ಶನಿವಾರ, ಫೆಬ್ರವರಿ 27, 2021
31 °C

ಇನ್ನೊಂದು ರೈಲ್ವೆ ಕೆಳಸೇತುವೆಗೆ ಬೇಡಿಕೆ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

ಇನ್ನೊಂದು ರೈಲ್ವೆ ಕೆಳಸೇತುವೆಗೆ ಬೇಡಿಕೆ

ಕೊಪ್ಪಳ: ನಗರದಲ್ಲಿ ಇನ್ನೊಂದು ರೈಲ್ವೆ ಕೆಳ ಸೇತುವೆಗೆ ಬೇಡಿಕೆ ವ್ಯಕ್ತವಾಗಿದೆ.  ಭಾಗ್ಯನಗರ- ಕೊಪ್ಪಳದ ನಡುವೆ ಸಂಪರ್ಕಿಸುವ ಮೇಲು ಸೇತುವೆ ಕಾಮಗಾರಿ ಇನ್ನೂ ಪೂರ್ಣವಾಗದ ಹೊತ್ತಿನಲ್ಲಿ  ಜನರು ಇನ್ನೊಂದು ಕೆಳಸೇತುವೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಸ್ವಾಮಿ ವಿವೇಕಾನಂದ ಶಾಲಾ ರಸ್ತೆಯಿಂದ ಗಣೇಶ ತಗ್ಗಿನವರೆಗೆ ಸಂಪರ್ಕ ಕಲ್ಪಿಸಲು ಕೆಳಸೇತುವೆ ನಿರ್ಮಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಹಾಗೂ ಜಿಲ್ಲಾಧಿಕಾರಿಗೆ ಕೆಳ ಸೇತುವೆ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದ್ದಾರೆ.

ರೈಲ್ವೆ ಹಳಿ ಹಾಕಿದ ದಿನದಿಂದ ಇಂದಿನವರೆಗೂ ಜನರು ರೈಲು ಹಳಿಯನ್ನು ದಾಟಿಕೊಂಡೇ ಕೊಪ್ಪಳ ನಗರಕ್ಕೆ ಬರಬೇಕಿದೆ. ಪ್ರತಿ ದಿನ ನೂರಾರು ಜನರು ಸಂಚರಿಸುವ ದಾರಿಯೂ ಇದೇ ಆಗಿದೆ. ಸಮೀಪದಲ್ಲಿಯೇ ಹತ್ತಿ ಗಿರಣಿ ಕೂಡಾ ಇದೆ. ಗಣೇಶ ತಗ್ಗಿನ ವಸತಿ ಪ್ರದೇಶ, ಎನ್‌ಜಿಒ ಕಾಲೊನಿ, ಭಾಗ್ಯನಗರಕ್ಕೆ ಸಂಪರ್ಕ ಕಲ್ಪಿಸುವ ದಾರಿಯೂ ಇದೇ ಆಗಿದೆ.

ಒಂದು ವೇಳೆ ಕೊಪ್ಪಳ- ಭಾಗ್ಯ ನಗರ ನಡುವಿನ ಮೇಲು ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದರೆ ಎರಡು ಊರುಗಳ ನಡುವೆ ಸಂಪರ್ಕ ಸುಲಭವಾಗುತ್ತಿತ್ತು. ಈಗ 1 ಕಿ.ಮೀ. ಅಂತರದಲ್ಲಿರುವ ಭಾಗ್ಯನಗರ ತಲುಪಲು ಸುಮಾರು 3 ಕಿ.ಮೀ. ಸಂಚರಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಕೊನೆ ಪಕ್ಷ ಈ ಶಾಲಾ ಮಾರ್ಗದಲ್ಲಿ ನಾಲ್ಕು ಚಕ್ರಗಳ ವಾಹನ ಸಂಚರಿಸುವಷ್ಟು ಅವಕಾಶವಿರುವ ಅಂಡರ್‌ಪಾಸ್‌ ನಿರ್ಮಿಸಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಸಂಸದ ಸಂಗಣ್ಣ ಕರಡಿ ಅವರೂ ಕೂಡ ತಜ್ಞರೊಂದಿಗೆ ಇತ್ತೀಚೆಗೆ ಸ್ಥಳ ಪರಿಶೀಲಿಸಿದ್ದಾರೆ. ಆದರೆ, ರೈಲ್ವೆ ಎಂಜಿನಿಯರ್‌ಗಳು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಕೆಳ ಸೇತುವೆ ನಿರ್ಮಾಣ ಅಸಾಧ್ಯ ಎಂದಿದ್ದಾರೆ. ಏನಿದ್ದರೂ ಜನರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು ಎಂದು ಸಂಸದರು ಸೂಚಿಸಿದ್ದರು.

ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿ ಧಿಗಳು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ. ಆದರೆ, ವರ್ಷಗಳಿಂದ ನಾವು ಅನುಭವಿಸುತ್ತಿರುವ ಸಮಸ್ಯೆ ಹಾಗೇ ಇದೆ. ರೈಲು ಬರುವ ವೇಳೆ ವೃದ್ಧರು, ಮಕ್ಕಳು, ಹಳಿ ದಾಟುತ್ತಾ ನಿತ್ಯ ಅಪಾಯವನ್ನು ಎದುರಿಸುತ್ತಲೇ ಇದ್ದಾರೆ.

ದ್ವಿಚಕ್ರ ವಾಹನ ಸವಾರರು ಹಳಿ ಮೇಲೆ ವಾಹನ ಹಾಯಿಸಲು ಹೋಗಿ ಅಪಾಯಕ್ಕೆ ಸಿಲುಕಿದ ಘಟನೆಗಳೂ ಇವೆ. ಈ ಸಮಸ್ಯೆ ಬೇಗನೇ ಪರಿಹಾರ ಕಾಣಬೇಕು ಎಂದು ಗಣೇಶ ತಗ್ಗು ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳು ಹೇಳುತ್ತಾರೆ.

ರೈಲ್ವೆ ಇಲಾಖೆಯ ಮಾನದಂಡ ಪ್ರಕಾರ ಈ ಮಾರ್ಗದಲ್ಲಿ ಪ್ರತಿದಿನ 1 ಲಕ್ಷ ವಾಹನ ಸಂಚಾರ ಇರಬೇಕು. ಅಷ್ಟು ಪ್ರಮಾಣದಲ್ಲಿ ಇಲ್ಲದ ಕಾರಣ ಇಲ್ಲಿ ಕೆಳಸೇತುವೆ ನಿರ್ಮಿಸಲು ಅವಕಾಶ ಇಲ್ಲ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ನಿರ್ಮಿಸುವುದಾದರೆ ಅನುಮತಿ ನೀಡುವುದಾಗಿ ಇಲಾಖೆ ತಿಳಿಸಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.

*  * 

ಕೆಳಸೇತುವೆಯನ್ನು ರಾಜ್ಯ ಸರ್ಕಾರ ನಿರ್ಮಿಸಬಹುದು. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಬೇಕು. ಈ ಬಗ್ಗೆ ಪತ್ರ ಬರೆಯುತ್ತೇನೆ.

ಸಂಗಣ್ಣ ಕರಡಿ, ಸಂಸದ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.