು. ಡಿ. 5ರಂದು ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆ ಚಳವಳಿಯನ್ನು ಮೂದೂಡಲಾಗಿದೆ ಎಂದು ಅವರು ತಿಳಿಸಿದರು.

ಜಿ.ಪಂ. ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿದರು. ಗೋಷ್ಠಿಯಲ್ಲಿ ತಾಲ್ಲೂಕು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಕೆ.ನಾಗೇಂದ್ರ ಬಾಬು, ಮುಖಂಡರಾದ ಅಬ್ದುಲ್ ಖಾದರ್, ಎಂ.ಕೆ.ಗಣೇಶ್, ಪೂವಯ್ಯ, ಕೆ.ಎಸ್.ನಾಗೇಶ್, ಕೆ.ಎನ್.ದೇವರಾಜ್, ಜಗದೀಶ್ ಇದ್ದರು.

ಆರ್ಯವೈಶ್ಯ ಸಮಾಜದ ಪ್ರತಿಭಟನೆ
ಕುಶಾಲನಗರ: ಕಾವೇರಿ ತಾಲ್ಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ಎರಡನೇ ಹಂತದ ಪ್ರತಿಭಟನೆ ನಡೆಯುತ್ತಿದ್ದು, ಭಾನುವಾರ 21ನೇ ಪೂರೈಸಿದೆ. ಪಟ್ಟಣದ ಆರ್ಯವೈಶ್ಯ ಮಂಡಳಿಯ ಪಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಕಾರು ನಿಲ್ದಾಣದ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಬೆಳಿಗ್ಗೆಯೇ ಜಮಾಯಿಸಿದ ಸಮಾಜದವರು ತಾಲ್ಲೂಕು ರಚನೆ ಪರ ಘೋಷಣೆಗಳನ್ನು ಕೂಗಿದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ, ಸರ್ಕಾರ ಯಾವುದೇ ಆರ್ಥಿಕ ಹೊರೆಯಿಲ್ಲದೆ ಕಾವೇರಿ ತಾಲ್ಲೂಕು ರಚನೆ ಮಾಡಬಹುದು. ತಾಲ್ಲೂಕಿಗೆ ಬೇಕಿರುವ ಎಲ್ಲ ಇಲಾಖೆಗಳು ಈಗಾಗಲೇ ಕುಶಾಲನಗರದಲ್ಲಿ ಇವೆ. ಕೇವಲ ತಾಲ್ಲೂಕು ಘೋಷಣೆ ಮಾತ್ರ ಉಳಿದಿದೆ. ಆದ್ದರಿಂದ ಸರ್ಕಾರ ಮೀನಮೇಷ ಏಣಿಸದೆ ಕಾವೇರಿ ತಾಲ್ಲೂಕು ಘೋಷನೆ ಮಾಡಬೇಕು ಎಂದು ಆಗ್ರಹಿಸಿದರು.

ಸಮಾಜದ ಮುಖಂಡರಾದ ನಾಗೇಂದ್ರ ಪ್ರಸಾದ್, ಅಮೃತ್ ರಾಜ್, ಮಂಜುನಾಥ್, ಆಶಾ ಅಶೋಕ್, ರವಿಕುಮಾರ್, ಬಿ.ಎಲ್. ಸತೀಶ್, ಫಜಲುಲ್ಲಾ ಖಾನ್, ಅಬ್ದುಲ್ ಖಾದರ್, ಕೆ.ಎನ್.ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT