ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಸಂಬಳ್ಳಿಯಲ್ಲಿ ಕೆ.ಸಿ.ರೆಡ್ಡಿ ಸ್ಮಾರಕ

Last Updated 4 ಡಿಸೆಂಬರ್ 2017, 6:19 IST
ಅಕ್ಷರ ಗಾತ್ರ

ಕೆಜಿಎಫ್: ‘ಹಿಂದುಳಿದ ವರ್ಗದ ರೆಡ್ಡಿ ಜನಾಂಗದವರನ್ನು 3 ಎ ಗುಂಪಿಗೆ ಸೇರಿಸಲು ಸರ್ಕಾರವನ್ನು ಒತ್ತಾಯಿಸಲಾಗಿದೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ರಾಬರ್ಟಸನ್‌ಪೇಟೆಯಲ್ಲಿ ಭಾನುವಾರ ರೆಡ್ಡಿ ಸಮುದಾಯದ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಹಳಷ್ಟು ಜನಾಂಗದವರು ಮೀಸಲಾತಿ ಕೇಳುತ್ತಿದ್ದಾರೆ. ರೆಡ್ಡಿ ಸಮುದಾಯದವರಲ್ಲಿಯೂ ಬಹಳಷ್ಟು ಬಡವರಿದ್ದಾರೆ. ಮೀಸಲಾತಿ ದೊರಕಿದರೆ ಅಂತಹವರಿಗೆ ಸಹಾಯವಾಗಬಹುದು’ ಎಂದರು.

‘ರೆಡ್ಡಿ ಸಮುದಾಯದ ದಿಗ್ಗಜ ಕೆ.ಸಿ.ರೆಡ್ಡಿ ಕೊಡುಗೆ ರಾಜ್ಯಕ್ಕೆ ಅನನ್ಯ. ನೆಹರು ಮಂತ್ರಿ ಮಂಡಲದಲ್ಲಿ ಭಾರಿ ಕೈಗಾರಿಕೆ ಸಚಿವರಾಗಿದ್ದ ಅವರು ಬೆಂಗಳೂರಿಗೆ ಬಹಳಷ್ಟು ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ತಂದರು. ವಿಧಾನಸೌಧಕ್ಕೆ ಅಡಿಪಾಯ ಹಾಕಿದರು. ಇವರ ಪುತ್ಥಳಿಯನ್ನು ವಿಧಾನಸೌಧ ಬಳಿ ಸ್ಥಾಪಿಸಲು ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಚುನಾವಣೆಗೂ ಮೊದಲೇ ಪ್ರತಿಮೆಯನ್ನು ಸ್ಥಾಪಿಸುತ್ತೇವೆ’ ಎಂದರು.

‘ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ಹುಟ್ಟಿದ ಊರಾದ ಕ್ಯಾಸಂಬಳ್ಳಿಯಲ್ಲಿ 22 ಎಕರೆ ಪ್ರದೇಶದಲ್ಲಿ ಸ್ಮಾರಕ ಕಟ್ಟಲಾಗುವುದು. ಅದರಲ್ಲಿ ಹತ್ತು ಎಕರೆ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಮೀಸಲಿಡಲಾಗುವುದು. ತಕ್ಷಣ ಈ ಜಾಗಕ್ಕೆ ರಸ್ತೆ ನಿರ್ಮಾಣ ಮತ್ತು ಕಾಂಪೌಂಡು ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಎಪಿಎಂಸಿ ನಿರ್ದೇಶಕ ವಿಜಯ ರಾಘವರೆಡ್ಡಿ, ಜೈವಿಕ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ರಾಮಲಿಂಗಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಎಪಿಎಂಸಿ ಅಧ್ಯಕ್ಷ ಚಂಗಾರೆಡ್ಡಿ, ಬೆಮಲ್‌ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ, ಕೆಡಿಎ ಅಧ್ಯಕ್ಷ ಅಪ್ಪಿರೆಡ್ಡಿ, ಕೃಷಿಕ ಸಮಾಜದ ಅಧ್ಯಕ್ಷ ರಾಜಾರೆಡ್ಡಿ, ಮುಖಂಡ ಆನಂದರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಇದ್ದರು.

* * 

ಕ್ಯಾಸಂಬಳ್ಳಿಯಲ್ಲಿ ಪೊಲೀಸ್‌ ಠಾಣೆ ಸ್ಥಾಪಿಸಲು ಮಾರ್ಗಸೂಚಿಯನ್ನು ಅನುಸರಿಸಿ ಕ್ರಮ ಕೈಗೊಳ್ಳಲಾಗುವುದು
ರಾಮಲಿಂಗಾರೆಡ್ಡಿ, ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT